ಶೃಂಗೇರಿಯಲ್ಲಿ ನವರಾತ್ರಿ ವೈಭವ: 9 ದಿನವೂ ತಾಯಿಗೆ ವಿಶೇಷ ಅಲಂಕಾರ
ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.
ಚಿಕ್ಕಮಗಳೂರು,ಅ.21: ನವರಾತ್ರಿ (Navaratri) ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ನಮ್ಮ ರಾಜ್ಯದಲ್ಲಂತೂ ದಸರಾವನ್ನ ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು (Mysuru Dasara) ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ. ಮೈಸೂರು ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ (Sringeri Sharada Peetham) ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯೂ ವಿಶೇಷವಾಗಿದೆ.
ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ. ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸದ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ.
ಶೃಂಗೇರಿಯಲ್ಲಿ ನವರಾತ್ರಿಯ ವೈಭವ
ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.
ಶೃಂಗೇರಿಯಲ್ಲಿ ವಿಜೃಂಭಣೆಯಿಂದ ನಡೆಯುವ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಈ ಸುಸಂದರ್ಭದಲ್ಲಿ ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ. ಶಾರದೆಗೆ ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ಮೈಸೂರಲ್ಲಿ ನವರಾತ್ರಿ ಸಂಭ್ರಮ, ಕರಾವಳಿಯಲ್ಲಿ ದಾಂಡಿಯಾ ಕಿಚ್ಚು: ಎಲ್ಲೆಲ್ಲಿ ಹೇಗಿದೆ ದಸರಾ ಸಂಭ್ರಮ?
ಶೃಂಗೇರಿಯಲ್ಲಿ ಅ.15 ರಿಂದ 25ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ
ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅಕ್ಟೋಬರ್ 15 ರಿಂದ 25 ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿಯ ಹಿಂದಿನ ದಿನ 14 ರಂದು ಭಾದ್ರಪದ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಿದೆ. ಶ್ರೀ ಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರುತ್ತೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರದಲ್ಲಿ ಕಂಗೊಳಿಸಿದಳು.
ಯಾವ ದಿನ ಯಾವುದೆಲ್ಲಾ ಅಲಂಕಾರ ಇರುತ್ತದೆ
- ಶ್ರೀ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶಾರದೆಗೆ 15 ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ
- ಅ.16- ಹಂಸವಾಹಿನಿ
- ಅ.17- ಮಾಹೇಶ್ವರಿ
- ಅ.18- ಮಯೂರವಾಹನಾ ಅಲಂಕಾರ
- ಅ.19- ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ
- ಅ.20- ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ
- ಅ.21- ಮೋಹಿನಿ ಅಲಂಕಾರ
- ಅ.22- ರಾಜರಾಜೇಶ್ವರಿ ಅಲಂಕಾರ
- ಅ. 23- ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ
- ಅ.24- ವಿಜಯದಶಮಿ, ಗಜಲಕ್ಷ್ಮಿ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ
- ಅ. 25- ಗಜಲಕ್ಷ್ಮೀ ಅಲಂಕಾರ, ಶೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ನವರಾತ್ರಿ ಸಂದರ್ಭದಲ್ಲಿ ಶ್ರೀ ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ದುರ್ಗಾ ಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀ ಸೂಕ್ತ ಜಪ, ಭವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುವಾಸಿನೀ ಪೂಜೆ ನಡೆಯುತ್ತದೆ.
ನವರಾತ್ರಿ ಉತ್ಸವದ ಸಲುವಾಗಿ ರಾಜಬೀದಿಯಲ್ಲಿ ನಡೆಯುವ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತೆ. ನಾನಾ ಪ್ರಾಂತ್ಯಗಳಿಂದ ಆಗಮಿಸುವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವದಿಂದ ಪುನೀತರಾಗುತ್ತಾರೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಮಧು, ಕೈಟಭ, ಶುಂಭ, ನಿಶುಂಭ ಮೊದಲಾದ ಮಹಾರಾಕ್ಷಸರನ್ನು ಕೊಂದ ಜನನ್ಮಾತೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ.
ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ. ಸಂಜೆ 6 ಗಂಟೆಗೆ ಶ್ರೀಮಠದ ಆವರಣದಲ್ಲಿ ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.
ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ