ಗುಬ್ಬಿ ಉಪಟಳದಿಂದ ಮೆಕ್ಕೆಜೋಳ ಉಳಿಸಿಕೊಳ್ಳಲು ಕೋಟೆನಾಡು ರೈತನಿಂದ ವಿನೂತನ ಪ್ರಯೋಗ

ಕೋಲೊಂದಕ್ಕೆ ತಗಡಿನ ಡಬ್ಬಗಳನ್ನು ಕಟ್ಟಿದ್ದು, ಒಳಗೆ ಸಣ್ಣ ಕಲ್ಲುಗಳನ್ನು ಹಾಕಿದ್ದಾರೆ. ತುದಿಗೆ ಕೆಂಪು ಬಣ್ಣದ ಬಟ್ಟೆಯೊಂದನ್ನು ಕಟ್ಟಿದ್ದಾರೆ. ನಂತರ ನಂದಿಕೋಲು ಮಾದರಿಯ ಕೋಲನ್ನು ಹಿಡಿದು ಗುಬ್ಬಿಗಳ ಚಿಲಿಪಿಲಿ ಗಾನದೊಂದಿಗೆ ದೊಡ್ಡ ಪಾಲಯ್ಯ ಕುಣಿಯ ತೊಡಗಿದ್ದಾರೆ. ಡಬ್ಬಗಳು ಸದ್ದು ಮಾಡಿದ ಕಾರಣ ಗುಬ್ಬಿಗಳು ಹಾರಿ ಹೋಗತೊಡಗಿವೆ.

  • ಬಸವರಾಜ ಮುದನೂರ್
  • Published On - 14:36 PM, 3 Apr 2021
ಗುಬ್ಬಿ ಉಪಟಳದಿಂದ ಮೆಕ್ಕೆಜೋಳ ಉಳಿಸಿಕೊಳ್ಳಲು ಕೋಟೆನಾಡು ರೈತನಿಂದ ವಿನೂತನ ಪ್ರಯೋಗ
ರೈತ ದೊಡ್ಡ ಪಾಲಯ್ಯ ನಂದಿಕೋಲು ಹಿಡಿದು ಗುಬ್ಬಿ ಓಡಿಸುತ್ತಿರುವ ದೃಶ್ಯ

ಚಿತ್ರದುರ್ಗ: ಕೃಷಿ ಕಾಯಕದಿಂದ ನಿರೀಕ್ಷಿತ ಲಾಭ ಲಭಿಸದ ಕಾರಣ ಅನೇಕರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಗ್ರಾಮಗಳನ್ನೇ ತೊರೆದು ಪಟ್ಟಣ ಸೇರುತ್ತಿದ್ದಾರೆ. ಕೋಟೆನಾಡಿನಲ್ಲೋರ್ವ ರೈತ ಮಾತ್ರ ಗುಬ್ಬಿಗಳ ಕಾಟದಿಂದ ಬೇಸರಿಸಿಕೊಳ್ಳುವ ಬದಲು ನಂದಿಕೋಲು ಕುಣಿತದ ಮಾದರಿ ಮೂಲಕ ಪಕ್ಷಿಗಳನ್ನು ಓಡಿಸುತ್ತ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ರೈತ ದೊಡ್ಡ ಪಾಲಯ್ಯಗೆ ಸೇರಿದ ಮುಕ್ಕಾಲು ಎಕರೆ ಜಮೀನಿದೆ. ಅರವತ್ತರ ಹರೆಯದ ರೈತನಿಗೆ ಕೃಷಿಯೇ ಬದುಕಾಗಿದ್ದು ತನ್ನ ಪಾಲಿನ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದಾರೆ. ರೈತನ ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲು ಸಹ ಬಂದಿದೆ. ಇದೇ ವೇಳೆ ಗುಬ್ಬಿಗಳ ಕಾಟ ಹೆಚ್ಚಾಗಿದ್ದು ಗುಬ್ಬಿಗಳ ದಂಡು ಜೋಳದ ಹೊಲವನ್ನೇ ಖಾಲಿ ಮಾಡುತ್ತ ಸಾಗಿತ್ತು.

ಗುಬ್ಬಿಗಳ ಬೆನ್ನತ್ತಿ ಓಡಿಸುವ ಪಯತ್ನ ಮಾಡಿದ ರೈತ ಹೈರಾಣಾಗಿದ್ದಾರೆ. ಏನೇ ಮಾಡಿದರೂ ಗುಬ್ಬಿಗಳ ದಾಳಿ ಮಾತ್ರ ಕಡಿಮೆ ಆಗಿಲ್ಲ. ಬದಲಾಗಿ ದಿನೇ ದಿನೇ ಗುಬ್ಬಿಗಳ ದಂಡು ಹೆಚ್ಚಾಗುತ್ತಲೇ ಸಾಗಿತ್ತು. ಗುಬ್ಬಿಗಳಿಗೆ ಕಲ್ಲು ಹೊಡೆದು ಓಡಿಸಲೂ ಮನಸ್ಸಿಲ್ಲದ ರೈತ ಬೇಸಿಗೆಯಲ್ಲಿ ಆಹಾರ ಸಿಗದೆ ಕಂಗಾಲಾದ ಮೂಕ ಪಕ್ಷಿಗಳು ತಿಂದರೆ ತಿನ್ನಲಿ. ನನ್ನ ಬದುಕಿಗೊಂದಷ್ಟು ಉಳಿಸಲಿ ಎಂದುಕೊಂಡು ಸುಮ್ಮನಾಗಿದ್ದಾರೆ. ಕೊನೆಗೆ ಗುಬ್ಬಿಗಳ ಚಿಲಿಪಿಲಿ ಗಾನ ನಿತ್ಯ ಆಲಿಸಿದ ರೈತ ನಂದಿಕೋಲು ಕುಣಿತವನ್ನು ನೆನಪಿಸಿಕೊಂಡಿದ್ದಾರೆ.

maize farmer

ಮೆಕ್ಕೆಜೋಳ ತಿನ್ನಲು ಬರುವ ಗುಬ್ಬಿಗಳನ್ನು ಓಡಿಸುತ್ತಿರುವ ಚಿತ್ರಣ

ಕೆಲ ದಿನಗಳ ಹಿಂದಷ್ಟೇ ಜಮೀನಿಗೆ ಬಂದವರೆ ಉದ್ದನೆಯ ಕೋಲೊಂದಕ್ಕೆ ಕೈಗೆ ಸಿಕ್ಕ ಬಾಟಲಿ, ತಗಡಿನ ಡಬ್ಬಗಳನ್ನು ಕಟ್ಟಿದ್ದು, ಒಳಗೆ ಸಣ್ಣ ಕಲ್ಲುಗಳನ್ನು ಹಾಕಿದ್ದಾರೆ. ತುದಿಗೆ ಕೆಂಪು ಬಣ್ಣದ ಬಟ್ಟೆಯೊಂದನ್ನು ಆ ಕೋಲಿಗೆ ಕಟ್ಟಿದ್ದಾರೆ. ನಂತರ ನಂದಿಕೋಲು ಮಾದರಿಯ ಕೋಲನ್ನು ಹಿಡಿದು ಗುಬ್ಬಿಗಳ ಚಿಲಿಪಿಲಿ ಗಾನದೊಂದಿಗೆ ದೊಡ್ಡ ಪಾಲಯ್ಯ ಕುಣಿಯ ತೊಡಗಿದ್ದಾರೆ. ಕೋಲಿಗೆ ಕಟ್ಟಿದ ಡಬ್ಬಗಳು ಸದ್ದು ಮಾಡಿದ ಕಾರಣ ಗುಬ್ಬಿಗಳು ಹಾರಿ ಹೋಗತೊಡಗಿವೆ.

ಒಂದು ಕಡೆ ದೊಡ್ಡ ಪಾಲಯ್ಯ ಅವರಿಗೆ ನಂದಿಕೋಲು ಮಾದರಿ ಕುಣಿತ ಹಳೇ ನೆನಪುಗಳನ್ನು ಮರುಕಳಿಸಿದೆ. ಇನ್ನೊಂದು ಕಡೆ ಗುಬ್ಬಿ ಕಾಟವನ್ನು ತಪ್ಪಿಸಿದೆ. ಜೋಳದ ಬೆಳೆಗೆ ಎದುರಾಗಿದ್ದ ಸಂಕಟ ದೂರಾಗಿ ಕೃಷಿ ಖುಷಿ ಮೂಡಿಸಿದೆ. ರೈತ ನಿತ್ಯ ಬೆಳಿಗ್ಗೆ ಜಮೀನಿಗೆ ಬಂದವರೆ ಮೊದಲು ಬೆಳೆಗೆ ನೀರು ಹರಿಸುವುದು. ಬಳಿಕ ನಂದಿಕೋಲು ಮಾದರಿ ಕುಣಿತ ಮಾಡುವುನ್ನು ರೂಢಿಸಿಕೊಂಡಿದ್ದಾರೆ. ಆ ಮೂಲಕ ಗುಬ್ಬಿಗಳ ಕಾಟಕ್ಕೆ ಕಡಿವಾಣ ಬಿದ್ದಿದ್ದು, ರೈತ ದೊಡ್ಡ ಪಾಲಯ್ಯ ಸದ್ಯ ಕೃಷಿ ಬದುಕನ್ನು ಆನಂದಿಸುತ್ತಿದ್ದಾರೆ.

maize

ಮೆಕ್ಕೆಜೋಳ ಹೊಲದ ದೃಶ್ಯ

ಗುಬ್ಬಿಗಳ ಕಾಟದಿಂದ ಈ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣ ಆಗಿತ್ತು. ಗುಬ್ಬಿಗಳನ್ನು ಓಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಗುಬ್ಬಿಗಳ ಚಿಲಿಪಿಲಿ ಗಾನದಿಂದಲೇ ನಂದಿಕೋಲು ಕುಣಿತದ ನೆನಪಾಗಿ ಒಂದು ಉಪಾಯ ಹೊಳೆದಿದ್ದು, ಸದ್ಯ ಗುಬ್ಬಿಗಳ ಕಾಟ ಕಡಿಮೆ ಆಗಿದೆ. ಅಲ್ಪಸ್ವಲ್ಪ ಬೆಳೆ ಪ್ರಾಣಿ ಪಕ್ಷಿಗಳ ಪಾಲಾದರೇ ತೊಂದರೆ ಇಲ್ಲ. ನಮ್ಮ ಬದುಕಿಗಾಗುವಷ್ಟು ನಮಗೆ ದಕ್ಕಿದರೆ ಸಾಕು ಎಂದು ರೈತ ದೊಡ್ಡ ಪಾಲಯ್ಯ ಹೇಳಿದ್ದಾರೆ.

(ವರದಿ: ಬಸವರಾಜ ಮುದನೂರ್ – 9980914116)

ಇದನ್ನೂ ಓದಿ: ಮೆಕ್ಕೆಜೋಳದ ಕಣಕ್ಕೆ ಬೆಂಕಿ: ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಹಾವೇರಿ ರೈತರಿಗೆ ಶಾಕ್

( Innovative experiment by farmer to save maize from sparrows in Chitradurga)