ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿದ ಕೆರೆ, ಜಲಾಶಯಗಳ ಅಭಿವೃದ್ಧಿ ವಿಚಾರ
ಸಿಎಂ ಇದ್ದಾರೋ ಇಲ್ವೋ ಎಂಬುದನ್ನು ತೋರಿಸಿದ್ದೇನೆ. ಮುಂದಿನ ಪ್ರಕರಣಗಳಲ್ಲೂ ಹೀಗೆ ತೋರಿಸಬೇಕಾ ಎಂದು ಪ್ರಶ್ನಿಸಿದರು. ಸಿಎಂ ಎಚ್ಚರಿಕೆಗೆ ಯು.ಬಿ.ವೆಂಕಟೇಶ್ ಕಕ್ಕಾಬಿಕ್ಕಿಯಾದರು.
ಬೆಂಗಳೂರು: ಕರ್ನಾಟಕದ ಕೆರೆಗಳ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡಬಾರದು ಎಂದು ಸದಸ್ಯೆ ಭಾರತಿ ಶೆಟ್ಟಿ ತಾಕೀತು ಮಾಡಿದರು. ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಇಲಾಖೆ ವ್ಯಾಪ್ತಿಯಲ್ಲಿ 3,670 ಕೆರೆಗಳಿವೆ. ಈ ಪೈಕಿ ಶೇ 50ರಷ್ಟು ಕೆರೆಗಳನ್ನು ತುಂಬಿಸುವ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಂಡಿದ್ದೇವೆ. ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬಹಳಷ್ಟು ಹಣ ಬೇಕಾಗುತ್ತದೆ. ಕೆರೆ ಸಂರಕ್ಷಣೆಗಾಗಿ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ ಎಂದರು.
ಕೆರೆಯಿಂದ ಕೆರೆಗೆ ನೀರು ಹರಿಯುವುದು ವಿಶ್ವೇಶ್ವರಯ್ಯನವರ ಕಾಲದಲ್ಲಿ ಮಾಡಿದ ಯೋಜನೆ. ಹಳ್ಳ ಹರಿದರೆ ಮಾತ್ರ ಅಂತರ್ಜಲ ಅಭಿವೃದ್ಧಿ ಆಗುತ್ತದೆ. ನಾವು ಪೈಪ್ಗಳಲ್ಲಿ ಕೆರೆಗೆ ನೀರು ಸಾಗಿಸುವ ಯೋಜನೆಗಳನ್ನು ವಿರೋಧಿಸುತ್ತೇವೆ. ಕೆರೆ ಸಂರಕ್ಷಣೆಗೆಮದೇ ಬಜೆಟ್‌ನಲ್ಲಿ ₹ 500 ಕೋಟಿ ಘೋಷಣೆ ಮಾಡಲಾಗಿದೆ. ಅಟಲ್ ಭೂ ಜಲ್ ಯೋಜನೆಯಡಿ ಕೇಂದ್ರ ಸರ್ಕಾರವೂ ಹಣ ನೀಡಿದೆ ಎಂದು ತಿಳಿಸಿದರು.
ಕ್ರಿಡಲ್ಗೆ ಬಿಬಿಎಂಪಿ ಕಾಮಗಾರಿ: ಆಕ್ಷೇಪ
ಯಾವುದೇ ಕಾಮಗಾಗಿ ನಿರ್ವಹಿಸಲು ಕ್ರಿಡಲ್ಗೆ ಶೇ 12ರಷ್ಟು ಸೇವಾಶುಲ್ಕ ಕೊಡಬೇಕಿದೆ. ಬಿಬಿಎಂಪಿ ಬಳಿಯೇ ಎಂಜಿನಿಯರ್ಗಳು ಇರುವಾಗ ಕ್ರಿಡಲ್ಗೆ ಏಕೆ ಕಾಮಗಾರಿಗಳನ್ನು ವಹಿಸಬೇಕು ಎಂದು ಸದಸ್ಯ ಕೆ.ಗೋವಿಂದರಾಜು ಪ್ರಶ್ನಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಬಂದ ಮೇಲೆ ಕ್ರಿಡಲ್ಗೆ ಯೋಜನೆಗಳನ್ನು ವಹಿಸುವುದನ್ನು ನಿಲ್ಲಿಸಿ, ಟೆಂಡರ್ ನಿಯಮಗಳನ್ನು ಕಠಿಣ ಮಾಡಿದ್ದೇನೆ. ಕ್ವಾಲಿಟಿ ನಿಯಂತ್ರಣಕ್ಕೆ ಗಮನ ಹರಿಸುತ್ತೇವೆ. ಆದಷ್ಟು ಬಿಬಿಎಂಪಿಯಲ್ಲೇ ಕೆಲಸ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.
ಕೆಆರ್ಎಸ್ನಲ್ಲಿ ಹೂಳು
ಕೃಷ್ಣರಾಜಸಾಗರ ಜಲಾಶಯ (ಕೆಆರ್ಎಸ್) ನಿರ್ಮಾಣದ ದಿನಾಂಕವೇ ಸಚಿವರಿಗೆ ಗೊತ್ತಿಲ್ಲ ಎಂದು ಸದಸ್ಯ ಸಿ.ಎನ್.ಮಂಜೇಗೌಡ ಆಕ್ಷೇಪಿಸಿದರು. ಜಲಾಶಯದಲ್ಲಿ ಪ್ರಸ್ತುತ 33 ಟಿಎಂಸಿ ಅಡಿಗಳಷ್ಟು ಹೂಳು ತುಂಬಿದೆ. ಮೈಸೂರು, ಚಾಮರಾಜನಗರದಲ್ಲಿರುವ ಜಲಾಶಯಗಳಲ್ಲಿಯೂ ಹೂಳು ತೆಗೆದಿಲ್ಲ ಎಂದು ಗಮನ ಸೆಳೆದರು.
ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಕರ್ನಾಟಕದಲ್ಲಿ ಹಾರಂಗಿ (1.2 ಟಿಎಂಸಿ) ಮತ್ತು ತುಂಗಭದ್ರಾ ಜಲಾಶಯ (30 ಟಿಎಂಸಿ) ಹೂಳು ಇದೆ. ಬೇರೆ ಯಾವುದೇ ಜಲಾಶಯದಲ್ಲಿ ಹೂಳು ಸಂಗ್ರಹವಾಗಿಲ್ಲ. ಡ್ಯಾಂನಲ್ಲಿ ಅಲ್ಪಸ್ವಲ್ಪ ಹೂಳು ಇದ್ದರೆ ಗಣನೆಗೆ ಬರುವುದಿಲ್ಲ. ಮಳೆಯಲ್ಲಿ ಬರುವ ರಾಡಿ ನೀರನ್ನ ಹೂಳೆಂದು ಪರಿಗಣಿಸುವುದಿಲ್ಲ. ಹಾರಂಗಿಯಲ್ಲಿ ಹೂಳು ತೆಗೆಯಲು ₹ 139 ಕೋಟಿ ಮೊತ್ತದ ಟೆಂಡರ್ ನೀಡಲಾಗಿದೆ ಎಂದರು.
ತಿಪ್ಪಗೊಂಡನಹಳ್ಳಿ ಜಲಾಶಯದ ದುಸ್ಥಿತಿ
ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳು ತುಂಬಿರುವ ಬಗ್ಗೆ ಸದಸ್ಯ ಅ.ದೇವೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಾಶಯದ ಹೂಳು ತೆಗೆಯಲಾಗಿದೆ. 2 ಟಿಎಂಸಿ ನೀರು ಹಿಡಿದಿಡುವ ಸಾಮರ್ಥ್ಯ ಜಲಾಶಯಕ್ಕೆ ಇದೆ. ಡ್ರೆಡ್ಜಿಂಗ್ ಮಾಡುವ ಕೆಲಸ ನಡೆಯುತ್ತಿದೆ. 30 ಅಡಿ ನೀರು ಇನ್ನೂ ಜಲಾಶಯದಲ್ಲಿದೆ. ₹ 20.65 ಕೋಟಿ ವೆಚ್ಚದಲ್ಲಿ ಈ ಕೆಲಸ ನಡೆಯುತ್ತಿದ್ದು, ಬೆಂಗಳೂರು ಉತ್ತರ ಭಾಗಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಎಂಆರ್‌ಸಿಎಲ್ ನೇಮಕಾತಿ ಅಸಾಧ್ಯ
ಬೆಂಗಳೂರು ಮೆಟ್ರೊ ನಿಗಮದ (ಬಿಎಂಆರ್‌ಸಿಎಲ್) 174 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಪರೀಕ್ಷೆ ಬರೆದು ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿದ ಬಳಿಕ ಅಧಿಸೂಚನೆ ರದ್ದುಗೊಳಿಸಲಾಗಿದೆ. 174 ಜನರಿಗೆ ನೇಮಕಾತಿ ವೇಳೆ ಅವಕಾಶ ನೀಡಬೇಕು ಎಂದು ಸದಸ್ಯ ಶ್ರೀಕಂಠೇಗೌಡ ಮನವಿ ಮಾಡಿದರು. ಅಧಿಸೂಚನೆ ರದ್ದುಗೊಳಿಸಿದ ಕಾರಣ ನೇಮಕಾತಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು. 2019ರಲ್ಲಿ ನೇಮಕಾತಿ ಅಧಿಸೂಚನೆ ಆಗಿದೆ. 38 ಸಾವಿರ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಕೋವಿಡ್ ಬಂದ ಮೇಲೆ ಮೆಟ್ರೋ ನಿಗಮಕ್ಕೆ ನಷ್ಟ ಆಗಿದೆ. ಅವಶ್ಯಕತೆ ಇದ್ದಾಗ ನೇಮಕಾತಿ ಮಾಡುತ್ತೇವೆ ಎಂದರು.
ಅಲ್ಪಸಂಖ್ಯಾತರ ಯೋಜನೆ ರದ್ದು: ಇಬ್ರಾಹಿಂ ಆಕ್ರೋಶ
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಈ ಮೊದಲು 77 ಯೋಜನೆ ನೀಡಲಾಗಿತ್ತು. ಈ ಪೈಕಿ 29 ಯೋಜನೆಗಳನ್ನು ಮಾತ್ರ ಮುಂದುವರಿಸಲಾಗಿದೆ ನಾವು ಕೂಡ ಬಡವರಿದ್ದೇವೆ, ಯೋಜನೆಗಳನ್ನು ಮುಂದುವರಿಸಿ. ದೇವಸ್ಥಾನಗಳ ಸಮೀಪ ನಮಗೂ ಅಂಗಡಿ ಇಡಲು ಅವಕಾಶ ನೀಡಿ ಎಂದು ವಿಧಾನಪರಿಷತ್‌ನಲ್ಲಿ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು. ಆಕ್ಷೇಪಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿ, ಶಾದಿಮಹಲ್ ಯೋಜನೆ ಹೊರತುಪಡಿಸಿ ಬೇರೆ ಯಾವುದೇ ಯೋಜನೆ ನಿಲ್ಲಿಸಲ್ಲ ಎಂದರು. ಸಿಎಂ ಬೊಮ್ಮಾಯಿ ಉತ್ತರಕ್ಕೆ ಖುಷಿಪಟ್ಟ ಸಿ.ಎಂ.ಇಬ್ರಾಹಿಂ, ನೀವು ಬೊಮ್ಮಾಯಿ ಮಗ ಆಗಿದ್ದಕ್ಕೂ ಸಾರ್ಥಕವಾಯಿತು. ನಿಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಗಲಿ. ಒಳ್ಳೆಯ ಕೆಲಸ ಮಾಡಿದ್ದೀರಿ, ದೇವರು ಒಳ್ಳೇದು ಮಾಡಲಿ ಎಂದರು.
ಅರಿವು ಯೋಜನೆಗೆ ಹೆಚ್ಚು ಅನುದಾನ ನೀಡಿದ್ದೇನೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ ಅಭಿವೃದ್ಧಿಪಡಿಸಿ, ಸಿಬಿಎಸ್ಇ ಕೋರ್ಸ್ ಆರಂಭಿಸುತ್ತೇವೆ. 50 ಸಾವಿರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡಲು ₹ 110 ಕೋಟಿ ಮೀಸಲಿಟ್ಟಿದ್ದೇವೆ. ಅಲ್ಪಸಂಖ್ಯಾತರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆ ಹೆಚ್ಚಿಸಲಾಗಿದೆ. ಮೈನಾರಿಟಿ ಕಾಲೋನಿ ಅಭಿವೃದ್ಧಿಯನ್ನ ಸ್ಲಂ ಬೋರ್ಡ್ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಪಸಂಖ್ಯಾತ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ ಎಂದರು.
ಸಿಎಂ ಇದ್ದಾರೆಂಬುದು ತೋರಿಸಿ: ವಿಪಕ್ಷ ಸದಸ್ಯನ ಮಾತಿ ಬೊಮ್ಮಾಯಿ ಗರಂ
ಬೊಮ್ಮನಹಳ್ಳಿ ವಲಯದಲ್ಲಿ ನಿಯಮಬಾಹಿರ ಖಾತಾ ವಿಭಜನೆ ನಡೆಯುತ್ತಿದೆ. ಭೂ ಪರಿವರ್ತನೆಗೊಂಡ ಏಕ ನಿವೇಶನಕ್ಕೆ ಖಾತಾ ವಿಭಜನೆ ಮಾಡಲಾಗಿದೆ. ಪದೇಪದೆ ಖಾತಾ ವರ್ಗಾವಣೆ ಮಾಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಸಿಎಂ ಇದ್ದಾರೆಂಬುದನ್ನು ತೋರಿಸಿ ಎಂದು ಸದಸ್ಯ ಯು.ಬಿ.ವೆಂಕಟೇಶ್ ಸವಾಲು ಹಾಕಿದರು.
ವೆಂಕಟೇಶ್ ಮಾತಿಗೆ ಕೋಪಗೊಂಡ ಸಿಎಂ ಬೊಮ್ಮಾಯಿ, ಈ ರೀತಿಯೆಲ್ಲ ಮಾತನಾಡಬಾರದು. ಸಿಎಂ ಇದ್ದಾರೋ ಇಲ್ವೋ ಎಂಬುದನ್ನು ತೋರಿಸಿದ್ದೇನೆ. ಮುಂದಿನ ಪ್ರಕರಣಗಳಲ್ಲೂ ಹೀಗೆ ತೋರಿಸಬೇಕಾ ಎಂದು ಪ್ರಶ್ನಿಸಿದರು. ಸಿಎಂ ಎಚ್ಚರಿಕೆಗೆ ಯು.ಬಿ.ವೆಂಕಟೇಶ್ ಕಕ್ಕಾಬಿಕ್ಕಿಯಾದರು. ಖಾತಾ ಅಕ್ರಮ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ರಸ್ತೆ ಗುಂಡಿ ಮುಚ್ಚಲು ಪೈಥಾನ್ ಯಂತ್ರ ಖರೀದಿಸಲಿ
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸರ್ಕಾರ ಶೀಘ್ರ ಪೈಥಾನ್ ಯಂತ್ರ ಖರೀದಿಸಬೇಕು. ಗುಂಡಿಗಳಲ್ಲಿ ಗಾಯಗೊಂಡವರಿಗೆ ಪರಿಹಾರ ಕೊಡಬೇಕು ಎಂದು ಕಾಂಗ್ರೆಸ್ ಸದಸ್ಯ ರವಿ ಆಗ್ರಹಿಸಿದರು. ಬೆಂಗಳೂರಿನಲ್ಲಿ ಹೈಡೆನ್ಸಿಟಿ ರಸ್ತೆ ನಿರ್ಮಾಣ ಕಾಮಗಾರಿ ರದ್ದುಪಡಿಸುದ್ದು ಯಾಕೆ? ಇದರಲ್ಲಿ ಅಕ್ರಮದ ವಾಸನೆ ಕೇಳಿ ಬರುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. KRDL ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಲೋಕಾಯುಕ್ತ ಹೇಳಿದೆ. ಸಿಎಂ ಕೃಷ್ಣ ಆಗಬೇಕು. ಶಿಶುಪಾಲ ಆಗಬಾರದು. KRDL ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಪರವಾಗಿ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿಬಿಎಂಪಿಯಲ್ಲಿ 5 ವರ್ಷಗಳಲ್ಲಿ 1911.14 ಕಿಮೀ ಉದ್ದರ ರಸ್ತೆ ಆಗಿದೆ. ಇದಕ್ಕೆ ₹ 1449.63 ಕೋಟಿ ವೆಚ್ಚವಾಗಿದೆ. ನಾರ್ಮಲ್ ರಸ್ತೆಗೆ ₹ 75 ಲಕ್ಷದಿಂದ 1 ಕೋಟಿ ಬೇಕಾಗುತ್ತದೆ. ವೈಟ್ ಟ್ಯಾಪಿಂಗ್ಗೆ 9-10 ಕೋಟಿ ಬೇಕು. ಹೀಗಾಗಿ ವೈಟ್ ಟ್ಯಾಪಿಂಗ್ ಬಗ್ಗೆ ಮರು ಚಿಂತನೆ ಮಾಡಬೇಕು. ಗುಂಡಿಗೆ ಬಿದ್ದು 11 ಜನ ಮೃತರಾಗಿದ್ದಾರೆ ಎಂದು ತಿಳಿಸಿದರು. ಯಾರೇ ಇದರಲ್ಲಿ ಅಕ್ರಮ ಮಾಡಿದ್ದರೂ ಬಲಿ ಹಾಕ್ತೀವಿ ಎಂದರು.
ಇದನ್ನೂ ಓದಿ: ‘ಕಾಂಗ್ರೆಸ್ನವರು ಸಿನಿಮಾದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ’: ಸಿಎಂ ಬೊಮ್ಮಾಯಿ ಆರೋಪ
Published On - 1:28 pm, Thu, 24 March 22