ಆಯುಷ್ ಆಸ್ಪತ್ರೆ ಕರ್ಮಕಾಂಡ.. ಲಕ್ಷಾಂತರ ರೂ ಸಂಬಳ ಪಡೆಯುವ ವೈದ್ಯರು ಆಸ್ಪತ್ರೆಗೆ ಬಾರದೇ ಚಕ್ಕರ್!
ಸರ್ಕಾರದಿಂದ ಸರಬರಾಜಾಗುವ ಲಕ್ಷಾಂತರ ರೂಪಾಯಿ ಔಷಧಿಗಳು ಬಳಕೆಯಾಗದೆ ಹಾಳಾಗುತ್ತಿದ್ದು, ಸರ್ಕಾರಕ್ಕೆ ಇದು ನಷ್ಟವನ್ನುಂಟು ಮಾಡಿದೆ. ಇನ್ನು ವೈದ್ಯರು ಆಸ್ಪತ್ರೆಯಲ್ಲಿದ್ದಾರೆಂದು ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಬರುವಿಕೆಗಾಗಿ ಗಂಟೆ ಗಟ್ಟಲೆ ಕಾದು ಮನೆಗೆ ವಾಪಸ್ಸ್ ಆಗುತ್ತವಂತಾ ಸ್ಥಿತಿ ನಿರ್ಮಾಣವಾಗಿದೆ.

ಬೀದರ್: ಆಯುರ್ವೇದ, ನ್ಯಾಚೂರೋಪತಿ, ಹೋಮಿಯೋಪತಿ ಆಸ್ಪತ್ರೆಗಳು ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿವೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಇಲ್ಲಿನ ವೈದ್ಯರು ಆಸ್ಪತ್ರೆಗಳಿಗೆ ಬಾರದೇ ಚಕ್ಕರ್ ಹಾಕಿ ಮನೆಯಲ್ಲಿಯೇ ಕುಳಿತು ಬಿಟ್ಟಿದ್ದಾರೆ. ವೈದ್ಯರಿಲ್ಲದೇ ಬೀಕೋ ಎನ್ನುತ್ತಿರುವ ಆಯುಷ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಇಲ್ಲಿನ ಪರಿಸ್ಥಿತಿ ಮಾರಕವಾಗಿ ಪರಿಣಮಿಸಿದೆ.
ಹೌದು ಕರ್ನಾಟಕದ ಕಿರೀಟ ಎಂದು ಕರೆಸಿಕೊಳ್ಳೋ ಗಡಿ ಜಿಲ್ಲೆ ಬೀದರ್ನಲ್ಲಿ ಆಯುರ್ವೇದ, ನ್ಯಾಚೂರೋಪತಿ, ಹೋಮಿಯೋಪತಿ, ಯುನಾನಿ ಆಸ್ಪತ್ರೆಗಳ ವೈದ್ಯರಿಗೆ ಹೇಳೋರು ಕೇಳೋರು ಇಲ್ಲದಂತಾ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸುಮಾರು 25 ಆಸ್ಪತ್ರೆಗಳಿದ್ದು, ನುರಿತ ವೈದ್ಯರು ಸೇರಿ 58 ಜನ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಹತೇಕ ವೈದ್ಯರು ಆಸ್ಪತ್ರೆಗೆ ಬಾರದಿರುವುದರಿಂದ ಆಸ್ಪತ್ರೆಗಳು ವೈದ್ಯರಿಲ್ಲದೇ ಬೀಕೋ ಎನ್ನುತ್ತಿವೆ.
ಇನ್ನು ಸರ್ಕಾರದಿಂದ ಸರಬರಾಜಾಗುವ ಲಕ್ಷಾಂತರ ರೂಪಾಯಿ ಔಷಧಿಗಳು ಬಳಕೆಯಾಗದೆ ಹಾಳಾಗುತ್ತಿದ್ದು, ಸರ್ಕಾರಕ್ಕೆ ಇದು ನಷ್ಟವನ್ನುಂಟು ಮಾಡಿದೆ. ವೈದ್ಯರು ಆಸ್ಪತ್ರೆಯಲ್ಲಿದ್ದಾರೆಂದು ದೂರದ ಊರುಗಳಿಂದ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಬರುವಿಕೆಗಾಗಿ ಗಂಟೆ ಗಟ್ಟಲೆ ಕಾದು ಮನೆಗೆ ವಾಪಸ್ಸ್ ಆಗುವಂತಾ ಸ್ಥಿತಿ ನಿರ್ಮಾಣವಾಗಿದ್ದು, ಆಸ್ಪತ್ರೆಗೆ ಬಂದರೆ ಇಲ್ಲಿ ವೈದ್ಯರೇ ಇರುವುದಿಲ್ಲ. ನಾವು ಏನು ಮಾಡುವುದು? ಎಂದು ಇಲ್ಲಿನ ಜನರು ವೈದ್ಯರ ವಿರುದ್ಧ ಆಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೀದರ್ನ ಆಯುವೇರ್ದ ಆಸ್ಪತ್ರೆಯ ಹೊರಾಂಗಣ ದೃಶ್ಯ

ಯುನಾನಿ ಆಸ್ಪತ್ರೆ

ಬೀದರ್ ಹೋಮಿಯೋಪತಿ ಆಸ್ಪತ್ರೆ ಚಿತ್ರಣ
ವೈದ್ಯರು ಆಸ್ಪತ್ರೆಗಳಿಗೆ ಬಾರದಿರುವುದರಿಂದ ಇಲ್ಲಿರುವ ಸಿಬ್ಬಂದಿಯೇ ಚಿಕಿತ್ಸೆಗೆ ಬರುವ ಬೆರಳೆಣಿಕೆಯಷ್ಟು ರೋಗಿಗಳಿಗೆ ಚಿಕಿತ್ಸೆಯನ್ನ ನೀಡಿ, ಔಷಧಿಯನ್ನು ಕೊಟ್ಟು ಕಳುಹಿಸುತ್ತಾರೆ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ಕಟ್ಟಡ ನಿರ್ಮಾಣ, ಸಿಬ್ಬಂದಿ ನೇಮಕ ಮಾಡಿದೆ. ಆದರೆ, ಇಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿದೆ.
ಇದರಿಂದ ರೋಗಿಗಳ ಸಂಖ್ಯೆಯೂ ಕೂಡ ಇಳಿಮುಖವಾಗಿದೆ. ಸರ್ಕಾರ ಪ್ರತಿ ವರ್ಷ ಜಿಲ್ಲೆಗೆ 15 ಲಕ್ಷ ಮೌಲ್ಯದ ಔಷಧ ಪೂರೈಕೆ ಮಾಡುತ್ತದೆ. ಅದರಲ್ಲಿ ಶೇ 60 ರಷ್ಟು ಔಷಧವನ್ನು ಸರ್ಕಾರ ಸರಬರಾಜು ಮಾಡುತ್ತದೆ. ಉಳಿದ ಶೇ 40 ರಷ್ಟು ಔಷಧವನ್ನು ಡ್ರಗ್ ಲಾಜಿಸ್ಟಿಕ್ ಮೂಲಕ ಒದಗಿಸುತ್ತದೆ. ಇದರಲ್ಲಿರುವ ಬಹುತೇಕ ಔಷಧಿಗಳು ರೋಗಿಗಳಿಗೆ ದೊರೆಯದೇ ಅವಧಿ ಮೀರಿ ಹೋಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸುತ್ತಿದೆ.

ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ ಆಯುರ್ವೇಧ ಆಸ್ಪತ್ರೆ
ನಾನು ಆಗಾಗ ಆಸ್ಪತ್ರೆಗೆ ಭೆಟ್ಟಿ ನೀಡಿ ಪರೀಶೀಲನೆ ಮಾಡುತ್ತಿದ್ದೇನೆ, ಸಮಸ್ಯೆ ಶಿಘ್ರ ಬಗೆಹರಿಸುತ್ತೇನೆ ಎಂದು ಅಲ್ಲಿನ ಸಿಬ್ಬಂದಿಗಳು ಹೇಳಿದ್ದಾರೆ ಎಂದು ಆಯುಷ್ಯ ಇಲಾಖೆಯ ನಿರ್ದೇಶಕಿ ಆಶಾ ಸ್ಪಷ್ಟನೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಹಾಗೇ ಉಳಿದಿರುವ ಔಷಧಿಗಳು
ಆನಾದಿ ಕಾಲದಿಂದಲೂ ಉತ್ತುಂಗದಲ್ಲಿದ್ದ ಆಯುರ್ವೇದ ಚಿಕಿತ್ಸೆ ಇಂದು ಜಾಗತಿಕ ಇಂಗ್ಲಿಷ್ ಮೆಡಿಸಿನ್ ಪ್ರಭಾವಕ್ಕೆ ಸಿಲುಕಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತ ತಲುಪಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಆಯುರ್ವೇದ ಚಿಕಿತ್ಸೆ ಎಂದರೆ ದೇವರು ನೀಡಿದ ವರ ಎಂದು ಪರಿಗಣಿಸಲಾಗುತ್ತಿತ್ತು. ಮಹಾಮುನಿ, ಋಷಿಗಳು ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳಿಂದಲೇ ಅದೆಷ್ಟೋ ಕಾಯಿಲೆ ಗುಣಪಡಿಸುತ್ತಿದ್ದರು. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಹೊಸ ಸಂಶೋಧನೆಗಳು ಹೆಚ್ಚಾಗಿ ಬೆಳಕಿಗೆ ಬಂದಂತೆ ಆಯುರ್ವೇದ ಔಷಧ ಕಣ್ಮರೆಯಾಗುತ್ತಿವೆ. ಇದಕ್ಕೆ ಸರ್ಕಾರದ ಪ್ರಚಾರದ ಕೊರತೆಯೋ ಅಥವಾ ಜನರ ನಿರಾಸಕ್ತಿಯೋ.. ಒಟ್ಟು ಇಂದು ಆಯುರ್ವೇದ ಆಸ್ಪತ್ರೆ ಗಳನ್ನು ಕೇಳುವರೇ ಇಲ್ಲದಂತಾಗಿದ್ದು ಹೆಸರಿಗಷ್ಟೇ ಆಯುಷ್ ಆಸ್ಪತ್ರೆ ಎನ್ನುವಂತಾಗಿದೆ.
Published On - 5:09 pm, Wed, 23 December 20