ಕೋಮು ಕ್ರಿಮಿಗಳ ಹುಟ್ಟಡಗಿಸಲು ಬಂದ ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಏನಿದರ ಕೆಲಸ? ಇದರಲ್ಲಿ ಯಾರ್ಯಾರು ಇರ್ತಾರೆ?
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷಗಳನ್ನು ತಡೆಯಲು ಕರ್ನಾಟಕ ಸರ್ಕಾರ ವಿಶೇಷ ಕಾರ್ಯಪಡೆ (SAF) ಅನ್ನು ಸ್ಥಾಪಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಜೂನ್ 13ರಂದು ಈ ವಿಶೇಷ ಫೋರ್ಸ್ ಉದ್ಘಾಟನೆ ಮಾಡಿದ್ದಾರೆ. ಆ ಮೂಲಕ ಕಿಡಿಗೇಡಿಗಳ ಹುಟ್ಟಡಗಿಸಲು ಮುಂದಾಗಿದೆ. ಇನ್ನು ಈ ಆ್ಯಕ್ಷನ್ ಪೋರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ? ವಿಶೇಷ ಕಾರ್ಯಪಡೆ ಎಷ್ಟು ಸಿಬ್ಬಂದಿ ಒಳಗೊಂಡಿದೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮಂಗಳೂರು, (ಜೂನ್ 16): ಕೋಮು ವೈಷಮ್ಯ ಪ್ರಕರಣ ( communal Cases) ತಡೆಯಲು ಮಂಗಳೂರನ್ನು ಕೇಂದ್ರೀಕರಿಸಿ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲು ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ಎಸ್‌ಎಎಫ್ ) (Special Action Force) ಸ್ಥಾಪಿಸಲಾಗಿದೆ. ಇದು ಕೋಮು ವೈಷಮ್ಯ ತಡೆಯಲು ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾದ ಸಂಸ್ಥೆಯಾಗಿದೆ. ದಕ್ಷಿಣ ಕನ್ನಡ (Dakshina Kannada) , ಉಡುಪಿ (Udupi) ಮತ್ತು ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಕೋಮು ದ್ವೇಷದ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯದಿಂದ ಸರಣಿ ಹತ್ಯೆಗಳು ನಡೆಯುತ್ತಿವೆ. ಕೋಮು ವೈಷಮ್ಯದಿಂದ ಜಿಲ್ಲೆಯಲ್ಲಿ ಜನರು ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ (ಸ್ಪೆಷಲ್ ಆ್ಯಕ್ಷನ್ ಫೋರ್ಸ್-ಎಸ್‌ಎಎಫ್) ಸ್ಥಾಪಿಸಿ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ.
DIG ದರ್ಜೆ ಅಧಿಕಾರಿ ನೇತೃತ್ವದಲ್ಲಿ ಕಾರ್ಯ
ಈ ಸ್ಪೆಷಲ್ ಆ್ಯಕ್ಷನ್ ಪೋರ್ಸ್ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದೆ. DIG ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತೆ. ದಕ್ಷಿಣ, ಶಿವಮೊಗ್ಗ, ಉಡುಪಿ ಈ 3 ಕಾರ್ಯಪಡೆ ಒಟ್ಟು 248 ಸಿಬ್ಬಂದಿ ಒಳಗೊಂಡಿದ್ದು, ಬಹುತೇಕ ಸಿಬ್ಬಂದಿ ಎ.ಎನ್.ಎಫ್ ನಿಂದ ಬಂದವರು. ANF ಪಡೆಯಲ್ಲಿದ್ದ 656 ಸಿಬ್ಬಂದಿಯಲ್ಲಿ 248 ಸಿಬ್ಬಂದಿ ಈ SAF ಪಡೆಗೆ ನಿಯೋಜನೆ ಮಾಡಲಾಗಿದೆ. 3 ಕಾರ್ಯಪಡೆಯಲ್ಲಿ ತಲಾ 80 ಸಿಬ್ಬಂದಿ ಇದ್ದಾರೆ. ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ಸ್ಪೆಕ್ಟರ್, 16 ಪಿಎಸ್ ಐ, ಸೇರಿದಂತೆ 248 ಸಿಬ್ಬಂದಿಯನ್ನು ಈ ಪಡೆ ಒಳಗೊಂಡಿವೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಗೃಹ ಸಚಿವ ಪರಮೇಶ್ವರ್ ಚಾಲನೆ
ಉಡುಪಿ ಕಾರ್ಯಪಡೆಯಲ್ಲಿ ಎಷ್ಟು ಸಿಬ್ಬಂದಿ?
ಕಾರ್ಕಳದಲ್ಲಿ ಕೇಂದ್ರ ಸ್ಥಾನದಲ್ಲಿರುವ ನಕ್ಸಲ್ ನಿಗ್ರಹ ದಳ ( ಎಎನ್ಎಫ್ ) ದ 656 ಸಿಬ್ಬಂದಿಗಳಲ್ಲಿ 248 ಸಿಬ್ಬಂದಿಗಳನ್ನು ಎಸ್‌ಎಎಫ್ ಗೆ ನಿಯೋಜಿಸಲಾಗಿದೆ. ಇದರಲ್ಲಿ ಡಿಐಜಿಪಿ 1, ಡಿವೈಎಸ್ಪಿ ಸಿವಿಲ್ 1, ಸಹಾಯಕ ಕಮಾಂಡೆಂಟ್ 1, ಪಿಐ/ ಆರ್ಪಿಐ 4, ಪಿಎಸ್ಐ/ ಆರ್ಎಸ್ಐ/ ಎಸ್ಐ 16, ಸಿಹೆಚ್ಸಿ 60 , ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಇರಲಿದ್ದಾರೆ.
ಮಂಗಳೂರಿನಲ್ಲಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವ
ಮಂಗಳೂರು ಕೇಂದ್ರ ಸ್ಥಾನದಲ್ಲಿ ಡಿಐಜಿಪಿ 1, ಎಸ್ಪಿ 1, ಡಿವೈಎಸ್ಪಿ 1, ಸಹಾಯಕ ಕಮಾಂಡೆಂಟ್ 1, ಪಿಐ/ಆರ್ಪಿಐ 1, ಪಿಎಸ್ಐ, ಆರ್ಎಸ್ಐ, ಎಸ್ಐ 1, ಸಿಹೆಚ್ಸಿ 3 , ಪಿಸಿಪಿ, ಎಪಿಸಿ 6 ಇದ್ದು, ಒಟ್ಟು 15 ಸಿಬ್ಬಂದಿ ಇದೆ. ಮಂಗಳೂರಿನಲ್ಲಿ ಸರಣಿ ಹತ್ಯೆ ಬಳಿಕ ನೂತನ ನಗರ ಪೊಲೀಸ್ ಕಮೀಷನರ್ ಆಗಿ ನೇಮಕಗೊಂಡಿರುವ ಸುಧೀರ್ ಕುಮಾರ್ ರೆಡ್ಡಿ ಅವರು ಎಸ್‌ಎಎಫ್ ಫೋರ್ಸ್ನ ಮುಖ್ಯಸ್ಥರಾಗಿದ್ದಾರೆ. ಇವರು ವಿಶೇಷ ಕಾರ್ಯಪಡೆಯ ಡಿಐಜಿಪಿ ಹುದ್ದೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ.
ಇನ್ನು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ತಲಾ ಒಂದು ಪಿಐ/ ಆರ್ಪಿಐ, 5 ಪಿಎಸ್ಐ / ಆರ್ಎಸ್ಐ / ಎಸ್ಐ, 19 ಸಿಹೆಚ್ಸಿ , 48 ಸಿಪಿಸಿ/ಎಪಿಸಿ ಮತ್ತು 5 ಸಿಬ್ಬಂದಿ ಇದ್ದಾರೆ. ಮೂರು ಜಿಲ್ಲೆಗೂ ತಲಾ 78 ಸಿಬ್ಬಂದಿ ಒಳಗೊಂಡಿದೆ.
ಈ ಪೋರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ?
ಸರ್ಕಾರ ನಡವಳಿಯನ್ನು ಮಾಡಿ ಈ ಪೋರ್ಸ್ ನ್ನು ಕಾರ್ಯಾಚರಣೆಗೆ ಇಳಿಸಿದೆ.ಸದ್ಯ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಈ ವಿಶೇಷ ಕಾರ್ಯಪಡೆಯ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ.ಮಂಗಳೂರಿನಲ್ಲೇ ಈ ಕಾರ್ಯಪಡೆಯ ಕೇಂದ್ರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಆಗುವ ಚಟುವಟಿಕೆಗಳ ಮೇಲೆ ಈ ಪೋರ್ಸ್ ತೀವ್ರ ನಿಗಾ ಇಡುತ್ತೆ.
ಈ ಪೋರ್ಸ್ ಗೆ ಪ್ರಕರಣಗಳ ಬಗೆಗೆ ಯಾವುದೇ ರೀತಿಯ ವಿಚಾರಣೆ ಮಾಡುವ ಅಧಿಕಾರ ಇಲ್ಲ. ಬದಲಾಗಿ ಗುಪ್ತ ಮಾಹಿತಿ ಸಂಗ್ರಹಿಸಿ ಕೋಮು ಘರ್ಷಣೆ ನಿಗ್ರಹಿಸಲಿದೆ. ಸಂಭಾವ್ಯ ಕೋಮು ಹಿಂಸಾಚಾರ, ಕೋಮು ಗಲಭೆಯಂತಹ ಸಂಚುಗಳನ್ನು ವಿಫಲ ಗೊಳಿಸಲು ಈ ತಂಡದ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.ಕೋಮು ಹಿಂಸಾಚಾರ ಸಂಬಂಧಿ ಚಟುವಟಿಕೆ ಮೇಲೆ SAF ಕಣ್ಣಾವಲು ಇಡಲಿದೆ. ವಿಶ್ವಾಸ ವೃದ್ಧಿಸುವ ಕ್ರಮಗಳನ್ನು ಕೈಗೊಳ್ಳುವುದು,ಮೂಲಭೂತವಾದಿ ಚಟುವಟಿಕೆ ಗುರುತಿಸಿ ನಿಗ್ರಹಿಸುವುದು SAF ಕರ್ತವ್ಯವಾಗಿರುತ್ತೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.