ಬೀದರ್ ಜಿಲ್ಲೆಯಲ್ಲಿ ಜಾನುವಾರು ಸಂತತಿ ಗಣನೀಯ ಇಳಿಕೆ!
ಬೀದರ್ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎತ್ತುಗಳ ಸಂಖ್ಯೆಯಲ್ಲಿನ ತೀವ್ರ ಇಳಿಕೆ ಗೋಪ್ರಿಯರಲ್ಲಿ ಆತಂಕ ಹೆಚ್ಚಿಸಿದೆ. ಕೃಷಿಯಲ್ಲಿ ಯಂತ್ರೀಕರಣ ಹೆಚ್ಚಳ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ಹೊರತಾಗಿಯೂ ಸಂಖ್ಯೆ ಕಡಿಮೆಯಾಗುತ್ತಿದೆ. ಭೂಮಿಯ ಫಲವತ್ತತೆ ಕಡಿಮೆಯಾಗುವುದು ಮತ್ತು ಜನರ ಆರೋಗ್ಯದ ಮೇಲೆ ಇದರ ಪರಿಣಾಮ ಚರ್ಚೆಗೆ ಕಾರಣವಾಗಿದೆ.

ಬೀದರ್, ಏಪ್ರಿಲ್ 11: ಬೀದರ್ (Bidar) ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರು ಸಂತತಿ ಕಡಿಮೆಯಾಗುತ್ತಿದೆ. ಅದರಲ್ಲಿಯೂ ಎತ್ತುಗಳ (Ox) ಸಂಖ್ಯೆ ಭಾರೀ ಪ್ರಮಾಣದಲ್ಲಿ ಕ್ಷೀಣಿಸುತ್ತಿದ್ದು, ಗೋ ಪ್ರಿಯರಲ್ಲಿ ಆತಂಕ ಹೆಚ್ಚಿಸಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಜಾನುವಾರುಗಳ ಸಂಖ್ಯೆ ಇಳಿಕೆಯತ್ತ ಸಾಗಿದ್ದು, ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಬೀದರ್ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. 2ನೇ ಗಣತಿಯ ಆಧಾರದಲ್ಲಿ ಶೇ.25ರಷ್ಟು ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು ಆಘಾತ ಮೂಡಿಸಿದೆ. ಪಶುಸಂಗೋಪನೆ ಇಲಾಖೆಯಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರುಗಳ ಗಣತಿ ನಡೆಯುತ್ತದೆ. 2019ರಲ್ಲಿ ನಡೆದಿದ್ದ 2ನೇ ಗಣತಿಯ ಅಂಕಿ-ಅಂಶಗಳ ಪ್ರಕಾರ ಬೀದರ 5,88,784 ಜಾನುವಾರುಗಳಿದ್ದವು. ಈಗ 2024ರ ವರ್ಷಾಂತ್ಯಕ್ಕೆ ಕೈಗೊಂಡಿದ್ದ 2ನೇ ಗಣತಿಯ ಮಾಹಿತಿ ಹೊರಬಿದ್ದಿದ್ದು ಈ ಅವಧಿಯಲ್ಲಿ ಮೂಕ ಪ್ರಾಣಿಗಳ ಸಂಖ್ಯೆ ಅಂದಾಜು ಒಂದೂವರೆ ಲಕ್ಷದಷ್ಟು ಕುಸಿತ ಕಂಡಿದೆ.
834 ಗ್ರಾಮಗಳಲ್ಲಿ 3,62,501 ಕುಟುಂಬಗಳ ಗಣತಿ ಕಾರ್ಯವನ್ನು ಪಶುಸಂಗೋಪನೆ ಇಲಾಖೆ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದೆ. ಪ್ರಸಕ್ತ ಗಣತಿಯಂತೆ ಜಿಲ್ಲೆಯಲ್ಲಿ 4,25,480 ಒಟ್ಟು ಜಾನುವಾರುಗಳಿವೆ. ಇನ್ನು ರೈತರು ಉಳುಮೆ, ಬಿತ್ತನೆ ಕಾರ್ಯಕ್ಕೆ ಹೆಚ್ಚು ಹೆಚ್ಚು ಯಂತ್ರಗಳ ಮೊರೆ ಹೋದ ಪರಿಣಾದಿಂದಾಗಿ ರೈತರು ಜಾನುವಾರುಗಳನ್ನ ಸಾಕುವುದು ಕಡಿಮೆ ಮಾಡಿದ್ದಾರೆ. ಹೀಗಾಗಿ, ದಿನದಿಂದದಿನಕ್ಕೆ ಜಾನುವಾರು ಸಂಖ್ಯೆಯಲ್ಲಿ ಇಳಿಕೆಯಾಗುತ್ತಿ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ನರಸಪ್ಪ ಹೇಳಿದರು.
ಅನ್ನದಾತರ ಜೀವನಾಡಿಯಾಗಿದ್ದ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಜನ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ಹಿಂದೆ ದನ, ಎಮ್ಮೆ, ಕರು, ಹಸುಗಳನ್ನು ಸಾಕುವ ಮೂಲಕ ರೈತರು ಸಾವಯವ ಗೊಬ್ಬರವನ್ನು ಬಳಸಿ ಭೂಮಿ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟದ ಬೆಳೆಗಳನ್ನು ಪಡೆಯುತ್ತಿದ್ದರು. ಆದರೆ, ಈಗ ರಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿರುವ ಕಾರಣ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದ ಭೂ ಒಡಲಲ್ಲಿ ಬೆಳೆದು ನಾವೆಲ್ಲ ಸೇವಿಸುತ್ತಿರುವ ಆಹಾರ ವಿಷಪೂರಿತವಾಗುತ್ತಿದ್ದು ಜನರ ಆರೋಗ್ಯದ ಮೇಲೂ ಕೂಡಾ ಪರಿಣಾಮ ಬೀರುತ್ತಿದೆ. ಇನ್ನೂ ಸರ್ಕಾರ ದೇಶಿ ಜಾನುವಾರು ಸಾಕಾಣಿಕೆ ಮಾಡಲು ಹೈನೋತ್ಪಾದನೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೂ ಕೂಡ ಜಾನುವಾರುಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿಲ್ಲ ಇಲ್ಲ ಏಕೆ ಗೋ ಪ್ರಿಯರು ಪ್ರಶ್ನಿಸಿದ್ದಾರೆ.
ಎತ್ತುಗಳು ಎಲ್ಲಿಗೆ ಹೋಗುತ್ತಿವೆ? ಎತ್ತುಗಳನ್ನು ವಧೆ ಮಾಡಲಾಗುತ್ತಿದೆಯಾ? ರೋಗದಿಂದ ಬಳಲಿ ಅಸುನೀಗುತ್ತಿವೆಯಾ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಕೃಷಿ ಹಾಗೂ ಕೃಷಿಯೇತರ ಕಾರ್ಯಗಳಿಗೆ ಹೆಚ್ಚಾಗಿ ಎತ್ತುಗಳನ್ನೇ ರೈತರು ಹೆಚ್ಚು ಅವಲಂಬಿಸುತ್ತಿದ್ದರು. ಈಗ ಕೃಷಿ ಚಟುವಟಿಕೆ ಮತ್ತು ಸಾಮಗ್ರಿಗಳನ್ನು ಸಾಗಿಸಲು ಜಾನುವಾರುಗಳ ಜಾಗದಲ್ಲಿ ಟ್ಯಾಕ್ಟರ್ ಮತ್ತು ಸಣ್ಣ ಗೂಡ್ಸ್ ಆಟೋಗಳು ಬಂದಿವೆ.
ಹೀಗಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಜಾನುವಾರುಗಳ ಸಂತತಿ ಹೆಚ್ಚಿಸುವ ಉದ್ದೇಶದಿಂದ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಇದರಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಬಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂದುಕೊಂಡಿದ್ದರು. ಆದರೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಕೂಡ ಜಾನುವಾರುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಗೋ ಪ್ರಿಯರನ್ನು ಕಾಡುತ್ತಿದೆ.
ಗೋ ಹತ್ಯೆ ಕಾನೂನು ಜಾರಿಯಾದರೂ ಕೂಡ ಗೋವುಗಳ ವಧೆ ನಿರಂತರವಾಗಿದ್ದು, ಇದೇ ಕಾರಣಕ್ಕೆ ಗೋವುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಹಿಂದೂಪರ ಸಂಘಟನೆಯವರು ಹಾಗೂ ಬಿಜೆಪಿ ಶಾಸಕರು ಹೇಳಿದ್ದಾರೆ. ಹಾಲು ಕೊಡದ ಗೋವುಗಳ ಬಗ್ಗೆ, ವಯಸ್ಸಾದ ಎತ್ತುಗಳ ಬಗ್ಗೆ ರೈತರು ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ರೋಗಗಕ್ಕೆ ತುತ್ತಾಗಿ ಎತ್ತು, ಆಕಳುಗಳು ಸಾವನ್ನಪ್ಪುತ್ತಿವೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ಬಿಸಿಲಾಘಾತ: ರಾಜ್ಯ ವಿಪತ್ತು ಎಂದು ಘೋಷಿಸಲು ಆಗ್ರಹ
ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಜಾನುವಾರು ಗಣತಿಯಿಂದಲೇ ಬಹಿರಂಗವಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಜಾನುವಾರುಗಳನ್ನ ಫೋಟೋದಲ್ಲಿ ತೋರಿಸುವ ಕಾಲ ದೂರವಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 pm, Fri, 11 April 25