ಕೋಟೆನಾಡಿನಲ್ಲಿ ಶ್ರೀರಾಮನ ಹೆಜ್ಜೆ ಗುರುತು; ಇಲ್ಲಿದೆ ರಾಮನೇ ಪ್ರತಿಷ್ಠಾಪನೆ ಮಾಡಿದ ಶಿವಲಿಂಗ
ರಾಮಾಯಣ ಮತ್ತು ಪುರಾಣ ಪುಣ್ಯ ಕಥೆಗಳಿಂದ ತಿಳಿದು ಬರುವ ಈ ವಿಶೇಷ ಕಥನಕ್ಕೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮದ ಬಳಿಯ ಜಟ್ಟಂಗಿ ರಾಮೇಶ್ವರ ಬೆಟ್ಟ ಸಾಕ್ಷಿಯಾಗಿದೆ. ಇಲ್ಲಿ ಶ್ರೀರಾಮನೇ ಖುದ್ದಾಗಿ ಶಿವಲಿಂಗ ಸ್ಥಾಪನೆ ಮಾಡುತ್ತಾನೆ. ಅಲ್ಲದೆ ಜಟಾಯು ಕೊನೆಯುಸಿರೆಳೆದ ಸ್ಥಳದಲ್ಲಿ ಜಟಾಯು ಸಮಾಧಿ ನಿರ್ಮಾಣ ಆಗುತ್ತದೆ ಎಂದು ರಾಮಾಯಣದಿಂದ ತಿಳಿದು ಬರುತ್ತದೆ.
ಚಿತ್ರದುರ್ಗ, ಜ.13: ಅಯೋಧ್ಯೆಯ ರಾಮಮಂದಿರದಲ್ಲಿ ಇದೇ ಜನವರಿ 22ಕ್ಕೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್ ಆಗಿದೆ (Ayodhya Ram Mandir). ಮತ್ತೊಂದೆಡೆ ಕೋಟೆನಾಡಿನಲ್ಲಿ (Chitradurga) ಖುದ್ದು ಶ್ರೀರಾಮನೇ ಶಿವಲಿಂಗಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದನೆಂಬ ಪ್ರತೀತಿಯಿರುವ ಐತಿಹಾಸಿಕ ದೇಗುಲಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಹಾಗಾದ್ರೆ ಯಾವುದು ಆ ದೇಗುಲ, ಏನು ಕಥೆ? ಶ್ರೀರಾಮ ಕೋಟೆನಾಡಿಗೆ ಬಂದಿದ್ದೇಕೆ? ಜಟಾಯು ಕದನದ ಕತೆಯೇನು? ಎಂದು ತಿಳಿದುಕೊಳ್ಳಲು ಈ ಸುದ್ದಿ ಓದಿ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮ. ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಗ್ರಾಮ ಬಳ್ಳಾರಿಯಿಂದ ಕೇವಲ 20 ಕಿ.ಮೀಟರ್ ದೂರದಲ್ಲಿರುವ ರಾಂಪುರ ಗ್ರಾಮದ ಸಮೀಪದಲ್ಲಿದೆ. ರಾಮಸಾಗರ ಗ್ರಾಮದ ಬಳಿ ಎರಡು ಐತಿಹಾಸಿಕ ಹಿನ್ನೆಲೆಯುಳ್ಳ ಕಡಿದಾದ ಬೃಹತ್ ಬೆಟ್ಟಗಳಿವೆ. ಅದೇ ಅಪರೂಪದ ಬೆಟ್ಟಗಳು ರಾಮಾಯಣದ ಕಥೆಗೆ ಸಾಕ್ಷಿಯಾಗಿವೆ. ಈ ಬೆಟ್ಟಕ್ಕೆ ರಾವಣ ಬಂದಿದ್ದನು. ರಾಮ, ಲಕ್ಷ್ಮಣ, ಸೀತೆ ಕೂಡ ಬಂದಿದ್ದರೆಂಬ ಪ್ರತೀತಿಯಿದೆ. ಪುರಾಣ, ಪುಣ್ಯ ಕಥೆಗಳ ಮೂಲಕ ಈ ಬೆಟ್ಟಗಳ ಕಥೆ ಜನಜನಿತವಾಗಿದೆ. ಅಷ್ಟೇ ಅಲ್ಲ, ರಾಮ-ಲಕ್ಷ್ಮಣ, ಸೀತೆ ಮತ್ತು ರಾವಣ ಬಂದಿದ್ದರೆಂಬುದಕ್ಕೆ ಇಂದಿಗೂ ಕೆಲ ಕುರುಹುಗಳಿವೆ.
ಜನಜನಿತವಾಗಿರುವ ಕಥೆಯ ಪ್ರಕಾರ, ರಾಮಾಯಣದಲ್ಲಿ ಸೀತಾಪಹರಣ ಎಂಬುದು ಪ್ರಮುಖ ಘಟ್ಟವಾಗಿದೆ. ರಾಮಾಯಣದಲ್ಲಿ ಅರಣ್ಯ ಕಾಂಡ 14ರಲ್ಲಿ ಸೀತಾಪಹರಣದ ಉಲ್ಲೇಖವಿದೆ. ರಾಮ ಲಕ್ಷ್ಮಣ, ಸೀತಾದೇವಿ ವನವಾಸದಲ್ಲಿದ್ದಾಗ ಕುಠೀರವೊಂದರಲ್ಲಿ ತಂಗಿರುತ್ತಾರೆ. ಆಗ (ಸುಂದರ ಜಿಂಕೆ) ಮರೀಚಿಕೆಯೊಂದನ್ನು ಕಂಡು ಸೀತೆ ಬೆರಗಾಗುತ್ತಾಳೆ. ಆ ಜಿಂಕೆ ಬೇಕೆಂದು ಆಸೆಪಟ್ಟು ಶ್ರೀರಾಮನಿಗೆ ಹೇಳುತ್ತಾಳೆ. ಆಗ ಶ್ರೀರಾಮ ಆ ಜಿಂಕೆಯನ್ನು ಹಿಡಿದು ತರಲು ತೆರಳುತ್ತಾನೆ. ಆದರೆ ರಾವಣ ಮರೀಚಿಕೆಯಾಗಿ ಬಂದಿದ್ದು ರಾಮನನ್ನು ಬಹುದೂರಕ್ಕೆ ತೆರಳುವಂತೆ ಮಾಡಿರುತ್ತಾನೆ. ತುಂಬಾ ಹೊತ್ತಾದರೂ ಶ್ರೀರಾಮ ಹಿಂದಿರುಗದೇ ಇರುವುದನ್ನು ಗಮನಿಸಿ ಲಕ್ಷ್ಮಣನು ಶ್ರೀರಾಮ ಹೋದ ದಾರಿಯಲ್ಲಿ ಹುಡುಕಿಕೊಂಡು ಹೋಗಲು ನಿರ್ಧರಿಸುತ್ತಾನೆ. ಆಗ ಕುಟೀರದಲ್ಲಿದ್ದ ಸೀತೆಗೆ ಹೇಳಿ ಲಕ್ಷಣ ರೇಖೆಯನ್ನು ಬರೆದು ಆ ರೇಖೆ ದಾಟಿ ಹೊರಬಾರದೆಂದು ಸೀತೆಗೆ ಹೇಳಿರುತ್ತಾನೆ.
ಆದರೆ, ಸನ್ಯಾಸಿ ವೇಷದಲ್ಲಿ ಭಿಕ್ಷೆಗೆ ಬಂದ ರಾವಣನಿಗೆ ಲಕ್ಷ್ಮಣ ರೇಖೆ ದಾಟಲಾಗುವುದಿಲ್ಲ. ಆಗ ಸನ್ಯಾಸಿಗೆ ಲಕ್ಷ್ಮಣರೇಖೆ ದಾಟಲಾಗುತ್ತಿಲ್ಲ ಪಾಪ ಎಂದು ಭಾವಿಸಿ ಸೀತೆ ಭಿಕ್ಷೆ ನೀಡಲು ಹೋಗುತ್ತಾಳೆ. ಆದರೆ ಸೀತೆ ಸಮೀಪಿಸಿ ಭಿಕ್ಷೆ ಹಾಕುತ್ತಿದ್ದಂತೆ ರಾವಣನು ಬೃಹದಾಕಾರವನ್ನು ತಾಳಿ ತನ್ನ ದಶಕಂಠ, ನಿಜಮುಖವನ್ನು ತೋರಿ ಅಟ್ಟಹಾಸ ಮೆರೆಯುತ್ತಾನೆ. ಸೀತೆಯ ಕೇಶವೆಳೆದು ಆಕಾಶದತ್ತ ಜಿಗಿಯುತ್ತಾನೆ. ಪುಷ್ಪಕವಿಮಾನದಲ್ಲಿ ಸೀತೆಯನ್ನು ಅಪಹರಿಸಿ ಲಂಕೆಯೆಡೆಗೆ ಸಾಗುತ್ತಾನೆ. ರಾವಣನಿಂದ ಅಪಹರಣಕ್ಕೊಳಗಾಗಿದ್ದು ಅರಿತ ಸೀತೆ ಆಕ್ರಂದಿಸುತ್ತಾಳೆ. ಮತ್ತೊಮ್ಮೆ ರಾಮನನ್ನು ನೆನೆದು ರಾಮಜಪ ಮಾಡುತ್ತಿರುತ್ತಾಳೆ. ರಾವಣ ಮಾತ್ರ ಸೀತೆಯ ಅಪಹರಣದ ಅಟ್ಟಹಾಸದಿ ಬೀಗುತ್ತಿರುತ್ತಾನೆ. ಆಗ ಸೀತೆಯ ಆಕ್ರಂದನ, ರಾಮನಾಮ ಸ್ಮರಣೆ ಆಲಿಸಿದ ಜಟಾಯು ರಾವಣನ ಪುಷ್ಪಕ ವಿಮಾನಕ್ಕೆ ಅಡ್ಡಗಟ್ಟುತ್ತದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಯಲ್ಲೇ ಮುನ್ನಲೆಗೆ ಬಂದ ರಾಮನಗರ ರಾಮಮಂದಿರ, ಬಿಜೆಪಿಗೆ ಟಾಂಗ್
ಹಿಂದೊಮ್ಮೆ ದಂಡಕಾರಣ್ಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಜಟಾಯುಗೆ ಶ್ರೀರಾಮನಿಂದ ಚೇತರಿಕೆ ಕಂಡಿರುತ್ತದೆ. ಅಲ್ಲದೆ ಜಟಾಯು ತಾನು ದಶರಥನ ಬಾಲಮಿತ್ರ ಅಗತ್ಯಬಿದ್ದಾಗ ನೆನೆಯುವಂತೆ ಹೇಳಿರುತ್ತದೆ. ರಾಮನಾಮ ಕೇಳಿದಾಕ್ಷಣ ಸೀತೆ ಸಂಕಷ್ಟದಲ್ಲಿರುವುದು ಕಂಡು ಜಟಾಯು ರಾವಣನ ಮೇಲೆ ದಾಳಿ ನಡೆಸುತ್ತದೆ. ತನ್ನ ಉಗುರುಗಳಿಂದ ರಾವಣನನ್ನು ಪರಚಿ ಗಾಯಗೊಳಿಸುತ್ತದೆ. ರಾವಣನು ಜಟಾಯು ಮೇಲೆ ಅನೇಕ ಬಾಣ ಪ್ರಯೋಗಿಸುತ್ತಾನೆ. ಜಟಾಯು ತನ್ನ ಪೂರ್ಣ ಸಾಮರ್ಥ ಬಳಸಿ ರಾವಣನ ಧನಸ್ಸು ಮುರಿದು ಹಾಕುತ್ತದೆ. ಪುಷ್ಪಕ ವಿಮಾನ ಸಮ ತೋಲನ ಕಳೆದುಕೊಳ್ಳುತ್ತದೆ. ಆಗ ಜಟಾಯು ಸೀತೆಯನ್ನು ಅವಚಿಕೊಂಡು ನೆಲಕ್ಕೆ ಧುಮುಕುತ್ತದೆ. ರಾವಣನೂ ಭುವಿಗಿಳಿದು ದಿವ್ಯಾಸ್ತ್ರಗಳನ್ನು ಬಳಸಿ ಜಟಾಯುವಿನ ರೆಕ್ಕೆ ಕತ್ತರಿಸಿ ಹಾಕುತ್ತಾನೆ. ಸೀತೆ ಜಟಾಯು ಅಪ್ಪಿಕೊಂಡು ಅಳತೊಡಗುತ್ತಾಳೆ. ರಾವಣ ಉರಗಾಸ್ತ್ರವನ್ನು ಬಳಸಿ ಸೀತೆಯನ್ನು ಮತ್ತೆ ಪುಷ್ಪಕವಿಮಾನಕ್ಕೆ ಹೊತ್ತೊಯ್ದು ಶ್ರೀಲಂಕೆ ಕಡೆಗೆ ತೆರಳುತ್ತಾನೆ.
ಜಟಾಯು ಮಾತಿನಂತೆ ಶಿವಲಿಂಗ ಸ್ಥಾಪಿಸಿದ ರಾಮ
ಆದರೆ, ಜಟಾಯು ಪಕ್ಷಿ ಮಾತ್ರ ರಾಮನಾಮ ಸ್ಮರಿಸುತ್ತ ಜೀವ ಹಿಡಿದುಕೊಂಡಿತ್ತು. ರಾಮ -ಲಕ್ಷ್ಮಣ, ಆಂಜನೇಯ ಅವರೆಲ್ಲಾ ಸೀತೆಯನ್ನು ಹುಡುಕಿಕೊಂಡು ಬಂದಾಗ ಜಟಾಯು ರಾಮನಾಮ ಸ್ಮರಣೆ ಕೇಳಿ ಬರುತ್ತಾರೆ. ಜಟಾಯುಗೆ ಶ್ರೀರಾಮನೇ ಕೊನೆಯದಾಗಿ ಗುಟುಕು ನೀರು ಹಾಕುತ್ತಾನೆ. ಆಗ ಜಟಾಯು ಪಕ್ಷಿಯೇ ಮಾಹಿತಿಯನ್ನು ರಾಮನಿಗೆ ನೀಡುತ್ತದೆ. ಸೀತೆಯನ್ನು ಲಂಕೆಯ ರಾವಣನು ಪುಷ್ಪಕವಿಮಾನದಲ್ಲಿ ಅಪಹರಿಸಿಕೊಂಡು ಹೋಗಿದ್ದಾನೆ ಎಂಬುದಾಗಿ ಹೇಳುತ್ತದೆ. ಅಂತೆಯೇ ಈ ಸ್ಥಳದಲ್ಲಿ ಶಿವಲಿಂಗು ಸ್ಥಾಪನೆ ಮಾಡಬೇಕೆಂದು ರಾಮನಲ್ಲಿ ಕೋರಿಕೆ ಸಲ್ಲಿಸುತ್ತದೆ. ಆಗ ಶ್ರೀರಾಮನೇ ಖುದ್ದಾಗಿ ಶಿವಲಿಂಗ ಸ್ಥಾಪನೆ ಮಾಡುತ್ತಾನೆ. ಅಲ್ಲದೆ ಜಟಾಯು ಕೊನೆಯುಸಿರೆಳೆದ ಸ್ಥಳದಲ್ಲಿ ಜಟಾಯು ಸಮಾಧಿ ನಿರ್ಮಾಣ ಆಗುತ್ತದೆ ಎಂದು ರಾಮಾಯಣದಿಂದ ತಿಳಿದು ಬರುತ್ತದೆ.
ರಾಮಾಯಣ ಮತ್ತು ಪುರಾಣ ಪುಣ್ಯ ಕಥೆಗಳಿಂದ ತಿಳಿದು ಬರುವ ಈ ವಿಶೇಷ ಕಥನಕ್ಕೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮದ ಬಳಿಯ ಜಟ್ಟಂಗಿ ರಾಮೇಶ್ವರ ಬೆಟ್ಟ ಸಾಕ್ಷಿಯಾಗಿದೆ. ಸಮುದ್ರ ಮಟ್ಟದಿಂದ 3469 ಅಡಿ ಎತ್ತರದಲ್ಲಿ ಎರಡು ಬೃಹತ್ ಆಕಾರಾದ ಕಡಿದಾದ ಬೆಟ್ಟಗಳಿವೆ. ಬೆಟ್ಟಗಳಿಗೆ ನೂರಾರು ವರ್ಷಗಳಿಂದ ಜಟಾಯು ಪರ್ವತ ಎಂದೇ ಕರೆಯಲಾಗುತ್ತದೆ. ಒಂದು ಬೆಟ್ಟದ ತುತ್ತ ತುದಿಯಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಸಮಾಧಿಯಿದ್ದು ಜಟಾಯು ಸಮಾಧಿ ಎಂದೇ ಕರೆಯಲಾಗುತ್ತದೆ. ಜಟಾಯು ಸಮಾಧಿ ಕೆಳಗೆ ಗುಹೆ ಆಕಾರದಲ್ಲಿರುವ ರಾಮೇಶ್ವರ ದೇಗುಲವಿದೆ.
ಜಟಾಯು ಸಮಾಧಿಯಿರುವ ಬೆಟ್ಟದ ಎದುರಿನ ಮತ್ತೊಂದು ಬೆಟ್ಟದಲ್ಲಿ 108 ಲಿಂಗಗಳಿವೆ. ಜಟಂಗಿ ರಾಮೇಶ್ವರ ದೇಗುಲವಿದೆ. ಜಟಾಯು ಆಶಯದಂತೆ ಶ್ರೀರಾಮನೇ ಶಿವಲಿಂಗ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದನೆಂಬ ನಂಬಿಕೆಯಿದೆ. ಕಾಶಿಯಿಂದ ಶಿವಲಿಂಗ ತರಲು ಶ್ರೀರಾಮನು ಭಕ್ತ ಆಂಜನೇಯಗೆ ಸೂಚನೆ ನಿಡುತ್ತಾನೆ. ಆದರೆ, ಆಂಜನೇಯ ಶಿವಲಿಂಗ ತರುವುದು ತಡವಾಗುತ್ತದೆ. ಹೀಗಾಗಿ, ಇದೇ ಭಾಗದಲ್ಲಿ ಸಿಕ್ಕ ಉದ್ಭವಲಿಂಗಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಬಳಿಕ ಆಂಜನೇಯ ತಂದ ಲಿಂಗವನ್ನು ಪ್ರತಿಷ್ಠಾಪಿಸಿದ ಬಳಿಕ 108 ಲಿಂಗಗಳು ಇಲ್ಲಿ ಪ್ರತಿಷ್ಠಾಪನೆ ಆಗಿವೆ ಎಂಬ ಪ್ರತೀತಿಯಿದೆ. ದೇಗುಲದಲ್ಲಿ ನಂದಿ ವಿಗ್ರಹ, ಎದುರು ಬೃಹತ್ ಆಕಾರದ ದೀಪದ ಕಂಬವಿದ್ದು ಶಿಲೆಯಲ್ಲೇ ನಿರ್ಮಾಣ ಆಗಿರುವ ಅಪರೂಪದ ದೇಗುಲವಿದೆ. ಅಂತೆಯೇ ಸುತ್ತಲೂ ಹತ್ತಾರು ಪುಟ್ಟ ಪುಟ್ಟ ದೇಗುಲಗಳಿವೆ. ಗಣೇಶ, ಆಂಜನೇಯ, ವೀರಭದ್ರ, ಮಹಿಷ ಮರ್ದಿನಿ, ಸೂರ್ಯ, ಕೇದಾರೇಶ್ವರ ದೇಗುಲ, ಸೋಮೇಶ್ವರ ದೇಗುಲ, ಓಂಕಾರೇಶ್ವರ, ಪಂಪಾಪತಿ ದೇವಾಲಯ, ತ್ರಿಯಂಬಕೇಶ್ವರ, ಪರಶುರಾಮ, ಸಪ್ತಮಾತೃಕೆ, ಜನಾರ್ಧನ, ಚಂದ್ರಮೌಳೀಶ್ವರ, ಮಹಾಬಲೇಶ್ವರ, ಆರ್ಕೇಶ್ವರ, ಕಾಲಬೈರವ, ಜಂಬುಕೇಶ್ವರ, ಚಂಡಿಕೇಶ್ವರ, ಕಾಶೀಪುರಾಧೀಶ್ವರ ಸೇರಿದಂತೆ ಅನೇಕ ದೇಗುಲಗಳು, ಮೂರ್ತಿಗಳು, ಶಿವಲಿಂಗುಗಳನ್ನೂ ಇಲ್ಲಿ ಸ್ಥಾಪಿಸಲಾಗಿದೆ.
ಗಂಡುಗಲಿ ಕುಮಾರ ರಾಮನಿಂದ ದೇಗುಲ ಅಭಿವೃದ್ಧಿ ಕಾರ್ಯ
ಸೀತಾ ದೋಣಿ, ಏಕಾಂತ ತೀರ್ಥ ಸೇರಿದಂತೆ ಅನೇಕ ಜಲಮೂಲಗಳು, ವೀರಗಲ್ಲು, ಮಾಸ್ತಿಗಲ್ಲುಗಳು ಇತರೆ ಶಿಲ್ಪಗಳೂ ಇವೆ. ಅಶೋಕನ ಶಿಲಾ ಶಾಸನವೂ ಸಹ ಈ ಬೆಟ್ಟದಲ್ಲಿದೆ. ಪುಟ್ಟ ಕೋಟೆಯೂ ನಿರ್ಮಾಣ ಆಗಿದ್ದು ಗಂಡುಗಲಿ ಕುಮಾರರಾಮನ ಗರಡಿ ಮನೆ ಇತ್ತೆನ್ನಲಾಗುತ್ತದೆ. ಇತಿಹಾಸದಲ್ಲಿ ವಿಜಯನಗರದ ಸಂಸ್ಥಾಪಕ ಎಂದೇ ಕರೆಸಿಕೊಳ್ಳುವ ಗಂಡುಗಲಿ ಕುಮಾರ ರಾಮನ ಮನೆ ದೇವರು ಈ ಜಟಂಗಿ ರಾಮೇಶ್ವರ. ಕುಮಾರರಾಮನು ಕಪಿಲ ರಾಜ ಮತ್ತು ಹರಿಹರದೇವಿಯ ಪುತ್ರನಾಗಿದ್ದು ಇದೇ ಜಟಂಗಿ ರಾಮೇಶ್ವರನ ವರಪುತ್ರ ಎಂದು ಹೇಳಲಾಗುತ್ತದೆ. ಗಂಡುಗಲಿ ಕುಮಾರರಾಮ ಜಟಂಗಿ ರಾಮೇಶ್ವರ ದೇಗುಲದ ಪರಮ ಭಕ್ತನಾಗಿದ್ದನು. ಈ ದೇಗುಲ ಅಭಿವೃದ್ಧಿಪಡಿಸಲೂ ಶ್ರಮಿಸಿದ್ದನು ಎನ್ನಲಾಗಿದೆ.
ಇನ್ನು ಅಯೋಧ್ಯೆಯ ರಾಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ, ರಾಮ ಮಂದಿರ ಲೋಕಾರ್ಪಣೆಗೆ ಜನವರಿ 22ರ ಮುಹೂರ್ತ ಫಿಕ್ಸ್ ಆಗಿರುವ ಸಂದರ್ಭದಲ್ಲಿ ಜಟಂಗಿ ರಾಮೇಶ್ವರ ದೇಗುಲ ನಾಡಿನ ಭಕ್ತರ ಗಮನ ಸೆಳೆಯುತ್ತಿದೆ. ಖುದ್ದು ಶ್ರೀರಾಮನೇ ಈ ಬೆಟ್ಟದಲ್ಲಿ ಶಿವಲಿಂಗುವಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದನೆಂಬ ನಂಬಿಕೆಯಿದ್ದು ಭಕ್ತರನ್ನು ಸೆಳೆಯುತ್ತಿದೆ. ಜಟಾಯು ಆಶಯದಂತೆ ಶಿವಲಿಂಗ ಪ್ರತಿಷ್ಠಾಪನೆ ಮಾಡಿದನೆಂಬ ಕಾರಣಕ್ಕೆ ಜಟಂಗಿ ರಾಮೇಶ್ವರ ಎಂಬ ಹೆಸರು ಬಂದಿದೆ. ಜಟಂಗಿ ಅಂದರೆ ಜಟಾಯು ರಾಮ ಅಂದರೆ ಶ್ರೀರಾಮ ಈಶ್ವರ ಅಂದರೆ ಶಿವಲಿಂಗ ಎಂದು ಅರ್ಥವಾಗಿದೆ ಎಂದು ಭಕ್ತರು ನಂಬಿದ್ದಾರೆ.
ಜನವರಿ 22ಕ್ಕೆ ಈ ದೇಗುಲದಲ್ಲೂ ವಿಶೇಷ ಪೂಜೆ, ಅರ್ಚನೆ, ರುದ್ರಾಭಿಷೇಕಕ್ಕೆ ಸಿದ್ಧತೆ ನಡೆದಿದೆ. ಕಡಿದಾದ ಬೃಹತ್ ಬೆಟ್ಟಕ್ಕೆ ಜನ ಕಷ್ಟಪಟ್ಟು ಬರುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಭಾರತೀಯ ಪುರಾತತ್ವ ಇಲಾಖೆ ಈ ಅಪರೂಪದ ಐತಿಹಾಸಿಕ ಬೆಟ್ಟವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕೆಂಬುದು ಭಕ್ತರ ಮನವಿ ಆಗಿದೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಜಟಂಗಿ ರಾಮೇಶ್ವರ ಎಂಬ ಐತಿಹಾಸಿಕ ಬೆಟ್ಟದ ಬಗ್ಗೆ ಪುರಾಣ ಪುಣ್ಯ ಕಥೆಗಳಲ್ಲಿ ಅನೇಕ ಕಥೆ ಉಪಕಥೆಗಳಿವೆ. ಇಂದಿಗೂ ಅಮಾವಾಸ್ಯೆ, ಹುಣ್ಣಿಮೆ, ರಾಮನವಮಿ, ಶಿವರಾತ್ರಿ, ಹಬ್ಬ ಹರಿದಿನಗಳು ಮತ್ತಿತರೆ ವಿಶೇಷ ಸಂದರ್ಭದಲ್ಲಿ ಭಕ್ತರು ಬೆಟ್ಟ ಹತ್ತಿ ಪೂಜೆ ಸಲ್ಲಿಸುತ್ತಾರೆ. ಇಂಥ ಐತಿಹ್ಯದ ಅಪರೂಪದ ಬೆಟ್ಟಕ್ಕೆ ಸರ್ಕಾರ ಭಕ್ತರು ಬರಲು ಸುಲಭ ಮಾರ್ಗ, ರೂಫ್ ವೇಗಳಂತ ಸೌಲಭ್ಯ ಕಲ್ಪಿಸಿ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತಾಗಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ