ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ- ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ -ಬೀದರ್​ ಅಂಗನವಾಡಿ ಕಾರ್ಯಕರ್ತೆಯರ ಅಳಲು

ದಶಕಗಳಿಂದ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರಕಾರಿ ಕಟ್ಟಡ ಲಭಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೌಕರರೂ ನೆಮ್ಮದಿಯಿಂದ ಕೆಲಸ ಮಾಡಬಹುದು. ಆದರೆ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಕೂಡಾ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ - ಬೀದರ್​ ಅಂಗನವಾಡಿ ಕಾರ್ಯಕರ್ತೆಯರ ಅಳಲು

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ- ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ -ಬೀದರ್​ ಅಂಗನವಾಡಿ ಕಾರ್ಯಕರ್ತೆಯರ ಅಳಲು
ಬೀದರ್​ ಅಂಗನವಾಡಿ ಕಾರ್ಯಕರ್ತೆಯರ ಅಳಲು
Follow us
| Updated By: ಸಾಧು ಶ್ರೀನಾಥ್​

Updated on: Dec 12, 2023 | 2:55 PM

ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಕ್ಷಣದ ಕಡೆಗೆ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಅಂಗನವಾಡಿಗಳು ಕೆಲಸ ಮಾಡುತ್ತವೆ. ಇದಕ್ಕಾಗಿ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡುತ್ತದೆ. ಆದರೆ ಪುಟ್ಟ ಮಕ್ಕಳು ತಗಡಿನ ಶೆಡ್ ನಂತಹ ಶಾಲೆಯಲ್ಲಿ (Anganwadi School) ಕಾಲ ಕಳೆಯಬೇಕಾಗಿದೆ. ಆಟ, ಊಟ, ಪಾಠ ಒಂದೇ ಕೋಣೆಯಲ್ಲಿ ನಡೆಯುತ್ತಿದ್ದು ಮಕ್ಕಳ ಹಕ್ಕಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಬೀದರ್ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ 387 ಅಂಗನವಾಡಿಗಳು ನಡೆಯುತ್ತಿವೆ . ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಬಾಡಿಗೆಗೆ ಹಣ ಭರಿಸಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಡಿಗೆ (Rent) ಹಣದಲ್ಲಿಯೇ ಪ್ರತಿ ವರ್ಷ ಮೂರು ಸುಸ್ಸಜಿತ ಅಂಗನವಾಡಿ ಕಟ್ಟಡಗಳನ್ನು ಕಟ್ಟಬಹುದು ಎಂಬುವುದನ್ನ ಇಲಾಖೆ ಲೆಕ್ಕ ಹಾಕಿಲ್ಲ (Anganwadi Workers).

ಇದೆಲ್ಲದರಿಂದಾಗಿ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ . ಹೌದು ಬೀದರ್ ಜಿಲ್ಲೆಯಲ್ಲಿ ಬರೋಬ್ಬರಿ 387 ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಲಭ್ಯಗಳಿಲ್ಲದೇ ಬಾಡಿಗೆ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರಗಳು ನಡೆಯುತ್ತಿದೆ. ಜಿಲ್ಲೆಯಾದ್ಯಂತ ಒಟ್ಟು 2051 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 1664 ಕಟ್ಟಡಗಳು ಸ್ವಂತ ಇದ್ದರೆ, 387 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ.

ಮೇಲಿನ ಅಂಕಿ- ಸಂಖ್ಯೆಗಳನ್ನು ಗಮನಿಸಿದರೆ ಸರಕಾರದ ಉದ್ದೇಶ ಜಿಲ್ಲೆಯಲ್ಲಿ ಈಡೇರದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನೂರಾರು ಅಂಗನವಾಡಿಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಸ್ವಂತ ಕಟ್ಟಡವಿದ್ದರೂ, ಹಲವಾರು ಕೇಂದ್ರಗಳಿಗೆ ಅಡುಗೆ ಮನೆ, ವಿದ್ಯುತ್‌ ಸಂಪರ್ಕ, ನೀರಿನ ವ್ಯವಸ್ಥೆ, ಗ್ಯಾಸ್‌ ಸಂಪರ್ಕ ಇಲ್ಲ. ಹೀಗಾಗಿ, ಅಂಗನವಾಡಿ ಸ್ಥಾಪನೆಯ ಮೂಲ ಉದ್ದೇಶವೇ ಇಲ್ಲಿ ಈಡೇರದಂತಾಗಿದೆ. ಈ ವಿಚಾರದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನ ಕೇಳಿದರೇ ಈ ಕುರಿತು ಮೇಲಾಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. ಎಲ್ಲಾ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ವತ ಕಟ್ಟಡ ನಿರ್ಮಿಸಲಾಗುವುದೆಂದು ಹೇಳುತ್ತಿರುವುದಾಗಿ ತಿಳಿಸಿದ್ದಾರಂತೆ

ಗ್ರಾಮೀಣ ಪ್ರದೇಶದ ಬಾಡಿಗೆ ಅಂಗನವಾಡಿ ಕಟ್ಟಡಕ್ಕೆ ಪ್ರತಿ ತಿಂಗಳು 2,000 ರೂಪಾಯಿ ಬಾಡಿಗೆ ನೀಡಿದರೆ, ನಗರ, ಪಟ್ಟಣ ಪ್ರದೇಶದಲ್ಲಿ ಪ್ರತಿ ತಿಂಗಳಿಗೆ ಒಂದು ಕಟ್ಟಡಕ್ಕೆ 4 ಸಾವಿರ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ. ಒಟ್ಟು ನಗರ ಪ್ರದೇಶದಲ್ಲಿ 228 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಒಟ್ಟು 159 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ತಿಂಗಳಿಗೆ ಸರಕಾರದಿಂದ ಹತ್ತು ಲಕ್ಷಕ್ಕೂ ಹೆಚ್ಚು ಬಾಡಿಗೆ ಹಣ ಕಟ್ಟುತ್ತಿದೆ. ತಿಂಗಳಿಗೆ ಸರಕಾರದ ಲಕ್ಷಾಂತರ ರೂಪಾಯಿ ಬಾಡಿಗೆಗೆ ವಿನಿಯೋಗವಾದರೂ, ಮಕ್ಕಳಿಗೆ ಸಿಗಬೇಕಿರುವ ಪೌಷ್ಟಿಕ ಆಹಾರ, ಆಟೋಟದ ಚಟುವಟಿಕೆ, ಆರೋಗ್ಯ ತಪಾಸಣೆ ಹೀಗೆ ಯಾವೊಂದು ಸೌಲಭ್ಯವೂ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ. ಒಂದರ್ಥದಲ್ಲಿ ಮಕ್ಕಳಿಗಾಗಿ ಸರಕಾರ ವರ ನೀಡಿದರೂ, ಸಂಬಂಧಿತರು ಅನುಷ್ಠಾನಗೊಳಿಸುವಲ್ಲಿ ವಿಫಲವಾದಂತಾಗಿದೆ ಜಿಲ್ಲೆಯ ಅಂಗನವಾಡಿಗಳ ಪರಿಸ್ಥಿತಿ.

ಇಲ್ಲಿನ ಅಂಗನವಾಡಿಯ ಸ್ಥಿತಿಯ ಬಗ್ಗೆ ಶಿಕ್ಷಕರನ್ನ ಕೇಳಿದರೆ ನಮಗೆ ಬಾಡಿಗೆ ಕಟ್ಟಡದಲ್ಲಿ ವಾಸ ಮಾಡಲು ಬಹಳಷ್ಟು ಸಮಸ್ಯೆಗಳಿವೆ. ಪದೇ ಪದೇ ಬಾಡಿಗೆ ಮನೆ ಕೊಟ್ಟವರು ಹಣ ಜಾಸ್ತಿ ಮಾಡಿ ಎಂದು ಕೇಳುತ್ತಾರೆ. ಇದರ ಜೊತೆಗೆ ನಮಗೆ ಯಾರು ಕೂಡಾ ಬಾಡಿಗೆ ಕೊಡಲು ಹೆದರುತ್ತಾರೆ. ನಮಗೆ ಮಕ್ಕಳಿಗೆ ಕುಳಿತುಕೊಳ್ಳಲು ಸಹಿತ ಸಾಕಷ್ಟೂ ಸಮಸ್ಯೆಯಾಗುತ್ತಿದೆ. ನಮಗೆ ಸ್ವಂತ ಕಟ್ಟಡ ಕಟ್ಟಿಸಿಕೊಟ್ಟರೆ ಉತ್ತಮ ಎಂದು ಅಂಗನವಾಡಿ ಟೀಚರ್ ಹೇಳುತ್ತಿದ್ದಾರೆ. ಇದರ ಜೊತೆಗೆ ಬಾಡಿಗೆ ಹಣವನ್ನ ಕೂಡಾ ಸರಕಾರ ಕಾಲಕಾಲಕ್ಕೆ ಕೊಡುತ್ತಿಲ್ಲ, ಇದರಿಂದಾಗಿ ನಾವೇ ಹಣ ಕಟ್ಟುವಂತಹ ಸ್ಥಿತಿ ಇಂದೆ ಎಂದು ಹೇಳುತ್ತಿದ್ದಾರೆ.

ದಶಕಗಳಿಂದ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರಕಾರ ಮನಸು ಮಾಡಿ ಸ್ವಂತ ಕಟ್ಟಡ ಲಭಿಸಿದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೌಕರರೂ ನೆಮ್ಮದಿಯಿಂದ ಕೆಲಸ ಮಾಡಬಹುದು. ಸರ್ಕಾರ ಹಾಗೂ ಇಲ್ಲಿಯ ಜನಪ್ರತಿನಿಧಿಗಳು ಕೂಡಾ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ