ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಕರ್ನಾಟಕದಲ್ಲಿ ಉತ್ಪಾದನೆ!

ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಸದ್ಯದಲ್ಲೇ ಕರ್ನಾಟಕದಲ್ಲಿ ಉತ್ಪಾದನೆಯಾಗಲಿದೆ.

  • TV9 Web Team
  • Published On - 17:29 PM, 5 Apr 2021
ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಕರ್ನಾಟಕದಲ್ಲಿ ಉತ್ಪಾದನೆ!
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ದೇಶದ ಜೊತೆಗೆ ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಆರಂಭವಾಗಿದೆ. ವೈರಸ್​ಅನ್ನು ಮಟ್ಟ ಹಾಕಲು ಜನರು ಈಗ ಕೊರೊನಾ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕೂಡ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಸದ್ಯದಲ್ಲೇ ಕರ್ನಾಟಕದಲ್ಲಿ ಉತ್ಪಾದನೆಯಾಗಲಿದೆ.

ಕೋಲಾರದ ಮಾಲೂರು ಬಳಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ
ಕೈಗಾರಿಕೋದ್ಯಮದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಈಗ ಇವೆಲ್ಲದರ ಹಿರಿಮೆ, ಗರಿಮೆಗೆ ಮತ್ತೊಂದು ಗರಿ ಮೂಡಲಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ವಿರುದ್ಧದ ಲಸಿಕೆ ಉತ್ಪಾದನೆಯಾಗಲಿದೆ . ಸದ್ಯದಲ್ಲೇ ಕರ್ನಾಟಕದಲ್ಲಿ ವಿಶ್ವವನ್ನು ಬೆಂಬಿಡದೇ ಕಾಡುತ್ತಿರುವ ಕೊರೊನಾ ವೈರಸ್​ಅನ್ನು ಮಣಿಸುವ ಸ್ವದೇಶಿ ಲಸಿಕೆಯ ಉತ್ಪಾದನೆ ಆರಂಭವಾಗಲಿದೆ. ಭಾರತದಲ್ಲಿ ಸದ್ಯ ಎರಡು ಕಂಪನಿಗಳು ಮಾತ್ರ ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಉತ್ಪಾದಿಸುತ್ತಿವೆ. ಪುಣೆಯ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಗಳು ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಉತ್ಪಾದಿಸುತ್ತಿವೆ.

ಈ ಎರಡು ಕಂಪನಿಗಳ ಲಸಿಕೆಗಳಾದ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಇವೆರಡರ ಪೈಕಿ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯು ಸಂಪೂರ್ಣ ಸ್ವದೇಶಿ ಲಸಿಕೆ. ಕೊವ್ಯಾಕ್ಸಿನ್ ಲಸಿಕೆಗೆ ಈಗ ದೇಶ ಮತ್ತು ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಹೀಗಾಗಿ ಕೇಂದ್ರ ಸರ್ಕಾರವು ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದೆ .

 

ಭಾರತ್ ಬಯೋಟೆಕ್ ಕಂಪನಿಗೆ ಲಸಿಕೆಯ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಆರು ಮಂದಿಯ ತಂಡ ಸೂಚನೆಯನ್ನು ನೀಡಿದೆ. ಹೀಗಾಗಿ ಭಾರತ್ ಬಯೋಟೆಕ್ ಕಂಪನಿಯು ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸಲು ನಿರ್ಧರಿಸಿದೆ . ಸದ್ಯಕ್ಕೆ ಭಾರತ್ ಬಯೋಟೆಕ್ ಕಂಪನಿಯು ಹೈದರಾಬಾದ್‌ ಬಳಿಯ ತನ್ನ ಘಟಕದಲ್ಲಿ ಮಾತ್ರ ಕೊರೊನಾ ಲಸಿಕೆಯನ್ನು ಉತ್ಪಾದಿಸುತ್ತಿದೆ. ಹೈದರಾಬಾದ್ ಬಳಿಯ ಘಟಕದಲ್ಲಿ ಪ್ರತಿ ತಿಂಗಳಿಗೆ 40 ಲಕ್ಷ ಡೋಸ್ ಉತ್ಪಾದಿಸುವ ಸಾಮರ್ಥ್ಯ ಇದೆ. ಆದದೆ, ಇದಕ್ಕಿಂತ ಹೆಚ್ಚಿನ ಬೇಡಿಕೆಯು ಈಗ ಕೋವ್ಯಾಕ್ಸಿನ್ ಲಸಿಕೆಗೆ ಇದೆ. ಭಾರತವು ಕೇವಲ, ತನಗೆ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಲಸಿಕೆ ಉತ್ಪಾದಿಸಿ ಲಸಿಕೆ ಪೂರೈಸಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಬಯಕೆ.

ಜುಲೈನಿಂದ ಮಾಲೂರಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ
ಭಾರತ್ ಬಯೋಟೆಕ್ ಕಂಪನಿಯು ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ತನ್ನ ಹೊಸ ಉತ್ಪಾದನಾ ಘಟಕ ಆರಂಭಿಸುತ್ತಿದೆ. ಈಗಾಗಲೇ ಹೊಸ ಉತ್ಪಾದನಾ ಘಟಕ ನಿರ್ಮಾಣ ಹಂತದಲ್ಲಿದೆ. ಮಾಲೂರು ಘಟಕದಲ್ಲಿ ಪ್ರತಿ ತಿಂಗಳು 2 ಕೋಟಿ ಡೋಸ್ ಉತ್ಪಾದಿಸಬೇಕೆಂಬ ಗುರಿಯನ್ನು ಭಾರತ್ ಬಯೋಟೆಕ್ ಕಂಪನಿಯು ಹಾಕಿಕೊಂಡಿದೆ. ಈ ಮೂಲಕ ಬೇಡಿಕೆಗೆ ತಕ್ಕಂತೆ ಲಸಿಕೆಯನ್ನು ಭಾರತ ಹಾಗೂ ವಿದೇಶಗಳಿಗೆ ಪೂರೈಸಬಹುದು ಎನ್ನುವ ಲೆಕ್ಕಾಚಾರ ಕೇಂದ್ರ ಸರ್ಕಾರ ಹಾಗೂ ಭಾರತ್ ಬಯೋಟೆಕ್ ಕಂಪನಿಯದ್ದಾಗಿದೆ.

ಭಾರತ್ ಬಯೋಟೆಕ್ ಕಂಪನಿಯು ಹೈದರಾಬಾದ್ ಘಟಕದಲ್ಲಿನ ಉತ್ಪಾದನಾ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಲಿದೆ. ಪ್ರತಿ ತಿಂಗಳು 80ಲಕ್ಷ ಡೋಸ್ ಲಸಿಕೆಯನ್ನು ಹೈದರಾಬಾದ್ ಬಳಿಯ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದರ ಜೊತೆಗೆ ಗುಜರಾತ್​ನ ಅಂಕಲೇಶ್ವರ ಬಳಿಯ ಘಟಕದಲ್ಲೂ ಭಾರತ್ ಬಯೋಟೆಕ್ ಕಂಪನಿಯು ಕೋವ್ಯಾಕ್ಸಿನ್​ ಲಸಿಕೆ ಉತ್ಪಾದಿಸಲು ಉಪಾಯ ಮಾಡಿಕೊಂಡಿದೆ.

ಮೇ ತಿಂಗಳ ವೇಳೆಗೆ ಭಾರತ್ ಬಯೋಟೆಕ್ ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಿದೆ. ಜುಲೈ ತಿಂಗಳ ವೇಳೆಗೆ ಮಾಲೂರು ಘಟಕ ಕಾರ್ಯಾರಂಭ ಮಾಡುವುದರಿಂದ ಉತ್ಪಾದನಾ ಸಾಮರ್ಥ್ಯ ಏಳು ಪಟ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಹೇಳಿದೆ. 2021ರ ಅಂತ್ಯದ ವೇಳೆಗೆ ತಮ್ಮ ಕಂಪನಿಯು 70 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸಲಿದೆ ಎನ್ನುವ ಸುಳಿವುನ್ನು ಭಾರತ್ ಬಯೋಟೆಕ್ ಕಂಪನಿಯ ಸಿಇಒ ಕೃಷ್ಣಾ ಎಲಾ ನೀಡಿದ್ದಾರೆ.

ಸದ್ಯ ಭಾರತ್ ಬಯೋಟೆಕ್ ಕಂಪನಿಯು ಹೈದರಾಬಾದ್ ಘಟಕದಲ್ಲಿ ಬಯೋಸೆಫ್ಟಿ ಲೆವೆಲ್-3 ( ಬಿಎಸ್‌ಎಲ್‌-3) ಸೌಲಭ್ಯ ಹೊಂದಿದೆ. ಮಾಲೂರು ಘಟಕದಲ್ಲಿ ಬಯೋಸೆಫ್ಟಿ ಲೆವೆಲ್-4 ಸೌಲಭ್ಯವನ್ನು ನೀಡಲಾಗುತ್ತಿದೆ. ಹೀಗಾಗಿ ಹೈದರಾಬಾದ್ ಘಟಕ ಮತ್ತು ಕೋಲಾರದ ಮಾಲೂರು ಘಟಕಗಳಿಂದ ಕೊರೊನಾ ವೈರಸ್ ವಿರುದ್ಧದ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಬಹುದು ಎನ್ನುವುದು ಕೇಂದ್ರ ಸರ್ಕಾರ ಹಾಗೂ ಭಾರತ್ ಬಯೋಟೆಕ್ ಕಂಪನಿಯ ಉದ್ದೇಶ. ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಭಾರತ್ ಬಯೋಟೆಕ್ ಕಂಪನಿಗೆ 2 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಸಲು ಬೇಡಿಕೆ ನೀಡಿದೆ.

ಒಂದು ಲಕ್ಷ ದಾಟಿದ ಹೊಸ ಕೊರೊನಾ ಕೇಸ್‌
ಭಾರತ ಮತ್ತು ವಿಶ್ವದ ಅನೇಕ ಪ್ರಮುಖ ದೇಶಗಳಲ್ಲಿ ನಿತ್ಯ ಪತ್ತೆಯಾಗುತ್ತಿರುವ ಕೊರೊನಾದ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಏಪ್ರಿಲ್‌ 5ರ ಸೋಮವಾರ ಬರೊಬ್ಬರಿ 1 ಲಕ್ಷದ 3 ಸಾವಿರ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿವೆ. ಕಳೆದ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಕೇಸ್​ಗಳು ಒಂದು ಲಕ್ಷದ ಗಡಿ ದಾಟಿದ್ದವು. ಈಗ ಮತ್ತೆ ಪ್ರಕರಣ ಲಕ್ಷದ ಗಡಿ ದಾಟಿವೆ. ಹೀಗಾಗಿ ದೇಶದಲ್ಲಿ ಜನರು ಕೊರೊನಾವನ್ನು ಮಣಿಸಲು ಲಸಿಕೆ ಪಡೆಯುವುದೊಂದೇ ದಾರಿ. ಹೀಗಾಗಿ ಲಸಿಕೆ ಉತ್ಪಾದಿಸುವ ಕಂಪನಿಗಳು ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ.

ಇದನ್ನೂ ಓದಿ: ಕಳೆದ ವರ್ಷದಂತೆ.. ಈ ಬಾರಿಯೂ ಬೆಂಗಳೂರು ಕರಗದ ಸಂಭ್ರಮಕ್ಕೆ ಕೊರೊನಾ ಬ್ರೇಕ್

Covid-19 India Update: ಕಳೆದ 24 ಗಂಟೆಗಳಲ್ಲಿ 72,330 ಹೊಸ ಕೊವಿಡ್ ಪ್ರಕರಣ ಪತ್ತೆ, 459 ಮಂದಿ ಸಾವು

(covaxin India’s homegrown vaccine Bharat Biotech will soon be produced in Karnataka)