ತುಮಕೂರು: ನಗರದ ಸಿದ್ದಗಂಗಾ ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಪ್ರಸಿದ್ಧ. ಈ ಪುಣ್ಯಕ್ಷೇತ್ರದಲ್ಲಿ ನಡೆಯುವ ಬೃಹತ್ ದನಗಳ ಜಾತ್ರೆ ಬಹುಶಃ ಬೇರೆ ಎಲ್ಲೂ ನಡೆಯುವುದಿಲ್ಲ ಅನಿಸುತ್ತದೆ. ಯಾಕೆಂದರೆ ಕರ್ನಾಟಕದ ಮೂಲೆ ಮೂಲೆಗಳಿಂದ ರೈತರು ದನಗಳನ್ನ ಮಾರುವುದಕ್ಕೆ ಮತ್ತು ಕೊಳ್ಳುವುದಕ್ಕೆ ಈ ಜಾತ್ರೆಗೆ ಆಗಮಿಸ್ತಾರೆ. ಅಲ್ಲದೇ ಅದೆಷ್ಟೋ ಜನರು ಕೇವಲ ಈ ದನಗಳ ಜಾತ್ರೆಯನ್ನು ನೋಡಿ ಕಣ್ತುಂಬಿಕೊಳ್ಳುವುದಕ್ಕಾಗಿಯೇ ಈ ದನಗಳ ಜಾತ್ರೆಗೆ ಆಗಮಿಸುತ್ತಾರೆ.
ಕೊರೊನಾ ಬಳಿಕ ಮೊದಲ ದನಗಳ ಜಾತ್ರೆ ನಡೆದಿದ್ದು, ಹಲವಾರು ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. ಕೆಲವರು ಮಾರಾಟ ಮಾಡಲು ಬಂದರೆ ಇನ್ನೂ ಕೆಲವರು ಕೊಳ್ಳಲು ಬಂದಿದ್ದರು. ಆದರೆ ಈ ಬಾರಿ ನಿರೀಕ್ಷೆ ಮಟ್ಟದಲ್ಲಿ ದನಗಳ ವ್ಯಾಪಾರ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಸರ್ಕಾರ ಗೋಹತ್ಯೆ ನಿಷೇಧ ಮಾಡಿದ ಬಳಿಕ ವಯಸ್ಸಾದ ರಾಸುಗಳನ್ನ ಏನು ಮಾಡಬೇಕು ಎನ್ನುವ ಪ್ರಶ್ನೆ ರೈತರದ್ದಾಗಿದೆ.
ಜಾತ್ರೆಯಲ್ಲಿ ದಲ್ಲಾಳಿಗಳ ಹಾವಳಿ ಕೂಡ ಸಾಮಾನ್ಯವಾಗಿತ್ತು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ದಲ್ಲಾಳಿಗಳು ಇಬ್ಬರ ಮಧ್ಯೆ ಕುಳಿತು ವ್ಯವಹಾರ ಕುದುರಿಸಿ ರಾಸುಗಳನ್ನ ಕೊಳ್ಳಲು ಹಾಗೂ ಮಾರಾಟ ಮಾಡುವುದಕ್ಕೆ ಎಲ್ಲಾ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಕೈ ಮೇಲೆ ಟವೆಲ್ ಹಾಕಿ ಇಷ್ಟು ಹಣ ಓಕೆ ಅಂತಾ ವ್ಯವಹಾರ ಕುದುರಿಸಿ ರಾಸುಗಳನ್ನ ರೈತರು ಕೊಳ್ಳಲು ಮಾರಲು ಸಹಕಾರಿಯಾಗುತ್ತಾರೆ. ಜೊತೆಗೆ ಇಬ್ಬರ ಬಳಿಯೂ ಉತ್ತಮ ಕಮಿಷನ್ ಪಡೆದು ಹೋಗುತ್ತಾರೆ.
ಶಿವರಾತ್ರಿ ಹಬ್ಬಕ್ಕೆ 20 ದಿನಗಳ ಮುಂಚೆ ಈ ದನಗಳ ಜಾತ್ರೆ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ. ನೋಡುಗರ ಕಣ್ಣಿಗೆ ಕಾಣುವಷ್ಟೂ ದೂರ ದನಗಳ ಜಾತ್ರೆಯೇ ಕಾಣುತ್ತದೆ. ಇನ್ನು 30, 40, 50 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುವ ದನಗಳ ವ್ಯಾಪಾರ ನಾಲ್ಕೈದು ಲಕ್ಷ ರೂಪಾಯಿಗಳವರೆಗೂ ನಡೆಯುತ್ತದೆ. ದನಗಳನ್ನ ಅವುಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಇಂತಿಷ್ಟು ಹಣವನ್ನ ನಿಗದಿಮಾಡಲಾಗುತ್ತದೆ.
ಆಕರ್ಷಕ ಹಳ್ಳಿಕಾರ್ ತಳಿ
ಎಲ್ಲಾ ತಳಿಗಳು ಕೂಡ ಜಾತ್ರೆಯಲ್ಲಿ ಭಾಗಿಯಾಗಿದ್ದವು. ಪ್ರಮುಖವಾಗಿ ಹಳ್ಳಿಕಾರ್ ತಳಿ ಆಕರ್ಷಣೆಯಾಗಿತ್ತು. ಮಾಲೀಕರು ಕೂಡ ದನಗಳಿಗೆ ಸಾಕಷ್ಟು ಹಣ ಖರ್ಚು ಮಾಡಿ ಆರೈಕೆ ಮಾಡಿರುತ್ತಾರೆ. ಜಾತ್ರೆಯಲ್ಲಿ ಹೆಚ್ಚು ಹಣದ ದನಗಳಿಗೆ ಶಾಮಿಯಾನ ಹಾಕಿಸಿ, ದನಗಳನ್ನ ಸಿಂಗರಿಸಿ ಇರಿಸಲಾಗಿರುತ್ತದೆ. ದುಬಾರಿ ದನಗಳನ್ನ ಮೆರವಣಿಗೆ ಮೂಲಕ ಜಾತ್ರೆಗೆ ಕರೆತರುವುದು ಉಂಟು.
ಇದನ್ನೂ ಓದಿ
ಬೇಸಿಗೆಗೆ ಮುನ್ನವೇ ಹುಬ್ಬಳ್ಳಿಯಲ್ಲಿ ಹನಿ ನೀರಿಗಾಗಿ ಹಾಹಾಕಾರ: ಶಾಸಕ, ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ
ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ