ಜನವರಿ 16ರಿಂದ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್ ಹಂಚಿಕೆ.. ಕರುನಾಡಿಗೆ ಇವತ್ತು ಆಗಮಿಸಲಿದೆ ಸಂಜೀವಿನಿ
ಡೆಡ್ಲಿ ಕೊರೊನಾಗೆ ವ್ಯಾಕ್ಸಿನ್ ಏನೋ ಬಂದಾಗಿದೆ. ಆದ್ರೆ, ಅದನ್ನ ಜನರಿಗೆ ಹೇಗೆ ತಲುಪಿಸ್ತಾರೆ? ಯಾರಿಗೆ ಮೊದಲು ವ್ಯಾಕ್ಸಿನ್ ನೀಡ್ತಾರೆ? ಅದನ್ನ ಹೇಗೆ ಸಂಗ್ರಹಿಸ್ತಾರೆ? ಯಾರಿಂದ ಮೊದಲು ವ್ಯಾಕ್ಸಿನ್ ಕೊಂಡುಕೊಳ್ತಾರೆ? ಇಂತಾ ಹಲವು ಪ್ರಶ್ನೆಗಳು ಜನರಲ್ಲಿ ಮೂಡಿವೆ. ಇದಕ್ಕೆ ಉತ್ತರ ನಾವು ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಯಾಕೆ ಅಂತಾ ಈ ವರದಿ ಓದಿ ತಿಳಿಯಿರಿ.
ಕೊರೊನಾ ಎಂಬ ಶಬ್ದ ಕೇಳಿ ಕೇಳಿ ಜನರಿಗೆ ಬೇಸರವಾಗಿಬಿಟ್ಟಿದೆ. ಬೇಸರದ ಜೊತೆಗೆ ಭಯವೂ ಅಷ್ಟೇ ಇದೆ. ಯಾಕಂದ್ರೆ, ಇದೊಂದು ಶಬ್ದವನ್ನ ಕೇಳಿದ್ರೆ ಜನ ಕುಳಿತಲ್ಲೇ ಒಂದು ಕ್ಷಣ ಬೆವರುತ್ತಾರೆ. ಅಷ್ಟರ ಮಟ್ಟಿಗೆ ಕಣ್ಣಿಗೆ ಕಾಣದ ಒಂದು ವೈರಸ್ ಇಡೀ ಮನುಕುಲವನ್ನ ಹಿಂಡಿ ಹಿಪ್ಪೇ ಮಾಡಿಬಿಟ್ಟಿದೆ. ಒಂದೇ ಒಂದು ವೈರಸ್ ಇಡೀ ವಿಶ್ವದ ಜನರಿಗೆ ನರಕ ದರ್ಶನ ಮಾಡಿಸಿದೆ. ಅದೆಷ್ಟೋ ಜನರ ಉಸಿರು ನಿಲ್ಲಿಸಿದೆ.
ಕೋಟ್ಯಂತರ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದೆ. ಇಂತಾ ಮಹಾಮಾರಿಗೆ ಹಲವರು ಲಸಿಕೆಗಳನ್ನ ಕಂಡು ಹಿಡಿದಿದ್ದಾರೆ. ಇದರಲ್ಲಿ ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ತಯಾರಿಸಿರೋ ಕೊವಿಶೀಲ್ಡ್ ಒಂದಾದ್ರೆ, ಭಾರತದಲ್ಲೇ ತಯಾರಾಗಿರೋ ಕೊವ್ಯಾಕ್ಸಿನ್ ಕೂಡ ಒಂದು ಇಂತಾ ಲಸಿಕೆಗಳನ್ನ ನೀಡೋ ಸಮಯ ಬಂದಿದೆ ಅಂತಾ ಸ್ವತಃ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಜನವರಿ 16ರಿಂದ ಶುರುವಾಗಲಿದೆ ಕೊರೊನಾ ವ್ಯಾಕ್ಸಿನ್ ನೀಡಿಕೆ! ಜನವರಿ 16 ರಿಂದ ದೇಶದ ಜನರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಜೊತೆಗೆ 1 ಕೋಟಿ 10 ಲಕ್ಷ ಕೊವಿಶೀಲ್ಡ್ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದೇ ರೀತಿ ಭಾರತ್ ಬಯೋಟೆಕ್ ಜೊತೆಗೆ 1 ಕೋಟಿ ಲಸಿಕೆ ಪೂರೈಕೆ ಒಪ್ಪಂದಕ್ಕೂ ಕೇಂದ್ರ ಮುಂದಾಗಿದೆ. ಈ ಮೂಲಕ ಕೊರೊನಾ ವಿರುದ್ಧ ಮನುಕುಲ ಜಯ ಸಾಧಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನ ಕೇಂದ್ರ ಸರ್ಕಾರ ಮಾಡಿಕೊಂಡಿದೆ. ಈಗ ಈ ಲಸಿಕೆಗಳು ದೇಶದ ವಿವಿಧ ಭಾಗಗಳಿಗೆ ಪೂರೈಕೆಯಾಗೋದು ಮಾತ್ರ ಬಾಕಿ ಉಳಿದಿದೆ.
ಲಸಿಕೆ ಪೂರೈಕೆ ಮತ್ತು ಸಂಗ್ರಹ ಹೇಗೆ? ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ನಿಂದ ದೇಶದ 4 ಪ್ರಮುಖ ಕೇಂದ್ರಗಳಾದ ಕರ್ನಾಲ್, ಮುಂಬೈ, ಕೋಲ್ಕತಾ, ಚೆನ್ನೈನ ಕೇಂದ್ರೀಕೃತ ಕೇಂದ್ರಗಳಿಗೆ ರವಾನೆಯಾಗಲಿದೆ. ಇಲ್ಲಿಂದ ದೇಶದ ವಿವಿಧೆಡೆಯಲ್ಲಿರುವ 37 ಪ್ರಾದೇಶಿಕ ಕೇಂದ್ರಗಳಿಗೆ ಪೂರೈಕೆಯಾಗಲಿದ್ದು, ಈ 37 ಪ್ರಾದೇಶಿಕ ಕೇಂದ್ರಗಳಿಂದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಲಸಿಕೆ ಪೂರೈಸಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರಾದೇಶಿಕ ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಇದೆ ಒಂದೊಂದು ವ್ಯಾಕ್ಸಿನ್ ಕೇಂದ್ರವಿದೆ.
ಬೆಂಗಳೂರಿನಲ್ಲಿ 40 ಲಕ್ಷ ಮತ್ತು ಬೆಳಗಾವಿಯಲ್ಲಿ 13 ಲಕ್ಷ 50 ಸಾವಿರ ಲಕ್ಷ ಲಸಿಕೆ ಸಂಗ್ರಹ ಸಾಮರ್ಥ್ಯವಿದೆ. ರಾಜ್ಯಕ್ಕೆ ಮೊದಲ ಕಂತಿನಲ್ಲಿ ಸುಮಾರು 14 ಲಕ್ಷ ಕೊರೊನಾ ವ್ಯಾಕ್ಸಿನ್ ಪೂರೈಕೆಯಾಗೋ ಸಾಧ್ಯತೆ ಇದೆ. ಬೆಂಗಳೂರಿನಿಂದ 22 ಜಿಲ್ಲೆಗಳಿಗೆ, ಬೆಳಗಾವಿಯಿಂದ 8 ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ 21, ಬೆಳಗಾವಿಯಲ್ಲಿ 29 ಬ್ಲಾಕ್ ಸ್ಟೋರ್ಗಳ ಸ್ಥಾಪನೆ ಮಾಡಲಾಗಿದೆ. ಅಲ್ದೆ, ಬೆಂಗಳೂರಲ್ಲಿ 2,096, ಬೆಳಗಾವಿಯಲ್ಲಿ 671 ಸೇರಿ ರಾಜ್ಯದಲ್ಲಿ 2,767 ಕೋಲ್ಡ್ ಚೈನ್ಸ್ ಪಾಯಿಂಟ್ಗಳನ್ನ ಗುರುತಿಸಲಾಗಿದೆ.
ದೇಶದಲ್ಲಿ ಮೊದಲಿಗೆ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಬಳಿಕ ಹಂತ ಹಂತವಾಗಿ ದೇಶದ 30 ಕೋಟಿ ಜನರಿಗೆ ಲಸಿಕೆ ನೀಡಲು ಪ್ಲ್ಯಾನ್ ಮಾಡಿದ್ದಾರೆ.
ಮೊದಲು ಯಾರಿಗೆ ಸಿಗುತ್ತೆ ಲಸಿಕೆ ? ಅಂದಹಾಗೆ ಕೇಂದ್ರ ಸರ್ಕಾರ ಒಟ್ಟು 30 ಕೋಟಿ ಭಾರತೀಯರಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ. ಆದ್ರೆ, ಸದ್ಯ 3 ಕೋಟಿ ಕೊರೊನಾ ವಾರಿಯರ್ಸ್ಗೆ ಮಾತ್ರ ಲಸಿಕೆ ನೀಡಲಾಗುತ್ತೆ. ಉಳಿದ 27 ಕೋಟಿ ಜನರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡೋ ಪ್ಲ್ಯಾನ್ ಮಾಡಿದೆ. ಹೀಗಾಗಿ ಮೊದಲ ಮೂರು ಕೋಟಿ ವ್ಯಾಕ್ಸಿನ್ ಕೊರೊನಾ ವಾರಿಯರ್ಸ್ಗೆ ಸಿಗಲಿದೆ, ಇದ್ರಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು, ದಾದಿಯರು, ಮೇಲ್ವಿಚಾರಕರು, ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಒಟ್ಟು 1 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತೆ..
ಇನ್ನು ಉಳಿದ 2 ಕೋಟಿ ವ್ಯಾಕ್ಸಿನ್ ಫ್ರಂಟ್ ಲೈನ್ ವಾರಿಯರ್ಸ್ಗೆ ಲಭ್ಯವಾಗಲಿದೆ. ಈ ಫ್ರಂಟ್ ಲೈನ್ ವಾರಿಯರ್ಸ್ಗಳು ಯಾರಂದ್ರೆ, ಪೊಲೀಸ್ ಇಲಾಖೆ ಸಿಬ್ಬಂದಿ, ಸಶಸ್ತ್ರ ಪಡೆ, ಗೃಹರಕ್ಷಕ, ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣಾ ಸಂಸ್ಥೆ, ಜೈಲು ಸಿಬ್ಬಂದಿ, ಪುರಸಭೆ ಕಾರ್ಮಿಕರು, ಕಂಟೇನ್ಮೆಂಟ್ ವಲಯದ ಕಣ್ಗಾವಲು ಸಿಬ್ಬಂದಿ ಕೊರೊನಾ ವ್ಯಾಕ್ಸಿನ್ ಮೊದಲು ಪಡೆಯಲಿದ್ದಾರೆ.
ಡೆಡ್ಲಿ ಕೊರೊನಾಗೆ ವ್ಯಾಕ್ಸಿನ್ ನೀಡಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದ್ದು, ಇಂದಿನಿಂದ ಕೊರೊನಾ ಲಸಿಕೆ ರಾಜ್ಯಕ್ಕೆ ಬಂದಿಳಿಯಲಿದೆ. ಹೀಗಾಗಿ ಎಲ್ಲರ ಚಿತ್ತ ಕೊರೊನಾ ವ್ಯಾಕ್ಸಿನ್ನತ್ತ ನೆಟ್ಟಿದೆ.
ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ DCGI ಒಪ್ಪಿಗೆ; ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಮೋದಿ
Published On - 7:27 am, Tue, 12 January 21