ಬೆಲೆ ಕುಸಿತದಿಂದಾಗಿ ಕಂಗಾಲಾದ ರೈತರು; ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ

ನಾವು ಬೆಲೆ ಕುಸಿತದಿಂದಾಗಿ ಸಂಕಷ್ಟದಲ್ಲಿದ್ದರೂ ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ತೆಂಗು ಬೆಳೆಗಾರರ ಬಗ್ಗೆ ಈವರೆಗೆ ತಲೆ ಕೆಡಿಸಿಕೊಂಡಿಲ್ಲ. ಯಾವುದೇ ಬೆಂಬಲ ಬೆಲೆ ಘೋಷಣೆ ಅಥವಾ ಪರಿಹಾರದ ಬಗ್ಗೆ ಯೋಚಿಸಿಲ್ಲ ಎಂದು ತೆಂಗು ಬೆಳೆಗಾರರಾದ ಉಜ್ಜನಿಸ್ವಾಮಿ ಹೇಳಿದ್ದಾರೆ.

ಬೆಲೆ ಕುಸಿತದಿಂದಾಗಿ ಕಂಗಾಲಾದ ರೈತರು; ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ
ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ

ಚಿತ್ರದುರ್ಗ : ಕೊರೊನಾ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಇದರಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ಲಾಕ್​ಡೌನ್​ನಿಂದಾಗಿ ವ್ಯಾಪಾರ, ವ್ಯವಹಾರ ನಿಂತಿದ್ದು, ದಿನಗೂಲಿಕಾರರು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸದ್ಯ ಇಂತಹದ್ದೇ ಪರಿಸ್ಥಿತಿ ಚಿತ್ರದುರ್ಗ ಜಿಲ್ಲೆಯ ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರದ್ದಾಗಿದೆ. ಜಮೀನಿನಲ್ಲಿ ಬೆವರು ಸುರಿಸಿ ಬೆಳೆದ ತೆಂಗು ಭರ್ಜರಿ ಬೆಳೆ ಬಂದಿದೆ. ಆದರೆ ಬೆಲೆ ಕುಸಿತದಿಂದಾಗಿ ತೆಂಗು ಬೆಳೆಗಾರರು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಕೋಟೆನಾಡು ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ತೆಂಗು ಬೆಳೆಯಲಾಗುತ್ತದೆ. ಸುಮಾರು 30ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಾಗಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಹೆಚ್ಚಾಗುತ್ತಿದ್ದು, ಲಾಕ್ ಡೌನ್ ಪರಿಣಾಮ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಮೊದಲು ಕ್ವಿಂಟಲ್​ಗೆ 43 ಸಾವಿರ ರೂಪಾಯಿ ವರೆಗೆ ಮಾರಾಟವಾಗುತ್ತಿದ್ದ ತೆಂಗು ಬೆಳೆ, ಈಗ 27 ಸಾವಿರಕ್ಕೆ ಕುಸಿದಿದೆ. ಹೀಗಾಗಿ, ರೈತರು ಕಂಗಾಲಾಗಿದ್ದು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ನಾವು ಬೆಲೆ ಕುಸಿತದಿಂದಾಗಿ ಸಂಕಷ್ಟದಲ್ಲಿದ್ದರೂ ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ತೆಂಗು ಬೆಳೆಗಾರರ ಬಗ್ಗೆ ಈವರೆಗೆ ತಲೆ ಕೆಡಿಸಿಕೊಂಡಿಲ್ಲ. ಯಾವುದೇ ಬೆಂಬಲ ಬೆಲೆ ಘೋಷಣೆ ಅಥವಾ ಪರಿಹಾರದ ಬಗ್ಗೆ ಯೋಚಿಸಿಲ್ಲ ಎಂದು ತೆಂಗು ಬೆಳೆಗಾರರಾದ ಉಜ್ಜನಿಸ್ವಾಮಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಕೇಳಿದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆಂದಷ್ಟೇ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಕೊರೊನಾ ಸಂದಿಗ್ಧ ಸಮಯದಲ್ಲಿ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತ, ಅಸಾಗಣೆ ವ್ಯವಸ್ಥೆ ಹಾಗೂ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ, ಸರ್ಕಾರ ಈ ಬಗ್ಗೆ ಅದಷ್ಟು ಬೇಗ ಕ್ರಮಕೈಗೊಂಡು, ರೈತರ ನೆರವಿಗೆ ಧಾವಿಸಬೇಕಿದೆ.

ಇದನ್ನೂ ಓದಿ:

ಲಾಕ್​ಡೌನ್​ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ

ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್​ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು