ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಇಬ್ಬರು ಪೊಲೀಸ್ ಹೆಡ್ ಕಾನಸ್ಟೇಬಲ್​ಗಳು ಕೊರೊನಾ ಸೋಂಕಿಗೆ ಮೇ 2 ರಂದು ಬಲಿಯಾಗಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯ ಪೊಲೀಸರಿಗೆಂದೇ ಪ್ರತ್ಯೇಕ ಕೊವಿಡ್ ಕೇರ್ ಕೇಂದ್ರವೊಂದನ್ನು ಆರಂಭಿಸಿದ್ದಾರೆ.

  • ಭೀಮಪ್ಪ ಪಾಟೀಲ
  • Published On - 10:48 AM, 5 May 2021
ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಪ್ರಸರಣವಾಗುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದೆ. ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಕೂಡ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಸದ್ಯ ಜನ ಸಾಮಾನ್ಯರ ಮಧ್ಯದಲ್ಲಿ ನಿಂತು ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಕೊರೊನಾ ಸಂಕಷ್ಟ ಎದುರಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಪೊಲೀಸರು ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಪೊಲೀಸರಲ್ಲಿ ಕೊವಿಡ್ ಧೃಡಪಟ್ಟಿದೆ.

ಕೊರೊನಾ ಲಾಕ್​ಡೌನ್ ಅನುಷ್ಠಾನದಿಂದ ಹಿಡಿದು, ಜನ ಸಾಮಾನ್ಯರು ಮಾಸ್ಕ್ ಧರಿಸಿದ್ದಾರೊ ಇಲ್ಲವೋ ಎಂದು ಪರಿಶೀಲನೆ ಮಾಡಿ ಎಚ್ಚರಿಸುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಇಬ್ಬರು ಪೊಲೀಸ್ ಹೆಡ್ ಕಾನಸ್ಟೇಬಲ್​ಗಳು ಕೊರೊನಾ ಸೋಂಕಿಗೆ ಮೇ 2ರಂದು ಬಲಿಯಾಗಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯ ಪೊಲೀಸರಿಗೆಂದೇ ಪ್ರತ್ಯೇಕ ಕೊವಿಡ್ ಕೇರ್ ಕೇಂದ್ರವೊಂದನ್ನು ಆರಂಭಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಜಡಲತಿಮ್ಮನಹಳ್ಳಿ ಬಳಿ ಸಮಾಜ ಕಲ್ಯಾಣ ಇಲಾಖೆಯ ಸುಸಜ್ಜೀತ ವೃತ್ತಿಪರ ವಿದ್ಯಾರ್ಥಿಗಳ ವಸತಿ ನಿಲಯವನ್ನು ನೂತನವಾಗಿ ಪೊಲೀಸರಿಗೆಂದೆ ಮಿಸಲಿರಿಸಲಾಗಿದ್ದು, ಕೊವಿಡ್ ಕೇರ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. 24 ಗಂಟೆಯೂ ವೈದ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಕೊರೊನಾ ಸೋಂಕಿತ ಪೊಲೀಸ್ ಅಧಿಕಾರಿಗಳ ಆರೋಗ್ಯ ಪರಿಶೀಲನೆ ನಡೆಸಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.

ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೊಲೀಸರಿಗೆ ಕೊರೊನಾ ಸೋಂಕು ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪೊಲೀಸರು ಈಗ ಕೊರೊನಾ ಸೋಂಕು ಹರಡುವ ಆತಂಕದ ಮಧ್ಯೆಯೇ ಕೊರೊನಾ ವಾರಿಯರ್ಸ್​ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:

ಕೊರೊನಾ ಲಸಿಕೆ ಕುರಿತು ಅಪಪ್ರಚಾರ; ಅಪರಿಚಿತ ಮುಸ್ಲಿಂ ಮಹಿಳೆ ವಿರುದ್ಧ ಕಾರವಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು