ಬೀದರ್​ಗೂ ಬಂತು ಕಡಕ್​ನಾಥ್ ಕೋಳಿಗಳು; ಲಾಭ ಗಳಿಸುವ ಕನಸಿನಲ್ಲಿ ಉತ್ಸಾಹಿ ಯುವಕ

ಎರಡು ಕೆಜಿ ತೂಗುವ ಒಂದು ಕಡಕ್​ನಾಥ್ ಕೊಳಿ ಮಾರುಕಟ್ಟೆಯಲ್ಲಿ ₹ 1500ರವರೆಗೆ ಮಾರಾಟವಾಗುತ್ತದೆ. ಇದರ ಮೊಟ್ಟೆಗೂ ಉತ್ತಮ ಬೆಲೆಯಿದೆ. ಹೀಗಾಗಿ ಕಡಕ್​ನಾಥ್ ಕೊಳಿ ಸಾಕಾಣಿಕೆಯಿಂದ ನಷ್ಟವಿಲ್ಲ ಎನ್ನುವುದು ಈ ಯುವಕನ ನಂಬಿಕೆ.

  • TV9 Web Team
  • Published On - 6:20 AM, 20 Jan 2021
ಬೀದರ್​ಗೂ ಬಂತು ಕಡಕ್​ನಾಥ್ ಕೋಳಿಗಳು; ಲಾಭ ಗಳಿಸುವ ಕನಸಿನಲ್ಲಿ ಉತ್ಸಾಹಿ ಯುವಕ
ಬೀದರ್​ನಲ್ಲಿ ಕಡಕ್​ನಾಥ್ ಕೋಳಿ ಸಾಕಿರುವ ಕಮಲಾಕರ್ ತಡಕಲ್

ಬೀದರ್: ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ ಕೆಲವು ಬುಡಕಟ್ಟು ಪ್ರದೇಶದ ಆದಿವಾಸಿ ಜನಾಂಗದವರು ಮಾತ್ರ ಸಾಕುತ್ತಿದ್ದ ಕಡನ್​ನಾಥ್ (ಕಾಳಿಮಸಿ) ಕೋಳಿಗಳು ಈಗ ದೇಶವ್ಯಾಪಿ ಹೆಸರುವಾಸಿ. ಗಡಿ ಜಿಲ್ಲೆ ಬೀದರ್​ಗೂ ಕಡಕ್​ನಾಥ್ ಕೋಳಿಗಳು ಬಂದಿವೆ. ಇಲ್ಲಿನ ಕೆಲವು ಯುವಕರು ತಮ್ಮ ಮನೆಯಂಗಳದ ಚಿಕ್ಕಚಿಕ್ಕ ಜಾಗದಲ್ಲಿಯೇ ಕಡಕ್‌ನಾಥ್ ಕೋಳಿಗಳನ್ನು ಸಾಕುತ್ತಿದ್ದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಬಹಳ ಅಪರೂಪದ ಹಾಗೂ ಹಲವು ಆರೋಗ್ಯಕರ ಗುಣಗಳುಳ್ಳ ಈ ಕೋಳಿಗಳನ್ನ ಬೀದರ್​ನ ಪ್ರತಾಪ್ ನಗರದ ಕಮಲಾಕರ್ ತಡಕಲ್ ಎಂಬ ಯುವಕ ಸಾಕುತ್ತಿದ್ದಾರೆ. ಮಧ್ಯಪ್ರದೇಶದ ಜಾಗ್ವಾರ್ ಜಿಲ್ಲೆಯಿಂದ ಒಂದು ಮರಿಗೆ ₹ 200 ಕೊಟ್ಟು ಒಟ್ಟು 500 ಕಡಕ್​ನಾಥ್ ಕೋಳಿಮರಿಗಳನ್ನ ತಂದಿದ್ದಾರೆ. ತಮ್ಮ ಮನೆಯ ಅಂಗಳದ 20X60 ಅಡಿಯ ಜಾಗದಲ್ಲಿ ಕೋಳಿ ಮರಿಗಳನ್ನು ಸಾಕುತ್ತಿದ್ದಾರೆ. ಈಗ ಕೋಳಿಮರಿಗಳು ತಂದು ಮೂರು ತಿಂಗಳಾಗಿದೆ.

ಪ್ರತಿ ಕೋಳಿಯೂ ಈಗ ಸುಮಾರು ಒಂದು ಕೆಜಿಯಷ್ಟು ತೂಗುತ್ತಿದೆ. ಆರು ತಿಂಗಳು ಸಾಕಿದರೆ ಒಂದು ಕೋಳಿ ಕನಿಷ್ಠ ಎರಡು ಕೆಜಿಯಷ್ಟು ತೂಗುತ್ತದೆ. ಎರಡು ಕೆಜಿ ತೂಗುವ ಒಂದು ಕಡಕ್​ನಾಥ್ ಕೊಳಿ ಮಾರುಕಟ್ಟೆಯಲ್ಲಿ ₹ 1500ರವರೆಗೆ ಮಾರಾಟವಾಗುತ್ತದೆ. ಇದರ ಮೊಟ್ಟೆಗೂ ಉತ್ತಮ ಬೆಲೆಯಿದೆ. ಹೀಗಾಗಿ ಕಡಕ್​ನಾಥ್ ಕೊಳಿ ಸಾಕಾಣಿಕೆಯಿಂದ ನಷ್ಟವಿಲ್ಲ ಎನ್ನುವುದು ಈ ಯುವಕನ ನಂಬಿಕೆ.

ಕಡಕ್​ನಾಥ್ ಕೋಳಿಗಳು

ಈವರೆಗೆ 75 ಕೋಳಿಮರಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಕಡಕ್‌ನಾಥ್ ಕೋಳಿಗಳನ್ನು ಸಾಕುವುದಕ್ಕೂ ಮುನ್ನ ಈ ಯುವಕ ಅವುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. ಇಂಟರ್​ನೆಟ್ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಕಡಕ್​ನಾಥ್ ಕೋಳಿ ಸಾಕಾಣಿಕೆ ಕ್ರಮ, ಅವುಗಳ ಆಹಾರದ ಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಈಗ ಕೋಳಿ ಸಾಕಾಣಿಕೆ ಆಂಭಿಸಿದ್ದಾರೆ. ಇದರಲ್ಲಿ ಯಶಸ್ವಿಯಾದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಆಸೆ ಇರಿಸಿಕೊಂಡಿದ್ದಾರೆ.

ರುಚಿಕರ ಮಾಂಸಕ್ಕೆ ಹೆಸರುವಾಸಿ
ಫಾರ್ಮ್ ಕೋಳಿಗಳಿಗೆ ಹೋಲಿಸಿದರೆ ಕಡಕ್​ನಾಥ್ ಕೋಳಿಗಳ ಮಾಂಸ ಅತ್ಯಂತ ರುಚಿಕರ ಎನ್ನುತ್ತಾರೆ ಕಮಲಾಕರ್ ತಡಕಲ್. ಪ್ರತಿ ಕೋಳಿಯಿಂದ ಸುಮಾರು 2 ಕೆಜಿಯಷ್ಟು ಮಾಂಸ ಸಿಗುತ್ತದೆ. ಮಾತ್ರವಲ್ಲದೇ ಇವುಗಳ ಮಾಂಸ ಕೊಬ್ಬಿನಂಶದಿಂದ ಮುಕ್ತವಾಗಿದೆ. ಅತ್ಯಧಿಕ ರೋಗ ನಿರೋಧಕ ಶಕ್ತಿ ಹೊಂದಿದೆ. ಇವುಗಳನ್ನು ಔಷಧ ತಯಾರಿಕೆಗೂ ಬಳಸುತ್ತಾರೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು, ನರ ದೌರ್ಬಲ್ಯಕ್ಕೆ, ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ಹೀಗೇ ನಾನಾ ರೋಗದಿಂದ ಬಳಳುತ್ತಿರುವರು ಈ ಕೊಳಿಯ ಮಾಂಸವನ್ನು ಸೇವಿಸಿದರೆ ರೋಗ ಗುಣವಾಗುತ್ತದೆಂದು ಹೇಳಲಾಗುತ್ತಿದೆ.

ಕೋಳಿಗಳಿಗೆ ಮೇವು ಹಾಕುತ್ತಿರುವ ಕಮಲಾಕರ್ ತಡಕಲ್

ತರಕಾರಿ, ಟೊಮೆಟೊ ಅಂದರೆ ಇಷ್ಟ
ಈ ಕೋಳಿಗಳನ್ನ ನಾಟಿ ಕೋಳಿಗಳ ರೀತಿಯಲ್ಲಿಯೇ ಸಾಕಬೇಕು. ಸ್ಥಳೀಯ ನಾಟಿ ಕೋಳಿಗಳನ್ನು ಬಾಧಿಸುವ ಹಲವು ಕಾಯಿಲೆಗಳು ಈ ಕೋಳಿಗಳಿಗೆ ಬರುವುದಿಲ್ಲ. ಈ ಕೋಳಿಗಳನ್ನು ಸಾಕೋದು ಕಷ್ಟವೇನಲ್ಲ. ಆರಂಭದಲ್ಲಿ ಎಳೆಯ ಮರಿಗಳಿಗೆ ಕೆಲ ಕಂಪನಿಗಳು ತಯ್ಯಾರಿಸಿರುವ ಸಿದ್ಧ ಆಹಾರವನ್ನ ನೀಡಲಾಗುತ್ತದೆ.

ಹಸಿ ತರಕಾರಿ, ಟೊಮೆಟೊ, ಮೊಳಕೆಯೊಡೆದ ಗೋವಿನಜೋಳ, ಗೋಧಿ, ರಾಗಿ, ಜೋಳ ಇತ್ಯಾದಿಗಳನ್ನು ಬೆರೆಸಿ ಮಾಡಿ ಸಂಜೆ ಹೊತ್ತು ಮಾತ್ರ ಕೊಡುತ್ತಾರೆ. ಉಳಿದಂತೆ ಇವು ಹೊಲದಲ್ಲಿ ಸಾಮಾನ್ಯ ಕೋಳಿಗಳಂತೆ ಅಡ್ಡಾಗಿ ಮಣ್ಣು ಕೆದಕಿ ಹುಳ ಹುಪ್ಪಟೆ ತಿನ್ನುತ್ತವೆ. ರೋಗ ನಿರೋಧಕ ಶಕ್ತಿ ಇರುವ ಕಾರಣ ರೋಗ ಇರಲ್ಲ. ಇದರ ದೇಹ ಹಾಗೂ ಮಾಂಸ ಕಪ್ಪಗಿದೆ ಅಂತಾ ನಮ್ಮ ಜನ ಕೋಳಿ ತಿನ್ನಲು ಸ್ವಲ್ಪ ಹಿಂಜರಿಯುತ್ತಾರೆ. ಇದು ಮೊಟ್ಟೆ ಇಡುತ್ತೆ, ಮರಿ ಮಾಡಲ್ಲ.

ಕಮಲಾಕರ್ ತಡಕಲ್ ಸಂಪರ್ಕ ಸಂಖ್ಯೆ: 88617 95149

ಕೋಳಿಗಳಿಗೆ ನೀಡಲು ಸಿದ್ಧವಾಗಿರುವ ಮೊಳಕೆ ಬಂದ ಗೋವಿನಜೋಳ

ಬರದ ನಾಡಲ್ಲಿ ಶ್ರೀಗಂಧ ಬೆಳೆದ ಸಾಹಸಿ, ಮಿಶ್ರ ಪದ್ಧತಿ ಬೇಸಾಯದಿಂದ ಸುಧಾರಿಸಿತು ರೈತನ ಆದಾಯ