ಬುಟ್ಟಿ ನೇಯ್ದು ಬದುಕು ಸಾಗಿಸುತ್ತಿದ್ದ ಕೊರವ ಸಮುದಾಯದ ಹಾಡು-ಪಾಡು

ಕೊರೊನಾ ಎಂಬ ಮಹಾಮಾರಿಯ ಜೊತೆಗೆ ಆಧುನಿಕತೆಯ ಭರಾಟೆ, ಬುಟ್ಟಿ ಹೆಣೆಯುವ ಕೊರವ ಸಮುದಾಯದ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಇಂತಹ ಜನರನ್ನು ಸರಕಾರ ಗುರುತಿಸಿ ಸಹಾಯ ಮಾಡಬೇಕಿದೆ.

  • ಸುರೇಶ್ ನಾಯಕ್
  • Published On - 19:49 PM, 18 Jan 2021
ಬುಟ್ಟಿ ನೇಯ್ದು ಬದುಕು ಸಾಗಿಸುತ್ತಿದ್ದ ಕೊರವ ಸಮುದಾಯದ ಹಾಡು-ಪಾಡು
ಬುಟ್ಟಿ ಹೆಣೆಯುತ್ತಿರುವ ಮಹಿಳೆಯರು

ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಹಂಚಿಕೊಂಡಿರುವ ಬೀದರ್ ಹಿಂದುಳಿದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೇನು ಕಡಿಮೆಯಿಲ್ಲ. ಆದರೆ ಕೊರೊನಾ ಎಂಬ ಮಹಾಮಾರಿಯ ಜೊತೆಗೆ ಆಧುನಿಕತೆಯ ಭರಾಟೆ, ಬುಟ್ಟಿ ಹೆಣೆಯುವ ಕೊರವ ಸಮುದಾಯಕ್ಕೆ ಭಾರೀ ಹೊಡೆತ ಕೊಟ್ಟಿದೆ. ಕೊರವ ಸಮುದಾಯದ ಬುಟ್ಟಿ ಹೆಣೆಯುವ ಕಸುಬಿಗೆ ಕುತ್ತು ತಂದಿದೆ.

ಬೀದರ್ ಜಿಲ್ಲೆಯ ವಿವಿಧ ಭಾಗದಲ್ಲಿ, ಕೊರವ ಸಮುದಾಯದವರು ಈಚಲು ಬರಲಿನಿಂದ ಬುಟ್ಟಿ ಹೆಣೆಯುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಅಂದಾಜು ಇನ್ನೂರಕ್ಕೂ ಹೆಚ್ಚು ಕೊರವ ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದವು. ಆದರೆ ಇದೀಗ, ಮಾರುಕಟ್ಟೆಯಲ್ಲಿ ಈಚಲು ಮರದ ಬರಲಿನಿಂದ ತಯಾರಿಸುವ ಬುಟ್ಟಿ, ಕಸಬರಿಗೆ, ಚಾಪೆ, ಜಲ್ಲಿಗಳಿಗೆ ಬೇಡಿಕೆ ಕುಸಿದಿದೆ. ಇವುಗಳ ಜಾಗದಲ್ಲಿ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಪ್ಲಾಸ್ಟಿಕ್ ಸಾಮಾನುಗಳು ಕಂಗೊಳಿಸುತ್ತಿವೆ. ಕಣ್ಣು ಕುಕ್ಕುವ ಆಧುನಿಕ ವಸ್ತುಗಳ ಎದುರು ಕೊರವರು ಹೆಣೆಯುವ ಈಚಲು ಸಾಮಾನುಗಳು ಕಳೆಗುಂದುವಂತಾಗಿದೆ. ಆ ಮೂಲಕ, ಗುಡಿ ಕೈಗಾರಿಕೆಗೆ ಕುತ್ತು ಬಂದಿದೆ.

ಮೊದಲೇ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಕೊರವ ಸಮುದಾಯದವರು, ಕೊರೊನಾದಿಂದಲೂ ಭಾರೀ ಕಷ್ಟ ಅನುಭವಿಸಬೇಕಾಗಿದೆ. ಬುಟ್ಟಿ ನೇಯುವ ಕಾಯಕ ಬಿಟ್ಟರೆ ಇವರಿಗೆ ಬೇರೆ ಉದ್ಯೋಗ ಗೊತ್ತಿಲ್ಲ. ಕೊರವ ಸಮುದಾಯದ ಜನರು ಮೂಲ ಕಸುಬಿನಂತೆ ಬುಟ್ಟಿ ತಯಾರಿಸಿ, ಹಳ್ಳಿಹಳ್ಳಿಗೆ ಹೋಗಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಈಗ ಮೊದಲಿನಂತೆ ಹಳ್ಳಿಹಳ್ಳಿಗೆ ಹೋಗಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಕೊರೊನಾ ಎಂಬ ಮಹಾಮಾರಿಯಿಂದ ಇಡೀ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ.

ಕೊರೊನಾ ಸೋಂಕು ಇಲ್ಲದ ದಿನಮಾನಗಳಲ್ಲಿ ಹಳ್ಳಿಹಳ್ಳಿಗೆ ಹೋಗಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಬರುತ್ತಿದ್ದರು. ಜನರು ಕೂಡಾ ಇವರು ತಂದಿದ್ದ ವಸ್ತುಗಳನ್ನು ಖರೀದಿಸುತ್ತಿದ್ದರು. ಆದರೆ ಈಗ, ಇವರಿಂದ ತಂದಿರುವ ವಸ್ತುಗಳನ್ನ ಖರೀದಿಸಲು ಜನ ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ಹೀಗಾಗಿ, ಕೊರವರ ಬದುಕು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಜೊತೆಗೆ, ಇವರು ಬುಟ್ಟಿ ತಯಾರಿಸಲು ಬಳಸುವ ಕಚ್ಚಾವಸ್ತುಗಳನ್ನು ಅಕ್ಕಪಕ್ಕದ ಜಿಲ್ಲೆಗಳಿಂದ ಖರೀದಿಸಿ ತರುತ್ತಿದ್ದರು. ಆದರೆ, ಮೊದಲಿಗಿಂತ ಈಗ ಕಚ್ಚಾ ವಸ್ತುವಿನ ಬೆಲೆ ದುಪ್ಪಟ್ಟಾಗಿದ್ದು ಬೇರೆ ಜಿಲ್ಲೆಗಳಿಂದ ಕಚ್ಚಾ ವಸ್ತುಗಳನ್ನು ತರುವುದು ಕೂಡಾ ಸಮಸ್ಯೆಯಾಗಿ ಪರಿಣಮಿಸಿದೆ.

ಕೊರೊನಾ ಎಂಬ ಮಾಹಾಮಾರಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆತ ಕೊಟ್ಟಿದೆ. ದುಡಿದು ಯಾರ ಹಂಗಿಲ್ಲದೆ ಬದುಕುತ್ತಿದ್ದವರೂ ಇನ್ನೊಬ್ಬರಿಗೆ ಕೈಯ್ಯೊಡ್ಡುವ ಹಾಗಾಗಿದ್ದು ಶೋಚನಿಯ ಸಂಗತಿ. ಕೊರವ ಜನಾಂಗ ರಾಜ್ಯದ ಮೂಲೆಮೂಲೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ವಾಸಿಸುತ್ತಿದೆ. ಇಂತಹ ಜನರನ್ನು ಸರಕಾರ ಗುರುತಿಸಿ ಸಹಾಯ ಮಾಡಬೇಕಿದೆ.