ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನವರಿಯಲ್ಲಿ 1000ಕ್ಕೂ ಹೆಚ್ಚು ಜನರಿಗೆ ಕಡಿತವಾಗಿದೆ. ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಆಕ್ರೋಶಗೊಂಡಿರುವ ಜನತೆ, ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ.

ಚಿಕ್ಕಮಗಳೂರು, ಜನವರಿ 30: ಜಿಲ್ಲೆಯಲ್ಲಿ ಬೀದಿ ನಾಯಿಗಳ ಕಾಟ (Dog attack) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ಜನರು ಬೀದಿ ನಾಯಿಗಳ ದಾಳಿಗೆ ಒಳಗಾಗಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯರು ರಸ್ತೆಗಿಳಿಯಲು ಹೆದರುವ ಪರಿಸ್ಥಿತಿ ಎದುರಾಗಿದೆ. ನಾಯಿ ದಾಳಿಗೆ ಒಳಗಾದ ಎಲ್ಲಾ ಗಾಯಾಳುಗಳು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ಜನವರಿ 1ರಿಂದ 29ರವರೆಗೆ 1011 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಮಕ್ಕಳು, ಮಹಿಳೆಯರು ಸೇರಿ ವೃದ್ಧರೂ ನಾಯಿ ಕಡಿತಕ್ಕೆ ಒಳಗಾಗಿರುವುದು ಕಂಡುಬಂದಿದೆ. ನಗರದಲ್ಲಿ 6 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿದ್ದು, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ತಾಲೂಕುವಾರು ನೋಡಿದರೆ, ಚಿಕ್ಕಮಗಳೂರು , ಕಡೂರು ಸೇರಿ ಏಳು ಕಡೆ ಹೆಚ್ಚಿನ ದಾಳಿಗಳು ನಡೆದಿರುವುದು ಕಂಡುಬಂದಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣಗಳು?
- ಚಿಕ್ಕಮಗಳೂರು:112
- ಕಡೂರು:183
- ತರೀಕೆರೆ :179
- ಮೂಡಿಗೆರೆ :194
- ಕೊಪ್ಪ:218
- ಎನ್.ಆರ್.ಪುರ:48
- ಶೃಂಗೇರಿ:78
ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಕ್ರೋಶ
ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಹಾಗೂ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಬೆಳಗಿನ ಜಾವ ಕೆಲಸಕ್ಕೆ ತೆರಳುವ ನಾಗರಿಕರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ ಸಂತಾನ ನಿಯಂತ್ರಣ, ಲಸಿಕೆ ಮತ್ತು ಪುನರ್ವಸತಿ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸಾರ್ವಜನಿಕರು ಆಡಳಿತಕ್ಕೆ ಒತ್ತಾಯಿಸುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
