ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ; ತನಿಖಾ ಆಯೋಗದ ಕಚೇರಿ ಮೈಸೂರಲ್ಲಿ ತೆರೆದಿದ್ದಕ್ಕೆ ಕುಟುಂಬಸ್ಥರ ಆಕ್ರೋಶ

. ರಾಜ್ಯ ಸರ್ಕಾರ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ ಪಾಟೀಲ್ ನೇತೃತ್ವದ ತನಿಖಾ ಆಯೋಗದ ವಿರುದ್ಧ ಮೃತರ ಕುಟುಂಬಸ್ಥರು ಗರಂ ಆಗಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ; ತನಿಖಾ ಆಯೋಗದ ಕಚೇರಿ ಮೈಸೂರಲ್ಲಿ ತೆರೆದಿದ್ದಕ್ಕೆ ಕುಟುಂಬಸ್ಥರ ಆಕ್ರೋಶ
ಆಕ್ಸಿಜನ್ ಸಿಲಿಂಡರ್​ಗಳು

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಕೇಸ್ಗೆ ಸಂಬಂಧಿಸಿ ತನಿಖಾ ಆಯೋಗದ ಕಚೇರಿ ಮೈಸೂರಲ್ಲಿ ತೆರೆದಿರುವ ಹಿನ್ನೆಲೆಯಲ್ಲಿ ತನಿಖಾ ಆಯೋಗದ ನಿರ್ಧಾರಕ್ಕೆ ಮೃತರ ಕುಟುಂಬಸ್ಥರು ಗರಂ ಆಗಿದ್ದಾರೆ. ರಾಜ್ಯ ಸರ್ಕಾರ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ ಪಾಟೀಲ್ ನೇತೃತ್ವದ ತನಿಖಾ ಆಯೋಗದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮೃತರೆಲ್ಲರೂ ಚಾಮರಾಜನಗರ ಜಿಲ್ಲೆಯವರೇ ಆಗಿದ್ದಾರೆ. ಹೀಗಿರಬೇಕಾದರೆ ಮೈಸೂರಿನಲ್ಲಿ ಏಕೆ ಕಚೇರಿ ತೆರೆದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ 15 ದಿನದೊಳಗೆ ಸಂಬಂಧಿಕರು ಪ್ರಮಾಣಪತ್ರ ಸಲ್ಲಿಸಬೇಕು. ಆಕ್ಷೇಪಣೆಗಳು ಅಂಚೆ/ರಿಜಿಸ್ಟ್ರಾರ್ ಮೂಲಕ ಪ್ರಮಾಣಪತ್ರ ಸಲ್ಲಿಕೆಗೆ ತನಿಖಾ ತಂಡ ಪ್ರಕಟಣೆ ಹೊರಡಿಸಿದೆ. ಆದರೆ ಮೃತರ ಸಂಬಂಧಿಕರು ಬಹುತೇಕರ ಬಡವರೇ ಇದ್ದೇವೆ. ಈಗ ರಾಜ್ಯದಲ್ಲಿ ಲಾಕ್‌ಡೌನ್ ಇರುವುದರಿಂದ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಈ ವೇಳೆ ದೂರು ಸಲ್ಲಿಸುವುದಕ್ಕೆ ಮೈಸೂರಿಗೆ ಹೋಗೋದಾದ್ರು ಹೇಗೆ? ಮೈಸೂರಿನ ಹುಣಸೂರು ರಸ್ತೆಯಲ್ಲಿ ಇರುವ ಜಲದರ್ಶಿನಿ ಅತಿಥಿ ಗೃಹದಲ್ಲಿ ಕಚೇರಿ ಇದೆ. ಹೀಗಾಗಿ ಚಾಮರಾಜನಗರದಲ್ಲಿ ಕಚೇರಿ ತೆರೆಯಲು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಏಕ ಸದಸ್ಯ ವಿಚಾರಣಾ ಆಯೋಗ ರಚನೆ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್-19 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್​ ಅವರಿಗೆ ಈ ಹೊಣೆಯನ್ನು ಒಪ್ಪಿಸಲಾಗಿತ್ತು. ಒಂದು ತಿಂಗಳ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 3ರಂದು ಕೋವಿಡ್-19 ರೋಗಿಗಳ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗವು ವಿಚಾರಣೆ ನಡೆಸಿತ್ತು. ಆಕ್ಸಿಜನ್ ಕೊರತೆ ಮತ್ತು ಇತರ ಯಾವ ಕಾರಣದಿಂದ ಸಾವು ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗಕ್ಕೆ ಸೂಚನೆ ನೀಡಲಾಗಿತ್ತು.

ಈ ಆಯೋಗವು ವಿಚಾರಣಾ ಆಯೋಗ ಕಾಯ್ದೆ 1952ರ ಅನ್ವಯ ಎಲ್ಲ ಅಧಿಕಾರಗಳನ್ನೂ ಹೊಂದಿರುತ್ತದೆ. ಒಂದು ತಿಂಗಳ ಒಳಗೆ ವರದಿಯನ್ನು ಸಲ್ಲಿಸಬೇಕಿದೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಬೇಕು. ಆರೋಗ್ಯ ಇಲಾಖೆ ಆಯುಕ್ತರು ಈ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಆದೇಶವು ತಿಳಿಸಿತ್ತು

ವಿಚಾರಣಾ ಆಯೋಗದ ಕಚೇರಿಯು ಮೈಸೂರಿನಲ್ಲಿ ಇರುತ್ತದೆ. ಆರೋಗ್ಯ ಇಲಾಖೆಯ ಆಯುಕ್ತರು ಆಯೋಗದ ಕಚೇರಿ ಸ್ಥಾಪನೆ, ಸಿಬ್ಬಂದಿ, ಗೌರವಧನ ಮತ್ತು ಇತರ ಭತ್ಯಗಳನ್ನು ಒದಗಿಸುತ್ತಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯೆಲ್ ಆದೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಆಕ್ಸಿಜನ್ ನಿರ್ವಹಣೆಯ ಅಣಕು ಕಾರ್ಯಾಚರಣೆ ವೇಳೆ 22 ರೋಗಿಗಳ ಸಾವು ಪ್ರಕರಣ: ಆಗ್ರಾದ ಆಸ್ಪತ್ರೆಗೆ ಬೀಗಮುದ್ರೆ