ದಕ್ಷಿಣ ಕನ್ನಡ: ಬ್ರಹ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ರಾಜಕೀಯದಲ್ಲಿ ಸರಳತೆ, ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಸರಾಗಿರುವ ಜಿಲ್ಲೆಯ ಏಕೈಕ ವ್ಯಕ್ತಿ ನನ್ನ ಗುರುಗಳಾದ ಜನಾರ್ದನ ಪೂಜಾರಿ ಒಬ್ಬರೇ. ನಾನಿನ್ನು ಅವರಷ್ಟು ಎತ್ತರಕ್ಕೆ ಬೆಳೆಯಲು ಬಹಳಷ್ಟು ಕಾಲಾವಕಾಶ ಬೇಕಿದೆ. ಹೀಗಾಗಿ ಬ್ರಹ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ಅರ್ಹ ವ್ಯಕ್ತಿ ನಾನಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ
ಉಳ್ಳಾಲದ ಬಿಲ್ಲವ ವೇದಿಕೆಯಿಂದ ನಳಿನ್ ಕುಮಾರ್ ಕಟೀಲ್ಗೆ ಬ್ರಹ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಈ ಪ್ರಶಸ್ತಿಗೆ ಕೆಲವರಿಂದ ಅಪಸ್ವರ ಎದ್ದಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸಿದರೂ, ಬ್ರಹ್ಮಶ್ರೀ ಪ್ರಶಸ್ತಿ ಸ್ವೀಕರಿಸದ ನಳಿನ್ ಕುಮಾರ್ ನಯವಾಗಿ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಜನಾರ್ಧನ ಪೂಜಾರಿ
ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ನೆರಳಲ್ಲಿ ತೊಕ್ಕಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ ಮೆರುಗು 2021ರ ಪ್ರತಿಭಾ ಅನಾವರಣದ ಹೊಸ್ತಿಲು ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಳಿನ್ ಕುಮಾರ್ ನಮ್ಮಂತಹ ರಾಜಕಾರಣಿಗಳು ಬ್ರಹ್ಮಶ್ರೀಯಂತಹ ಪ್ರಶಸ್ತಿಗೆ ಅರ್ಹರಲ್ಲ ಎಂದು ಹೇಳಿದ್ದಾರೆ.
ನಾನು ಸನ್ಮಾನ, ಪ್ರಶಸ್ತಿ ಎಲ್ಲೂ ಸ್ವೀಕರಿಸಲ್ಲ, ಅಷ್ಟು ಎತ್ತರಕ್ಕೆ ಏರಿಲ್ಲ ಎಂದ ನಳಿನ್ ಕುಮಾರ್ ಈ ಜಿಲ್ಲೆಯಲ್ಲಿ ಬ್ರಹ್ಮಶ್ರೀ ಪ್ರಶಸ್ತಿ ಪಡೆಯಲು ಅರ್ಹ ವ್ಯಕ್ತಿ ಇದ್ದಾರೆ. ಒಂದಂತೂ ದೇವರ ಪ್ರಮಾಣವಾಗಿ ಹೇಳುವುದಾದರೆ ನಾನು ಯಾವ ಜಾತಿಗೂ ಸಂಬಂಧಿಸಿದವನಲ್ಲ. ಹಿಂದೂ ಸಂಸ್ಕೃತಿಯಲ್ಲಿ ಅಚಲ ನಂಬಿಕೆಯಿಟ್ಟು ಮನ್ನಡೆಯುತ್ತೇನೆ. ನಾನು ಮೂರು ಬಾರಿ ಸಂಸದನಾಗುವುದಕ್ಕೆ ಬಿಲ್ಲವ ಸಮುದಾಯವೂ ಕಾರಣ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸುತ್ತಿರುವ ದೃಶ್ಯ
ಈ ಕಾರ್ಯಕ್ರಮದಲ್ಲಿ ಉಳ್ಳಾಲ ಬಂಟರ ಸಂಘದ ಅಧ್ಯಕ್ಷರಾದ ಸುರೇಶ್ ಚೌಟ, ಉಳಿಯ ಶ್ರೀ ಉಳ್ಳಾಲ್ತಿ ಧರ್ಮಸರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕುತ್ತಾರು, ಕುಲಾಲ ಸಂಘದ ಜಿಲ್ಲಾಧ್ಯಕ್ಷ ಮಯೂರ್ ಉಳ್ಳಾಲ್, ಗಟ್ಟಿ ಸಮಾಜದ ಕಾರ್ಯದರ್ಶಿ ಪದ್ಮನಾಭ ಗಟ್ಟಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಬು ಶಾಸ್ತ್ರ ಕಿನ್ಯ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಉಳ್ಳಾಲ್, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ .ಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ಗೆ 3 ಶಾಪ ಇದೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿಕೆ