ಬೆಳೆದು ನಿಂತ ಬೆಳೆಗೆ ಹಕ್ಕಿ ಕಾಟ; ಬೀದರ್ ಜಿಲ್ಲೆಯ ರೈತರಿಗೆ ಹೊಸ ಸಂಕಷ್ಟ

ಹಕ್ಕಿಗಳಿಂದ ಬೆಳೆಹಾನಿಯಾದರೆ ಪರಿಹಾರ ಯಾರೂ ಕೊಡುವುದಿಲ್ಲ ಇದರಿಂದಾಗಿ ರೈತರಿಗೆ ಪ್ರಪಾತಕ್ಕೆ ತಳ್ಳಿದಂತಹ ಅನುಭವವಾಗುತ್ತಿದೆ. ಹಕ್ಕಿಗಳ ಕಾಟದ ಜೊತೆಗೆ ಕಾಡು ಹಂದಿ, ಜಿಂಕೆ, ಕೃಷ್ಣ ಮೃಗಗಳೂ ಸಹ ಬೆಳೆ ತಿಂದು ನಾಶಮಾಡುತ್ತಿವೆ.

  • ಸುರೇಶ್ ನಾಯಕ್
  • Published On - 18:42 PM, 22 Feb 2021
ಬೆಳೆದು ನಿಂತ ಬೆಳೆಗೆ ಹಕ್ಕಿ ಕಾಟ; ಬೀದರ್ ಜಿಲ್ಲೆಯ ರೈತರಿಗೆ ಹೊಸ ಸಂಕಷ್ಟ
ಹಕ್ಕಿಗಳಿಂದ ಜೋಳದ ರಕ್ಷಣೆಗೆ ಮುಂದಾದ ರೈತರು

ಬೀದರ್: ರೈತರು ಪ್ರತಿವರ್ಷವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಇರುತ್ತಾರೆ. ಒಂದು ವರ್ಷ ಅನಾವೃಷ್ಟಿ, ಮತ್ತೊಂದು ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ಹಾಳಾಗುತ್ತಲೇ ಇದೆ. ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದಿತ್ತು ಎಂದು ಖುಷಿಪಟ್ಟಿದ್ದರು. ಆದರೆ ಏಕಾಏಕಿ ಸುರಿದ ಮಹಾಮಳೆಯಿಂದಾಗಿ ಕೈಗೆ ಬಂದಿದ್ದ ಬೆಳೆ ಕೊಚ್ಚಿಕೊಂಡು ಹೋಗಿ ರೈತರನ್ನು ಸಂಕಷ್ಟಕ್ಕೆ ತಳ್ಳಿತ್ತು. ಈ ಬಾರಿ ಮುಂಗಾರು ಬೆಳೆ ಹಾನಿಯಾದರೇನು ಹಿಂಗಾರು ಬೆಳೆಯನ್ನಾದರು ಚೆನ್ನಾಗಿ ಬೆಳೆಯೋಣ ಎಂದುಕೊಂಡಿದ್ದರು ರೈತರು. ಇದೀಗ ಹಿಂಗಾರು ಬೆಳೆಗೆ ಹಕ್ಕಿಗಳ ಕಾಟ ಶುರುವಾಗಿದೆ. ಹಕ್ಕಿಗಳಿಂದ ಬೆಳೆ ರಕ್ಷಿಸಲು ರೈತರು ಪರದಾಡುವಂತಾಗಿದೆ.

ಬೀದರ್ ಜಿಲ್ಲೆಯಲ್ಲಿ ಬರಗಾಲ ಮಾಮೂಲಾಗಿದೆ. ರೈತರು ಭೂಮಿತಾಯಿಯನ್ನು ನಂಬಿಕೊಂಡು ಬದುಕು ನಡೆಸುವುದು ಎಂದರೆ ಸೆರಗಿನಲ್ಲಿ ಬೆಂಕಿಕಟ್ಟಿಕೊಂಡಂತೆ ಎಂದು ಇಲ್ಲಿನ ರೈತರು ಹೇಳುತ್ತಾರೆ. ಮುಂಗಾರು ಬೆಳೆ ಒಂದು ವರ್ಷ ಅತಿವೃಷ್ಟಿಯಿಂದ ಹಾಳಾದರೆ, ಇನ್ನೊಂದು ವರ್ಷ ಅನಾವೃಷ್ಟಿಯಿಂದ ಹಾಳಾಗುತ್ತದೆ. ರೈತರ ಕೈಹಿಡಿಯುವುದು ಎಂದರೆ ಅದು ಹೀಗಾಂರು ಬೆಳೆ ಮಾತ್ರ. ಆದರೇ ಇತ್ತಿಚಿನ ಕೆಲವೂ ವರ್ಷಗಳಿಂದ ಹಿಂಗಾರು ಬೆಳೆಗೆ ಕಾಡು ಪ್ರಾಣಿಗಳು, ಹಕ್ಕಿಗಳ ಕಾಟ ಹೆಚ್ಚಾಗಿದೆ. ಬಿತ್ತಿದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಸರ್ಕಸ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಹಿಂಗಾರು ಬೆಳೆಯಾದ ಬಿಳಿಜೋಳ ಹಾಗೂ ಕಡಲೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಜೋಳಕ್ಕೆ ಹಕ್ಕಿಗಳ ಕಾಟ ಜಾಸ್ತಿಯಾಗಿದೆ. ಜೋಳದ ತೆನೆಯನ್ನೇಲ್ಲಾ ಹಕ್ಕಿಗಳು ತಿಂದು ಹಾಕುತ್ತಿವೆ. ಹೀಗಾಗಿ ರೈತರು ಹಗಲಿರುಳು ಹೊಲದಲ್ಲಿಯೇ ಕಾಲ ಕಳೆಯಬೇಕಾದ ಸ್ಥಿತಿ ಬಂದಿದೆ.

meize crop

ಹಕ್ಕಿಗಳಿಂದ ಬೆಳೆ ನಾಶ ತಡೆಯಲು ರೈತರ ತಂತ್ರ.

ರೈತರು ಕಂಡುಕೊಂಡಿರುವ ಐಡಿಯಾ
ಹಕ್ಕಿಗಳಿಂದ ಬೆಳೆ ರಕ್ಷಣೆ ಮಾಡಕೊಳ್ಳಲು ರೈತರು ತಮ್ಮದೇ ಆದ ಒಂದಿಷ್ಟು ಐಡಿಯಾಗಳನ್ನು ಮಾಡಿಕೊಂಡಿದ್ದಾರೆ. ಕಾಳು ಬಿಟ್ಟಿರುವ ಜೋಳದ ತೆನೆಗಳಿಗೆ ಮನೆಯಲ್ಲಿರುವ ಬಳಕೆಗೆ ಯೋಗ್ಯವಲ್ಲದ ಹಳೆಯ ಬಟ್ಟೆಗಳನ್ನ ತಂದು ಕಟ್ಟುವ ಮೂಲಕ ಹಕ್ಕಿಗಳಿಂದ ಮೆಕ್ಕೆಜೋಳ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮುಂಜಾನೆಯಿಂದ ಸಂಜೆಯವರೆಗೂ ಹೊಲದಲ್ಲೆಲ್ಲಾ ಓಡಾಡಿ ಹಾರ್ನ್ (ಸೌಂಡ್) ಮಾಡುವುದರ ಮೂಲಕ ಹಕ್ಕಿಗಳು ಜೋಳದ ಕಾಳು ತಿನ್ನಲು ಹೊಲಕ್ಕೆ ಬಾರದ ಹಾಗೆ ನೋಡಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಮಾಡಿದರೂ ರೈತರ ಕಣ್ಣುತಪ್ಪಿಸಿ ಹಕ್ಕಿಗಳು ಜೋಳದ ಹೊಲಕ್ಕೆ ನುಗ್ಗಿ ಇಡೀ ತೆನೆಯನ್ನೇ ತಿಂದುಹಾಕಿ ರೈತರಿಗೆ ಉಪಯೋಗವಿಲ್ಲದ ಹಾಗೆ ಮಾಡಿಬಿಡುತ್ತಿವೆ. ಈ ಹಕ್ಕಿಗಳು ಕಾಡಂಚಿನ ಅಕ್ಕಪಕ್ಕದಲ್ಲಿರುವ ಜೊಳದ ಹೊಲಕ್ಕೆ ಮಾತ್ರ ಹೋಗಿ ಜೋಳ ತಿಂದುಹಾಕುತ್ತಿವೆ.

ಜಿಲ್ಲೆಯ ಬಸವಕಲ್ಯಾಣ, ಕಮಲನಗರ, ಔರಾದ್ ತಾಲೂಕುಗಳು ಬಯಲುಸೀಮೆ ಪ್ರದೇಶವಾಗಿದ್ದು, ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಬೆಳೆಸಿರುವ ಕಾಡು ಸ್ವಲ್ಪಮಟ್ಟಿಗಿದೆ. ಇದರ ಪಕ್ಕದಲ್ಲಿಯೇ ರೈತರ ನೂರಾರು ಎಕರೆ ಜಮೀನಿದ್ದು, ರೈತರು ನೀರಾವರಿ ಸೌಲಭ್ಯವಿಲ್ಲದ ಈ ಜಮೀನಿನಲ್ಲಿ ಹಿಂಗಾರಿನಲ್ಲಿ ಕಡಲೆ ಮತ್ತು ಜೋಳ ಬಿಟ್ಟರೆ ಬೇರೆ ಏನ್ನನ್ನು ಬೆಳೆಯುವುದಿಲ್ಲ ಹೀಗಾಗಿ ಹಕ್ಕಿಗಳಿಗೂ ಕೂಡ ಜೋಳ ಎಂದರೆ ಬಲು ಇಷ್ಟ.

meize crop

ಹಕ್ಕಿಗಳನ್ನು ಓಡಿಸಲು ರೈತರ ಪ್ರಯತ್ನ

ಹೊಲದಗಳಲ್ಲಿಯೇ ಉಳಿಯುವ ರೈತರು
ಹಕ್ಕಿಗಳಿಂದ ಬೆಳೆ ಉಳಿಸಿಕೊಳ್ಳಲು ರೈತರಿಗೆ ಕಷ್ಟವಾಗಿದೆ. ಬೆಳೆ ರಕ್ಷಣೆ ಮಾಡಿಕೊಳ್ಳಲು ಸಣ್ಣ ಮಕ್ಕಳನ್ನ ಕಟ್ಟಿಕೊಂಡು ಹೊಲದಲ್ಲಿಯೇ ಉಳಿಯಬೇಕಾಗಿದೆ. ಕಾಡು ಪ್ರಾಣಿ, ಪಕ್ಷಿಗಳ ಕಾಟಕ್ಕೆ ರೈತರ ಬದುಕು ದುಸ್ಥರವಾಗತೊಡಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಹೊಲದಲ್ಲಿಯೇ ಹಕ್ಕಿಗಳನ್ನ ಓಡಿಸುತ್ತಾ ಓಡಾಡಬೇಕಾದ ಸ್ಥಿತಿ ರೈತರದ್ದು. ಆದರೂ ಕೂಡ ಹಕ್ಕಿಗಳಿಂದ ಬೆಳೆ ಉಳಿಸಿಕೊಳ್ಳುಲು ರೈತರಿಗೆ ಆಗದೇ ಇರುವುದು ನೋವಿನ ಸಂಗತಿಯಾಗಿದೆ.

ಹಕ್ಕಿಗಳಿಂದ ಬೆಳೆಹಾನಿಯಾದರೆ ಇದಕ್ಕೆ ಪರಿಹಾರ ಮಾತ್ರ ಯಾರು ಕೊಡುವುದಿಲ್ಲ. ಇದರಿಂದಾಗಿ ರೈತರನ್ನು ಪ್ರಪಾತಕ್ಕೆ ತಳ್ಳಿದಂತಹ ಅನುಭವ ಅವರಿಗಾಗುತ್ತಿದೆ. ಹಕ್ಕಿಗಳ ಕಾಟದ ಜೊತೆಗೆ ಕಾಡು ಹಂದಿ, ಜಿಂಕೆ, ಕೃಷ್ಣಮೃಗಗಳು ಸಹ ಬೆಳೆಯನ್ನ ತಿಂದು ನಾಶಮಾಡುತ್ತಿವೆ. ಇದಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ಕೊಡಲಾಗುತ್ತದೆ ಎನ್ನುವುದು ನಿಜವಾದರೂ ರೈತರು ಅರಣ್ಯ ಇಲಾಖೆಗೆ ಅಲೆದೂಅಲೆದು ಪರಿಹಾರ ಪಡೆಯುವಷ್ಟರಲ್ಲಿ ಪರಿಹಾರಕ್ಕಿಂತ ಹೆಚ್ಚಿನ ಹಣ ಅವರ ಬಸ್ ಚಾರ್ಜ್​ನಲ್ಲೇ ಹೋಗಿರುತ್ತದೆ ಎಂದು ಇಲ್ಲಿನ ರೈತರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾವು ಬೆಳೆಗಾರರಲ್ಲಿ ಸಂತಸ: ಕಳೆದ ಬಾರಿಗಿಂತ ಈ ಬಾರಿ ಇಳುವರಿ ಹೆಚ್ಚಾಗುವ ಸಾಧ್ಯತೆ