ಕಾಡುಪ್ರಾಣಿಗಳ ಭಯಕ್ಕೆ ಶಿಕ್ಷಣದಿಂದ ದೂರವಾಗುತ್ತಿರುವ ಮಕ್ಕಳು; ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ
ಮಕ್ಕಳಿಗೆ ಶಿಕ್ಷಣ ಒದಗಿಸಲು ಸಂಚಾರಿ ಶಾಲೆಗಳನ್ನು ತೆರೆಯಬೇಕು. ದುರ್ಗಮ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದ ಸ್ಥಳಗಳಲ್ಲಿ ಮುವಿಂಗ್ ಸ್ಕೂಲ್ ವ್ಯವಸ್ಥೆ ಕಲ್ಪಿಸಿ, ಆಗ ಮಾತ್ರ ಈ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಶಿಕ್ಷಣ ತಜ್ಞರಾದ ಶಂಕರ ಹಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ: ವಿದ್ಯಾವಂತರಾಗಬೇಕು, ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಅಂತೆಯೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿನ ಮಕ್ಕಳಿಗೂ ಇದೆ. ಆದರೆ ಓದುವ ಹಂಬಲಕ್ಕೆ ಕಾಡು ಪ್ರಾಣಿಗಳ ಭಯ ಅಡ್ಡಲಾಗಿದ್ದು, ಮನೆಯಿಂದ ಹೊರಬರಲೂ ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಚಿರತೆ, ಕರಡಿ ಮತ್ತು ಹುಲಿಯ ಕಾಟ ಹೆಚ್ಚಾಗಿದ್ದು, ಶಾಲೆಗಳಿಂದ ಮಕ್ಕಳು ವಂಚಿತರಾಗಿದ್ದರೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಲಘಟಗಿ ತಾಲೂಕಿನ ಗೌಳಿದಡ್ಡಿ, ಹಾವಲದ ಹಿಂಡಸಗೇರಿ, ದಿಂಬವಲ್ಲಿ, ಕನೋಲಿ, ಬೈಚ್ವಾಡ್ ಮತ್ತು ಶಿಂಗನ್‌ಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡುಪ್ರಾಣಿಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಸಾಕುಪ್ರಾಣಿಗಳನ್ನು ನುಂಗಿ ನೀರು ಕುಡಿಯುತ್ತಿವೆ. ಈಗ ಅತಿ ಹೆಚ್ಚು ಕಾಡು ಪ್ರಾಣಿಗಳ ಕಾಟ ಶುರುವಾಗಿದ್ದು, ಯಾವಾಗ ಯಾವ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ರಾಮು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಡುಪ್ರಾಣಿಗಳ ಭಯದಿಂದ ಶಾಲೆಗೆ ಹೋಗುವುದಕ್ಕೆ ಕಷ್ಟವಾಗಿದೆ. ಪರ್ಯಾಯ ವ್ಯವಸ್ಥೆಗಳನ್ನು ಮಾಡಿದರು ಕೂಡ ಕಲಿಕೆಗಾಗಿ ನಾವು ಕಷ್ಟಪಡಬೇಕಾಗಿದೆ. ಹೀಗಾಗಿ ಶಿಕ್ಷಣ ನೀಡುವ ದೃಷ್ಟಿಯಿಂದ ನಮ್ಮ ನೆರವಿಗೆ ನಿಲ್ಲಬೇಕು ಎಂದು ವಿದ್ಯಾರ್ಥಿನಿ ಶಕುಂತಲಾ ತಿಳಿಸಿದ್ದಾರೆ.
ಗೌಳಿದಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಮಾಧ್ಯಮಿಕ ಶಾಲೆಯ ಶಿಕ್ಷಣ ಪಡೆಯಲು ಗ್ರಾಮದಿಂದ 2-3ಕೀಲೋ ಮೀಟರ್ ದೂರ ನಡೆದುಕೊಂಡೇ ಹೋಗಬೇಕು. ಇವರಿಗೆ ಸೈಕಲ್ ಆಗಲಿ ಇನ್ನಿತರ ವ್ಯವಸ್ಥೆಯನ್ನಾಗಲಿ ಸರ್ಕಾರ ಮಾಡಿಲ್ಲ. ಹೆಣ್ಣು ಮಕ್ಕಳು ಕಾಡು ಮೃಗಗಳ ಸಂಚಾರದಿಂದ ಭಯಬೀತಗೋಂಡಿದ್ದಾರೆ. ಹೀಗಾಗಿ ಕಳೆದ 10ವರ್ಷದಿಂದ ಅದೇಷ್ಟೋ ಯುವತಿಯರು, ಹೈಸ್ಕೂಲ್ ಅಥವಾ ಕಾಲೇಜು ಕಟ್ಟೆ ಹತ್ತಿರುವುದೇ ಅಪರೂಪ ಎನ್ನುವಂತಾಗಿದೆ.
ಇಂತಹ ಸನ್ನಿವೇಶದಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸಲು ಸಂಚಾರಿ ಶಾಲೆಗಳನ್ನು ತೆರೆಯಬೇಕು. ದುರ್ಗಮ ರಸ್ತೆಯಲ್ಲಿ ಸಂಚಾರ ಸಾಧ್ಯವಾಗದ ಸ್ಥಳಗಳಲ್ಲಿ ಮುವಿಂಗ್ ಸ್ಕೂಲ್ ವ್ಯವಸ್ಥೆ ಕಲ್ಪಿಸಿ, ಆಗ ಮಾತ್ರ ಈ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಶಿಕ್ಷಣ ತಜ್ಞರಾದ ಶಂಕರ ಹಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.
ಈ ಗ್ರಾಮಗಳಿಗೆ ಬಸ್ ಸಂಚಾರವೇ ವಿರಳ. ಶಾಲಾ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಮಾಡಿದರೆ, ಇಲ್ಲಿನ ಹೆಣ್ಣು ಮಕ್ಕಳು ವಿದ್ಯಾವಂತರಾಗಲು ಸಾಧ್ಯವಿದೆ. ಇಲ್ಲಾ ಕಾಡುಪ್ರಾಣಿಗಳ ಭಯದಿಂದ ಒಂದು ತಲೆಮಾರಿನ ಮಕ್ಕಳೇಲ್ಲಾ ಶಿಕ್ಷಣದಿಂದ ವಂಚಿತರಾಗುವ ದಿನ ದೂರವಿಲ್ಲ.
ಇದನ್ನೂ ಓದಿ:
ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ