17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು
ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಏಕಾಂಗಿಯಾಗಿದ್ದರೂ, ಯಾರ ಸಹಾಯವನ್ನೂ ಈವರೆಗೆ ಪಡೆದಿಲ್ಲ. ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ಮತ್ತು ನಿತ್ಯಕರ್ಮಗಳು ನಡೆಯುತ್ತದೆ. ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಿ ಅಡ್ತಲೆ ಗ್ರಾಮದ ಅಂಗಡಿಯೊಂದಕ್ಕೆ ಮಾರಾಟ ಮಾಡಿ ನಿತ್ಯದ ಆಹಾರ ಸಾಮಗ್ರಿಗಳುನ್ನು ಖರೀದಿಸುತ್ತಾರೆ.
ಮಂಗಳೂರು: ಇವರು ನೋಡಲು ಕಾಡು ಮನುಷ್ಯನಂತೇ ಕಾಣುತ್ತಾರೆ. ಆದರೆ ಅವರು ನಿಜಕ್ಕೂ ಕಾಡು ಮನುಷ್ಯನಲ್ಲ. ಮೃದು ಮನಸ್ಸಿನ ವ್ಯಕ್ತಿಯಿವರು. ಅಂದಹಾಗೆ ನಾಗರಿಕ ಸಮಾಜದಿಂದ ದೂರ ಇರಬೇಕೆಂದು ತೀರ್ಮಾನಿಸಿ 17 ವರ್ಷವೇ ಕಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಂಚಿನ ಕಾಡು ಪ್ರದೇಶದಲ್ಲಿ 17 ವರ್ಷಗಳಿಂದ ಓರ್ವ ವ್ಯಕ್ತಿ ಕಾಡಿನಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ಪ್ರೀಮಿಯರ್ ಪದ್ಮಿನಿ ಕಾರಿನ ಮೇಲೆ ಗುಡಿಸಲೊಂದನ್ನು ನಿರ್ಮಿಸಿ ಕಾಡಿನಲ್ಲೇ ವಾಸಮಾಡುತ್ತಿದ್ದಾರೆ. ಸುಳ್ಯ ತಾಲೂಕಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಅರಂತೋಡು ಗ್ರಾಮದ ಅಡ್ತಲೆ-ನೆಕ್ಕರೆ ದುರ್ಗಮ ಅರಣ್ಯದ ನಡುವೆ ಸಾಗಿದರೆ ಸಾಕು, ಒಂದು ಸಣ್ಣ ಪ್ಲಾಸ್ಟಿಕ್ ಹೊದಿಕೆಯುಳ್ಳ ಅವರ ಗುಡಿಸಲು ಕಾಣಸಿಗುತ್ತದೆ.
ಗುಡಿಸಲಿನ ಒಳಗೆ ಹಳೆಯ ಅಂಬಾಸಿಡರ್ ಕಾರ್ ಒಳಗೆ ಓರ್ವ ವ್ಯಕ್ತಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕಾಡು ಮನುಷ್ಯನಂತೆ ಕಾಣಿಸುವ ಇವರು ನಿಜಕ್ಕೂ ಕಾಡು ಮನುಷ್ಯನಲ್ಲ. ವಿದ್ಯಾವಂತ ವ್ಯಕ್ತಿ. ಇವರ ಹೆಸರು ಚಂದ್ರಶೇಖರ್. ಮೂಲತಃ ಸುಳ್ಯ ತಾಲೂಕಿನ ನೆಕ್ರಾಲ್ ಕೆಮ್ರಾಜೆ ಗ್ರಾಮದವರು. 2003ರವರೆಗೆ ಚಂದ್ರಶೇಖರ್ ಎಲ್ಲರಂತೆ ನಾಗರೀಕರಾಗಿ ಬದುಕುತ್ತಿದ್ದರು. ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡುತ್ತಾ ಒಳ್ಳೆಯ ಜೀವನವನ್ನು ನಡೆಸುತ್ತಿದ್ದರು. ಎಲಿಮಲೆ ಸಹಕಾರಿ ಬ್ಯಾಂಕ್ ನಿಂದ 40 ಸಾವಿರ ಸಾಲ ಪಡೆದುಕೊಂಡ ಚಂದ್ರಶೇಖರ್ ಸಾಲ ಮರುಪಾವತಿ ಮಾಡಲಾಗದೆ ಈ ಪರಿಸ್ಥಿತಿಗೆ ಬಂದಿದ್ದಾರೆ. ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡಿದೇ ಇದ್ದದ್ದರಿಂದ ಅವರ ಜಮೀನನ್ನು ಬ್ಯಾಂಕ್ ಹರಾಜು ಹಾಕಿತ್ತು. ಇದರಿಂದ ಸೂರು ಕಳೆದುಕೊಂಡು ಚಂದ್ರಶೇಖರ್ ನಾಗರಿಕ ಸಮಾಜವನ್ನು ಧಿಕ್ಕರಿಸಿ ಕಾಡಿನತ್ತ ಮುಖ ಮಾಡಿ ವಾಸವಿದ್ದಾರೆ.
ಬ್ಯಾಂಕ್ನವರು ಸರಿಯಾದ ನಿಯಮವನ್ನು ಕೂಡ ಪಾಲಿಸದೇ ಚಂದ್ರಶೇಖರ್ ಆಸ್ತಿಯನ್ನು ಹರಾಜಿಗಿಟ್ಟರು. ಬ್ಯಾಂಕ್ ನವರು ಸಣ್ಣ ಮೊತ್ತಕ್ಕೆ ಇವರ ಕೃಷಿ ಜಮೀನಿನನ್ನು ಹರಾಜಿಗಿಟ್ಟಾಗ ಚಂದ್ರಶೇಖರ್ ಆಘಾತ ಉಂಟಾಯಿತು. ಇವರು ಮಾಡಿದ್ದ ಸಾಲಕ್ಕಾಗಿ ಇವರ ಜಮೀನನ್ನು ಹರಾಜು ಮಾಡಿದರು. ಇದನ್ನು ನೋಡಿ ಆಡಳಿತ ವ್ಯವಸ್ಥೆಯ ಮೇಲೆ ಬೇಜಾರಾಯಿತು. ತನ್ನ ಪ್ರೀತಿಯ ಪ್ರೀಮಿಯರ್ ಪದ್ಮಿನಿ ಅಂಬಾಸಿಡರ್ ಕಾರನ್ನು ತೆಗೆದುಕೊಂಡು ತನ್ನ ಅಕ್ಕನ ಮನೆಯಾದ ಅರಂತೋಡು ಗ್ರಾಮದ ಅಡ್ತಲೆಗೆ ಚಂದ್ರಶೇಖರ್ ಹೋದರು. ನಂತರದ ದಿನಗಳಲ್ಲಿ ಅಕ್ಕನ ಮನೆಯಲ್ಲೂ ಇರುಸು ಮುರುಸು ಆಗಿ ಚಂದ್ರಶೇಖರ್ ಒಬ್ಬಂಟಿಯಾಗಿ ಇರುವ ನಿರ್ಧಾರ ತಳೆದರು. ಆಗಲೇ ಎಲ್ಲಿ ಹೋದರೂ ಮೋಸದ ಪ್ರಪಂಚ ಎಂದು ಚಂದ್ರಶೇಖರ್ ನಿರ್ಧರಿಸಿಯಾಗಿತ್ತು. ಆಗಲೇ ಅವರನ್ನು ಸೆಳೆದಿದ್ದು ಕಾಡು.
ಅದು ಅಂತಹ ದಟ್ಟಾರಣ್ಯವೇನಲ್ಲ. ಆದರೆ ಈ ಕಾಡು ರಾತ್ರಿಯಾದರೆ ಭಯಾನಕ. ವನ್ಯಜೀವಿಗಳ ಸಂಚಾರ ಇರುವ ಅರಣ್ಯ ಇದು. ಕಾಡಮಧ್ಯೆ ಕಾರನ್ನು ನಿಲ್ಲಿಸಿ, ಕಾರಿನ ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಸಿ ಒಂದು ಗುಡಿಸಲಿನ ಹಾಗೆ ಮಾಡಿ ಅದನ್ನೇ ತನ್ನ ಪ್ರಪಂಚವಾಗಿಸಿ ಚಂದ್ರಶೇಖರ್ ಜೀವನ ಮಾಡುತ್ತಿದ್ದಾರೆ. ಚಂದ್ರಶೇಖರ್ ಕಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಏಕಾಂಗಿಯಾಗಿದ್ದರೂ, ಯಾರ ಸಹಾಯವನ್ನೂ ಈವರೆಗೆ ಪಡೆದಿಲ್ಲ. ಕಾಡಿನಲ್ಲಿ ಹರಿಯುವ ಹೊಳೆಯಲ್ಲಿ ಸ್ನಾನ ಮತ್ತು ನಿತ್ಯಕರ್ಮಗಳು ನಡೆಯುತ್ತದೆ. ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಿ ಅಡ್ತಲೆ ಗ್ರಾಮದ ಅಂಗಡಿಯೊಂದಕ್ಕೆ ಮಾರಾಟ ಮಾಡಿ ನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಇವರಿಗೆ ಕಾಡಿನ ಮಧ್ಯದಲ್ಲಿರುವ ಕಾರಿನ ಒಳಭಾಗವೇ ಪ್ರಪಂಚ. ತಮ್ಮ ಜಮೀನನ್ನು ಮೋಸದಿಂದ ಹರಾಜು ಮಾಡಿದವರಿಗೆ ಶಿಕ್ಷೆಯಾಗಿ ಮತ್ತೆ ಆ ಜಮೀನು ನನಗೆ ಸಿಗಬೇಕು ಅನ್ನೋದೇ ಚಂದ್ರಶೇಖರ್ ಬದುಕಿನ ಏಕಮಾತ್ರ ಗುರಿಯಾಗಿದೆ. ಆದರೆ ಇದರ ಪ್ರಯತ್ನಗಳನ್ನು ಇತ್ತೀಚಿಗೆ ಬಿಟ್ಟಿದ್ದಾರೆ.
ಕಾಡಿನಲ್ಲಿದ್ದರೂ ಕೊವಿಡ್ ಲಸಿಕೆ ಸಿಟಿಯಲ್ಲಿರುವ ಅದೆಷ್ಟೋ ಜನರು ಇನ್ನೂ ಕೂಡ ಕೊವಿಡ್ ಲಸಿಕೆಯನ್ನು ಪಡೆದಿಲ್ಲ. ಆದರೆ ಆಧಾರ್ ಕಾರ್ಡ್ ಇಲ್ಲದಿದ್ದರೂ, ಅರಂತೋಡು ಗ್ರಾಮ ಪಂಚಾಯತ್ ಕೊರೊನಾ ಲಸಿಕೆ ನೀಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಆಹಾರಕ್ಕೆ ತುಂಬಾ ಕಷ್ಟಪಟ್ಟಿದ್ದಾರೆ. ಆ ವೇಳೆ ತುಂಬಾ ದಿನ ಕಾಡಿನಲ್ಲಿ ಸಿಗುವ ಉತ್ಪನ್ನಗಳನ್ನು ತಿಂದು ಬದುಕಿದ್ದಾರೆ. ಚಂದ್ರಶೇಖರ್ ನಿರುಪದ್ರವಿ. ಅದೊಂದು ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಚಂದ್ರಶೇಖರ್ ತಾನಾಯಿತು ತನ್ನ ಪಾಡಾಯಿತು ಅಂತಾ ಬದುಕುತ್ತಿದ್ದಾರೆ. ಇಂದಲ್ಲ ನಾಳೆ ತಾನು ಕಳೆದುಕೊಂಡಿರುವ ಭೂಮಿ ಮರಳಿ ಸಿಗುವ ವಿಶ್ವಾಸದಿಂದ ಎಲ್ಲಾ ದಾಖಲೆಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಚಂದ್ರಶೇಖರ್ ಅವರಿಗೆ ಸದ್ಯ ಇರುವುದಕ್ಕೊಂದು ಭದ್ರವಾದ ಸೂರು, ಘಾಸಿಯಾದ ಮನಸ್ಸಿಗೊಂದು ಚಿಕಿತ್ಸೆಯ ಅಗತ್ಯವಿದೆ ಎಂಬಂತಿದೆ.
ವನ್ಯಜೀವಿಗಳೇ ಮಿತ್ರರು ಕಾಡಿನ ವಾಸಿ ಚಂದ್ರಶೇಖರ್ ಇರುವ ಅರಣ್ಯದಲ್ಲಿ ವನ್ಯಜೀವಿಗಳು ಸಾಕಷ್ಟಿವೆ. ಇವರು ಇರುವ ಕಡೆಗೆ ಕಾಡಾನೆಗಳು ಬರುತ್ತವೆ. ಜಿಂಕೆ, ಕಾಡುಕುರಿ, ಕಡವೆ, ಚಿರತೆ, ಕಾಡು ಹಂದಿ, ಕಾಡುಕೋಣ ಸೇರಿದಂತೆ ವಿವಿಧ ರೀತಿಯ ಕಾಡು ಪ್ರಾಣಿಗಳು ಇಲ್ಲಿಗೆ ಬರುತ್ತವೆ. ಹಾವುಗಳು ಚಂದ್ರಶೇಖರ್ ಕಾರಿನೊಳಗೆ ಆಗಾಗ ನುಸುಳುತ್ತಿರುತ್ತವಂತೆ. ಕೆಲವೇ ದಿನಗಳ ಹಿಂದೆ ರಾತ್ರಿ, ಬೆಳಕಿಲ್ಲದೇ ಕರಿನಾಗರ ಬಾಲ ಹಿಡಿದಿದ್ದರಂತೆ ಚಂದ್ರಶೇಖರ್. ಆದರೂ ಕಾಡುಬಿಡಲೊಲ್ಲೆ ಎನ್ನುತ್ತಾರೆ.
ವನ್ಯಜೀವಿ ಪ್ರೇಮಿ ಚಂದ್ರಶೇಖರ್ ಚಂದ್ರಶೇಖರ್ ಅವರು ಕಾಡೊಳಗೆ ವಾಸವಿದ್ದರೂ ಪ್ರಕೃತಿಗೆಂದೂ ಅಪಚಾರವೆಸಗಿಲ್ಲ. ಕಾಡಿನ ಒಂದು ಗಿಡ-ಬಳ್ಳಿಯನ್ನು ಮಾತ್ರ ಬುಟ್ಟಿಗೆ ಉಪಯೋಗಿಸುತ್ತಾರೆ. ಇದಕ್ಕಾಗಿ ಅರಣ್ಯ ಇಲಾಖೆಯೇ ಚಂದ್ರಶೇಖರ್ ಅವರಿಗೆ ಕಾಡಿನಲ್ಲಿ ವಾಸಿಸಲು ಅವಕಾಶ ನೀಡಿದೆ. ಕಾಡಿನಲ್ಲಿರುವ ಯಾವುದೇ ಉತ್ಪನ್ನ ಗಳನ್ನು ನಾನು ಬಳಸುವುದಿಲ್ಲ. ಕಾಡಿನಲ್ಲಿ ಸಿಗುವ ಬೆತ್ತವನ್ನೂ ನಾನು ಕಡಿಯುವುದಿಲ್ಲ. ಒಂದು ಸಣ್ಣ ಗಿಡ ಕಡಿದರೂ ಅರಣ್ಯ ಇಲಾಖೆ ನನ್ನ ಮೇಲಿರುವ ನಂಬಿಕೆಗೆ ನಾನು ದ್ರೋಹ ಬಗೆದಂತೆ ಎನ್ನುವ ಚಂದ್ರಶೇಖರ್ ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದ ಪ್ರಕರಣ ಚಂದ್ರಶೇಖರ್ ಅವರು ಕಾಡಿನಲ್ಲಿ ಏಕಾಂಗಿಯಾಗಿ ವಾಸವಿರುವ ಬಗ್ಗೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ಅವರ ಗಮನಕ್ಕೆ ಬಂದಿತ್ತು. ಆಗ ಚಂದ್ರಶೇಖರ್ ಇರುವ ಸ್ಥಳಕ್ಕೆ ಡಿ.ಸಿ ಭೇಟಿ ನೀಡಿದ್ದರು. ಚಂದ್ರಶೇಖರ್ ಅವರಿಗೆ ಬೇರೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ ಇದನ್ನು ಕಾರ್ಯಗತಗೊಳಿಸಿದ್ದರು. ಆದರೆ ಕೆಳಹಂತದ ಅಧಿಕಾರಿಗಳು ಚಂದ್ರಶೇಖರ್ ಅವರಿಗೆ ನೀಡಿದ ಅದೇ ಕಾಡಿನಂತಹ ಪ್ರದೇಶವಾಗಿತ್ತು. ರಬ್ಬರ್ ಕಾಡನ್ನೆ ಇವರಿಗೆ ಜಾಗ ಎಂದು ಕೊಟ್ಟಿದ್ದರು. ಆದರೆ ಅದು ಹಿಡಿಸದ ಚಂದ್ರಶೇಖರ್ ಮತ್ತೆ ಕಾಡಿಗೆ ಮರಳಿ ತನ್ನ ಅದೇ ಜಾಗದಲ್ಲಿ ವಾಸಿಸಲು ಅರಂಭಿಸಿದ್ದರು. ಸದ್ಯ ಸರ್ಕಾರ ಇವರ ಕಷ್ಟಕ್ಕೆ ಸ್ಪಂದನೆ ನೀಡಿ ಮರಳಿ ಇವರನ್ನು ನಾಗರಿಕ ಸಮಾಜಕ್ಕೆ ಕರೆತರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು
ಇದನ್ನೂ ಓದಿ:
Windows 11: ಬಹುನಿರೀಕ್ಷಿತ ಹೊಸ ಮೈಕ್ರೋಸಾಫ್ಟ್ ವಿಂಡೀಸ್ 11 ಅಪ್ಡೇಟ್ ಲಭ್ಯ: ಏನು ವಿಶೇಷತೆ?, ಅಪ್ಡೇಟ್ ಹೇಗೆ?
ಸುಳ್ಯ: ಪ್ರಧಾನಿ ಮೋದಿಯೇ ಸೂಚಿಸಿದರೂ ಊರಿನ ಬೇಡಿಕೆ ಈಡೇರಲಿಲ್ಲ! ಆಗ ಗ್ರಾಮಸ್ಥರು ಏನು ಮಾಡಿದರು ಗೊತ್ತಾ?
Published On - 6:32 pm, Thu, 7 October 21