ಸರ್ಕಾರ ನೀಡಿದ ಭೂಮಿಗೆ ತಡೆ; ಚಾಮರಾಜನಗರ ರೈತರ ಜಮೀನಿಗೆ ಚೈನ್ ಗೇಟ್ ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು

ಅರಣ್ಯ ಅಧಿಕಾರಿಗಳು ಆಮೆಕೆರೆ ಪ್ರದೇಶ ಅರಣ್ಯದಂತಿರುವ ಈ ಪ್ರದೇಶದಲ್ಲಿ ಹುಲಿ, ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳು ನೆಲೆಸಿವೆ. ಹೀಗಾಗಿ ಇಲ್ಲಿ ವ್ಯವಸಾಯ ಮಾಡಬೇಡಿ ಎಂದು ಗ್ರಾಮದ ಹೊರ ಭಾಗದಲ್ಲಿ ಚೈನ್ ಗೇಟ್ ಹಾಕಿ ರೈತರ ಜಮೀನಿಗೆ ರೈತರೇ ಹೋಗದಂತೆ ಬಂದ್ ಮಾಡಿದೆ.

  • ಎಂ.ಇ ಮಂಜುನಾಥ್
  • Published On - 13:29 PM, 5 Apr 2021
ಸರ್ಕಾರ ನೀಡಿದ ಭೂಮಿಗೆ ತಡೆ; ಚಾಮರಾಜನಗರ ರೈತರ ಜಮೀನಿಗೆ ಚೈನ್ ಗೇಟ್ ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು
ರೈತರ ಜಮೀನಿಗೆ ಚೈನ್ ಗೇಟ್ ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು

ಚಾಮರಾಜನಗರ: ಭೂ ರಹಿತರ ಕಷ್ಟ ನೋಡಲಾಗದೆ ಸರ್ಕಾರ ಅವರಿಗೆ ಒಂದಿಷ್ಟು ಜಾಗ ಕೊಟ್ಟಿತ್ತು. ಇನ್ನು ಸರ್ಕಾರ ಕೊಟ್ಟ ಜಾಗದಲ್ಲಿ ಮೂರ್ನಾಲ್ಕು ದಶಕಗಳ ಕಾಲ ವ್ಯವಸಾಯವನ್ನು ಕೂಡ ರೈತರು ಮಾಡಿದ್ದರು. ದುರದೃಷ್ಟವಶಾತ್​ ಸತತ ನಾಲ್ಕೈದು ವರ್ಷ ಬರಗಾಲ ಬಂದಿದ್ದರಿಂದ ಅಲ್ಲಿದ್ದ ಕುಟುಂಬಗಳು ಹಂತ ಹಂತವಾಗಿ ಜಾಗ ಖಾಲಿ ಮಾಡಿ ಮೂಲ ಗ್ರಾಮಗಳಲ್ಲಿ ಬಂದು ನೆಲೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೀಗ ಕಳೆದ ಒಂದು ವರ್ಷದಿಂದ ಮಳೆಯಾಗುತ್ತಿರುವುದರಿಂದ ಆ ಕುಟುಂಬಗಳು ಮತ್ತೆ ವ್ಯವಸಾಯ ಮಾಡಲು ಮುಂದಾಗಿವೆ. ಆದರೆ ಇದಕ್ಕೆ ಒಂದು ಕಡೆಯಿಂದ ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದ್ದರೆ ಮತ್ತೊಂದು ಕಡೆ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಕಳೆದ ಮೂರು ವರ್ಷಗಳಿಂದ ಪರಿಹಾರ ಧನ ನೀಡಲು ಮೀನಾಮೇಷ ಎಣಿಸುತ್ತಿದೆ.

ಕಳೆದ 55 ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿದ ಜಾಗವನ್ನು ಇವತ್ತು ಅರಣ್ಯ ಇಲಾಖೆ ಫಲಾನುಭವಿಗಳು ಉಳುಮೆ ಮಾಡದಂತೆ ತಡೆಯುತ್ತಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮದ್ದೂರು, ಬನ್ನಿಸಾರಿಗೆ, ಕುಣಗಳ್ಳಿ, ವೈಕೆ ಮೋಳೆ, ಅಲ್ಕೆರೆ ಸೇರಿದಂತೆ ಸುತ್ತಮುತ್ತಲ 8 ಗ್ರಾಮಗಳ ರೈತರು ಪ್ರತಿನಿತ್ಯ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಗುದ್ದಾಡುತ್ತಿದ್ದಾರೆ. 1963ರಲ್ಲಿ ಸರ್ಕಾರ ಮಂಜೂರು ಮಾಡಿದ ಜಾಗವನ್ನ ಗುರುತಿಸಿ ವ್ಯವಸಾಯ ಮಾಡಲು ನಮಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಇನ್ನು ಈ ವಿಷಯವಾಗಿ ಅರಣ್ಯ ಇಲಾಖೆೆಗೆ ತಾಕೀತು ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

101 ಮಂದಿ ಫಲಾನುಭವಿಗಳು ತಮ್ಮ ಬಳಿ ಇರುವ ಆರ್​ಟಿಸಿ, ಸಾಗುವಳಿ ಪತ್ರ ಸೇರಿದಂತೆ ಸರ್ಕಾರ ನೀಡಿರುವ ದಾಖಲಾತಿಗಳನ್ನ ನೀಡಿ ನ್ಯಾಯ ಕೇಳುತ್ತಿದ್ದಾರೆ. ಸರ್ಕಾರ 1963ರಲ್ಲಿ ಯಳಂದೂರು ತಾಲೂಕಿನ ವಿವಿಧ ಗ್ರಾಮಗಳ ಪರಿಶಿಷ್ಟ ಭೂ ರಹಿತರಿಗೆ ಆಮೆಕೆರೆ ಬಳಿ ಇದ್ದ ಸರ್ಕಾರಿ ಜಾಗದ ಸರ್ವೇ ನಂಬರ್ 1, 2, 3, 4 ಹೀಗೆ ವಿವಿಧ ರೀತಿಯಲ್ಲಿ ಸುಮಾರು 500 ಎಕರೆ ಪ್ರದೇಶವನ್ನ ಭೂ ಮಂಜೂರಾತಿ ನೀಡಿತ್ತು. ಕೆಲವರು ಸರ್ಕಾರಕ್ಕೆ ಕರ ಕಟ್ಟಲು ಸಾಧ್ಯವಾಗದೇ ಇದುದ್ದರಿಂದ ಸರ್ಕಾರ ಕೇವಲ 300 ಎಕರೆ ಪ್ರದೇಶವನ್ನ 101 ಜನರಿಗೆ ತಲಾ 3 ಎಕರೆಯಂತೆ ಹಂಚಿಕೆ ಮಾಡಿತ್ತು.

Forest Department

ವ್ಯವಸಾಯ ಮಾಡಲು ಭೂಮಿಯಿಲ್ಲದೆ ರೈತರ ಪರದಾಟ

ಭೂಮಿ ಪಡೆದ ರೈತರು ಅಲ್ಲಿಗೆ ಹೋಗಿ ನಾಲ್ಕು ದಶಕಗಳ ಕಾಲ ವ್ಯವಸಾಯ ಮಾಡುತ್ತಿದ್ದರು. ಆನಂತರ ಬಂದಪ್ಪಳಿಸಿದ ಬರಗಾಲ ಇವರು ಜಮೀನು ಬಿಟ್ಟು ಗುಳೆ ಹೋಗುವಂತೆ ಮಾಡಿತು. ಬರಗಾಲದ ಬವಣೆ ತಾಳಲಾರದ ಆಮೆಕೆರೆಯಲ್ಲಿ ನೆಲೆಸಿದ್ದ ಕುಟುಂಬಗಳು ಛಿದ್ರವಾಗಿ ಬೇರೆ ಬೇರೆ ಗ್ರಾಮಗಳಿಗೆ ಹೋಗಿ ನೆಲೆಸಿದವು. ನಂತರ ಒಂದು ದಶಕಗಳ ಕಾಲ ಇತ್ತ ಇವರು ಸುಳಿಯಲೇ ಇಲ್ಲ. ದಶಕಗಳ ನಂತರ ಮಳೆಯಾಗುತ್ತಿದ್ದಂತೆ ರೈತರು ಇಲ್ಲಿಗೆ ಬಂದಿದ್ದರು. ಆದರೆ ಅರಣ್ಯ ಇಲಾಖೆ ವ್ಯವಸಾಯ ಮಾಡಲು ಅವಕಾಶ ನೀಡಿರಲಿಲ್ಲ.

ಕಳೆದ ಒಂದು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದು, ಸರ್ಕಾರ 2016ರಲ್ಲಿ ₹1 ಕೋಟಿ ಪರಿಹಾರ ನೀಡಿ ಜಾಗವನ್ನ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನ ಮಾಡಿತ್ತು. ಆದರೆ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಾಗ ಬಂದಿರುವುದರಿಂದ ಅರಣ್ಯಾಧಿಕಾರಿಗಳು ವ್ಯವಸಾಯ ಮಾಡಲು ಅವಕಾಶ ನೀಡುತ್ತಿಲ್ಲ. ಎಂದು ಜಮೀನು ಮಾಲೀಕ ವೆಂಕಟರಾಮು ಗಂಭೀರ ಆರೋಪ ಮಾಡಿದ್ದಾರೆ.

ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸವಿರುವ ಸುಮಾರು 101ಕ್ಕೂ ಹೆಚ್ಚು ಕುಟುಂಬಗಳ ಬಳಿ ಭೂ ದಾಖಲಾತಿಗಳಿವೆ. ಅಲ್ಲದೆ ಸರ್ಕಾರವೇ ಗಂಗಾ ಕಲ್ಯಾಣ ಯೋಜನೆ ಅಡಿ ಕೆಲವು ಕುಟುಂಬಗಳಿಗೆ ಬೋರ್ ವೆಲ್ ಕೊರೆಸಿ ವಿದ್ಯುತ್​ ಸಂಪರ್ಕ ಕೂಡ ನೀಡಿದೆ. ಆದರೆ ಅರಣ್ಯ ಅಧಿಕಾರಿಗಳು ಆಮೆಕೆರೆ ಪ್ರದೇಶ ಅರಣ್ಯದ ಈ ಜಾಗದಲ್ಲಿ ಹುಲಿ, ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳು ನೆಲೆಸಿವೆ, ಹೀಗಾಗಿ ಇಲ್ಲಿ ವ್ಯವಸಾಯ ಮಾಡಬೇಡಿ ಎಂದು ಗ್ರಾಮದ ಹೊರ ಭಾಗದಲ್ಲಿ ಚೈನ್ ಗೇಟ್ ಹಾಕಿ ರೈತರ ಜಮೀನಿಗೆ ರೈತರೇ ಹೋಗದಂತೆ ಬಂದ್ ಮಾಡಿದೆ.

forest department

ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಚಿತ್ರಣ

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ, ಈಗಾಗಲೇ 101 ಮಂದಿಗೆ ಸರ್ಕಾರದಿಂದ ಭೂಮಿ ಮಂಜೂರಾಗಿದೆ. 2016ರಲ್ಲಿ ₹9 ಕೋಟಿ ಮಾತ್ರ ಅರಣ್ಯ ಇಲಾಖೆ ಅಂದಾಜು ಮಾಡಿತ್ತು. ಆದರೆ ಈಗ ಇದರ ಮೌಲ್ಯ ₹23 ಕೋಟಿ ಆಗಿದೆ. ಅರಣ್ಯ ಇಲಾಖೆಯಿಂದ ಹಣ ತರಿಸಿ ಕೊಳ್ಳಲು ಈಗಾಗಲೇ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಬೇಗ ಭೂಮಿ ಕಳೆದು ಕೊಂಡವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸರ್ಕಾರ ನೀಡಿರುವ ಜಾಗದಲ್ಲಿ ನಮಗೆ ವ್ಯವಸಾಯ ಮಾಡಲು ಅವಕಾಶ ನೀಡಿ, ಇಲ್ಲವೇ ಪರ್ಯಾಯ ಜಾಗ ಕೊಡಿ, ಇದು ಸಾಧ್ಯವಾಗದೇ ಇದ್ದರೆ ನಮಗೆ ಸೂಕ್ತ ಪರಿಹಾರ ನೀಡಿ ಎಂದು ಹಲವು ಬಾರಿ ರೈತರು ಹೋರಾಟ ಮಾಡಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಬಗೆಹರಿಸುವ ಕುರಿತು ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಇಲ್ಲಿವರೆಗೆ ಸ್ಪಷ್ಟವಾದ ತಿರ್ಮಾನಕ್ಕೆ ಬಂದಿಲ್ಲ. ಸರ್ಕಾರ ಬೇಗ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಜಮೀನು ನೀಡಲಿ ಎಂದು ರೈತರು ಸರ್ಕಾರವನ್ನ ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಆದ್ಯತೆ ಮೇರೆಗೆ ಈ ಸಮಸ್ಯೆ ಬಗೆಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

(ವರದಿ: ಎಂ.ಇ ಮಂಜುನಾಥ್ 9980914111)

ಇದನ್ನೂ ಓದಿ: International Day of Forest 2021: ವಿಶ್ವ ಅರಣ್ಯ ದಿನ: ‘ತೆರೆದ ಖಜಾನೆ’ ಕಾಪಾಡುವ ಹೊಣೆ ಹೊತ್ತವರ ಮನದ ಮಾತು

(Forest Department officers set up a chain gate to farmers land in Chamarajanagar)