ಮಾವು ಇಳುವರಿ ಕುಸಿತ: ಬಂಪರ್ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲು
ಬೀದರ್‌ನಲ್ಲಿ ಮಾವು ಬೆಳೆಗಾರರು ಈ ವರ್ಷ ಕಡಿಮೆ ಇಳುವರಿಯಿಂದಾಗಿ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಅನಾನುಕೂಲ ಹವಾಮಾನ ಮತ್ತು ರೋಗಗಳಿಂದಾಗಿ ಹೂವುಗಳು ಉದುರಿ ಹೋಗಿವೆ. ಹಲವು ವರ್ಷಗಳಿಂದ ಮಾವು ಬೆಳೆಯುತ್ತಿರುವ ರೈತರು ಈ ವರ್ಷ ನಷ್ಟ ಅನುಭವಿಸುವುದರಿಂದ ಸರ್ಕಾರದಿಂದ ಸಹಾಯ ಕೋರುತ್ತಿದ್ದಾರೆ.

ಬೀದರ್, ಫೆಬ್ರವರಿ 17: ಹಣ್ಣುಗಳ ರಾಜ ಮಾವು (mango) ಬೆಳೆದ ರೈತರು ಕಂಗಾಲಾಗಿದ್ದಾರೆ. ಇಳುವರಿ ಕುಸಿತದಿಂದ ಮಾವಿನ ಗಿಡ ಪೋಷಣೆ ಮಾಡಿದ ಹಣ ಕೂಡ ರೈತರಿಗೆ ಬಂದಿಲ್ಲ. ಗಿಡದಲ್ಲಿ ಬಿಟ್ಟಿದ್ದ ಹೂವು ಮಿಡಿಗಾಯಿ ಉದರುತ್ತಿದ್ದು ಇಳುವರಿ ಕುಸಿತ ಮಾವು ಬೆಳೆಗಾರರನ್ನ ಸಂಕಷ್ಟಕ್ಕೆ ತಳ್ಳಿದೆ.
ಜಿಲ್ಲೆಯ ಮಾವು ಬೆಳೆಯಲು ಭೂಮಿ ಹಾಗೂ ಹವಾಮಾನ ಉತ್ತಮ ಎಂದು ಗುರುತಿಸಲಾಗಿದೆ. ಹತ್ತಾರು ವರ್ಷಗಳಿಂದ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ರೈತರು ಕಬ್ಬು ತರಕಾರಿ, ಇತರೆ ಬೆಳೆಯನ್ನ ಬೆಳೆಯುತ್ತಿದ್ದರು ಆದರೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಆರೇಳು ವರ್ಷದಿಂದ ಕೆಲವು ಬೆಳೆಗಳನ್ನು ಬದಿಗೊತ್ತಿ 2027 ಹೆಕ್ಟೇರ್ ಪ್ರದೇಶದಲ್ಲಿ ದೀರ್ಘಾವಧಿ ಮಾವು ಬೆಳೆಯುತ್ತಿದ್ದಾರೆ. ಇನ್ನೂ ಕೆಳೆದ ಕೆಲವು ವರ್ಷದಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತ ಮಳೆಯಾಗಿಲ್ಲ. ಹೀಗಾಗಿ ಅಂತರ್ಜಲ ಮಟ್ಟ ಕುಸಿತದಿಂದ ಕಂಗಾಲಾಗಿದ್ದ ಬಹುತೇಕ ರೈತರು, ಇತರ ತೋಟಗಾರಿಕೆ ಬೆಳೆಗಳಿಗೆ ತಿಲಾಂಜಲಿಯನ್ನಿಟ್ಟು ಕಡಿಮೆ ನೀರು ಬಯಸುವ ನಾನಾ ಜಾತಿಯ ಮಾವಿನ ಕೃಷಿ ಕೈಗೊಳ್ಳುವ ಮೂಲಕ ಮಾವು ಕೃಷಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಆದರೆ ಈ ವರ್ಷ ಮಳೆ ಚೆನ್ನಾಗಿದ್ದರು ಹವಾಮಾನದ ವೈಪರಿತ್ಯದಿಂದಾಗಿ ಜಿಲ್ಲೆಯ ಶೇಕಡಾ 65 ರಷ್ಟು ಮಾವಿನ ಮರದಲ್ಲಿ ಹೂವು ಕಾಯಿಗಳೆ ಬಿಟ್ಟಿಲ್ಲ. ಹೆಸರಿಗೆ ಗಿಡಕ್ಕೆ ಐದು ಹತ್ತು ಕಾಯಿಗಳು ಬಿಟ್ಟಿದ್ದು ಆ ಕಾಯಿಗಳು ಕೂಡ ರೋಗದ ಬಾದೆಗೆ ತುತ್ತಾಗಿ ಗಿಡದಿಂದ ಕಳಚಿ ಬುಳುತ್ತಿವೆ. ಹಿಗಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆಂದು ಮಾವು ಬೆಳೆಗಾರ ಶಿವರಾಜ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಸಜ್ಜಾದ ಚಿಕ್ಕಮಗಳೂರು ಅರಣ್ಯ ಇಲಾಖೆ: ಪ್ಲ್ಯಾನ್ ಏನು?
ಇನ್ನೂ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಅತ್ಯಧಿಕ ರುಚಿಕರ ಮಾವುಗಳಾದ ಬೇನಿಶಾ, ಮಲ್ಲಿಕಾ, ಮಲಗೋಬಾ, ರಸಪುರಿ, ನೀಲಂ, ತೋತಾಪುರಿ ಹಾಗೂ ಇತರ ಜಾತಿಯ ಮಾವುಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆದರೆ ಈ ಬಾರಿ ಇಲ್ಲಿ ಕಡಿಮೆ ಇಳುವರಿ ಬಂದಿದ್ದು, ಕೆಲ ತೋಟಗಳಿಗೆ ರೋಗಗಳು ಕಂಡು ಬಂದಿದ್ದರಿಂದ ಕಾಯಿ ಕಟಾವಿಗೆ ಬರುವುದಕ್ಕಿಂತ ಮುಂಚೆಯೇ ಉದುರಿ ಹೋಗಿದೆ. ಜೊತೆಗೆ ಕೆಲವರ ತೋಟದಲ್ಲಿ ಒಂದೇ ಒಂದು ಕಾಯಿ ಕೂಡ ಬಿಟ್ಟಿಲ್ಲ. ಹೀಗಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ಇನ್ನೂ ಹೋದ ವರ್ಷ ಅದರ ಆಚೆಗಿನ ವರ್ಷ ಮಾವು ಉತ್ತಮವಾದ ಇಳುವರಿ ಬಂದಿತ್ತು. ಇನ್ನೇನು ಮಾವುಗಳನ್ನ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಅಕಾಲಿಕವಾಗಿ ಬಂದು ಸಿಡಿಲು ಮಳೆಯಿಂದಾಗಿ ಮಾವಿನ ಹಣ್ಣಿಗೆ ಆಲಿಕಲ್ಲು ಬಡೆದು ಮಾವಿನ ಹಣ್ಣು ಕೊಳೆತು ಹೋಯಿತು. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದು, ಒಳ್ಳೆಯ ಹವಾಮಾನವಿದೆ, ಆದರೆ ಯಾಕೋ ಮಾವಿನ ಮರದಲ್ಲಿ ಮಾತ್ರ ಕಾಯಿಗಳು ಬಿಟ್ಟಿಲ್ಲ. ಇದರಿಂದಾಗಿ ಇಳುವರಿ ಅತ್ಯಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ಮಾವು ಬೆಳೆಗಾರ ರೈತರು ಸಂಕಷ್ಟ ಅನುಭವಿಸಿದರೆ ಈ ವರ್ಷ ಇಳುವರಿ ಕುಷಿತದಿಂದಾಗಿ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಸರಕಾರ ರೈತರ ಸಮಸ್ಯೆಗೆ ಸ್ಪಂದನೆ ಕೊಡಿ ಎಂದು ಇಲ್ಲಿನ ನಿವಾಸಿಗಳು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಡಿಮೆ ಹೂಡಿಕೆ ಹೆಚ್ಚು ಲಾಭದ ಆಮಿಷ: ಪೊಲೀಸ್ ಖೆಡ್ಡಾಕ್ಕೆ ಬಿದ್ದ ವಂಚಕರು
ಪ್ರಸಕ್ತ ವರ್ಷ ಮಾವಿನ ಮರದಲ್ಲಿ ಕಾಯಿಗಳೆ ಬಿಟ್ಟಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದು ಮುಂದೆ ಹೇಗೆ ಅನ್ನೋ ಚಿಂತೆ ಮಾವು ಬೆಳೆಗಾರ ರೈತರನ್ನ ಕಾಡುತ್ತಿದೆ. ಸರ್ಕಾರ ಪ್ರತಿ ವರ್ಷ ತೋಟಗಾರಿಕೆ ಬೆಳೆಗಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಇಂತಹ ನಷ್ಟದ ಸಮಯದಲ್ಲಿ ರೈತರಿಗೆ ಏನಾದರೂ ಸಹಾಯವಾಗುವ ಕಾರ್ಯಕ್ರಮಗಳನ್ನ ತಂದು ರೈತರ ಕಣ್ಣು ಒರೆಸುವ ಕೆಲಸವನ್ನ ಸರಕಾರ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.