ಲಸಿಕೆ ಹಾಕಿಸಿಕೊಳ್ಳಲು ಬನ್ನಿ ಎಂದರೆ ಅರಣ್ಯಕ್ಕೆ ಓಟ; ಬುಡಕಟ್ಟು ಜನರಲ್ಲಿ ವ್ಯಾಕ್ಸಿನೇಷನ್​ ಕುರಿತು ದೂರವಾಗದ ಮೂಢನಂಬಿಕೆ

ಜಿಲ್ಲೆಯಲ್ಲಿ 4 ಕಾಗಿರಿಜನ ಹಾಡಿಗಳಿವೆ.‌ 31 ಸಾವಿರ ಗಿರಿನರಿದ್ದಾರೆ. ಬಹುತೇಕ ಮಂದಿ ಕಾಡಿನ ಮಧ್ಯೆಯಲ್ಲಿಯೇ ಇದ್ದಾರೆ. ಬುಡಕಟ್ಟು ಜನರಿಗೂ ಕೊರೊನಾ ಸೋಂಕು ತಗುಲಿದೆ.‌ ಗುಂಡ್ಲುಪೇಟೆ ತಾಲೂಕಿನ‌ ಮೂಕಳ್ಳಿ ಗ್ರಾಮದಲ್ಲಿ ಓರ್ವ ಕೊರೊನಾಗೆ ಬಲಿಯಾಗಿದ್ದಾರೆ. ಆದರೂ ಕೂಡ ವ್ಯಾಕ್ಸಿನೇಷನ್​ಗೆ ಬುಡಕಟ್ಟು ಜನರು ಹೆದರಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಬನ್ನಿ ಎಂದರೆ ಅರಣ್ಯಕ್ಕೆ ಓಟ; ಬುಡಕಟ್ಟು ಜನರಲ್ಲಿ ವ್ಯಾಕ್ಸಿನೇಷನ್​ ಕುರಿತು ದೂರವಾಗದ ಮೂಢನಂಬಿಕೆ
ಚಾಮರಾಜನಗರ ಅರಣ್ಯ ಪ್ರದೇಶ

ಚಾಮರಾಜನಗರ: ಕೊರೊನಾ ನಿವಾರಣೆಗಾಗಿ ಜಾರಿಗೆ ತಂದಿರುವ ಲಸಿಕೆ ಅಭಿಯಾನದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಇನ್ನು ಕೂಡ ಜನರಲ್ಲಿ ಭಯ ದೂರವಾಗಿಲ್ಲ. ಇದಕ್ಕೆ ಸಾಕ್ಷಿ ಚಾಮರಾಜನಗರದ ಬುಡಕಟ್ಟು ಜನಾಂಗ. ಅವರೇಲ್ಲ ಅರಣ್ಯದ ಮಧ್ಯೆ ವಾಸವಿರುವ ಬುಡಕಟ್ಟು ಜನರು. ರೋಗ ಬಂದಾಗ ಆಸ್ಪತ್ರೆಗೆ ಹೋಗಿದ್ದಕ್ಕಿಂತ ಕಾಡನ್ನು ನಂಬಿದ್ದೇ ಹೆಚ್ಚು. ಇದರ ಪರಿಣಾಮವಾಗಿ ಬಹುತೇಕ ಮಂದಿ ಒಂದಲ್ಲಾ ಒಂದು ರೋಗದಿಂದ ಬಳಲುತ್ತಿದ್ದಾರೆ. ಕೊರೊನಾ ಬಂದಿರುವುದರಿಂದ ಬುಡಕಟ್ಟು ಜನರು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಅದರಂತೆ ಬುಡಕಟ್ಟು ಜನರ ಮುಖಂಡರಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ವ್ಯಾಕ್ಸಿನೇಷನ್‌ ಮಾಡಿಸಿ ಕೊಂಡರೆ ಸಾಯುತ್ತಾರೆ ಎಂದು ಹೇಳಿ ಇನ್ನಿತರ ಜನರು ಅರಣ್ಯಕ್ಕೆ ಓಡಿ ಹೋಗುತ್ತಿದ್ದಾರೆ.

ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ರಾಜ್ಯದ ದಕ್ಷಿಣ ಭಾಗದ ಗಡಿ ಜಿಲ್ಲೆ ಚಾಮರಾಜನಗರ. ಬಂಡಿಪುರ, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಎರಡು ಹುಲಿ ಅವಾಸ ತಾಣಗಳ ಜತೆಗೆ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಿವೆ‌. ಜಿಲ್ಲೆಯ 52ರಷ್ಟು ಭೂಮಿ ಅರಣ್ಯದಿಂದಲೇ ಕೂಡಿದೆ. ಈ ಅರಣ್ಯದಲ್ಲಿ ಸಾವಿರಾರು ಮಂದಿ ಬುಡಕಟ್ಟು ಜನರು ವಾಸವಿದ್ದಾರೆ. ಇವರೇಲ್ಲರ ಆರಾಧ್ಯ ದೈವ ಅಂದರೆ ಪ್ರಕೃತಿ. ಅನ್ನ ನೀಡುವ ಪ್ರಕೃತಿ ನಮ್ಮೇಲ್ಲರಿಗೂ ಆರೋಗ್ಯವನ್ನೂ ನೀಡುತ್ತದೆ ಎಂಬ ಗಾಢ ನಂಬಿಕೆ ಬುಡಕಟ್ಟು ಜನರಲ್ಲಿದೆ. ಈ ನಂಬಿಕೆಯೇ ಚಾಮರಾಜನಗರ ಜಿಲ್ಲೆಯ ಅಧಿಕಾರಿಗಳಿಗೆ ದೊಡ್ಡ ತಲೆ ನೋವು ಉಂಟು ಮಾಡಿದೆ.

ಬಿಆರ್​ಟಿ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿ ವಾಸವಿರುವ ಜನರು, ಕಾವೇರಿ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗಗಳ ಮಧ್ಯೆ ಮತ್ತು ಕಾಡಂಚಿನ ಗ್ರಾಮಗಳಲ್ಲಿ ವಾಸವಿರುವ ಜನರು ವ್ಯಾಕ್ಸಿನೇಷನ್​ಗೆ ಮುಂದು ಬರುತ್ತಿಲ್ಲ. ಇಡೀ ಜಿಲ್ಲೆಯಲ್ಲಿ 4 ಕಾಗಿರಿಜನ ಹಾಡಿಗಳಿವೆ.‌ 31 ಸಾವಿರ ಗಿರಿನರಿದ್ದಾರೆ. ಬಹುತೇಕ ಮಂದಿ ಕಾಡಿನ ಮಧ್ಯೆಯಲ್ಲಿಯೇ ಇದ್ದಾರೆ. ಬುಡಕಟ್ಟು ಜನರಿಗೂ ಕೊರೊನಾ ಸೋಂಕು ತಗುಲಿದೆ.‌ ಗುಂಡ್ಲುಪೇಟೆ ತಾಲೂಕಿನ‌ ಮೂಕಳ್ಳಿ ಗ್ರಾಮದಲ್ಲಿ ಓರ್ವ ಕೊರೊನಾಗೆ ಬಲಿಯಾಗಿದ್ದಾರೆ. ಆದರೂ ಕೂಡ ವ್ಯಾಕ್ಸಿನೇಷನ್​ಗೆ ಬುಡಕಟ್ಟು ಜನರು ಹೆದರಿದ್ದಾರೆ.

ಕೊರೊನಾ ನಮಗೇನೂ ಮಾಡುವುದಿಲ್ಲ. ರೋಗ ರುಜಿನಿಗಳು ಬಂದರೆ ಕಾಡಿನಲ್ಲಿ ಸಿಗುವ ಹಣ್ಣು ಹಂಪಲು, ಗೆಡ್ಡೆ ಗೆಣಸು, ಜೇನು, ಮರದ ತೊಗಡೆಗಳನ್ನು ತಿಂದು ಬದುಕುತ್ತೇವೆ. ವ್ಯಾಕ್ಸಿನೇಷನ್‌ ಮಾಡಿಸಿ ಕೊಂಡವರಿಗೂ ಕೊರೊನಾ ಬಂದಿದೆ. ವ್ಯಾಕ್ಸಿನೇಷನ್‌ ಮಾಡಿಸಿ ಕೊಂಡವರು ಸಾವನಪ್ಪಿದ್ದಾರೆ. ನಮಗೆ ಬಲವಂತವಾಗಿ ವ್ಯಾಕ್ಸಿನೇಷನ್‌ ಮಾಡಿಸಲು ಮುಂದೆ ಬಂದರೆ ಕಾಡಿಗೆ ಓಡಿ ಹೋಗುತ್ತೇವೆ ಎಂದು ಬಿಆರ್​ಟಿ ಸೊಲಿಗ ಮುಖಂಡ ರಂಗೇಗೌಡ ತಿಳಿಸಿದ್ದಾರೆ.

ವ್ಯಾಕ್ಸಿನೇಷನ್‌ ಮಾಡಿಸಿಕೊಳ್ಳಲು ಮುಂದೆ ಬಾರದ ಬುಡಕಟ್ಟು ಜನರಿಗೆ ವ್ಯಾಕ್ಸಿನೇಷನ್‌ ಮಾಡಿಸುವುದರ ಬಗ್ಗೆ ಜಿಲ್ಲಾ ಬುಡಕಟ್ಟು ಇಲಾಖೆ ಅಧಿಕಾರಿ ಹೊನ್ನೇಗೌಡ ಅವರನ್ನು ಕೇಳಿದರೆ ಬುಡಕಟ್ಟು ಜನರಿಗೆ ವ್ಯಾಕ್ಸಿನೇಷನ್‌ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಬುಡಕಟ್ಟು ಮುಖಂಡರು, ಜನರ ಮನವೊಲಿಸಲು ಸರ್ವ ಪ್ರಯತ್ನ ಮಾಡಲಾಗುತ್ತದೆ. ‌ಮೊದಲನೆಯದಾಗಿ ಬುಡಕಟ್ಟು ಜನರ ಮುಖಂಡರು, ಯಜಮಾನರ ಮನವೊಲಿಸಿ ವ್ಯಾಕ್ಸಿನೇಷನ್‌ ಮಾಡಿದ್ದೇವೆ‌. 32 ಸಾವಿರ ಜನರ ಪೈಕಿ 910 ಮಂದಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಹೊಸ ಪ್ರಯತ್ನಗಳ ಮೂಲಕ ಬುಡಕಟ್ಟು ಜನರಿಗೆ ವ್ಯಾಕ್ಸಿನೇಷನ್‌ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಆಧುನಿಕತೆ ಇಷ್ಟೇಲ್ಲಾ ಮುಂದುವರಿದಿದ್ದರೂ ಬುಡಕಟ್ಟು ಜನರ ನಂಬಿಕೆ ಮಾತ್ರ ಬದಲಾಗಿಲ್ಲ. ಆದರೆ ಇಂದಿನ ಕೊರೊನಾ ಕಾಲದಲ್ಲಿ ಬುಡಕಟ್ಟು ಜನರಿಗೆ ಕೊರೊನಾ ಹರಡದಂತೆ ವ್ಯಾಕ್ಸಿನೇಷನ್‌ ಮಾಡಿಸುವ ಅತ್ಯಗತ್ಯತೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಬರುವ ದಿನಗಳಲ್ಲಿ ಮನವೊಲಿಸಿ ಲಸಿಕೆ ಹಾಕಿಸುವ ಅನಿವಾರ್ಯತೆ ಇದೆ.

ಇದನ್ನೂ ಓದಿ:

ಕಲಬುರಗಿಯಲ್ಲೂ ಮೌಢ್ಯಾಚರಣೆ; ಕೊರೊನಾವನ್ನು ದೂರ ಮಾಡು ಎಂದು ದೇವರ ಮೊರೆ ಹೋದ ಗ್ರಾಮಸ್ಥರು

ಕೊಡಗಿನಲ್ಲಿ ಅರಣ್ಯ ವಾಸಿಗಳ ಕೊರೊನಾ ಕಾಳಜಿ; ಮರದ ಎಲೆಯೇ ಮಾಸ್ಕ್, ತೊಗಟೆ ರಸವೇ ಸ್ಯಾನಿಟೈಜರ್