ಬೀದರ್ ಜಿಲ್ಲೆಗೂ ಕಾಲಿಟ್ಟ ಮಲೆನಾಡ ಗೋಡಂಬಿ; ಉತ್ತಮ ಆದಾಯದ ನಿರೀಕ್ಷೆಯಲ್ಲಿರುವ ಗೋಡಂಬಿ ಬೆಳೆದ ರೈತರು
ಸರ್ಕಾರದ ಯಾವುದೇ ಪ್ರೋತ್ಸಾಹ ಧನ, ಪಡೆಯದೇ ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನ ಸುತ್ತಲೂ ಪ್ರಾಯೋಗಿಕವಾಗಿ ಜಿಲ್ಲೆಯ ನೂರಾರು ರೈತರು ಗೋಡಂಬಿ ಗಿಡ ನೆಟ್ಟು ಈಗ ಕೈತುಂಬ ಹಣ ಪಡೆಯುತ್ತಿದ್ದಾರೆ.

ಬೀದರ್: ಕೇವಲ ಮಲೆನಾಡಿಗಷ್ಟೇ ಸೀಮಿತವಾಗಿದ್ದ ಗೋಡಂಬಿ ಬೆಳೆ ಈಗ ಬಿಸಿಲ ನಗರಿ, ಗಡಿ ಜಿಲ್ಲೆ ಬೀದರ್ಗೂ ಕಾಲಿಟ್ಟಿದೆ. ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯ ಜನರಿಗೆ ಗೋಡಂಬಿ ಬೆಳೆ ಕೈಹಿಡಿದಿದೆ. ಬಡವರ ಬೆಳೆ, ಶ್ರೀಮಂತರ ಆಹಾರ ಎಂದೇ ಕರೆಯಿಸಿಕೊಳ್ಳುವ ಗೋಡಂಬಿ ಬೆಳೆದ ರೈತರ ಮೊಗದಲ್ಲಿ ಸದ್ಯ ಮಂದಹಾಸ ಮೂಡಿದೆ.
ಬಯಲು ಸೀಮೆಯ ಬರಡು ಭೂಮಿಯಲ್ಲಿ ಗೋಡಂಬಿಯನ್ನು ಬೆಳೆಯುವುದರ ಮೂಲಕ ಬೀದರ್ ಜಿಲ್ಲೆಯ ರೈತರು ಸೈ ಎಣಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರಿಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಗೇರು ಗಿಡ ನೆಟ್ಟ ರೈತರು ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಕೇವಲ ಮಲೆನಾಡಿಗಷ್ಟೇ ಸೀಮತವಾಗಿದ್ದ ಗೋಡಂಬಿ ಬೆಳೆ ಬೀದರ್ ಜಿಲ್ಲೆಗೂ ಕಾಲಿಟ್ಟು ರೈತರ ಪಾಲಿಗೆ ಹಣ ನೀಡುವ ಯಂತ್ರವಾಗಿ ಪರಿಣಮಿಸಿದೆ.
ಬೀದರ್ ಜಿಲ್ಲೆಯ ಹವಾಮಾನಕ್ಕೆ ಗೇರು ಗಿಡಗಳನ್ನ ನೆಟ್ಟರೆ ಉತ್ತಮ ಇಳುವರಿಯನ್ನು ಕೊಡುತ್ತದೆ ಎಂದು ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದರು. ಅದರಂತೆ ಶೂನ್ಯ ಬಂಡವಾಳದೊಂದಿಗೆ ಬೆಳೆದ ಗೋಡಂಬಿ ಬೆಳೆಯಿಂದ ರೈತರು ಸಾಂಪ್ರದಾಯಿಕ ಬೆಳೆಗಳಷ್ಟೇ ಆದಾಯ ಪಡೆಯುತ್ತಿದ್ದಾರೆ. ಜವಗು ಮಿಶ್ರಿತ ಕೆಂಪು ಭೂ ಪ್ರದೇಶವನ್ನು ಹೊಂದಿರುವ ಬೀದರ್ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಗೋಡಂಬಿ ಮರಗಳು ನಿರೀಕ್ಷೆಗೂ ಮಿರಿ ಆದಾಯವನ್ನು ನೀಡುತ್ತಿವೆ.
ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಜಮೀನಿನ ಬದುವಿನಲ್ಲಿ ಹಾಕಲಾದ ಗೋಡಂಬಿ ಬೀಜಗಳು, ನೈಸರ್ಗೀಕ ಕೃಷಿ ಪದ್ಧತಿಯಿಂದಾಗಿ ಹುಲುಸಾಗಿ ಬೆಳೆದು ಇದೀಗ ಲಕ್ಷ ಲಕ್ಷ ರೂಪಾಯಿ ಆದಾಯ ಬರುವಂತಾಗಿದೆ ಎಂದು ಗೋಡಂಬಿ ಬೆಳೆದ ರೈತ ಶರಣಪ್ಪ ಹೇಳಿದ್ದಾರೆ.

ಗೋಡಂಬಿ ಹಣ್ಣು
ಇಷ್ಟೊಂದು ವೈಶಿಷ್ಟ್ಯಪೂರ್ಣ ಗೋಡಂಬಿಯನ್ನು ಉತ್ತಮ ರೀತಿಯಲ್ಲಿ ಬೆಳೆದ ರೈತರು ಇತರ ತೋಟಗಾರಿಕೆ ಬೆಳೆಗಾರರಿಗೆ ಮಾದರಿಯಾಗಿ ನಿಂತಿದ್ದಾರೆ. ಸರ್ಕಾರದ ಯಾವುದೇ ಪ್ರೋತ್ಸಾಹಧನ ಪಡೆಯದೇ ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನ ಸುತ್ತಲೂ ಪ್ರಾಯೋಗಿಕವಾಗಿ ಜಿಲ್ಲೆಯ ನೂರಾರು ರೈತರು ಗೋಡಂಬಿ ಗಿಡ ನೆಟ್ಟು ಈಗ ಕೈತುಂಬ ಹಣ ಪಡೆಯುತ್ತಿದ್ದಾರೆ.

ಗೋಡಂಬಿ ಹೂವು ಮರದ ತುಂಬಾ ಬಿಟ್ಟಿರುವ ದೃಶ್ಯ
ಬೀದರ್ ಜಿಲ್ಲೆಯಲ್ಲಿ ಗೋಡಂಬಿ ಬೆಳೆ ಬೆಳೆಯಲು ಸೂಕ್ತವಾದ ವಾತಾವರಣ ಮತ್ತು ಅದಕ್ಕೆ ಬೇಕಾದ ಕೆಂಪು ಮಿಶ್ರಿತ ಮಣ್ಣು ಇಲ್ಲಿ ಇರುವುದರಿಂದ ರೈತರು ಗೋಡಂಬಿ ಬೆಳೆಯಲು ಅನುಕೂಲವಾಗಿದ್ದು, ನಾವು ನಮ್ಮ ಹೊಲದಲ್ಲಿ ಗೋಡಂಬಿ ನಾಟಿ ಮಾಡಿದ್ದೇವೆ ಎಂದು ಚಿಟ್ಟಾ ಗ್ರಾಮದ ರೈತರಾದ ಗುಂಡಪ್ಪ ಹೇಳಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಪ್ರಸಕ್ತ ವರ್ಷ ಮರಗಳು ಮೈತುಂಬ ಹೂಗಳನ್ನು ಸುರಿದುಕೊಂಡು ಕಂಗೊಳಿಸುತ್ತಿದೆ. ಹೀಗಾಗಿ ಈ ವರ್ಷವೂ ಗೋಡಂಬಿ ಇಳುವರಿ ಎಕರೆಗೆ ಹತ್ತರಿಂದ ಹನ್ನೆರಡು ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಸದ್ಯ ಭರಪೂರ ಲಾಭ ತಂದುಕೊಡುವ ಇಳುವರಿ ಬಂದರೂ ಸೂಕ್ತ ಮಾರುಕಟ್ಟೆ ದೊರೆಯದ ಹಿನ್ನೆಲೆಲೆಯಲ್ಲಿ ಮಾರಾಟ ಮಾಡಲು ದೂರದ ಕಾರವಾರ, ಶಿರಸಿ, ಹಳಿಯಾಳದ ಮಾರುಕಟ್ಟೆಗೆ ತಗೆದುಕೊಂಡು ಹೋಗುವ ಅನಿವಾರ್ಯತೆ ರೈತರಿಗಿದೆ.

ಗೋಡಂಬಿ ಬೀಜಗಳನ್ನು ರಾಶಿ ಹಾಕಿರುವ ದೃಶ್ಯ
ಸ್ಥಳೀಯ ಮಾರುಕಟ್ಟೆಗಳಲ್ಲಿ ಗೋಡಂಬಿ ಮಾರಾಟ ವ್ಯವಸ್ಥೆ ಇಲ್ಲದೆ ಇರುವುದರಿಂದಾಗಿ ದುಬಾರಿ ಸಾಗಣಿಕೆ ವೆಚ್ಚ ಭರಿಸಬೇಕಾಗಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ತಮ್ಮ ಬೆಳೆಯ ಕುರಿತಾಗಿ ಮಾಹಿತಿಗಾಗಿ ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಪ್ರತಿವರ್ಷ ತೋಟಗಾರಿಕೆ ಬೆಳೆಗಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ ಸ್ವಯಂ ಪ್ರೇರಣೆಯಿಂದ ಬರಡು ನೆಲದಲ್ಲಿಯೂ ಬಂಪರ್ ಬೆಳೆ ಬೆಳೆಯುತ್ತಿರುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಕೋರಿಕೆಯಾಗಿದೆ.
( ಸುರೇಶ್ ನಾಯಕ್- 9980914145)
ಇದನ್ನೂ ಓದಿ: ಬಿಹಾರ್, ಜಾರ್ಖಂಡ್ ಆರೋಗ್ಯ ಕ್ಷೇತ್ರದ ಸುಧಾರಣೆಗೆ ₹ 1 ಕೋಟಿ ದೇಣಿಗೆ ನೀಡಿದ ಅನಿವಾಸಿ ಭಾರತೀಯರು
(Cashew crop gives good income to farmers in Bidar)