ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್, ನೀರು ಮತ್ತು ಆಸ್ತಿ ಕರ ಬಾಕಿ ಉಳಿಸಿಕೊಂಡ ಬ್ರಿಮ್ಸ್
ಬೀದರ್‌ನ ಬ್ರಿಮ್ಸ್ ಆಸ್ಪತ್ರೆ 15 ವರ್ಷಗಳಿಂದ ನೀರಿನ, ಆಸ್ತಿ ಮತ್ತು ವಿದ್ಯುತ್ ಬಿಲ್‌ಗಳನ್ನು ಪಾವತಿಸದೆ 10.98 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ನಗರಸಭೆ ಹಲವು ನೋಟೀಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ನೀರಿನ ಸರಬರಾಜು . ನಿಲ್ಲಿಸುವ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್, ಫೆಬ್ರವರಿ 05: ಬೀದರ್ ಜಿಲ್ಲಾಸ್ಪತ್ರೆ ಬ್ರಿಮ್ಸ್ ಕೊಟ್ಯಾಂತರ ರೂಪಾಯಿ ಬಿಲ್ ಮತ್ತು ತೆರಿಗೆ ಬಾಕಿ ಉಳಿಸಿಕೊಂಡಿದೆ. ಬ್ರಿಮ್ಸ್ ಆಸ್ಪತ್ರೆ (BRIMS Hospital) ಕಳೆದ 15 ವರ್ಷಗಳಿಂದ ನೀರಿನ, ಆಸ್ತಿ ಕರ ಮತ್ತು ವಿದ್ಯುತ್ ಬಿಲ್ ಪಾವತಿಸಿಲ್ಲ. 10.98 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ನೀರಿನ ಕರ 1.45 ಕೋಟಿ ರೂ. ಮತ್ತು ಆಸ್ತಿ ಕರ8.32 ಕೋಟಿ ರೂ. ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬೀದರ್ ನಗರ ಸಭೆ ನೀರಿನ ಕರ, ಆಸ್ತಿ ಕರ ಪಾವತಿಸುವಂತೆ ಹತ್ತಾರು ನೋಟೀಸ್ ನೀಡಿದ್ದರೂ ಸಹಿತ ಬ್ರಿಮ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನೀರು ಸರಬರಾಜು ನಿಲ್ಲಿಸುತ್ತೇವೆ ಎಂದು ನಗರ ಸಭೆಯ ಆಯುಕ್ತರು ಎಚ್ಚರಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಣ ವಸೂಲಾತಿಯಾಗುತ್ತಿಲ್ಲ. ನಗರ ಸಭೆಗೆ ತನ್ನ ಆದಾಯ ಮೂಲವೇ ತೆರಿಗೆ ಹಣ, ಆದರೆ ಅದನ್ನೇ ವಸೂಲಿ ಮಾಡದೆ ಹಾಗೇ ಬಿಟ್ಟರೆ ನಗರದ ಅಭಿವೃದ್ಧಿಯಾದರೂ ಹೇಗೆ ಆಗುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ತೆರಿಗೆ ವಸೂಲಿ ಮಾಡಿದ್ದರೇ ಇಷ್ಟೊತ್ತಿಗಾಗಲೇ ತೆರಿಗೆ ಹಣ ನಗರಸಭೆಗೆ ಬರುತ್ತಿತ್ತು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ವಸೂಲಾಗದೆ ಹಾಗೆ ಉಳಿದಿದೆ. ಇದು ಸಹಜವಾಗಿಯೇ ಸಾರ್ವಜನಿಕರ ಆಕ್ರೋಶಕ್ಕೂ ಕೂಡಾ ಕಾರಣವಾಗಿದೆ. 2010 ರಿಂದ 2025ರ ಜನವರಿವರೆಗೆ ಬ್ರಿಮ್ಸ್ ಆಸ್ಪತ್ರೆಯಿಂದ ನೀರಿನ ಕರ ಹಾಗೂ ಆಸ್ತಿಕರ ಒಟ್ಟು 9.77 ಲಕ್ಷ ರೂ. ನಗರಸಭೆಗೆ ಬರಬೇಕಿದೆ.
ಇದನ್ನೂ ಓದಿ: ಬ್ರಿಮ್ಸ್ ವೈದ್ಯರ ಎಡವಟ್ಟಿಂದ ಹೆರಿಗೆ ವೇಳೆ ನವಜಾತ ಶಿಶುಗಳ ಮೂಳೆ ಮುರಿತ: ಸಂಕಷ್ಟದಲ್ಲಿ ಪೋಷಕರು
ಇನ್ನು ಬ್ರಿಮ್ಸ್ನವರು ಜೆಸ್ಕಾಂಗೆ ವಿದ್ಯುತ್ ಬಿಲ್ ಕೂಡ ಕಳೆದ 10 ವರ್ಷದಿಂದ ಪಾವತಿಸಿಲ್ಲ. 2.21 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದೆ. ವಿದ್ಯುತ್ ಬಿಲ್ ಪಾವತಿಸುವಂತೆ ಜೆಸ್ಕಾಂ ಬ್ರಿಮ್ಸ್ಗೆ ನೋಟೀಸ್ ನೀಡಿದ್ದರು ಕೂಡ ಏನು ಪ್ರಯೋಜವಾಗಿಲ್ಲ. ಜೆಸ್ಕಾಂ ನೀಡುವ ನೋಟೀಸ್ಗೆ ಬ್ರಿಮ್ಸ್ನವರು ಕ್ಯಾರೆ ಎನ್ನುತ್ತಿಲ್ಲ . ಜನಸಾಮಾನ್ಯರದಾದರೆ ಕರೆಂಟ್ ಕಟ್ ಮಾಡುತ್ತಿರಿ ಇವರದು ಯಾಕೆ ಕಟ್ ಮಾಡುತ್ತಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Wed, 5 February 25