ಲಾಕ್​ಡೌನ್​ನಿಂದಾಗಿ ಭೂಮಿ ಪಾಲಾದ ನೇರಳೆ ಹಾಗೂ ಮಾವು ಫಸಲು; ಬೀದರ್ ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ

ಜಿಲ್ಲೆಯಲ್ಲಿ ಸುಮಾರು 17 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಅದರಲ್ಲಿ ಮಾವು 700 ಹೆಕ್ಟರ್, ಕಲ್ಲಂಗಡಿ 400 ಹೇಕ್ಟರ್, ನೇರಳೆ 2 ಹೆಕ್ಟರ್. ಇನ್ನು ಬದನೆ, ಟೊಮೆಟೋ, ಹೀರೆಕಾಯಿ ಹೀಗೆ ಸಾವಿರಾರು ಎಕರೆಯಷ್ಟು ಬೆಳೆ ಬೆಳೆದಿದ್ದು, ಕೊರೊನಾ ರೈತರ ಬದುಕನ್ನು ಬೀದಿಗೆ ತಳ್ಳಿದೆ. ರಾಜ್ಯದಲ್ಲಿಯೇ ಭಾರೀ ಬೇಡಿಕೆ ಇದ್ದ ಹಣ್ಣುಗಳು ಈಗ ಬೇಡಿಕೆ ಇಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸ.

ಲಾಕ್​ಡೌನ್​ನಿಂದಾಗಿ ಭೂಮಿ ಪಾಲಾದ ನೇರಳೆ ಹಾಗೂ ಮಾವು ಫಸಲು; ಬೀದರ್ ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ
ಲಾಕ್​ಡೌನ್​ನಿಂದಾಗಿ ಭೂಮಿ ಪಾಲಾದ ಮಾವು ಫಸಲು

ಬೀದರ್: ಕೊರೊನಾ ಎರಡನೇ ಅಲೆ ತೀವ್ರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಅದರಂತೆ ಲಾಕ್​ಡೌನ್​ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ರೈತರು ಲಾಕ್​ಡೌನ್​ನಿಂದಾಗಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಫಸಲು ಬರುವ ಈ ಕಾಲದಲ್ಲಿ ಬೆಳೆದ ಬೆಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹದ್ದೇ ಪರಿಸ್ಥಿತಿ ಸದ್ಯ ಬೀದರ್ ಜಿಲ್ಲೆಯ ರೈತರದ್ದಾಗಿದ್ದು, ಲಾಕ್​ಡೌನ್​ನಿಂದಾಗಿ ಮಾವು ಮತ್ತು ನೇರಳೆ ಹಣ್ಣಿನ ಬೆಲೆ ಕುಸಿತವಾಗಿದೆ.

ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ರೈತ ನಾಗರಾಜು ಅವರು ಬೆಳೆದ ಮಾವು ಹಾಗೂ ನೇರಳೆ ಹಣ್ಣಿನ ಫಸಲು ಸಂಪೂರ್ಣ ಮಣ್ಣು ಪಾಲಾಗಿದೆ. ಸುಮಾರು 65 ಎಕ್ಕರೆ ಭೂಮಿಯಲ್ಲಿ 3 ಸಾವಿರಕ್ಕೂ ಹೆಚ್ಚು ಹಣ್ಣಿನ ಗಿಡಗಳಿವೆ. ವರ್ಷವಿಡೀ ಕಷ್ಟ ಪಟ್ಟು ಬೆಳೆದ ಫಸಲು ಕೊರೊನಾ ಲಾಕ್​ಡೌನ್​ಗೆ ನೆಲಕಚ್ಚಿದೆ. ಅಲ್ಲದೇ ಈ ಬಾರಿ ವರುಣದೇವ ಕೃಪೆ ತೋರದಿದ್ದರಿಂದ ಹರಸಾಹಸ ಪಟ್ಟು ಹನಿ ನೀರಾವರಿ ಮೂಲಕ ಫಸಲಿಗೆ ನೀರುಣಿಸಿದ್ದೇವು, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಬೆಳೆ ಉಳಿಸಿಕೊಂಡಿದ್ದೇವು. ಅದರಂತೆ ಉತ್ತಮ ಫಸಲು ಕೂಡ ಬಂದಿತ್ತು. ಹೀಗಾಗಿ ಉತ್ತಮ ವರಮಾನ ಬರುತ್ತದೆ ಎಂದುಕೊಂದಿದ್ದೇವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 17 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಅದರಲ್ಲಿ ಮಾವು 700 ಹೆಕ್ಟರ್, ಕಲ್ಲಂಗಡಿ 400 ಹೇಕ್ಟರ್, ನೇರಳೆ 2 ಹೆಕ್ಟರ್. ಇನ್ನು ಬದನೆ, ಟೊಮೆಟೋ, ಹೀರೆಕಾಯಿ ಹೀಗೆ ಸಾವಿರಾರು ಎಕರೆಯಷ್ಟು ಬೆಳೆ ಬೆಳೆದಿದ್ದು, ಕೊರೊನಾ ರೈತರ ಬದುಕನ್ನು ಬೀದಿಗೆ ತಳ್ಳಿದೆ. ರಾಜ್ಯದಲ್ಲಿಯೇ ಭಾರೀ ಬೇಡಿಕೆ ಇದ್ದ ಹಣ್ಣುಗಳು ಈಗ ಬೇಡಿಕೆ ಇಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸ.

ಕಳೆದ ಐದಾರು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಗಡೀ ಜಿಲ್ಲೆ ಬೀದರ್​ನ ರೈತರಿಗೆ ಈ ವರ್ಷ ಉತ್ತಮ ಮಳೆಯಾಗಿ, ಉತ್ತಮ ಇಳುವರಿ ಬಂದಿತ್ತು. ಆದರೇ ಕೊರೊನಾದಿಂದಾಗಿ ಜಾರಿಗೆ ಬಂದ ಲಾಕ್​ಡೌನ್ ರೈತರು ಬೆಳೆದ ಮಾವು, ಕಲ್ಲಂಗಡಿ, ನೇರಳೆ ಮತ್ತು ತರಕಾರಿಯನ್ನು ಯಾರು ಕೊಳ್ಳಲು ಮುಂದೆ ಬಂದಿಲ್ಲ. ಇದರಿಂದಾಗಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಸಿದ ತೋಟಗಾರಿಕೆ ಬೆಳೆಗೆ ಹಾನಿಯಾಗಿದ್ದು, ಇದು ರೈತರನ್ನು ಕಂಗೆಡಿಸುವಂತೆ ಮಾಡಿದೆ. ಐದಾರು ವರ್ಷದಿಂದ ನಷ್ಟವನ್ನೇ ಅನುಭವಿಸಿದ ರೈತರು ಈ ವರ್ಷವಾದರೂ ಉತ್ತಮ ಆದಾಯ ಬರುತ್ತದೆಂದುಕೊಂಡಿದ್ದರು, ಆದರೇ ಲಾಕ್​ಡೌನ್​ನಿಂದ ಸದ್ಯ ಬೆಳೆ ಮಣ್ಣು ಪಾಲಾಗಿದೆ. ಸರಕಾರ ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕೊಟ್ಟು ರೈತರನ್ನು ಬದುಕಿಸಿ ಎಂದು ರೈತ ಮುಂಖಡರಾದ ದಯಾನಂದ್ ಸ್ವಾಮೀ ತಿಳಿಸಿದ್ದಾರೆ.

ಒಟ್ಟಿನಲ್ಲಿ ಗಡಿ ಜಿಲ್ಲೆಯ ಅನ್ನದಾತನಿಗೆ ಸವಾಲುಗಳು ಮುಗಿಯುವಂತೆ ಕಾಣುತ್ತಿಲ್ಲ. ಸದಾ ಒಂದಿಲ್ಲೊಂದು ಸಮಸ್ಯೆಯೊಂದಿಗೆ ಹೋರಾಡುತ್ತಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕಿದೆ. ಅಲ್ಲದೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನೋವಿಗೆ ಸ್ಪಂದಿಸಬೇಕಿದೆ.

ಇದನ್ನೂ ಓದಿ:

ಬಾಗಲಕೋಟೆ ರೈತರಲ್ಲಿ ಆತಂಕ; ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಟೊಮ್ಯಾಟೊ ಬೆಳೆಗಾರ

ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್​ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು