ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದರೆ ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಜನ; ಆರೋಗ್ಯ ಇಲಾಖೆಗೆ ಸವಾಲು

ಕೊರೊನಾ ಲಸಿಕೆ ಹಾಕಿಸಿಕೊಂಡರೆ ಸಾವು ಸಂಭವಿಸಬಹುದು ಎಂಬ ಅನುಮಾನ, ಭಯ ಬಹುತೇಕ ಜನರಲ್ಲಿದ್ದು, ಎಷ್ಟೇ ಅರ್ಥ ಮಾಡಿಸಲೆತ್ನಿಸದರೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೊನಾ ಲಸಿಕೆ ತೆಗೆದುಕೊಂಡವರನ್ನು ನೋಡಿ, ಅವರೊಂದಿಗೆ ಮಾತನಾಡಿ ಆಮೇಲೆ ತೆಗೆದುಕೊಳ್ಳಿ ಎಂದರೆ ನಾನು ಹಾಗೆಯೇ ಸತ್ತರೂ ಪರವಾಗಿಲ್ಲ, ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ವಾದ ಮಾಡುತ್ತಿದ್ದಾರೆ.

ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದರೆ ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಜನ; ಆರೋಗ್ಯ ಇಲಾಖೆಗೆ ಸವಾಲು
ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನ

ಬೀದರ್: ಕೊರೊನಾ ಎರಡನೇ ಅಲೆ ಗಂಭೀರವಾಗಿ ಕಾಡಿದ ನಂತರ ಕೊರೊನಾ ಲಸಿಕೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಸಂಭವನೀಯ ಮೂರನೇ ಅಲೆ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆಯನ್ನೂ ರವಾನಿಸಿರುವುದರಿಂದ ಲಸಿಕೆ ಪಡೆಯುವುದು ಸುರಕ್ಷತೆ ದೃಷ್ಟಿಯಿಂದ ಅಗತ್ಯವೂ, ಅನಿವಾರ್ಯವೂ ಆಗಿದೆ. ಜನವರಿ ತಿಂಗಳ ಮಧ್ಯಭಾಗದಿಂದ ಭಾರತದಲ್ಲಿ ಆರಂಭವಾಗಿರುವ ಕೊರೊನಾ ಲಸಿಕೆ ವಿತರಣಾ ಅಭಿಯಾನ ಹಂತಹಂತವಾಗಿ ಬೇರೆಬೇರೆ ವರ್ಗ, ವಯೋಮಾನದ ಜನರನ್ನು ತಲುಪುತ್ತಾ ಬಂದಿದೆ. ಸದ್ಯ 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆಯಲು ಅರ್ಹರಾಗಿದ್ದು, ಮಕ್ಕಳಿಗೆ ಲಸಿಕೆ ನೀಡಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನಗಳು ಚಾಲ್ತಿಯಲ್ಲಿವೆ. ಆದರೆ, ಇನ್ನೂ ಹಲವು ಜನರಲ್ಲಿ ಕೊರೊನಾ ಲಸಿಕೆ ಬಗ್ಗೆ ಭಯ, ಅನುಮಾನಗಳು ಉಳಿದಿರುವುದರಿಂದ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯುವುದಕ್ಕೆ ತೊಂದರೆಯಾಗುತ್ತಿದೆ.

ಬೀದರ್ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣ ಭಾಗದ ಜನರು ಹಿಂದೇಟು ಹಾಕುತ್ತಿದ್ದು, ಅವರ ಮನೆ ಬಾಗಿಲಿಗೇ ತೆರಳಿ ಅಧಿಕಾರಿಗಳು ಅರ್ಥ ಮಾಡಿಸುವ ಪ್ರಯತ್ನ ಮಾಡಿದರೂ ಮಾತು ಕೇಳುತ್ತಿಲ್ಲ. ಕೆಲವರಂತೂ ಲಸಿಕೆ ತೆಗೆದುಕೊಳ್ಳಲು ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನೇರವಾಗಿಯೇ ಬೆದರಿಕೆ ಒಡ್ಡುತ್ತಿದ್ದು ಅಂತಹ ವ್ಯಕ್ತಿಗಳ ಮನವೊಲಿಸುವುದು ಅಧಿಕಾರಿಗಳಿಗೆ ಬಹುದೊಡ್ಡ ಸವಾಲಾಗಿದೆ.

ಜಿಲ್ಲೆಯಾದ್ಯಂತ ಈವರೆಗೆ 3.94ಲಕ್ಷ ಮಂದಿ ಕೊರೊನಾ ಲಸಿಕೆ ಸ್ವೀಕರಿಸಿದ್ದು, ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ಈ ಪ್ರಮಾಣ ಅತ್ಯಂತ ಕಡಿಮೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಆದರೆ, ಲಸಿಕೆ ವಿತರಣೆಯನ್ನು ಚುರುಕುಗೊಳಿಸೋಣವೆಂದರೂ ಜನರೇ ಮುಂದೆ ಬಾರದ ಕಾರಣ ಆರೋಗ್ಯ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ವಿಶೇಷ ಚೇತನರಿಗೆ ಆರೋಗ್ಯದ ದೃಷ್ಟಿಯಿಂದ ತುರ್ತಾಗಿ ಲಸಿಕೆ ನೀಡಿದರೆ ಪ್ರತಿಕಾಯಗಳ ವೃದ್ಧಿಗೆ ಸಹಕಾರಿಯಾಗಿ ಮೂರನೇ ಅಲೆ ಬಂದರೂ ಅವರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಆರೋಗ್ಯ ಇಲಾಖೆ ಇದ್ದರೆ ಅಲ್ಲಿಯ ಜನರು ಮಾತ್ರ ಮಾತನ್ನು ಕೇಳಲು ಸಿದ್ಧರಿಲ್ಲದಂತೆ ವರ್ತಿಸುತ್ತಿದ್ದಾರೆ.

ಕೊರೊನಾ ಲಸಿಕೆ ಹಾಕಿಸಿಕೊಂಡರೆ ಸಾವು ಸಂಭವಿಸಬಹುದು ಎಂಬ ಅನುಮಾನ, ಭಯ ಬಹುತೇಕ ಜನರಲ್ಲಿದ್ದು, ಎಷ್ಟೇ ಅರ್ಥ ಮಾಡಿಸಲೆತ್ನಿಸದರೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೊನಾ ಲಸಿಕೆ ತೆಗೆದುಕೊಂಡವರನ್ನು ನೋಡಿ, ಅವರೊಂದಿಗೆ ಮಾತನಾಡಿ ಆಮೇಲೆ ತೆಗೆದುಕೊಳ್ಳಿ ಎಂದರೆ ನಾನು ಹಾಗೆಯೇ ಸತ್ತರೂ ಪರವಾಗಿಲ್ಲ, ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ವಾದ ಮಾಡುತ್ತಿದ್ದಾರೆ. ಏನು ಹೇಳಿದರೂ ತಿರುಗಿ ಮಾತನಾಡುತ್ತಿರುವ ಜನರನ್ನು ಬೆದರಿಸಲು ಕೊನೆಯ ಅಸ್ತ್ರವೆಂಬಂತೆ ಪಡಿತರ ರದ್ದಾಗುತ್ತದೆ ಲಸಿಕೆ ಪಡೆಯದಿದ್ದರೆ ಎಂದು ಹೇಳಿದರೆ ಜನರೂ ಅದಕ್ಕೂ ಜಗ್ಗದೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸವಾಲೊಡ್ಡಿದ್ದಾರೆ.

ಇದನ್ನೂ ಓದಿ:
ಕೊರೊನಾ ಲಸಿಕೆ ವಿತರಣೆಯಲ್ಲಿ ಮೈಸೂರು ಜಿಲ್ಲೆ ರಾಜ್ಯಕ್ಕೆ ನಂ.1; ಇದೀಗ ಬೀದಿಬದಿ ವ್ಯಾಪಾರಿಗಳು, ವಿಶೇಷ ಚೇತನರಿಗಾಗಿ ಲಸಿಕೆ ಅಭಿಯಾನ ಆರಂಭ 

ಕೊರೊನಾ ಲಸಿಕೆ ಎರಡನೇ ಡೋಸ್​ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ