ಕಿತ್ತುಹೋದ ಬ್ಯಾರೇಜ್​ನಿಂದ ತೆಲಂಗಾಣಕ್ಕೆ ನೀರು! ಕರ್ನಾಟಕದ ಜನತೆಗೆ ಕುಡಿಯುವ ನೀರೂ ಇಲ್ಲ; ನೀರಾವರಿಗೂ ಇಲ್ಲ

ಮಳೆಗಾಲದ ಸಮಯದಲ್ಲಿ ಬ್ಯಾರೇಜ್​ನಲ್ಲಿ ನೀರು ನಿಲ್ಲದೆ ನಮ್ಮ ಜನರ ದಾಹ ಇಂಗಿಸುವ ನೀರು ನೆರೆಯ ತೆಲಂಗಾಣ ಸೇರುತ್ತಿದ್ದು, ಬೆಸಿಗೆ ಕಾಲದಲ್ಲಿ ತೆಲಂಗಾಣ ರಾಜ್ಯದ ಜನರು ದಾಹ ಇಂಗಿಸಿಕೊಳ್ಳುತ್ತಿದ್ದಾರೆ.

  • ಸುರೇಶ್ ನಾಯಕ್
  • Published On - 11:37 AM, 22 Jan 2021
ಕಿತ್ತುಹೋದ ಬ್ಯಾರೇಜ್​ನಿಂದ ತೆಲಂಗಾಣಕ್ಕೆ ನೀರು! ಕರ್ನಾಟಕದ ಜನತೆಗೆ ಕುಡಿಯುವ ನೀರೂ ಇಲ್ಲ; ನೀರಾವರಿಗೂ ಇಲ್ಲ
ಬೀದರ್ ಸಮೀಪದ ಬ್ಯಾರೇಜ್

ಬೀದರ್​: ಜನರಿಗೆ ಕುಡಿಯುವ ನೀರು, ರೈತರ ಜಮೀನಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಬ್ರೀಡ್ಜ್ ಕಂ ಬ್ಯಾರೇಜ್​ಅನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ 5 ವರ್ಷದ ಹಿಂದೆ ಸುರಿದ ಮಹಾ ಮಳೆಗೆ ಬ್ಯಾರೇಜ್​ನ ಗೋಡೆ ಒಡೆದುಹೋಗಿದ್ದು ಅದನ್ನ ರೀಪೇರಿ ಮಾಡಿಸುವ ಗೋಜಿಗೆ ಯಾರೂ ಮುಂದಾಗಿಲ್ಲ.

ಮಳೆಗಾಲದಲ್ಲಿ ನೀರು ಸಂಗ್ರಹವಾಗಲೆಂದು ಕಟ್ಟಿಸಿದ ಬ್ರೀಡ್ಜ್ ಕಂ ಬ್ಯಾರೇಜ್​ನಿಂದ ಲಕ್ಷಾಂತರ ಲೀಟರ್ ನೀರು ಹರಿದು ನೆರೆಯ ರಾಜ್ಯ ಸೇರುತ್ತಿದೆ. ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನರು ಪರದಾಡುತ್ತಿದ್ದರೂ.. ಇದ್ದ ನೀರನ್ನ ನಿಲ್ಲಿಸುವ ಕೆಲಸವಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಆಕ್ರೋಶಗೊಂಡಿದ್ದಾರೆ.

ಬೀದರ್ ತಾಲೂಕಿನ ಜನವಾಡ ಬಳಿ ಈ 1990 ರಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಈ ಬ್ಯಾರೇಜ್ ನಿರ್ಮಾಣಕ್ಕೆ ಅಂದಿನ ಕಾಲಕ್ಕೆ ಸರಿ ಸುಮಾರು 6.50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೇ ಇತ್ತೀಚೆಗೆ ಅಂದರೆ 5 ವರ್ಷದ ಹಿಂದೆ ಬೀದರ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬ್ಯಾರೇಜ್​ನಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗಿ ಬ್ಯಾರೇಜ್​ನ ಗೇಟ್ ಗಳನ್ನ ಓಪನ್ ಮಾಡದ ಕಾರಣ ಬ್ಯಾರೇಜ್ ಒಡೆದುಹೋಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಯಿತಷ್ಟೇ ಅಲ್ಲದೇ ರೈತರು ಬೆಳೆದ ಬೆಳೆಯೂ ಕೂಡಾ ಹಾಳಾಗಿ ಹೋಯಿತು.

ತುಂಬಿ ಹರಿಯುತ್ತಿರುವ ಬ್ಯಾರೇಜ್

ಆದರೆ ಇಂದಿಗೂ ಕೂಡ ಒಡೆದು ಹೋದ ಬ್ಯಾರೇಜ್​ನ ರಿಪೇರಿ ಮಾಡುವ ಕೆಲಸವನ್ನ ಜಿಲ್ಲಾಡಳಿತ ಮಾಡಿಲ್ಲ. ಇದರಿಂದ ಬೊಂಪಳ್ಳಿ, ಯರನಳ್ಳಿ, ಇಸ್ಲಾಂಪುರ, ಕೌಠಾ, ಸಾಂಗ್ವಿ, ಗೋರ್ಣಾ, ಬೊಂಬಳಗಿ, ಚಂದಾಪುರ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಹಳ್ಳಿಯ ರೈತರು ಬ್ಯಾರೇಜ್​ನಲ್ಲಿ ನೀರು ನಿಲ್ಲದ ಕಾರಣ ಬೆಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಪಡುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗುತ್ತದೆ.

ನೀರು ಪೋಲಾಗುತ್ತಿರುವ ಚಿತ್ರಣ

ಇದರ ಜೊತೆಗೆ ಬೆಸಿಗೆ ಕಾಲದಲ್ಲಿ ಹೊಲಗಳಲ್ಲಿ ಬೆಳೆಯನ್ನ ಕೂಡ ಬೆಳೆಯಲಾರದೆ ರೈತರು ಕಂಗಾಲಾಗಿದ್ದಾರೆ. ಇನ್ನು ಈ ವರ್ಷ ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದಿದೆ. ಹೀಗಾಗಿ ಬ್ಯಾರೇಜ್​ನಲ್ಲಿ ಭರಪೂರ ನೀರು ಸಂಗ್ರಹವಾಗಿತ್ತು. ಆದರೆ ಬ್ಯಾರೇಜ್​ನ ಒಂದು ಭಾಗದ ಗೋಡೆ ಕಿತ್ತುಕೊಂಡು ಹೋಗಿರುವ ಕಾರಣ ನೀರು ವ್ಯರ್ಥವಾಗಿ ಹರಿದು ಪಕ್ಕದ ರಾಜ್ಯವಾದ ತೆಲಂಗಾಣ ಸೇರುತ್ತಿದೆ.

ಜನರ ದಾಹ ನೀಗಿಸಲು ನಿರ್ಮಾಣವಾದ ಬ್ಯಾರೇಜ್

ಪ್ರತಿ ವರ್ಷವು ಕೂಡ ಮಳೆಗಾಲದಲ್ಲಿ ಬ್ಯಾರೇಜ್​ನಲ್ಲಿ ಸ್ವಲ್ಪ ನೀರು ಸಂಗ್ರಹವಾಗುತ್ತದೆ. ಕೆಲವೇ ಕೆಲವು ದಿನಗಳಲ್ಲಿ ಬ್ಯಾರೇಜ್​ನಲ್ಲಿ ನೀರು ಖಾಲಿಯಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗುತ್ತಲೇ ಇದೆ. ಬ್ಯಾರೇಜ್ ರಿಪೇರಿ ಮಾಡಿ ನೀರು ನಿಲ್ಲಿಸಿ ಎಂದು ರೈತರು, ಗ್ರಾಮಸ್ಥರು ಮನವಿ ಮಾಡಿದ್ದರೂ ಜನರ ಸಮಸ್ಯೆ ಮಾತ್ರ ಇಲ್ಲಿನವರಿಗೆ ಅರ್ಥವಾಗುತ್ತಿಲ್ಲ.

ಮಳೆಗಾಲದ ಸಮಯದಲ್ಲಿ ಬ್ಯಾರೇಜ್​ನಲ್ಲಿ ನೀರು ನಿಲ್ಲದೆ ನಮ್ಮ ಜನರ ದಾಹ ಇಂಗಿಸುವ ನೀರು ನೆರೆಯ ತೆಲಂಗಾಣ ಸೇರುತ್ತಿದ್ದು, ಬೇಸಿಗೆ ಕಾಲದಲ್ಲಿ ತೆಲಂಗಾಣ ರಾಜ್ಯದ ಜನರು ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ನಮ್ಮ ನೀರು ನಮಗೆ ದಾಹ ಇಂಗಿಸದೇ ಬೇರೆಯವರಿಗೆ ದಾಹ ಇಂಗಿಸುತ್ತಿದೆ ಎಂದು ಇಲ್ಲಿನ ಜನರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

1990ರಲ್ಲಿ ನಿರ್ಮಾಣವಾದ ಬ್ಯಾರೇಜ್

ಜನರಿಗೆ ಮೂಲ ಭೂತ ಸೌಲಭ್ಯಗಳನ್ನ ಕೊಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅದೆಷ್ಟೋ ಯೋಜನೆಗಳನ್ನ ಜಾರಿಗೆ ತಂದಿದೆ. ಸರಕಾರ ಜಾರಿಗೆ ತಂದಿರುವ ಅದೆಷ್ಟೋ ಯೋಜನೆಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ನಗರಗಳು ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ. ಕುಡಿಯುವ ನೀರು ಸಿಗದೇ ಜನರು ಪರದಾಡುವಂತಾಗಿದ್ದು ಅಧಿಕಾರಿಗಳು ಮಾತ್ರ ಯೋಜನೆಯ ಹೆಸರಿನಲ್ಲಿ ಜೇಬು ಭರ್ತಿ ಮಾಡಿಕೊಂಡು ಹಾಯಾಗಿ ಕಾಲಕಳೆಯುತ್ತಿದ್ದಾರೆ.

ಈ ಬ್ಯಾರೇಜ್​ನ ನೀರು ಪೋಲಾಗುವ ವಿಷಯದ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿದ್ದೇನೆ. ಸರ್ಕಾರ ಕೂಡ ಅನುದಾನ ಕೊಡುವುದಾಗಿ ತಿಳಿಸಿದೆ. ಈಗಾಗಲೇ ಮಳೆಗಾಲದಲ್ಲಿ ನೀರು ಬ್ಯಾರೇಜ್​ನಲ್ಲಿ ಹೇರಳವಾಗಿರುವುದರಿಂದ ಈಗ ಅದರ ಕಾಮಗಾರಿ ಕಷ್ಟ ಹೀಗಾಗಿ ಮುಂದಿನ ಮಳೆಗಾಲದಲ್ಲಿ ಇದನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ನಿರಂತರ ಸುರಿದ ಮಳೆಗೆ ತುಂಡಾಯ್ತು ಸೇತುವೆ.. Photos