ಅನುಭವ ಮಂಟಪಕ್ಕೆ ಸಿಎಂ ಭೂಮಿಪೂಜೆ; ಉದ್ಘಾಟನೆಗೆ ಪ್ರಧಾನಿಯವರನ್ನು ಕರೆಸುತ್ತೇನೆ ಎಂದ ಯಡಿಯೂರಪ್ಪ

ವಿಶ್ವಕ್ಕೇ ಸಮಾನತೆಯ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಅವರು ನಮ್ಮ ಕನ್ನಡ ನೆಲದವರು ಅನ್ನೋದೇ ಹೆಮ್ಮೆಯ ವಿಚಾರ. ಇಂದು ಎಲ್ಲರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದೇನೆ. ಇದು ಯಾವುದೋ ಪೂರ್ವಜನ್ಮದ ಪುಣ್ಯಫಲ ಎಂದು ಸಿಎಂ ಹೇಳಿದರು.

  • TV9 Web Team
  • Published On - 15:18 PM, 6 Jan 2021
ಅನುಭವ ಮಂಟಪಕ್ಕೆ ಸಿಎಂ ಭೂಮಿಪೂಜೆ; ಉದ್ಘಾಟನೆಗೆ ಪ್ರಧಾನಿಯವರನ್ನು ಕರೆಸುತ್ತೇನೆ ಎಂದ ಯಡಿಯೂರಪ್ಪ
ಭೂಮಿಪೂಜೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇತರ ಗಣ್ಯರು

ಬೀದರ್​: ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಭೂಮಿಪೂಜೆ ಸಲ್ಲಿಸಿದರು. ನಂತರ ಮಾತನಾಡಿ, 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಅನುಭವ ಮಂಟಪ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಲಾಗುವುದು ಎಂದು ತಿಳಿಸಿದರು.

ಅನುಭವ ಮಂಟಪಕ್ಕೆ ಈಗಾಗಲೇ 100 ಕೋಟಿ ರೂ.ಮಂಜೂರು ಮಾಡಲಾಗಿದೆ. ಒಂದು ವಾರದಲ್ಲಿ ಟೆಂಡರ್​ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಇನ್ನೂ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ. ಎಷ್ಟು ಖರ್ಚಾದರೂ ಸರಿ, ಇಲ್ಲಿ ಏನೇನು ಕೆಲಸ ಆಗಬೇಕೋ ಅದನ್ನೆಲ್ಲ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಕ್ಕೇ ಸಮಾನತೆಯ ಪರಿಕಲ್ಪನೆ ನೀಡಿದವರು ಬಸವಣ್ಣನವರು. ಅವರು ನಮ್ಮ ಕನ್ನಡ ನೆಲದವರು ಅನ್ನೋದೇ ಹೆಮ್ಮೆಯ ವಿಚಾರ. ಇಂದು ಎಲ್ಲರ ಸಮ್ಮುಖದಲ್ಲಿ ಭೂಮಿ ಪೂಜೆ ಮಾಡಿದ್ದೇನೆ. ಇದು ಯಾವುದೋ ಪೂರ್ವಜನ್ಮದ ಪುಣ್ಯಫಲ. ಮುಂದೆ ಉದ್ಘಾಟನಾ ಸಮಾರಂಭಕ್ಕೆ ಮೂರು ಲಕ್ಷ ಜನರನ್ನು ಸೇರಿಸುತ್ತೇನೆ. ಬಸವಣ್ಣನವರ ಆಶೀರ್ವಾದದಿಂದ ಎಲ್ಲ ಕೆಲಸಗಳೂ ಆಗುತ್ತಿವೆ. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಇನ್ನೆರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಹಿರಿಯ ರಾಜಕಾರಣಿ ಬಸವರಾಜ ಪಾಟೀಲ ಸೇಡಂಗೆ ವಹಿಸುತ್ತೇನೆ ಎಂದು ತಿಳಿಸಿದರು.

ಬಸವಣ್ಣನ ತತ್ವ, ವಚನಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕೆಲವು ಹಿರಿಯರು ಇಲ್ಲಿ ಪ್ರತಿವರ್ಷ ಉತ್ಸವ ನಡೆಸಲು ಸಲಹೆ ನೀಡಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದೂ ಹೇಳಿದರು.

ಯತ್ನಾಳ್ ವಿರುದ್ಧ ರಾಷ್ಟ್ರೀಯ ಶಿಸ್ತು ಸಮಿತಿಯೇ ಕ್ರಮಕೈಗೊಳ್ಳುತ್ತದೆ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್