16ನೇ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ, ಕೇಂದ್ರದ ವಿರುದ್ಧ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ 16ನೇ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನೂ ಅವರು ವ್ಯಕ್ತಪಡಿಸಿದರು. ಜತೆಗೆ, ಹಲವು ಸಲಹೆಗಳನ್ನೂ ಆಯೋಗಕ್ಕೆ ನೀಡಿದರು. ಸಂಪೂರ್ಣ ವಿವರ ಇಲ್ಲಿದೆ.

16ನೇ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ, ಕೇಂದ್ರದ ವಿರುದ್ಧ ಆಕ್ರೋಶ
16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯImage Credit source: PTI
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Aug 29, 2024 | 2:24 PM

ಬೆಂಗಳೂರು, ಆಗಸ್ಟ್ 29: 16ನೇ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂದಿನ ಸಭೆಯಲ್ಲಿ ನಡೆಯುವ ಚರ್ಚೆಗಳಿಂದ ನಾವು ಎದುರಿಸುತ್ತಿರುವ ಹಲವು ಸವಾಲುಗಳಿಗೆ ಉತ್ತರ ಕಂಡು ಕೊಳ್ಳಬೇಕು. ದೇಶದ ಪೂರ್ಣ ಸಾಮರ್ಥ್ಯವನ್ನು ಅರಿಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ನನಗಿದೆ. ಪ್ರಧಾನಿಯವರು ತಿಳಿಸಿರುವ ಸಹಕಾರಿ ಒಕ್ಕೂಟವನ್ನು ಉತ್ತೇಜಿಸಲು ನಮ್ಮ ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಣಕಾಸು ಒಕ್ಕೂಟ ಮೂಲವಾಗಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವೆ, ರಾಜ್ಯ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿಷಯದಲ್ಲಿ ಶಿಫಾರಸ್ಸುಗಳನ್ನು ಮಾಡಲು ಹಣಕಾಸು ಆಯೋಗದ ನೇಮಕಾತಿಯನ್ನು ಆರ್ಟಿಕಲ್‌ 280 ಕಡ್ಡಾಯಗೊಳಿಸಿದೆ. ಆಯೋಗ ಈ ವಿಷಯದಲ್ಲಿ ತಜ್ಞ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿದೆ. ಆಯೋಗ ನ್ಯಾಯಸಮ್ಮತ ಮತ್ತು ದಕ್ಷ ನಿಲುವುಗಳನ್ನು ಅನುಸರಿಸಿ ಎಲ್ಲಾ ರೀತಿಯ ಅಸಮತೋಲನಗಳ ನಿವಾರಣೆ ಕುರಿತು ಕ್ರಮ ಕೈಗೊಳ್ಳುವ ವಿಶ್ವಾಸ ನಮಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯಗಳ ನಡುವೆ ತೆರಿಗೆ ಮರು ಹಂಚಿಕೆಗೆ ನಮ್ಮ ಸಂವಿಧಾನ ಅವಕಾಶ ನೀಡಿದೆ. ಆದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ನೀಡುವ ಪ್ರೋತ್ಸಾಹಗಳ ಪರಿಣಾಮಗಳನ್ನು ಆಯೋಗ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತಹ ರಾಜ್ಯಗಳ ತೆರಿಗೆದಾರರು, ತಮ್ಮ ತೆರಿಗೆಯ ಹಣ ಅವರ ಹಿತಕ್ಕಾಗಿ ಬಳಸುವುದನ್ನು ನಿರೀಕ್ಷಿಸುತ್ತಾರೆ. ಅಂತಹ ಕ್ರಮಗಳು ಸಾರ್ವಜನಿಕರಲ್ಲಿ ವಿಶ್ವಾಸ ಭಾವನೆ ಮೂಡಿಸುತ್ತದೆ. ಆದ್ದರಿಂದ ಆಯೋಗ ನ್ಯಾಯಪರತೆ, ದಕ್ಷತೆ ಮತ್ತು ನಿರ್ವಹಣೆಯ ನಡುವೆ ಅತ್ಯಂತ ಸೂಕ್ಷ್ಮವಾದ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಭಾರತದ ಅಭಿವೃದ್ಧಿ ಕಥನದಲ್ಲಿ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇ 5ರಷ್ಟಿದ್ದರೂ ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಅಂದಾಜು ಶೇ 8.4 ರಷ್ಟು ಪಾಲು ನೀಡುತ್ತಿದೆ. ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ದೇಶದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕ ಸುಮಾರು ರೂ.4 ಲಕ್ಷ ಕೋಟಿಯಷ್ಟು ಪಾಲು ನೀಡುತ್ತಿದ್ದರೂ ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ 45ಸಾವಿರ ಕೋಟಿ ರೂ, ಅನುದಾನದ ರೂಪದಲ್ಲಿ 15 ಸಾವಿರ ಕೋಟಿ ರೂ. ದೊರಕುತ್ತಿದೆ. ಅಂದರೆ ಕರ್ನಾಟಕ ನೀಡುವ ಪ್ರತಿ ಒಂದು ರೂಪಾಯಿಗೆ ರಾಜ್ಯ ಕೇವಲ 15 ಪೈಸೆಯನ್ನು ಮಾತ್ರ ಹಿಂದಕ್ಕೆ ಪಡೆಯುತ್ತಿದೆ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು 4.713 ಯಿಂದ 3.647 ಗೆ ತಗ್ಗಿದೆ. ಇದರಿಂದಾಗಿ 2021-26 ರ 5 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ.68,275 ಕೋಟಿ ನಷ್ಟ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ 11495 ಕೋಟಿ ರೂ. ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸ್ಸನ್ನು ಒಪ್ಪಿಕೊಂಡಿಲ್ಲ. ಆದ್ದರಿಂದ ಕರ್ನಾಟಕ ಈ ಅನುದಾನ ಪಡೆಯುವಲ್ಲಿಯೂ ವಂಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 79770 ಕೋಟಿ ರೂ. ನಷ್ಟ ಉಂಟಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ 35 ಸಾವಿರದಿಂದ 40 ಸಾವಿರ ಕೋಟಿ ರೂ.ನಷ್ಟು ಇತರ ರಾಜ್ಯಗಳಿಗೆ ಆದಾಯ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ಗಮನಿಸಿದೆ. ಇದು ಜಿಎಸ್‌ಡಿಪಿಯ ಶೇ1.8ರಷ್ಟಿದೆ. ರಾಜ್ಯದಿಂದ ಹೊರಗೆ ವರ್ಗಾವಣೆಯಾಗುತ್ತಿರುವ ಈ ಮೊತ್ತ ರಾಜ್ಯದ ಒಟ್ಟು ಆದಾಯದ ಶೇ 50ರಿಂದ 55ರಷ್ಟಾಗಿದೆ. ಈ ರೀತಿ ಪಾಲಿನ ಪರಿಗಣನೆಯಲ್ಲಿನ ಅಸಮತೋಲನದಿಂದಾಗಿ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ಆರ್ಥಿಕವಾಗಿ ದಂಡ ಎದುರಿಸುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸೆಸ್‌ ಮತ್ತು ಸರ್ಚಾರ್ಜ್‌ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಾಬ್ತಿನಲ್ಲಿ ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್ಚಾರ್ಜ್‌ ಮೇಲಿನ ಅವಲಂಬನೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ಇದರಿಂದಾಗಿ ಒಟ್ಟು ತೆರಿಗೆ ಆದಾಯಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ಬಾಬ್ತಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ರಾಜ್ಯಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಹಂಚಿಕೊಳ್ಳಬಹುದಾದ ಬಾಬ್ತಿನಲ್ಲಿ ಸೆಸ್‌ ಮತ್ತು ಸರ್ಚಾರ್ಜ್ ನಿಂದಾಗಿ ರಾಜ್ಯಕ್ಕೆ 2017-18 ರಿಂದ 2024-25 ನೇ ಅವಧಿಯಲ್ಲಿ 53,359 ಕೋಟಿ ರೂ. ನಷ್ಟ ಉಂಟಾಗಿದೆ.

ಇದನ್ನೂ ಓದಿ: ಅವನೇನು ಸಮಾಜಕ್ಕೆ ರೋಲ್ ಮಾಡೆಲಾ? ದರ್ಶನ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಗರಂ

ಸಿಎಂ ಸಿದ್ದರಾಮಯ್ಯ ಮಾಡಿದ ಶಿಫಾರಸುಗಳು

ವಿತ್ತೀಯ ಹಂಚಿಕೆ ವಿಷಯದಲ್ಲಿ ಆಯೋಗಕ್ಕೆ ಈ ಕೆಳಕಂಡ ಶಿಫಾರಸ್ಸುಗಳನ್ನು ಮಾಡಲು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಅವರು ಶಿಫಾರಸು ಮಾಡಿರುವ ಅಂಶಗಳು ಇಲ್ಲಿವೆ;

  • ಹಂಚಿಕೆ ಮಾಡುವ ಬಾಬ್ತಿನಲ್ಲಿ ಕನಿಷ್ಠ ಶೇ 50ರಷ್ಟು ಪಾಲನ್ನು ಸಂಬಂಧಿಸಿದ ರಾಜ್ಯಗಳಿಗೆ ನಿಗದಿಪಡಿಸಬೇಕು.
  • ಸೆಸ್‌ ಮತ್ತು ಸರ್ಚಾರ್ಜ್‌ ಒಟ್ಟು ತೆರಿಗೆ ಆದಾಯದ ಶೇ 5ಕ್ಕೆ ಮಿತಿಗೊಳಿಸಬೇಕು.
  • ಇದಕ್ಕಿಂತ ಹೆಚ್ಚಾಗುವ ಯಾವುದೇ ಮೊತ್ತವನ್ನು ಹಂಚಿಕೊಳ್ಳುವ ಬಾಬ್ತಿಗೆ ಪರಿಗಣಿಸಬೇಕು.
  • ಕೇಂದ್ರ ಸರ್ಕಾರದ ತೆರಿಗೇತರ ಆದಾಯವನ್ನು ಹಂಚಿಕೊಳ್ಳುವ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ಕುರಿತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಬೇಕು.
  • ಪಾಲಿನ ಹಂಚಿಕೆ ಸಂದರ್ಭದಲ್ಲಿ ದಕ್ಷತೆ ಮತ್ತು ನಿರ್ವಹಣೆಗೆ ಸೂಕ್ತ ಪುರಸ್ಕಾರ ನೀಡುವ ಬಗ್ಗೆ ಆಯೋಗ ದಿಟ್ಟ ನಿಲುವು ತಳೆಯಬೇಕೆಂದು ನಾವು ಮನವಿ ಮಾಡುತ್ತೇವೆ.
  • ಇದರ‌ಜೊತೆಗೆ ಬಾಬ್ತಿನಲ್ಲಿ ರಾಜ್ಯಗಳಿಗೆ ತಮ್ಮ ದೇಣಿಗೆಯ ಶೇ 60ರಷ್ಟನ್ನು ನೀಡಬೇಕೆಂದು ಕರ್ನಾಟಕ ಶಿಫಾರಸು ಮಾಡುತ್ತದೆ.
  • ಕೇಂದ್ರ ಮತ್ತು ರಾಜ್ಯಗಳ ನಡುವಣ ಆರ್ಥಿಕ ಸಂಬಂಧ ಅತ್ಯಂತ ಮಹತ್ವವಾಗಿರುವ ಇಂದಿನ ಸಂದರ್ಭದಲ್ಲಿ, 16ನೇ ಹಣಕಾಸು ಆಯೋಗ ಮಾಡುವ ಶಿಫಾರಸ್ಸುಗಳು, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ