‘ಪುಟ್ಟಗೌರಿ’ಯಿಂದ ಬದುಕೇ ಬದಲಾಯಿತು; ಹೈನುಗಾರಿಕೆಯಲ್ಲಿ ಅದ್ಭುತ ಯಶಸ್ಸು ಕಂಡ ರೈತ ಇವರು..!
ಸುರೇಶ್ ಪದವೀಧರರಾದರೂ ನೌಕರಿಯ ಬೆನ್ನ ಹಿಂದೆ ಬೀಳದೆ, ಕೃಷಿ-ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕವೂ ಬದುಕಲ್ಲಿ ಯಶಸ್ಸು ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಚಿತ್ರದುರ್ಗ: ಸಂತೆಯಿಂದ ತಂದ ಒಂದು ಪುಟ್ಟಕರುವಿನಿಂದ ಹೈನುಗಾರಿಕೆಯಲ್ಲಿ ಅದ್ಭುತ ಯಶಸ್ಸು ಕಂಡ ಸಾಧಕನ ಕತೆ ಇದು. ಚಳ್ಳಕೆರೆ ತಾಲೂಕಿನ ಗೊರ್ಲಕಟ್ಟೆ ಗ್ರಾಮದ ಸುರೇಶ್ ಅವರು ಸುಮಾರು 100 ಸೀಮೆ ಹಸುಗಳನ್ನು ಸಾಕಿದ್ದಾರೆ. ಪ್ರೀತಮ್ ಡೇರಿ ಫಾರಂ ಮೂಲಕ ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜತೆಗೆ ಕೃಷಿಯಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ.
ನನ್ನ ಪದವಿ ವಿದ್ಯಾಭ್ಯಾಸದ ಕೊನೇ ದಿನಗಳ ಸಮಯದಲ್ಲಿ ಹೊಸದುರ್ಗದ ಸಂತೆಗೆ ಹೋಗಿದ್ದೆ. ಹಸುವಿನ ವ್ಯಾಪಾರ ಜೊರಾಗಿ ಸಾಗಿತ್ತು. ಕುತೂಹಲದಿಂದ ನೋಡುತ್ತಿದ್ದೆ. ಆಗ ಒಂದು ಪುಟ್ಟ ಕರು ಮೇವು-ನೀರಿಲ್ಲದೆ ನಿತ್ರಾಣವಾಗಿದ್ದುದು ಕಂಡುಬಂತು. ಅದನ್ನು ನೋಡಿ ಮನಸು ಕರಗಿತು. ಆ ಕರುವನ್ನು ಸಾಕಿ-ಸಲಹಬೇಕು ಎಂದು ನಿರ್ಧರಿಸಿ ಎರಡೂವರೆ ಸಾವಿರ ರೂಪಾಯಿ ಸಾಲ ಮಾಡಿ, ಅದನ್ನು ಖರೀದಿ ಮಾಡಿದೆ. ಮುದ್ದಾಗಿದ್ದ ಕರುವಿಗೆ ಗೌರಿ ಎಂದು ನಾಮಕರಣ ಮಾಡಿ ಜೋಪಾನ ಮಾಡುತ್ತ ಬಂದೆ. ಅದೊಂದು ಕರುವಿನಿಂದ ನನ್ನ ಜೀವನ ಬದಲಾಗುತ್ತ ಬಂತು, ಇಂದು 100 ಸೀಮೆ ಹಸುಗಳು ನನ್ನ ಬಳಿ ಇವೆ. ಗೌರಿಯಿಂದಲೇ ಬದುಕು ಕಟ್ಟಿಕೊಂಡೆ ಎನ್ನುತ್ತಾರೆ ಸುರೇಶ್.
ಪೌಷ್ಟಿಕ ಮೇವು..ಭರಪೂರ ಹಾಲು ನೀವೂ ಒಮ್ಮೆ ಗೊರ್ಲಕಟ್ಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಪ್ರೀತಮ್ ಡೇರಿ ಫಾರಂಗೆ ಭೇಟಿ ನೀಡಿ. ಅಲ್ಲಿ ನೂರಕ್ಕೂ ಹೆಚ್ಚು ದೊಡ್ಡದೊಡ್ಡ ಸಿಂಧಿ ಹಸುಗಳು, ಕರುಗಳು ಕಾಣಸಿಗುತ್ತವೆ. ಈ ಹಸುಗಳಿಗೆ ಆರೈಕೆಯನ್ನೂ ಅಷ್ಟೇ ಮಾಡಲಾಗುತ್ತಿದೆ. ಮೊಳಕೆ ಕಾಳು, ಉತ್ತಮ ಮೇವು ನೀಡಲಾಗುತ್ತಿದೆ. 36ಕ್ಕೂ ಹೆಚ್ಚು ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು ಹಿಂಡಬಹುದು. ಇದರಿಂದ ಆದಾಯವೂ ಚೆನ್ನಾಗಿ ಬರುತ್ತಿದೆ. ಹಸುಗಳಿಗೆ ಸುರೇಶ್ ಯಾವುದೇ ಕೊರತೆ ಮಾಡುತ್ತಿಲ್ಲ. ಹಸಿ ಮೇವಿನ ಕೊರತೆ ನೀಗಿಸಲೆಂದೇ ₹ 4.50 ಲಕ್ಷ ವೆಚ್ಚದಲ್ಲಿ ಹೈಡ್ರೋಫೋನಿಕ್ ಘಟಕಗಳನ್ನು ಸ್ಥಾಪಿಸಲಾಗಿದೆ.
ಮೆಕ್ಕೆಜೋಳ ಬೀಜವನ್ನು 24 ಗಂಟೆ ನೆನೆಸಿ, 48 ಗಂಟೆ ಕಾಲ ಒಂದು ಚೀಲದಲ್ಲಿ ಗಾಳಿಯಾಡದಂತ ಕಟ್ಟಿಡಲಾಗುತ್ತದೆ. ಬೀಜ ಮೊಳಕೆಯೊಡೆದ ನಂತರ ಅದನ್ನು ಟ್ರೇಗಳಿಗೆ ಹಾಕಿ, ಯೂನಿಟ್ ಘಟಕದಲ್ಲಿ ಸಮತೋಲನ ಉಷ್ಣಾಂಶದಲ್ಲಿ ಇಡಲಾಗುತ್ತದೆ. ಇದಾದ 8ನೇ ದಿನಕ್ಕೆ ಹಸುಗಳಿಗೆ ನೀಡಬಹುದಾದ ಹುಲ್ಲು ಸಿದ್ಧವಾಗುತ್ತದೆ. 700ಗ್ರಾಂ ಮೆಕ್ಕೆಜೋಳಕ್ಕೆ5-6ಕೆಜಿ ಪ್ರೋಟಿನ್ಯುಕ್ತ ಮೇವು ಸಿಗುತ್ತದೆ. ಯಾವುದೇ ರಾಸಾಯನಿಕ, ಗೊಬ್ಬರ ಬಳಕೆ ಇಲ್ಲದೆ, ನೀರಿನ ಸಹಾಯದಿಂದ ಉತ್ಪತ್ತಿಯಾಗುವ ಮೇವು ಹಸುಗಳಿಗೆ ತುಂಬ ಪೌಷ್ಟಿಕ ಒದಗಿಸುತ್ತವೆ. 36ಕ್ಕೂ ಹೆಚ್ಚು ಹಸುಗಳು ಬೆಳಗ್ಗೆ 160ಲೀ, ಸಂಜೆ 145 ಲೀ.ಹಾಲು ಕೊಡುತ್ತವೆ.
ಸುರೇಶ್ ಪದವೀಧರರಾದರೂ ನೌಕರಿಯ ಬೆನ್ನ ಹಿಂದೆ ಬೀಳದೆ, ಕೃಷಿ-ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕವೂ ಬದುಕಲ್ಲಿ ಯಶಸ್ಸು ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ಹೊಸದಾಗಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವ ಹಲವು ರೈತರು ಸುರೇಶ್ ಅವರ ಬಳಿ ಬಂದು, ಸಲಹೆ ಸೂಚನೆ ಪಡೆಯುತ್ತಿದ್ದಾರೆ.