ಬೀದರ್: ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಬೀದರ್ ಜಿಲ್ಲೆಯ ಅನ್ನದಾತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೋಡುವ ರೈತರ ಸಮಸ್ಯೆ ಜನಪ್ರತಿಧಿನಿಧಿಗಳಿಗೆ ಕೇಳಿಸುವುದೇ ಇಲ್ಲ ಎನ್ನುವಂತಾಗಿದೆ. ಆದರೆ ಇಲ್ಲೋಬ್ಬರು ರೈತ ಮಹಿಳೆ ಇಂಥಾ ಹತ್ತಾರು ಸಮಸ್ಯೆಗಳ ನಡುವೆಯೂ ಸಿರಿಧಾನ್ಯ ಬೇಳೆದು ಸೈ ಎನಿಸಿಕೊಂಡಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರ ಮೂಲಕ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಪ್ರತಿ ವರ್ಷ ಅತಿವೃಷ್ಟಿ- ಅನಾವೃಷ್ಟಿಯಿಂದಾಗಿ ರೈತರು ತೊಂದರೆ ಅನುಭವಿಸುವುದು ಮಾಮೂಲಿ. ಆದರೆ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಇಲ್ಲೊಬ್ಬರು ರೈತ ಮಹಿಳೆ ಮೀಶ್ರ ಬೇಸಾಯ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವುದರ ಮೂಲಕ ಅತಿವೃಷ್ಟಿ- ಅನಾವೃಷ್ಟಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಬೀದರ್ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಪ್ರಗತಿಪರ ರೈತ ಮಹಿಳೆ ಜೀಜಾಬಾಯಿ ಮಚಕುರೆ ಅವರು ತಮ್ಮ 7 ಎಕರೆ ಜಮೀನಿನಲ್ಲಿ ತೊಗರಿ ಬೆಳೆದಿದ್ದಾರೆ.
ಈ ತೊಗರಿಯ ನಡುವೆ ಸಿರಿಧಾನ್ಯಗಳನ್ನು ಹಾಗೂ ಇತರೆ ಬೆಳೆಗಳನ್ನು ಬೆಳೆಯುವ ಮೂಲಕ ಬೆಳೆ ವೈವಿಧ್ಯತೆಯನ್ನು ಕಾಪಾಡಿದ್ದಾರೆ. ಬೆಳೆ ವೈವಿಧ್ಯತೆಯನ್ನು ಕಾಪಾಡುವುದರೊಂದಿಗೆ, ಹಳೆಯ ಬೀಜಗಳನ್ನು ಸಂರಕ್ಷಣೆ ಮಾಡುವ ಸದುದ್ದೇಶದಿಂದ ಹಲವು ವರ್ಷಗಳಿಂದ ಇದೇ ರೀತಿಯ ಬೆಳೆಗಳನ್ನು ಮಳೆಯಾಶ್ರಿತದಲ್ಲಿ ಬೆಳೆಯುತ್ತಿದ್ದಾರೆ.
ಕೇವಲ 7 ಎಕರೆ ಜಮೀನಿನಲ್ಲಿ ಹತ್ತಾರು ಬೆಳೆಗಳನ್ನು ಬೆಳೆದು, ಇಡೀ ತಮ್ಮ ಜಮೀನನ್ನೇ ಪ್ರಯೋಗ ಶಾಲೆಯಂತಾಗಿಸಿದ್ದಾರೆ. ಅಂತರ ಬೆಳೆಯಾಗಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಬೆಳೆಗಳಿಗೆ ಹುಳು, ರೋಗ ಬಾಧೆ ಇರುವುದಿಲ್ಲ. ರಾಸಾಯನಿಕ ಬಳಕೆಯನ್ನೂ ಮಾಡಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಡಿಮೆ ಖರ್ಚಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದಾದ್ದರಿಂದ ಮತ್ತು ಎಲ್ಲ ತರಹದ ಪೋಷಕಾಂಶಗಳು ಈ ಸಿರಿಧಾನ್ಯಗಳಿಂದ ಲಭಿಸುವುದರಿಂದ ಈ ರೀತಿಯಾಗಿ ಬೆಳೆಯುತ್ತೇವೆ ಎಂದು ಜೀಜಾಬಾಯಿ ಮಚಕೂರಿ ಹೇಳಿದ್ದಾರೆ.
ತೊಗರಿಯು ದೀರ್ಘಾವಧಿ ಬೆಳೆಯಾಗಿದೆ. ಹೀಗಾಗಿ, ಈ ಬೆಳೆಯ ನಡುವೆ ಅಂತರ್ ಬೆಳೆಯಾಗಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎನ್ನುತ್ತಾರೆ ಜೀಜಾಬಾಯಿ. ಈ ಮೂಲಕ ಸಂಪೂರ್ಣ ಜಮೀನು ಬಳಕೆ ಮಾಡಲಾಗುತ್ತಿದೆ. ಈ ರೀತಿಯಾಗಿ ಅಂತರ್ ಬೆಳೆಗಳನ್ನು ಬೆಳೆಯುವುದರಿಂದ ಹುಲ್ಲು ಸಹ ಬೆಳೆಯುವುದಿಲ್ಲ. ಮಣ್ಣಿನ ಫಲವತ್ತತೆಯನ್ನೂ ಕಾಪಾಡಿದಂತಾಗುತ್ತದೆಂಬುವುದು ರೈತ ಮಹಿಳೆಯ ಅನುಭವದ ಮಾತು. ಇನ್ನೂ ಇವರು ಬೆಳೇಯುವ ಸಿರಿಧಾನ್ಯಗಳನ್ನು ಯಾವುದೇ ರಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಬೆಳೆಸುವುದರಿಂದ ಸಾವಯವ ಕೃಷಿಗೆ ಒತ್ತು ನೀಡಿ, ಕಡಿಮೆ ಖರ್ಚಿನಲ್ಲಿ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಗ್ರಾಮದ ಇತರೆ ರೈತರಿಗೆ ಇವರು ಮಾದರಿಯಾಗಿ ಹೊರ ಹೊಮ್ಮಿದ್ದಾರೆ. ಜೀಜಾಬಾಯಿ ಅವರು ತಮ್ಮ 63ನೇ ಇಳಿ ವಯಸ್ಸಿನಲ್ಲೂ ನಿತ್ಯವೂ ಖುದ್ದು ತಮ್ಮ ಜಮೀನಿಗೆ ಭೇಟಿ ನೀಡಿ ಕೆಲಸ ಮಾಡುವುದು ಯುವಕರನ್ನೂ ನಾಚಿಸುವಂತಿದೆ.
ತೊಗರಿ ಬೆಳೆಯಲ್ಲಿ ಅಂತರ್ ಬೆಳೆಯಾಗಿ ರಾಗಿ, ನವಣೆ, ಕೆಂಪು, ಕಪ್ಪು ಭತ್ತ, ಸೋಯಾಬಿನ್, ಎಳ್ಳು ಸೇರಿದಂತೆ ಸಿರಿಧಾನ್ಯಗಳನ್ನು ಬೆಳೆದಿದ್ದೇನೆ. ಬೆಳೆ ವೈವಿಧ್ಯತೆಯನ್ನು ಕಾಪಾಡಿಕೊಂಡು, ಹಳೆಯ ಬೀಜಗಳನ್ನು ಸಂರಕ್ಷಿಸುವ ಸಲುವಾಗಿ ಈ ರೀತಿಯ ಅಂತರ್ ಬೆಳೆಗಳನ್ನು ಸುಮಾರು ವರ್ಷಗಳಿಂದ ಬೆಳೆಯುತ್ತಿದ್ದೇನೆ. ಪ್ರತಿ ವರ್ಷ ಮುಂಗಾರು ಬಿತ್ತನೆಗೆ ಗ್ರಾಮದ ಅನೇಕರಿಗೆ ಬೀಜಗಳನ್ನು ಸಂರಕ್ಷಿಸಿ ನೀಡುವೆ. ರಾಗಿ, ನವಣಿ, ಭತ್ತದ ಬೆಳೆಗಳು ಮಳೆಯಾಶ್ರಿತದಲ್ಲೂ ಚೆನ್ನಾಗಿ ಬೆಳೆದಿದ್ದು, ನಮಗೆ ಸಂತಸ ತಂದಿದೆ ಎಂದು ಪ್ರಗತಿಪರ ರೈತ ಮಹಿಳೆ ಜೀಜಾಬಾಯಿ ತಿಳಿಸಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ: ಹೊಲಕ್ಕೆ ಹೋಗಲು ಹೆಲಿಕಾಪ್ಟರ್ ಬೇಕು, ಸಾಲ ಕೊಡಿ: ರಾಷ್ಟ್ರಪತಿಗೆ ಪತ್ರಬರೆದ ರೈತ ಮಹಿಳೆ
ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಸಾಹಸಿ ರೈತ; ಮಳೆ ನೀರನ್ನೇ ಆಧಾರವಾಗಿಸಿ ವರ್ಷಕ್ಕೆ 10 ಲಕ್ಷ ರೂ. ಆದಾಯ