ಬಸವಕಲ್ಯಾಣ ಬಿಜೆಪಿ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ; 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ

ಮಾಸ್ಕ್ ಧರಿಸದೆ, ದೈಹಿಕ ಅಂತರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲಾಗಿದೆ. ರಾಜಕೀಯ ಸಮಾರಂಭದಲ್ಲಿ 500 ಜನರು ಮಾತ್ರ ಸೇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ.

  • TV9 Web Team
  • Published On - 16:20 PM, 3 Apr 2021
ಬಸವಕಲ್ಯಾಣ ಬಿಜೆಪಿ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ; 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ
ಬಸವಕಲ್ಯಾಣದಲ್ಲಿ ಬಿಜೆಪಿ ಸಮಾವೇಶ

ಬೀದರ್: ಮುಂಬರುವ ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಪ್ರಚಾರ ಭರದಿಂದ ಸಾಗುತ್ತಿದೆ. ಏಪ್ರಿಲ್ 17ರಂದು ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಬಿಜೆಪಿ ಸಮಾವೇಶ ನಡೆಸಿದೆ. ಶಾಂತಿನಿಕೇತನ ಶಾಲೆಯ ಮೈದಾನದಲ್ಲಿ ಬೃಹತ್​​ ಸಮಾವೇಶ ನಡೆಸಲಾಗಿದೆ.

ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಪರ ಬಿಜೆಪಿ ಪ್ರಚಾರ ಸಮಾವೇಶ ನಡೆಸಿದ್ದು, ಆಡಳಿತಾರೂಢ ಬಿಜೆಪಿ ಸಮಾವೇಶದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ನಿನ್ನೆಯಷ್ಟೇ ಕಠಿಣ ನಿಯಮಾವಳಿಗಳನ್ನು ಸೂಚಿಸಿತ್ತು. ಸೂಚಿತ ಕೊವಿಡ್-19 ಮಾರ್ಗದರ್ಶಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದರು. ಆದರೆ, ಬೀದರ್ ಬಸವಕಲ್ಯಾಣದಲ್ಲಿ ಆಡಳಿತ ಪಕ್ಷವೇ ಸರ್ಕಾರದ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಮಾವೇಶ ನಡೆಸಿದೆ.

ಮಾಸ್ಕ್ ಧರಿಸದೆ, ದೈಹಿಕ ಅಂತರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲಾಗಿದೆ. ರಾಜಕೀಯ ಸಮಾರಂಭದಲ್ಲಿ 500 ಜನರು ಮಾತ್ರ ಸೇರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. 500 ಜನರ ಬದಲು 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಬಿಜೆಪಿ ಸಮಾವೇಶ ನಡೆಸಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಭಗವಂತ ಖೂಬಾ ಸೇರಿ ಹಲವು ನಾಯಕರು ಸಮಾವೇಷದಲ್ಲಿ ಭಾಗಿಯಾಗಿದ್ದಾರೆ.

ತಹಶೀಲ್ದಾರ್ ನಾಗಯ್ಯ ಹಿರೇಮಠ್ ಪ್ರತಿಕ್ರಿಯೆ
ಸಮಾವೇಶದಲ್ಲಿ ಕೊರೊನಾ ನಿಯಮಾವಳಿಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು ಎಂದು ಹೇಳಲಾಗಿತ್ತು. ನಿಯಮಾನುಸಾರ ಕಾರ್ಯಕ್ರಮ ನಡೆಸಬೇಕು ಎಂಬ ಸೂಚನೆಯೆ ಮೇರೆಗೆ ಸಮಾವೇಶ ನಡೆಸಲು ಅನುಮತಿ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಕೊರೊನಾ ನಿಯಮಾವಳಿ ಪಾಲಿಸದಿದ್ದ ಬಗ್ಗೆ ವಿಡಿಯೋ ಸರ್ವೈವಲೆನ್ಸ್ ತಂಡ ಪರಿಶೀಲನೆ ನಡೆಸಲಿದೆ. ಕಾರ್ಯಕ್ರಮದ ವಿಡಿಯೋ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಬಸವಕಲ್ಯಾಣದ ತಹಶೀಲ್ದಾರ್ ನಾಗಯ್ಯ ಹಿರೇಮಠ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

BASAVAKALYANA BJP SAMAVESHA PEOPLE

ಬಿಜೆಪಿ ಸಮಾವೇಶದಲ್ಲಿ ಸಾವಿರಾರು ಜನ ಭಾಗಿಯಾದರು

ನಾಮಪತ್ರ ಹಿಂಪಡೆದ ಎನ್​ಸಿಪಿ ಅಭ್ಯರ್ಥಿ ಎಂ.ಜಿ.ಮುಳೆ
ಏಪ್ರಿಲ್ 17ರಂದು ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎನ್​ಸಿಪಿ ಅಭ್ಯರ್ಥಿ ಎಂ.ಜಿ.ಮುಳೆ ಬಿಜೆಪಿ ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಮಾಜಿ ಶಾಸಕ, ಮರಾಠ ಸಮುದಾಯದ ಪ್ರಭಾವಿ ಮುಖಂಡ ಎಂ.ಜಿ.ಮುಳೆ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ನಾಮಪತ್ರ ಹಿಂಪಡೆದ ಬಗ್ಗೆ ಟಿವಿ9ಗೆ ಎಂ.ಜಿ.ಮುಳೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಎಚ್ಚರ, ಎಚ್ಚರಾ.. ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದರೆ ಒಂದೆರಡು ವರ್ಷ ಜೈಲು ಶಿಕ್ಷೆ ಗ್ಯಾರಂಟಿ

ಇದನ್ನೂ ಓದಿ: ದೇಶದಲ್ಲಿ ಇಂದು 89 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು; 714 ಮಂದಿ ಸಾವು