ಔರಾದ್​ ತಾಲೂಕಿನಲ್ಲಿ ಟಾಪ್ ಸವಾರಿ ಸಾಮಾನ್ಯ: ರಸ್ತೆ ಮೇಲೆ ಪ್ರಯಾಣಿಕರಿಗೆ ನಿತ್ಯ ಗಂಡಾಂತರ

ಜಿಲ್ಲೆಯ ಔರಾದ ತಾಲೂಕಿನ ನೂರಾರು ಹಳ್ಳಿ, ತಾಂಡಾಗಳಿಗೆ ಇಂದಿಗೂ ಸರ್ಕಾರಿ ಬಸ್ಗಳು ಬಂದಿರುವ ಉದಾಹರಣೆ ಇಲ್ಲ. ತಾಲೂಕಿನ 175 ಹಳ್ಳಿಗಳು ಮತ್ತು 200 ತಾಂಡಾಗಳ ಪೈಕಿ ಬಹುತೇಕ ತಾಂಡಾ ಹಾಗೂ ಗ್ರಾಮಗಳಿಗೆ ಇಂದಿಗೂ ಸರ್ಕಾರಿ ಬಸ್​ಗಳೇ ಬಂದಿಲ್ಲ.

  • ಸುರೇಶ್ ನಾಯಕ್
  • Published On - 14:45 PM, 2 Mar 2021
ಔರಾದ್​ ತಾಲೂಕಿನಲ್ಲಿ ಟಾಪ್ ಸವಾರಿ ಸಾಮಾನ್ಯ: ರಸ್ತೆ ಮೇಲೆ ಪ್ರಯಾಣಿಕರಿಗೆ ನಿತ್ಯ ಗಂಡಾಂತರ
ಖಾಸಗಿ ಜೀಪ್​ ಮೇಲೆ ಕುಳಿತು ಪ್ರಯಾಣಿಸುತ್ತಿರುವ ಪ್ರಯಾಣಿಕರು

ಬೀದರ್: ಹಿಂದುಳಿದ ತಾಲೂಕು ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯ ಔರಾದ್ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಇಂದಿಗೂ ಕೂಡಾ ಸರಕಾರಿ ಬಸ್ ವ್ಯವಸ್ಥೆಯಿಲ್ಲ. ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೇ ನಡೆದುಕೊಂಡೇ ಬೇರೆ ಊರುಗಳಿಗೆ ಹೋಗಬೇಕಾದ ದಯನೀಯ ಸ್ಥಿತಿ ಇಲ್ಲಿನವರಿಗಿದೆ. ಆಗೊಂದು ಇಗೊಂದು ಓಡಾಡುವ ಟಂಟಂಗಳು, ಮಿನಿ ಲಾರಿಗಳು ಆಟೋಗಳೇ ಇಲ್ಲಿನ ಜನರ ಪ್ರಯಾಣಕ್ಕೆ ಅನೂಕುಲವಾಗಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಜನರು ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಾರೆ.

ಜಿಲ್ಲೆಯ ಔರಾದ್ ತಾಲೂಕಿನ ನೂರಾರು ಹಳ್ಳಿ, ತಾಂಡಾಗಳಿಗೆ ಇಂದಿಗೂ ಸರ್ಕಾರಿ ಬಸ್​ಗಳು ಬಂದಿರುವ ಉದಾಹರಣೆ ಇಲ್ಲ. ತಾಲೂಕಿನ 175 ಹಳ್ಳಿಗಳು ಮತ್ತು 200 ತಾಂಡಾಗಳ ಪೈಕಿ ಬಹುತೇಕ ತಾಂಡಾ ಹಾಗೂ ಗ್ರಾಮಗಳಿಗೆ ಇಂದಿಗೂ ಸರ್ಕಾರಿ ಬಸ್​ಗಳೇ ಬಂದಿಲ್ಲ. ಬಸ್​ಗಳು ತಮ್ಮ ಊರಿಗೆ ಬಾರದಿರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಖಾಸಗಿ ಜೀಪ್, ಟಂಟಂ, ಆಟೋ, ಟೆಂಪೊಗಳೆ ಸರ್ಕಾರಿ ವಾಹನಗಳಾಗಿವೆ.
ಪ್ರತಿದಿನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಖಾಸಗಿ ವಾಹನಗಳಲ್ಲಿ ಕುರಿಗಳಂತೆ 10 ಜನರ ಬದಲಿಗೆ 20 ರಿಂದ 30 ಜನರು ಟಾಪ್ ಮತ್ತು ಒಳಗೆ ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು, ನಿಂತು ಕೊಂಡ ಚಾಲಕನಿಗೂ ವಾಹನ ಓಡಿಸಲು ಬಾರದಷ್ಟು ಜನರು ಕುಳಿತುಕೊಂಡು ಹಳ್ಳಿಗಳಿಂದ ಪಟ್ಟಣಕ್ಕೆ ಬರುತ್ತಾರೆ. ಹಲವು ಬಾರಿ ಅನಾಹುತಗಳು ಸಂಭವಿಸಿವೆ. ಇಷ್ಟಾದರು ಕ್ಷೇತ್ರ ಶಾಸಕರಾಗಲಿ, ಅಧಿಕಾರಿಗಳಾಗಲಿ ಎಚ್ಚೆತುಕೊಂಡಿಲ್ಲ ಎಂದು ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಿ ಬಸ್ ಇಲ್ಲದ ಕಾರಣ ಪ್ರತಿನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರಬೇಕಾದರೆ ಟ್ರಕ್, ಜಿಪ್, ಟೆಂಪೊಗಳ ಟಾಪ್ ಮೇಲ್ ಕುಳಿತುಕೊಂಡು ಕಾಲೇಜಿಗೆ ಬರಬೇಕು. ಖಾಸಗಿ ವಾಹನಗಳ ದರ್ಬಾರ್​ನಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅಪಘಾತದಲ್ಲಿ ಪ್ರಾಣ ಹಾಗೂ ಕೈಕಾಲು ಕಳೆದು ಕೊಳುತ್ತಿರುವ ಪ್ರಯಾಣಿಕರು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪವನ್ನ ಹಾಕುತ್ತಿದ್ದಾರೆ. ಹೀಗೆ ರಾಜಾರೋಷವಾಗಿ ಖಾಸಗಿ ವಾಹನಗಳ ದರ್ಬಾರ್ ನಡೆಯುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರಡರಂತೆ ಇದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ಟ್ರಾಕ್ಸ್​ನಲ್ಲಿ ಪ್ರಯಾಣಿಕರು

ಪ್ರಯಾಣಿಕರ ಆರೋಪ
ಕಾನೂನು ಉಲ್ಲಂಘಿಸಿ ವಾಹನಗಳಲ್ಲಿ ಜನರನ್ನು ಕರೆದೊಯ್ಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುವ ಮನಸ್ಸು ಮಾಡಿಲ್ಲ. ಆಟೋಗಳಲ್ಲಿಯೂ ನಿಗದಿಪಡಿಸಿದಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಇದರಿಂದಾಗಿ ಆಟೋಗಳು ಪಲ್ಟಿಯಾಗಿ ಹಲವರು ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ವಾಹನದಲ್ಲಿ ಜನರನ್ನ ಕುರಿ ತುಂಬಿದ ಹಾಗೇ ತುಂಬಿಕೊಂಡು ಹೋಗುತ್ತಿದ್ದರು ಅದನ್ನ ಪೊಲೀಸರು ನೋಡುತ್ತಾರೆಯೇ ಹೊರತು ಅದನ್ನ ತಡೆಯುವ ಪ್ರಯತ್ನವನ್ನ ಮಾಡುವುದಿಲ್ಲ. ಇದು ಸಹಜವಾಗಿಯೇ ಇಲ್ಲಿನ ಜನರನ್ನ ಕೆರಳಿಸುವಂತೆ ಮಾಡುತ್ತಿದೆ.

ನಿಗದಿಪಡಿಸಿದಕ್ಕಿಂತ ಹೆಚ್ಚು ಮಂದಿ ಆಟೋಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು

ಕೇವಲ ಔರಾದ್ ತಾಲೂಕು ಮಾತ್ರವಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ವಾಹನ ಚಲಾಯಿಸುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಮುಂದಾಗುವ ಅನಾಹುತದಿಂದ ಪಾರು ಮಾಡಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಟ್ರಾಕ್ಸ್​ನಲ್ಲಿ ತರಕಾರಿ ಸಾಗಣೆ

ಇದನ್ನೂ ಓದಿ

ಹುಬ್ಬಳ್ಳಿಯಲ್ಲಿ KSRTC ಸಾರಿಗೆ ನಿಯಮ ಗಾಳಿಗೆ; ಡಕೋಟಾ ಎಕ್ಸ್​ಪ್ರೆಸ್​ನಲ್ಲೇ ಪ್ರಯಾಣಿಕರಿಗೆ ಸರ್ವೀಸ್

ಕೊಪ್ಪಳದಲ್ಲಿ ಬಸ್​ಗಳಿಲ್ಲದೆ ಪರದಾಟ; ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು