AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ವಕೀಲರ ಮೇಲೆ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ಈ ನಡುವೆ, ಠಾಣೆಯಲ್ಲಿ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಹಲ್ಲೆ ಸಂಬಂಧ ವಕೀಲರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು.

ಚಿಕ್ಕಮಗಳೂರು: ವಕೀಲರ ಮೇಲೆ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Dec 04, 2023 | 5:26 PM

Share

ಚಿಕ್ಕಮಗಳೂರು, ಡಿ.4: ನಗರ ಪೊಲೀಸರು ಹಾಗೂ ವಕೀಲರ ನಡುವೆ ಗಲಾಟೆ ಪ್ರಕರಣ ಸಂಬಂಧ ವಕೀಲರ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಹೈಕೋರ್ಟ್ (Karnataka High Court) ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಪೊಲೀಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಸಂಬಂಧ ವಕೀಲರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಮೂರು ಕೇಸ್​ಗಳಿಗೆ ಮಧ್ಯಂತರ ತಡೆ ನೀಡಲಾಗಿದೆ.

ಬಾರ್ ಕೌನ್ಸಿಲ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸುಧಾಕರ್ ಸೇರಿದಂತೆ 15 ಕ್ಕೂ ಹೆಚ್ಚು ವಕೀಲರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರ ತೀವ್ರ ಪ್ರತಿಭಟನೆಯ ಬಳಿಕ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ದಾಖಲಿಸಿದ್ದ ಎಫ್​ಐಆರ್ ಪ್ರಶ್ನಿಸಿ ಹೈಕೋರ್ಟ್​ಗೆ ವಕೀಲರು ಅರ್ಜಿ ಸಲ್ಲಿಸಿದ್ದರು.

ವಕೀಲರ ಸಂಭ್ರಮಾಚರಣೆ

ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳಿಗೆ ಹೈಕೋರ್ಟ್ ಮಧ್ಯತಂರ ತಡೆ ನೀಡಿದ ಹಿನ್ನೆಲೆ ಚಿಕ್ಕಮಗಳೂರು ನ್ಯಾಯಾಲಯದ ಮುಂಭಾಗ ವಕೀಲರು ಸಂಭ್ರಮಾಚರಣೆ ನಡೆಸಿದರು.

ಏನಿದು ಪ್ರಕರಣ?

ಹೆಲ್ಮೆಟ್ ವಿಚಾರವಾಗಿ ನಗರ ಪೊಲೀಸ್​ ಠಾಣೆಯಲ್ಲಿ ವಕೀಲ ಪ್ರೀತಮ್ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು. ಇದನ್ನು ಖಂಡಿಸಿ ಹತ್ತಾರು ವಕೀಲರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ್ದ ಚಿಕ್ಕಮಗಳೂರು ಎಸ್​ಪಿ, ವಿಚಾರಣೆ ನಡೆಸಿ ಪಿಎಸ್​ಐ ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು.

ಅಲ್ಲದೆ, ಹಲ್ಲೆ ಆರೋಪ ಸಂಬಂಧ ಆರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನೊಂದೆಡೆ, ಠಾಣೆಯಲ್ಲಿ ತಮ್ಮ ಮೇಲೆ ವಕೀಲರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ಒಪ್ಪಿಸಿದ ರಾಜ್ಯ ಸರ್ಕಾರ

ವಕೀಲರು ಮತ್ತು ಪೊಲೀಸರ ನಡುವಿನ ಜಟಾಪಟಿಯ ಮಧ್ಯೆಯೇ ಕರ್ನಾಟಕ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ. ಈ ಬಗ್ಗೆ ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಸ್ಪಷ್ಟಪಡಿಸಿದ್ದರು.

ಹಿರಿಯ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಮಾಡಬೇಕು. 6 ನೇ ಗ್ಯಾರಂಟಿಯಾಗಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅವರು ವಕೀಲರೂ ಆಗಿದ್ದಾರೆ. ಹೀಗಾಗಿ ಅವರಿಗೆ ವಕೀಲರ ಕಷ್ಟ ಗೋತ್ತಿದೆ. ಅವರು ನೀಡಿದ ಮಾತಿನಂತೆ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಪೊಲೀಸರಿಗೆ ಪ್ರತಿಭಟನೆ ಮಾಡುವ ಅಧಿಕಾರ ನೀಡಿದ್ದು ಯಾರು? SP, IGP ADGP ಮಾತಿಗೂ ಪೊಲೀಸ್ ಸಿಬ್ಬಂದಿ ಬೆಲೆ ನೀಡಲಿಲ್ಲ. ಪ್ರತಿಭಟನೆ ನಡೆಸಿದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಾಂಜಾ ರೌಡಿಶೀಟರ್ ಮಟ್ಕಾ ಬರೆಯುವರನ್ನ ಕರೆಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದರ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪೊಲೀಸರು ದಾಖಲು ಮಾಡಿದ್ದ ಮೂರು ಪ್ರಕರಣದಲ್ಲಿ ಮಧ್ಯಂತರ ತಡೆ ಸಿಕ್ಕಿದೆ. ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದರೆ ರಾಜ್ಯಾದ್ಯಂತ 40 ಸಾವಿರ ವಕೀಲರಿಂದ ಪ್ರತಿಭಟನೆ ನಡೆಸುತ್ತೇವೆ‌ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ