Bamboo Rice: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 60 ವರ್ಷಕ್ಕೊಮ್ಮೆ ಸಿಗುವ ಬಿದಿರಿನ ಅಕ್ಕಿ; ಬುಡಕಟ್ಟು ಜನರಿಗೆ ಹೆಚ್ಚಿದ ಆದಾಯ

ಬುಡಕಟ್ಟು ಜನರೇ ಸ್ಥಾಪನೆ ಮಾಡಿರುವ ಲ್ಯಾಂಪ್ ಸೊಸೈಟಿ ಮೂಲಕ ಬಿದಿರು ಭತ್ತ ಮಾರಾಟ ಮಾಡಿದರೆ, ಕೆಲವು ಮಧ್ಯವರ್ತಿಗಳು ಕೂಡ ಖರೀದಿ ಮಾಡುತ್ತಾರೆ. ದೂರದ ಕಾಡಿನಿಂದ‌ ಸಂಗ್ರಹಿಸುವ ಬಿದಿರು ಭತ್ತವನ್ನು ಗೂಡ್ಸ್ ಆಟೋ ಮೂಲಕ ತುಂಬಿ ಕೊಂಡು ಬಂದು ಸ್ವಚ್ಛ ಗೊಳಿಸಲಾಗುತ್ತದೆ.

Bamboo Rice: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 60 ವರ್ಷಕ್ಕೊಮ್ಮೆ ಸಿಗುವ ಬಿದಿರಿನ ಅಕ್ಕಿ; ಬುಡಕಟ್ಟು ಜನರಿಗೆ ಹೆಚ್ಚಿದ ಆದಾಯ
ಬಿದಿರು ಭತ್ತ ತೆಗೆಯುತ್ತಿರುವ ದೃಶ್ಯ

ಚಾಮರಾಜನಗರ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ (ಬಿಆರ್​ಟಿ) ಈಗ ಒಣಗಿ ನಿಂತಿದೆ. ಬಿಆರ್​ಟಿ ಮಾತ್ರ ಅಲ್ಲದೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲೂ ಕಿರುಬಿದಿರು ಮತ್ತು ಹೆಬ್ಬಿದಿರು ಸಂಪೂರ್ಣವಾಗಿ ಒಣಗಿ ನಿಂತಿದೆ. ಬಿದಿರು ಹೂವು ಬಿಟ್ಟಿರುವುದು ಆರಂಭದಲ್ಲಿ ಅರಣ್ಯ ಇಲಾಖೆಗೆ ಆತಂಕ ತಂದೊಡ್ಡಿತ್ತು. ಆದರೆ ಬಿದಿರು ಹೂ ಬಿಟ್ಟು ಅಕ್ಕಿಯಾಗಿರುವುದು ಬುಡಕಟ್ಟು ಜನರಿಗೆ ಅನ್ನ ನೀಡುತ್ತಿದೆ. ಅದರಲ್ಲೂ ಕೊರೊನಾದ ಸಂಕಷ್ಟದಲ್ಲಿ ಬಿದಿರಕ್ಕಿ ಸಿಗುತ್ತಿರುವುದು ಸೋಲಿಗರಿಗೆ‌ ತುತ್ತು ಅನ್ನಕ್ಕೆ ದಾರಿಯಾಗಿದೆ. ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ಯಿಯ ಸಾವಿರಾರು ಮಂದಿ ಸೋಲಿಗರಿಗೆ ಇದು ಉದ್ಯೋಗ ನೀಡಿದ್ದು, ಬುಡಕಟ್ಟು ಜನರು ತಂಡ ತಂಡವಾಗಿ ಕಾಡಿಗೆ ಹೋಗಿ ಬಿದಿರಕ್ಕಿ ಸಂಗ್ರಹ ಮಾಡುತ್ತಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಬೆಸೆಯುವ, ಅಪರೂಪದ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ಒಳಗೊಂಡ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ದೇಶದಲ್ಲಿಯೇ ಅತೀ ಉದ್ದದ ಎಲಿಫೆಂಟ್ ಕಾರಿಡಾರ್ ಹೊಂದಿದೆ. ಈ ಬೆಟ್ಟದ ಸಾಲುಗಳಲ್ಲಿ ಆನೆಗೆ ಪ್ರಿಯವಾದ ಬಿದಿರು ಹೇರಳವಾಗಿಯೇ ಇದೆ. ಆದರೆ ಅದೇ ಬಿದಿರು ಹೂವು ಬಿಟ್ಟಿದ್ದು, ಬಿದಿರಿನ ಭತ್ತ ಈಗ ಅರಣ್ಯದಲ್ಲಿ ಸಿಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಸಿಗುವ ಈ ಅಕ್ಕಿಗೆ ಪ್ರಯಾಣಿಕರಿಂದ ಕೂಡ ಉತ್ತಮ ಬೇಡಿಕೆ ಇದೆ.

ಕೊರೊನಾ ಸಂಕಷ್ಟದ ವೇಳೆ ಸರಿಯಾಗಿ ಕೂಲಿ ಕೆಲಸ ಇಲ್ಲದ ಬುಡಕಟ್ಟು ಜನರು ಬಿದಿರು ಹೂವು ಬಿಟ್ಟಿರುವ ಪ್ರದೇಶಗಳಿಗೆ ಚೀಲ, ಪೊರಕೆ, ಮೊರ ತೆಗೆದು ಕೊಂಡು ಹೋಗಿ ಬಿದಿರು ಭತ್ತವನ್ನು ಗುಡಿಸಿ ಸಂಗ್ರಹಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗ್ಗೆ ಕಾಡು ಪ್ರವೇಶ ಮಾಡುವ ಬುಡಕಟ್ಟು ಜನರು ಮಧ್ಯಾಹ್ನದ ವರೆಗೆ ಒಂದು ಗೋಣಿ ಚೀಲ ಬಿದಿರು‌ ಭತ್ತ ಸಂಗ್ರಹಿಸುತ್ತಾರೆ. ಪ್ರತಿ ಕೆಜಿ ಬಿದಿರಿನ ಭತ್ತ ನೂರು ರೂಪಾಯಿ‌ಗೆ ಮಾರಾಟ ಮಾಡಿ, ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ. ಒಂದು ವೇಳೆ ಬಿದಿರು ಭತ್ತವನ್ನು ಕುಟ್ಟಿ ಅಕ್ಕಿ ಮಾಡಿದರೆ ಪ್ರತಿ ಕೆಜಿಗೆ ಇನ್ನೂರಕ್ಕೂ ಹೆಚ್ಚು ಹಣ ಸಿಗುತ್ತದೆ.

ಬುಡಕಟ್ಟು ಜನರೇ ಸ್ಥಾಪನೆ ಮಾಡಿರುವ ಲ್ಯಾಂಪ್ ಸೊಸೈಟಿ ಮೂಲಕ ಬಿದಿರು ಭತ್ತ ಮಾರಾಟ ಮಾಡಿದರೆ, ಕೆಲವು ಮಧ್ಯವರ್ತಿಗಳು ಕೂಡ ಖರೀದಿ ಮಾಡುತ್ತಾರೆ. ದೂರದ ಕಾಡಿನಿಂದ‌ ಸಂಗ್ರಹಿಸುವ ಬಿದಿರು ಭತ್ತವನ್ನು ಗೂಡ್ಸ್ ಆಟೋ ಮೂಲಕ ತುಂಬಿ ಕೊಂಡು ಬಂದು ಸ್ವಚ್ಛ ಗೊಳಿಸಲಾಗುತ್ತದೆ. ಸಂಗ್ರಹಿಸಲ್ಪಟ್ಟ ಭತ್ತವನ್ನು ಸ್ಥಳೀಯರೇ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಸೊಲಿಗರ ಲ್ಯಾಂಪ್ ಸೊಸೈಟಿಯಿಂದಲೂ ಖರೀದಿ ಮಾಡುತ್ತಾರೆ ಎಂದು ಪುಣಜನೂರು ಚಿಕ್ಕತಾಯಮ್ಮ ಹೇಳಿದ್ದಾರೆ.

ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್​ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಬಿದಿರಿನ ಅಕ್ಕಿ ಸಿಗುತ್ತದೆ. ಚಾಮರಾಜನಗರ ತಾಲೂಕಿನ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು, ಕೋಳಿಪಾಳ್ಯ, ಬೆಜ್ಜಲಪಾಳ್ಯ ಸೇರಿದಂತೆ ರಸ್ತೆ ಬದಿಯ ಗ್ರಾಮಗಳಲ್ಲಿ ಈ ಭತ್ತ ಸಿಗಲಿದೆ.‌ ರಸ್ತೆಯ ಬದಿಯಲ್ಲಿ ಇಟ್ಟುಕೊಂಡು ಈ ಬಿದಿರಿನ ಭತ್ತವನ್ನು ಮಾರಾಟ ಮಾಡಲಾಗುತ್ತಿದೆ. ಬಿದಿರಿನ ಭತ್ತವನ್ನು ಜನರಿಗಿಂತ ಅರಣ್ಯ ಇಲಾಖೆಯವರೇ ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಬಿದಿರು ಹಾಳಾದ ಜಾಗದಲ್ಲಿ ಭಿತ್ತನೆ ಮಾಡಿದರೆ ಮತ್ತೆ ಬೆಳೆದು ಕಾಡು ಸಮೃದ್ಧ ಆಗಲಿದೆ ಎಂಬ ಉದ್ದೇಶ ಇವರದ್ದಾಗಿದೆ.

60 ವರ್ಷಕ್ಕೊಮ್ಮೆ ಬಿಡುವ ಬಿದಿರು ಅಕ್ಕಿಗೆ ಬಹಳ ಬೇಡಿಕೆ ಇದೆ. ಬಿದಿರು ಅಕ್ಕಿಯ ಊಟ ದೇಹಕ್ಕೆ ಬಹಳ ತಪ್ಪು ಎಂದು ಹೇಳಲಾಗುತ್ತದೆ. ಬಿದಿರು ಅಕ್ಕಿಯಿಂದ ದೋಸೆ, ಗಂಜಿ, ಅನ್ನ, ಇಡ್ಲಿ, ಬಾತ್ ಸೇರಿದಂತೆ ವಿವಿಧ ಬಗೆಯ ಅಡುಗೆ ಮಾಡಬಹುದು. ಅನ್ನ ಮಾಡಿದ ಬಳಿಕ ರಕ್ತದೊಕುಳಿ ರೀತಿ ಕಾಣುವ ಈ ಅಕ್ಕಿ ಅನಾರೋಗ್ಯಕ್ಕೆ ತುತ್ತಾದ ಮಕ್ಕಳಿಗೆ ಉತ್ತಮ ಔಷಧಿಯಾಗಿದೆ. ಕನ್ನಡಿಗರಿಗಿಂತ ತಮಿಳುನಾಡಿನ ಮಂದಿಯೇ ಇದನ್ನು ಹೆಚ್ಚು ಖರೀದಿ ಮಾಡುತ್ತಾರೆ.

ಬಿದಿರು ಅಕ್ಕಿ ಸ್ವಲ್ಪ ದುಬಾರಿ ಆಗಿರುವುದರಿಂದ ಒಂದು ಅಥವಾ ಎರಡು ಕೆಜಿ ವರೆಗೂ ಖರೀದಿ ಮಾಡುತ್ತಾರೆ. ಊಟಕ್ಕೆ ಮಾತ್ರ ಅಲ್ಲದೇ ಅಳಿದು ಹೋಗಿರುವ ಬಿದಿರನ್ನು ಪುನರ್ ಬೆಳೆಸಲು ಕೂಡ ಇದೇ ಬಿದಿರಿನ ಭತ್ತವನ್ನೇ ಬಳಕೆ ಮಾಡಲಾಗುತ್ತದೆ. ನೀರು ಹರಿಯುವ ಜಾಗಗಳಲ್ಲಿ ನಾಟಿ ಮಾಡಿದರೆ ಮುಂಬರುವ ದಿನಗಳಲ್ಲಿ ಬಳಕೆಗೆ ಬರುತ್ತದೆ.‌ ಜತೆಗೆ ಜಾನುವಾರುಗಳಿಗೆ ಮೇವು, ಬಲಿತ ಬಳಿಕ ಮನೆ ಕಟ್ಟಲು ಬಳಕೆ ಆಗುವುದರಿಂದಲೂ ಬಿದಿರು ಭತ್ತವನ್ನು ಕೆಲವರು ಖರೀದಿ ಮಾಡುತ್ತಾರೆ.

ಒಟ್ಟಿನಲ್ಲಿ ಬಿದಿರು ಹೂ ಬಿಟ್ಟರೆ ಬರಗಾಲ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಡಂಚಿನ ಗ್ರಾಮಸ್ಥರಲ್ಲಿ ಬಿದಿರು ಹೂವು ಬಿಟ್ಟು ಭತ್ತ ನೀಡುತ್ತಿರುವುದು ಅನುಕೂಲ ಆಗಿದೆ. ಅಂತೆಯೇ ಆದಷ್ಟು ಬೇಗ ಬಿದಿರು ಚಿಗುರೊಡೆದು ವನ್ಯಜೀವಿಗಳಿಗೆ ಆಹಾರದ ಸಮಸ್ಯೆ ಎದುರಾಗದಂತೆ ಆಗಲಿ ಎಂಬುದು ಪ್ರತಿಯೊಬ್ಬ ನಾಗರೀಕರ ಅಭಿಲಾಷೆಯಾಗಿದೆ.

ಇದನ್ನೂ ಓದಿ:

ರೈತರ ಅನುಕೂಲಕ್ಕಾಗಿ ಹೊಸ ಪ್ರಯೋಗ; ಕುಂದಾಪುರದಲ್ಲಿ 50,000 ಟ್ರೇ ಭತ್ತದ ಸಸಿ ಮಾಡುವ ನರ್ಸರಿ ಆರಂ

ಭತ್ತ ಬೆಳೆದಿದ್ದರೂ ಖರೀದಿ ಮಾಡದ ಸರ್ಕಾರ, ದಲ್ಲಾಳಿಗಳು: ಹತಾಶೆಯಿಂದ ರೈತ ಆತ್ಮಹತ್ಯೆಗೆ ಶರಣು