ಜನರ ಹಾಹಾಕಾರದ ನಡುವೆ ಮುಖ್ಯಮಂತ್ರಿಗಳಿಗೆ ಮನೆ ವಾಸ್ತು ಬಗ್ಗೆ ಯೋಚನೆ

  • Publish Date - 6:03 pm, Tue, 8 September 20
ಜನರ ಹಾಹಾಕಾರದ ನಡುವೆ ಮುಖ್ಯಮಂತ್ರಿಗಳಿಗೆ ಮನೆ ವಾಸ್ತು ಬಗ್ಗೆ ಯೋಚನೆ

ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಅವರ ಅಧಿಕೃತ ಸರ್ಕಾರಿ ನಿವಾಸ ಕಾವೇರಿ ಸರಿಬರುತ್ತಿಲ್ಲವಂತೆ. ವಾಸ್ತದೋಷ ಕಂಡುಬಂದಿರುವ ಕಾರಣ ವಾಸ್ತವ್ಯವನ್ನು ತಮ್ಮ ಸ್ವಂತ ಮನೆ, ಸಂಜಯನಗರದ ಡಾಲರ್ಸ್​ ಕಾಲೊನಿಯಲ್ಲಿರುವ ’ಧವಳಗಿರಿ’ಗೆ ಬದಲಾಯಿಸುತ್ತಾರಂತೆ.

ನಿಮಗೆ ನೆನಪಿರಬಹುದು, ಆರು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾವೇರಿಯಲ್ಲಿ ವಾಸವಾಗಿದ್ದರು. ಅವರನ್ನು ಅಲ್ಲಿಂದ ತೆರವುಗೊಳಿ ಯಡಿಯೂರಪ್ಪ ವಾಸ ಮಾಡಲಾರಂಭಿಸಿದ್ದರು. ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ಕಾವೇರಿಯಿಂದ ಹೊರನಡೆದಿದ್ದರು. ಮುಖ್ಯಮಂತ್ರಿಗಳು ಕಾವೇರಿಯಲ್ಲಿ ಕಾಲಿಡುವ ಮೊದಲು, ಹೋಮ, ಹವನ, ಪೂಜೆ ಎಲ್ಲವನ್ನೂ ಮಾಡಿಸಿದ್ದರು. ಆದರೂ ದೋಷಗಳು ಪರಿಹಾರವಾಗಿರಲಿಲ್ಲವೇ ಎಂದು ಉದ್ಭವಿಸುವ ಪ್ರಶ್ನೆಯನ್ನು ಕಡೆಗಣಿಸಲಾಗದು.

ಅದೇ ಮನೆಯಿಂದ ಸಿದ್ದರಾಮಯ್ಯನವರು ಯಾವುದೆ ಅಡೆತಡೆಯಿಲ್ಲದೆ ಐದು ವರ್ಷಗಳ ಕಾಲ ಸರಕಾರ ನಡೆಸಿದರು. ಅದು ತನಗೆ ಸಾಧ್ಯವಾಗಲಿಕ್ಕಿಲ್ಲ ಅಂತ ಬಿಎಸ್​ವೈ ಅವರಿಗನಿಸುತ್ತಿದೆಯೇ? 

ಮೂಲಗಳ ಪ್ರಕಾರ ಮುಖ್ಯಮಂತ್ರಿಗಳಿಗೆ ಸದರಿ ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಯಾಗುತ್ತಿಲ್ಲವಂತೆ. ರಾಜ್ಯದಲ್ಲಿ ಸತತವಾಗಿ ಎರಡನೇ ವರ್ಷವೂ ನೆರೆ ಹಾವಳಿಯಿಂದಾಗಿ ಅಪಾರ ಬೆಳೆನಾಶ, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿರುವುದು ಅವರಲ್ಲಿ ನಿರಾಶೆ ಮತ್ತು ಹತಾಶೆ ಮೂಡಿಸಿದೆ.

ಪಕ್ಷದಲ್ಲಿ ಆಂತರಿಕ ಭಿನ್ನಮತವನ್ನು ಮಟ್ಟಹಾಕುವುದು ಬಿಎಸ್​ವೈ ಅವರಿಗೆ ಸಾಧ್ಯವಾಗುತ್ತಿಲ್ಲ. ಎಲ್ಲ ಸರಿಯಾಗಿದೆ ಅಂತ ಹೊರನೋಟಕ್ಕೆ ತೋರಿಸಿಕೊಳ್ಳುತ್ತಾರೆಯೇ ಹೊರತು ವಾಸ್ತವತೆ ಅವರಿಗೆ ಚೆನ್ನಾಗಿ ಗೊತ್ತಿದೆ. ಕೊರೊನಾ ಸೋಂಕು ರಾಜ್ಯದಲ್ಲಿ ತಗ್ಗುವ ಲಕ್ಷಣಗಳು ಕಾಣುತ್ತಿಲ್ಲ. ಬೊಕ್ಕಸ ಬರಿದಾಗಿದೆ. ಸರಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗುತ್ತಿದೆ. ಸಾರಿಗೆ ಇಲಾಖೆ ಸಂಪೂರ್ಣವಾಗಿ ದಿವಾಳಿಯೆದ್ದಿದೆ. ಸಂಬಳವಿಲ್ಲ್ದದೆ ನೌಕರರು ಆತ್ಮಹತ್ಯೆಗೆ ಪ್ರಯತ್ನಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯಕ್ಕೆ ಯೋಗ್ಯವಾಗಿ ಸಲ್ಲಬೇಕಿರುವ ಜಿಎಸ್​ಟಿ ಪಾಲನ್ನು ನೀಡಲು ಕೇಂದ್ರ ನಿರಾಕರಿಸುತ್ತಿದೆ. ಆರ್​ಬಿಐನಿಂದ ಸಾಲ ತೆಗೆದುಕೊಳ್ಳಿ ಅಂತ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರು ಹೇಳುತ್ತಿದ್ದಾರೆ. ರಾಜ್ಯದಿಂದ 25 ಬಿಜೆಪಿ ಸದಸ್ಯರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ, ಆದರೆ ದುರಂತವೆಂದರೆ ಇವರೆಲ್ಲ, ಪ್ರಧಾನಿ ಮತ್ತು ಅಮಿತ್ ಶಾ ಎದುರು ಬಾಲ ಮುದುರಿಕೊಂಡ ಬೆಕ್ಕುಗಳಂತಾಡುತ್ತ್ತಾರೆ. ಯಾವ ಕಾರಣಕ್ಕೂ ಬಾಯಿ ತೆರೆದು, ನಮ್ಮ ಜನ ತೀರಾ ಸಂಕಷ್ಟದಲ್ಲಿದ್ದಾರೆ, ಕೊವಿಡ್​ನಿಂದ, ಅತಿವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಅವರಿಗೆ ಕೆಲಸವಿಲ್ಲ, ತಿನ್ನಲು ಆಹಾರವಿಲ್ಲ, ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ನಮಲ್ಲಿ ಹಣವಿಲ್ಲ, ನಮಗೆ ಬೇಕಿರೋದು ಭಿಕ್ಷೆಯಲ್ಲ, ನಮ್ಮ ಪಾಲಿಗೆ ಬರಬೇಕಿರುವ ಹಣ ಕೊಡಿ ಅಂತ ಹೇಳುವ ಎದೆಗಾರಿಕೆ ಯಾರೆಂದರೆ ಯಾರಿಗೂ ಇಲ್ಲ.

ಮುಖ್ಯಮಂತ್ರಿಗಳು, ಈ ಎಲ್ಲ ವಿಚಾರಗಳ ಬಗ್ಗೆ ಯೋಚಿಸುವ ಬದಲು, ದಿನಕ್ಕೊಂದು ಹೋಟೆಲ್​ನಲ್ಲಿ ಊಟ ಮಾಡುತ್ತಾ ತಾವಿರುವ ಮನೆ ವಾಸ್ತುವಿನ ಬಗ್ಗೆ ಯೋಚಿಸುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಆದ್ಯತೆ ಯಾವುದು ಯಾವುದು ಅನ್ನೋದನ್ನ ಅವರು ಯೋಚಿಸಬೇಕಿದೆ. ಅವರು, ಕಾವೇರಿಯಿಂದ ಧವಳಗಿರಿಗೆ ಬಂದಾಕ್ಷಣ, ರಾಜ್ಯದಲ್ಲಿ ಕೊವಿಡ್-19 ಪಿಡುಗು, ನೆರೆಹಾನಿ, ಸಂತ್ರಸ್ತರ ಗೋಳು, ದಿನಗೂಲಿ ಕಾರ್ಮಿಕರು ಮತ್ತು ರೈತರ ತಾಪತ್ರಯ ಹಾಗೂ ಆತ್ಮಹತ್ಯೆಗಳು ನಿಂತುಹೋಗುವುದಿಲ್ಲ. ಇದ್ದಕ್ಕಿದ್ದಂತೆ ಸರ್ಕಾರಿ ಖಜಾನೆ ಅಕ್ಷಯ ಪಾತ್ರೆಯಾಗಿ ಬದಲಾಗುವುದಿಲ್ಲ.

ಧನಾತ್ಮಕವಾಗಿ ಯೋಚಿಸದೆ, ಋಣಾತ್ಮಕ ವಾತಾವರಣವನ್ನು ಹೊಡೆದೋಡಿಸುವುದು ಸಾಧ್ಯವಿಲ್ಲ ಅನ್ನೋದನ್ನು ಸಂಬಂಧಪಟ್ಟವರೆಲ್ಲ ಅರಿತುಕೊಳ್ಳಬೇಕಿದೆ.

Click on your DTH Provider to Add TV9 Kannada