ಬೆಂಗಳೂರು: ದುಡ್ಡಿನ ದುರಾಸೆಗೆ ಬಿದ್ದು, ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಲೀಕಾಸುರರು. ಭವಿಷ್ಯ ರೂಪಿಸಿಕೊಳ್ಳಲು ರೆಡಿಯಾಗಿದ್ದ ಅಭ್ಯರ್ಥಿಗಳ ಕನಸಿಗೆ ಕೊಳ್ಳಿ ಇಟ್ಟ ಅಯೋಗ್ಯರು, ಮನೆಹಾಳ್ ಕೆಲ್ಸ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬೂದಿಹಾಳ್ ಗ್ರಾಮದ ರಮೇಶ್, ಕೆಪಿಎಸ್ಸಿಯಲ್ಲಿ ಎಸ್ಡಿಎ ಆಗಿ ಕೆಲಸ ಮಾಡ್ತಿದ್ದ. ಈತನ ಜೊತೆಗೆ ಕೆಪಿಎಸ್ಸಿಯ ಕಂಟ್ರೋಲ್ ಆಫ್ ಎಕ್ಸಾಂ ಡಿವಿಷನ್ನಲ್ಲಿ ಸನಾ ಬೇಡಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ್ರು.
ಸ್ನೇಹದ ನೆಪದಲ್ಲಿ ಎಫ್ಡಿಎ ಪ್ರಶ್ನೆ ಪತ್ರಿಕೆಗೆ ಸ್ಕೆಚ್
ಸನಾ ಬೇಡಿಯಿಂದ ರಮೇಶ್ ಕೈಗೆ ಪ್ರಶ್ನೆ ಪತ್ರಿಕೆ ಸೇರುವ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ಅದ್ಯಾವಾಗ ರಮೇಶ್ ಕೆಪಿಎಸ್ಸಿಗೆ ಎಸ್ಡಿಎ ಆಗಿ ಸೇರಿದ್ನೋ ಅಂದಿನಿಂದ ಈತನ ಸ್ನೇಹಿತರು, ಪರಿಚಿತರು, ಸಂಬಂಧಿಕರಿಂದ ಪದೇ ಪದೆ ಪ್ರಶ್ನೆಪತ್ರಿಕೆಯಿಂದ ಬೇಡಿಕೆ ಬರುತ್ತಲೇ ಇತ್ತಂತೆ. ಆದ್ರೆ ಎಸ್ಡಿಎ ರಮೇಶ್ಗೆ ಕೆಪಿಎಸ್ಸಿಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರವಿರಲಿಲ್ಲ. ಆದ್ರೆ ಕಂಟ್ರೋಲ್ ಆಫ್ ಎಕ್ಸಾಂ ಡಿವಿಷನ್ನಲ್ಲಿದ್ದ ಸ್ಟೆನೋಗ್ರಾಫರ್ ಸನಾ ಬೇಡಿಗೆ ಮಾತ್ರ ಪ್ರಶ್ನೆ ಪತ್ರಿಕೆ ಆ್ಯಕ್ಸೆಸ್ ಅಧಿಕಾರವಿತ್ತಂತೆ. ಇದನ್ನರಿತ ರಮೇಶ್ ಉದ್ದೇಶಪೂರ್ವಕವಾಗಿಯೇ ಸ್ಟೆನೋಗ್ರಾಫರ್ ಸನಾ ಬೇಡಿಯ ಸ್ನೇಹ ಬೆಳಸಿದ್ದಾನೆ. ಸನಾ ಬೇಡಿಗೆ ತುಂಬಾ ಹತ್ತಿರವಾಗಿದ್ದಾನೆ. ಒಟ್ಟಿಗೆ ಊಟಕ್ಕೆ ಹೋಗುವುದು, ಹರಟೆ ಹೊಡೆಯುವುದು ಹೀಗೆ ಇಬ್ಬರು ಆತ್ಮೀಯರಾಗಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡ ಎಸ್ಡಿಎ ರಮೇಶ್ ಈ ಬಾರಿ ಹೇಗಾದ್ರೂ ಮಾಡಿ ಸನಾ ಬೇಡಿ ಬಳಿಯಿಂದ ಪ್ರಶ್ನೆ ಪತ್ರಿಕೆ ಪಡೆದುಕೊಳ್ಳಲೇಬೇಕು ಅಂತಾ ಪ್ಲ್ಯಾನ್ ಮಾಡಿದ್ದ.
ಕಡುಬಡತನದ ನೆಪವೊಡ್ಡಿ ಪ್ರಶ್ನೆ ಪತ್ರಿಕೆ ಪಡೆದಿದ್ದ ರಮೇಶ್
ಎಫ್ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಟೈಪ್ ಮಾಡುವ ಅಧಿಕಾರ ಸನಾ ಬೇಡಿಗಿತ್ತು. ಹಾಗಾಗಿ ಆರೋಪಿ ಎಸ್ಡಿಎ ರಮೇಶ್ ಪ್ರಶ್ನೆ ಪತ್ರಿಕೆ ನೀಡುವಂತೆ ಸನಾರನ್ನ ಕೇಳಿದ್ದ. ಆದ್ರೆ ಆರಂಭದಲ್ಲಿ ಸನಾಬೇಡಿ ಪ್ರಶ್ನೆ ಪತ್ರಿಕೆ ನೀಡಲು ಒಪ್ಪಿರಲಿಲ್ಲ. ಬಳಿಕ ಭಾವನಾತ್ಮಕ ಮಾತುಗಳನ್ನಾಡಿ ಸನಾಳ ಮನಸ್ಸನ್ನು ಬದಲಾಯಿಸಿದ್ದ. ನಾನು ಕೂಡ ಎಫ್ಡಿಎ ಪರೀಕ್ಷೆ ಬರೆಯುತ್ತಿದ್ದೇನೆ. ನಮ್ಮದು ಕಡುಬಡತನದ ಕುಟುಂಬ. ನಮ್ಮ ಮನೆಯಲ್ಲಿ ಇನ್ನು ಇಬ್ಬರು ಪರೀಕ್ಷೆ ಬರೆಯುತ್ತಿದ್ದಾರೆ. ನೀನು ಪ್ರಶ್ನೆ ಪತ್ರಿಕೆ ನೀಡಿದ್ರೆ ಜೀವನಪೂರ್ತಿ ಮರೆಯಲಾರದ ಸಹಾಯವಾಗಲಿದೆ ಅಂತಾ ಮನವಿ ಮಾಡಿದ್ದ. ರಮೇಶ್ನ ನಾಟಕೀಯ ಮಾತುಗಳಿಗೆ ಬೆರಗಾದ ಸನಾ ಬೇಡಿ ಪೆನ್ ಡ್ರೈವ್ ಮೂಲಕ ಪ್ರಶ್ನೆ ಪತ್ರಿಕೆಯನ್ನ ರಮೇಶ್ಗೆ ನೀಡಿದ್ದಾರೆ.
ಚಂದ್ರು, ರಮೇಶ್ ಇಬ್ಬರಿಂದಲೂ ಪ್ರಶ್ನೆ ಪತ್ರಿಕೆ ಸೇಲ್
ಬಡತನದ ನೆಪದಲ್ಲಿ ಪ್ರಶ್ನೆ ಪತ್ರಿಕೆ ಪಡೆದ ಆರೋಪಿ ರಮೇಶ್, ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ಆಫೀಸ್ನಲ್ಲಿ ಟ್ಯಾಕ್ಸ್ ವಿಜಿಲೆನ್ಸ್ ಇನ್ಸ್ಪೆಕ್ಟರ್ ಆಗಿರೋ ಚಂದ್ರುಗೆ ನೀಡಿದ್ದಾನೆ. ಈತ ಒಂದು ಪ್ರಶ್ನೆ ಪತ್ರಿಕೆಗೆ 10 ಲಕ್ಷ ರೂಪಾಯಿಯಂತೆ ಬೇರೆ ಬೇರೆ ಜಿಲ್ಲೆಗಳಿಗೆ ಪೇಪರ್ ಹರಿಬಿಟ್ಟಿದ್ದಾನೆ. ಕೈಯಿಂದ ಕೈಗೇ ಆರೋಪಿ ಚಂದ್ರು ಸಪ್ಲೈ ಮಾಡಿದ್ದಾನೆ. ಪ್ರಶ್ನೆಗಳಿಗೆ ಉತ್ತರ ತಯಾರು ಮಾಡಿಯೇ ಹಂಚಿದ್ದಾನೆ. ಪರಿಚಯಸ್ಥರಿಗೆ ಮಾತ್ರ ಉತ್ತರಪತ್ರಿಕೆ ನೀಡಿದ್ದಾನೆ.
ಲೀಕಾಸುರರ ಬೆವರಿಳಿಸುತ್ತಿದ್ದಾರೆ ಸಿಸಿಬಿ ಪೊಲೀಸರು
ಲೀಕಾಸುರರ ಬೆವರಿಳಿಸ್ತಿರೋ ಸಿಸಿಬಿ ಸದ್ಯ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲವನ್ನ ಪತ್ತೆಹಚ್ಚಿದೆ. ಆದ್ರೂ ಇದರ ಹಿಂದೆ ಮತ್ತೆ ಇನ್ನು ಬೇರೆಯವ್ರ ಕೈವಾಡವಿದ್ಯಾ ಅನ್ನೋ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದೆ.
ಸಣ್ಣದೊಂದು ಸಂಶಯದ ಎಳೆಯೊಂದನ್ನು ಹಿಡಿದುಕೊಂಡು ಮಫ್ತಿಯಲ್ಲಿ ಕಾರ್ಯನಿರ್ವಹಿಸಿ ಇಂತಹದೊಂದು ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿರುವುದು ನಿಜಕ್ಕೂ ಶ್ಲಾಘನಿಯ. ಆದ್ರೆ ಕೆಪಿಎಸ್ಸಿ ಮಾತ್ರ ಪದೇಪದೆ ಅಕ್ರಮದ ಕೂಪದಲ್ಲಿ ಮುಳುಗೇಳುವುದನ್ನ ಅಭ್ಯಾಸ ಮಾಡಿಕೊಂಡಿರುವುದು ಮಾತ್ರ ವಿಪರ್ಯಾಸ. ಹಿಂದೊಮ್ಮೆ ಹೈಕೋರ್ಟ್ ಕೆಪಿಎಸ್ಸಿಯನ್ನು ಮುಚ್ಚಲು ಇದು ಸಕಾಲ ಎಂದು ಚಾಟಿ ಬೀಸಿತ್ತು. ಆದ್ರೆ ನ್ಯಾಯಾಲಯದ ಇಂತಹ ಕಟುಮಾತುಗಳು ಕೂಡ ಆಯೋಗದ ಕಾರ್ಯವೈಖರಿಯನ್ನ ಸುಧಾರಿಸಿದಂತೆ ಗೋಚರಿಸುತ್ತಿಲ್ಲ. ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಪಿಎಸ್ಸಿಯಲ್ಲಿ ವಶೀಲಿಬಾಜಿ ಎಗ್ಗಿಲ್ಲದೇ ನಡೆಯುತ್ತದೆ ಎನ್ನುವುದು ಮತ್ತೊಮ್ಮೆ ಜನಜನಿತವಾಗಿದೆ.