ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು

ಸಾವು ಬದುಕಿನ ಹೋರಾಟದಲ್ಲಿ 7 ವರ್ಷದ ಗಂಡು ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೂಡಿಗೆರೆ ಸಮೀಪದ ಹಳೆಕೋಟೆ ಅರಣ್ಯ ಇಲಾಖೆಯ ಆವರಣದಲ್ಲಿ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

  • ಪ್ರಶಾಂತ್
  • Published On - 14:48 PM, 24 Feb 2021
ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು
ಜಿಂಕೆ ಮತ್ತು ಪಿಟ್ಬುಲ್ ನಾಯಿ ಹೋರಾಟದ ದೃಶ್ಯ

ಚಿಕ್ಕಮಗಳೂರು: ಕಾಫಿನಾಡಿನಗೆ ಕಾಡಿನಿಂದ ಜಿಂಕೆಯೊಂದು ಆಗಮಿಸಿದ್ದು, ಇದನ್ನು ಕಂಡ ಪಿಟ್​ಬುಲ್ ತಳಿಯ ನಾಯಿ ಅಟ್ಟಿಸಿಕೊಂಡು ಹೋಗಿದೆ. ಹೀಗೆ ಜೆಂಕೆಯನ್ನು ಬೆನ್ನಟ್ಟಿ ಹೋದ ನಾಯಿ ಜಿಂಕೆಯ ಜೊತೆಗೆ ಸುಮಾರು 15 ನಿಮಿಷಗಳ ಕಾಲ ಕಾದಾಟ ನಡೆಸಿದೆ. ಇನ್ನು ಜಿಂಕೆ ತನ್ನೆಲ್ಲಾ ಶಕ್ತಿ ಪ್ರದರ್ಶನ ತೋರಿಸಿದರೂ ನಾಯಿಯ ಎದುರು ಸೋಲು ಒಪ್ಪಿಕೊಳ್ಳಕಾಯಿತು. ಬರೀ ಸೋಲಾಗಿದ್ದರೆ ಬಹುಶಃ ಅಷ್ಟು ಬೇಸರವಾಗುತ್ತಿರಲಿಲ್ಲ, ಆದರೆ ಪಿಟ್​ಬುಲ್ ತಳಿಯ ನಾಯಿಗೆ ಸಾಥ್ ನೀಡಿದ ಬೀದಿನಾಯಿಗಳು ಜಿಂಕೆಯನ್ನ ಬಲಿತೆಗೆದುಕೊಂಡಿದೆ.

ಈ ಕರುಣಾಜನಕ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ಗ್ರಾಮ. ಹೌದು, ದಾರಿತಪ್ಪಿ ಊರಿನ ಕಡೆ ಹೆಜ್ಜೆ ಹಾಕಿದ್ದ ಜಿಂಕೆಗೆ ಎದುರಾಗಿದ್ದು, ಪಿಟ್​ಬುಲ್ ನಾಯಿ. ಆಹಾರ ಅರಸಿ ಬಂದ ಅಮಾಯಕ ಜೀವಿಯ ಮೇಲೆ ದಾಳಿ ಮಾಡಿ ಅದರ ದೇಹವನ್ನ ರಕ್ತಸಿಕ್ತಗೊಳಿಸಿದ್ದು, ಜಿಂಕೆಯ ಅಳಲು ನಾಯಿಗೆ ಕೇಳಿಸಲೇ ಇಲ್ಲ.

ಸುಮಾರು 15 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಪಿಟ್​ಬುಲ್ ನಾಯಿ ಜೊತೆ ಬೀದಿ ನಾಯಿಗಳು ಸೇರಿಕೊಂಡು ಜಿಂಕೆಯ ಮೇಲೆ ಸವಾರಿ ಮಾಡಿದ್ದು, ಕೊನೆಗೆ ನಾಯಿಗಳ ಅಟ್ಟಹಾಸಕ್ಕೆ ಶರಣಾದ ಜಿಂಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಟ ನಡೆಸಿದೆ. ಈ ವೇಳೆ ಜಿಂಕೆಯ ಸಹಾಯಕ್ಕೆ ಸ್ಥಳೀಯರು ಸೇರಿದಂತೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದರು ಆದರೆ ಜಿಂಕೆ ಬದುಕಿಸಲು ಮಾಡಿದ ಇನ್ನಿಲ್ಲದ ಪ್ರಯತ್ನ ಕೈಗೂಡಲೇ ಇಲ್ಲ.

dog deer

ಜಿಂಕೆ ಅಂತ್ಯಸಂಸ್ಕಾರದ ದೃಶ್ಯ

ಸಾವು ಬದುಕಿನ ಹೋರಾಟದಲ್ಲಿ 7 ವರ್ಷದ ಗಂಡು ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೂಡಿಗೆರೆ ಸಮೀಪದ ಹಳೆಕೋಟೆ ಅರಣ್ಯ ಇಲಾಖೆಯ ಆವರಣದಲ್ಲಿ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜಿಂಕೆಯ ಮರಣೋತ್ತರ ಪರೀಕ್ಷೆ ಬಳಿಕ ಅಲ್ಲೇ ಅಂತ್ಯಸಂಸ್ಕಾರವನ್ನ ಕೂಡ ಮಾಡಲಾಯಿತು. ಗಾಬರಿಯಿಂದ ಕಾದಾಟ ನಡೆಸಿದ್ದರಿಂದ ಜಿಂಕೆ ಹೃದಯಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಜಾಸ್ತಿಯಿದೆ ಎಂದು ಪಶುವೈದ್ಯರು ಅಭಿಪ್ರಾಯಪಟ್ಟರು.

ಈ ರೀತಿಯ ದಾಳಿಗಳು ಆಗಾಗ ನಡೆಯುತ್ತಲೇ ಇರುತ್ತದೆ. ಜಿಂಕೆಯಂತಹ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಸ್ಥಳೀಯರಾದ ರಾಘವೇಂದ್ರ ದುಃಖ ತೋಡಿಕೊಂಡರು.

ತುಂಬಾ ಸಾಧು ಪ್ರಾಣಿಗಳಾಗಿರುವ ಜಿಂಕೆಗಳು ಕಾಡಿನಲ್ಲಿ ಎಷ್ಟೇ ವೇಗವಾಗಿ ಓಡಿದರೂ ನಾಡಿಗೆ ಬಂದಾಗ ವಿಚಲಿತವಾಗುವುದು ಸಾಮಾನ್ಯ. ಅದರಲ್ಲೂ ಈ ರೀತಿಯ ದಾಳಿಗಳು ನಡೆದಾಗ ಸೂಕ್ಷ್ಮ ಸ್ವಭಾವದ ಜಿಂಕೆ ಹೃದಯಘಾತಕ್ಕೆ ಬಲಿಯಾಗುತ್ತಿರುತ್ತವೆ. ಅಂದಹಾಗೆ ಈ ಭಾಗದಲ್ಲಿ ಇದೇ ತಿಂಗಳಲ್ಲಿ ಜಿಂಕೆಯ ಮೇಲೆ ಬರೋಬ್ಬರಿ ಮೂರನೇ ಬಾರಿ ಬೀದಿನಾಯಿಗಳು ದಾಳಿ ನಡೆಸಿದ್ದು, ಕಳೆದ 20 ದಿವಸದಲ್ಲಿ 2 ಜಿಂಕೆಗಳು ಇದೇ ರೀತಿ ಬೀದಿನಾಯಿಗಳ ಕಾದಾಟದಲ್ಲಿ ಸಾವನ್ನಪ್ಪಿವೆ. ಇದೀಗ ಪಿಟ್ಬುಲ್ ನಾಯಿಯೊಂದು ಜಿಂಕೆಯನ್ನ ಈ ಪರಿ ಗಾಯಗೊಳಿಸಿ ಬಲಿತೆಗೆದುಕೊಂಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ಇದನ್ನೂ ಓದಿ: ಹೆಂಡತಿ – ಮಗಳ ರಕ್ಷಣೆಗಾಗಿ ಚಿರತೆಯ ಹತ್ಯೆಗೈದ ಅಪ್ಪ, 15 ನಿಮಿಷ ಕಾದಾಡಿ ಆಸ್ಪತ್ರೆ ಸೇರಿದರು!