ಮಕ್ಕಳ ಮನೆ ಬಾಗಿಲಿಗೆ ಶಿಕ್ಷಕರು.. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ನಡೆ ಆರಂಭಿಸಿದ ಚಿಕ್ಕಮಗಳೂರು ಶಿಕ್ಷಕರು

|

Updated on: Mar 26, 2021 | 1:32 PM

ಚಿಕ್ಕಮಗಳೂರು ತಾಲೂಕಿನ ಪಾದಮನೆ ಗ್ರಾಮ ಹೆಚ್ಚು ಕಡಿಮೆ ಕಾಡಂಚಿನ ಹಳ್ಳಿ. ಈ ಊರಲ್ಲಿ ಸುಮಾರು 50 ರಿಂದ 60 ಮನೆಗಳಿವೆ. ಆದರೆ ಸುಮಾರು 40 ಮನೆಗಳ ಮುಂದೆ ಬ್ಲಾಕ್ ಬೋರ್ಡ್ ಹಾಕಲಾಗಿದೆ. ಕೆಲ ಮನೆಗಳ ಮುಂದೆ ಬ್ಲಾಕ್ ಚಾರ್ಟ್ ನೇತಾಡುತ್ತಿವೆ. ಇದಕ್ಕೆಲ್ಲಾ ಕಾರಣ ಮಕ್ಕಳ ಭವಿಷ್ಯ ರೂಪಿಸಬೇಕು ಅಂತ ಪಣ ತೊಟ್ಟ ಶಿಕ್ಷಕರ ತಂಡ.

ಮಕ್ಕಳ ಮನೆ ಬಾಗಿಲಿಗೆ ಶಿಕ್ಷಕರು.. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ನಡೆ ಆರಂಭಿಸಿದ ಚಿಕ್ಕಮಗಳೂರು ಶಿಕ್ಷಕರು
ಮಕ್ಕಳ ಮನೆ ಬಾಗಿಲಿಗೆ ಬಂದು ಪಾಠ ಹೇಳಿಕೊಡುತ್ತಿರುವ ಶಿಕ್ಷಕ
Follow us on

ಚಿಕ್ಕಮಗಳೂರು: ಅತ್ತ ವಿದ್ಯಾಗಮ ನಿಂತೋಯ್ತು. ಇತ್ತ ಹೆತ್ತವರು ಕೂಲಿಗೆ ಹೋಗುತ್ತಿದ್ದರು. ಮಕ್ಕಳು ಏನ್ ಮಾಡುತ್ತಿದ್ದಾರೋ ಅಂತ ಹೆತ್ತವರಿಗೂ ಚಿಂತೆ. ಜೊತೆಗೆ ಮಕ್ಕಳ ಶಿಕ್ಷಣ ಹಾಳಾಗುತ್ತಿದೆ ಅಂತ ಶಿಕ್ಷಕರಿಗೂ ಯೋಚನೆ. ಆದರೆ ಕೊರೊನಾ ರಜಾ ಮಜವೋ ಮಜಾ ಅಂತ ಸ್ಲೇಟು, ಬಳಪ ಹಿಡಿಯುವ ಪುಟ್ಟ-ಪುಟ್ಟ ಕೈಗಳು ಕೆರೆಯಲ್ಲಿ ಈಜಾಡಿಕೊಂಡು ಏಡಿ, ಮೀನು ಹಿಡಿಯೋಕೆ ಹೋಗುತ್ತಿದ್ದರು. ಆದರೆ ಇದೀಗ ಶಾಲೆ ಇಲ್ಲದಿದ್ದರೂ ಮಕ್ಕಳು ಮಾತ್ರ ಅಯ್ಯೋ.. ಮಿಸ್ ಬರ್ತಾರೆ.. ಬೈತಾರೆ, ಮೆಷ್ಟ್ರು ಬರ್ತಾರೆ.. ಹೊಡೀತಾರೆ ಅಂತ ಬೆಳಗ್ಗೆಯಿಂದ ಸಂಜೆವರೆಗೂ ಕೈಯಲ್ಲಿ ಚಾಕ್ ಪೀಸ್ ಇಟ್ಟುಕೊಂಡು ಮನೆ ಬಾಗಿಲಲ್ಲಿ ಶಿಕ್ಷಕರ ದಾರಿ ಕಾಯುತ್ತಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಪಾದಮನೆ ಗ್ರಾಮ ಹೆಚ್ಚು ಕಡಿಮೆ ಕಾಡಂಚಿನ ಹಳ್ಳಿ. ಈ ಊರಲ್ಲಿ ಸುಮಾರು 50 ರಿಂದ 60 ಮನೆಗಳಿವೆ. ಆದರೆ ಸುಮಾರು 40 ಮನೆಗಳ ಮುಂದೆ ಬ್ಲಾಕ್ ಬೋರ್ಡ್ ಹಾಕಲಾಗಿದೆ. ಕೆಲ ಮನೆಗಳ ಮುಂದೆ ಬ್ಲಾಕ್ ಚಾರ್ಟ್ ನೇತಾಡುತ್ತಿವೆ. ಇದಕ್ಕೆಲ್ಲಾ ಕಾರಣ ಮಕ್ಕಳ ಭವಿಷ್ಯ ರೂಪಿಸಬೇಕು ಅಂತ ಪಣ ತೊಟ್ಟ ಶಿಕ್ಷಕರ ತಂಡ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಗ್ರಾಮದ ಶಾಲೆಯ ಶಿಕ್ಷಕರಾದ ಸೌಮ್ಯ ಹಾಗೂ ತೀರ್ಥಕುಮಾರ್, ಅನಂತ್ ಆಚಾರ್ ಅವರ ಮಾರ್ಗದರ್ಶನಲ್ಲಿ ಇಡೀ ಊರಿನ ಮನೆ ಮುಂದಿನ ಗೋಡೆಗೆ ಬ್ಲಾಕ್ ಬೋರ್ಡ್ ಹಾಕಿದ್ದಾರೆ. ಶಿಕ್ಷಕರೇ ತಮ್ಮ ಹಣದಿಂದ ಬಣ್ಣ ತಂದು ಬಣ್ಣ ಹೊಡೆದಿದ್ದಾರೆ. ಕೆಲ ಮನೆಗಳಿಗೆ ಚಾರ್ಟ್ ಹಾಕಿದ್ದಾರೆ. ಸದ್ಯಕ್ಕೆ ಪ್ರೈಮರಿ ಸ್ಕೂಲ್ ನಡೆಯುತ್ತಿಲ್ಲ. ಆದರೆ ಪಾದಮನೆ ಗ್ರಾಮದಲ್ಲಿ ಬೆಳಗ್ಗೆ 10 ರಿಂದ ಸಂಜೆ 4.30ರ ತನಕ ಎಂದಿನಂತೆ ಶಾಲೆ ನಡೆಯುತ್ತದೆ. ಇಷ್ಟು ದಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಈಗ ಶಿಕ್ಷಕರೇ ಪ್ರತಿ ಮಗುವಿನ ಮನೆ ಬಾಗಿಲಿಗೆ ಬಂದು ಪಾಠ ಮಾಡುತ್ತಿದ್ದಾರೆ. ಮಕ್ಕಳು ಕೂಡ ಅಷ್ಟೆ ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ.

ವಿದ್ಯಾರ್ಥಿಯ ಬಳಿ ಬರೆಸುತ್ತಿರುವ ಶಿಕ್ಷಕಿ

ಭವಿಷ್ಯದ ಜವಾಬ್ದಾರಿ ಹೊತ್ತ ಶಿಕ್ಷಕರು
ಶಿಕ್ಷಕರ ಈ ನಡೆಗೆ ಕಾರಣ ಇಷ್ಟೆ. ವಿದ್ಯಾಗಮ ನಿಂತ ಮೇಲೆ ಮಕ್ಕಳು ಕೈಗೆ ಸಿಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಒಂದೆಡೆ ಸೇರಿ ಆಟವಾಡುತ್ತಿದ್ದರೆ, ಹುಡುಗರು ಕಾಡುಮೇಡು ಸುತ್ತುತ್ತಾ ಅಕ್ಕಪಕ್ಕದ ಕೆರೆಗೆ ಈಜಲು ಹೋಗುತ್ತಿದ್ದರು. ಮೀನು-ಏಡಿ ಹಿಡಿಯುತ್ತಿದ್ದರು. ಕೂಲಿಯನ್ನ ನಂಬಿಕೊಂಡಿರುವ ಗ್ರಾಮದ ಜನರಿಗೆ ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಕೂಲಿಗೆ ಹೋದರೆ ಮಕ್ಕಳದ್ದೇ ಚಿಂತೆಯಾಗಿತ್ತು. ಆದರೀಗ ಶಿಕ್ಷಕರ ಈ ನಡೆಯಿಂದ ಮಕ್ಕಳು ಎಲ್ಲೂ ಹೋಗುತ್ತಿಲ್ಲ. ಶಾಲೆಗೆ ಹೋಗುವಂತೆ ರೆಡಿಯಾಗಿ ಮನೆ ಬಾಗಿಲಲ್ಲಿ ಶಿಕ್ಷಕರ ದಾರಿ ಕಾಯುತ್ತಿದ್ದಾರೆ. ಬೆಳಗ್ಗೆ ಬರುವ ಶಿಕ್ಷಕರು ಸಂಜೆವರೆಗೂ ಹಳ್ಳಿಯಲ್ಲಿ ದಿನಕ್ಕೆ ಏಳೆಂಟು ರೌಂಡ್ ಹಾಕಿ ಮಕ್ಕಳಿಗೆ ಮನೆ ಬಾಗಿಲಲ್ಲೇ ಪಾಠ ಮಾಡುತ್ತಿದ್ದಾರೆ. ಈಗ ಹೆತ್ತವರು ನೆಮ್ಮದಿಯಾಗಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಂತೆ ಜಬಾವ್ದಾರಿ ಹೊತ್ತಿರುವ ಶಿಕ್ಷಕರ ತಂಡಕ್ಕೆ ಊರಿನ ಜನ ಕೂಡ ನಾವು ಋಣಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮನೆಯ ಹೊರಗೆ ಹಾಕಿರುವ ಚಾರ್ಟ್​ ಮೇಲೆ ಬರೆಯುತ್ತಿರುವ ವಿದ್ಯಾರ್ಥಿನಿ

ಮಕ್ಕಳ ಶಿಕ್ಷಣ ಹಾಳಾಗಬಾರದೆಂದು ಶಿಕ್ಷಕರೇ ಬಣ್ಣ ತಂದು ಮಕ್ಕಳ ಮನೆ ಗೋಡೆ ಮೇಲೆ ಬಣ್ಣ ಬಳಿದು ಭವಿಷ್ಯ ರೂಪಿಸುವಲ್ಲಿ ಹೆತ್ತವರಷ್ಟೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿಗೆ ಶಾಲೆಯಲ್ಲೇ ಶಿಕ್ಷಕರು ಪಾಠ ಮಾಡುವುದು ಕಷ್ಟ. ಹೀಗಿರುವಾಗ ಮಕ್ಕಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡುವ ಶಿಕ್ಷಕರ ನಡೆ ಎಲ್ಲರಿಗೂ ಮಾದರಿ.

ಇದನ್ನೂ ಓದಿ

ಅಜ್ಞಾತ ಸ್ಥಳದಲ್ಲಿದ್ದು ಬೆತ್ತಲೆ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುವತಿ ಬಗ್ಗೆ ನಾನೇಕೆ ಹೆದರಬೇಕು? ಎದುರಿಸ್ತೇನೆ- ರಮೇಶ್ ಜಾರಕಿಹೊಳಿ

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!