Praveen Nettaru: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮರಣೋತ್ತರ ಪರೀಕ್ಷೆ ಅಂತ್ಯ, ಹಂತಕರ ಪತ್ತೆಗೆ ಐದು ವಿಶೇಷ ತಂಡ ರಚನೆ, ಬಿಗಿ ಬಂದೋಬಸ್ತ್
ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettar Murder) ಹತ್ಯೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ.
ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಗ್ರಾಮದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಂಗಳೂರು, ಉಡುಪಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಸ್ತುತ ಬೆಳ್ಳಾರೆಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಇದೆ. ಒಂದೇ ವಾರದ ಅವಧಿಯಲ್ಲಿ ಬೆಳ್ಳಾರೆ ಎರಡು ಕೊಲೆಗೆ ಸಾಕ್ಷಿಯಾದಂತೆ ಆಗಿದೆ. ಪ್ರವೀಣ್ ಹತ್ಯೆ ನಡೆದ ಸ್ಥಳವನ್ನು ಪೊಲೀಸರು ಕಾವಲು ಕಾಯುತ್ತಿದ್ದು, ವಿಧಿವಿಜ್ಞಾನ ತಂಡ ಭೇಟಿ ನೀಡಿ, ಪರಿಶೀಲಿಸಲಿದೆ.
ಶೀಘ್ರ ಆರೋಪಿಗಳ ಬಂಧನ: ಆರಗ ಜ್ಞಾನೇಂದ್ರ
ತಲ್ವಾರ್‌ನಿಂದ ಕೊಚ್ಚಿ ಬಿಜೆಪಿ ಯುವ ಮುಖಂಡನ ಬರ್ಬರ ಕೊಲೆ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲೀಸರು ಪ್ರವೀಣ್ ಹತ್ಯೆ ಆರೋಪಿಗಳ ಬೆನ್ನು ಹತ್ತಿದ್ದಾರೆ. ಕೇರಳ ಗಡಿ ಪ್ರದೇಶದಲ್ಲಿರುವ ಗ್ರಾಮದಲ್ಲಿ ಹತ್ಯೆ ನಡೆದಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು. ಕರಾವಳಿಯಲ್ಲಿ ಈ ಹಿಂದೆ ಇಂತಹ ಘಟನೆ ಹೆಚ್ಚಾಗಿ ನಡೆಯುತ್ತಿತ್ತು. ಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ ಎಂದು ಹೇಳಿದರು.
ಮರಣೋತ್ತರ ಪರೀಕ್ಷೆ ಮುಕ್ತಾಯ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಮುಕ್ತಾಯವಾಯಿತು. ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಖ್ಯಾತ ಫೊರೆನ್ಸಿಕ್ ತಜ್ಞ ಡಾ. ಮಹಾಬಲೇಶ್ವರ ಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಸಿದರು. ಪುತ್ತೂರು ಸರಕಾರಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಬ್ಯಾರಿಕೇಡ್ಗಳನ್ನು ಹಾಕಿ ಆಸ್ಪತ್ರೆ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದರು. ರೋಗಿಗಳು ಮತ್ತು ಸಂಬಂಧಿಗಳ ಹೊರತಾಗಿ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮೃತದೇಹ ಹಸ್ತಾಂತರ ಮಾಡಲು ಕುಟುಂಬಸ್ಥರ ಜೊತೆ ಪೊಲೀಸರ ಮಾತುಕತೆ ನಡೆಸಿದರು.
ಪ್ರವೀಣ್ ಹತ್ಯೆ ಖಂಡಿಸಿ ಪುತ್ತೂರಿನ 2 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಪುತ್ತೂರಿನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿವೆ.
ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್ ಎಂಬಾತನ ಕೊಲೆಯಾಗಿತ್ತು. ಮಸೂದ್ ಮೇಲೆ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎನ್ನುವವರು ಹಲ್ಲೆ ಮಾಡಿದ್ದರು. ಜುಲೈ 19ರಂದು ಸುಧೀರ್ ಎಂಬಾತನಿಗೆ ಮಸೂದ್ ಕೈ ತಾಗಿದ ಕಾರಣ ಉಂಟಾದ ಗಲಾಟೆ ಮಸೂದ್ ಸಾವಿನಲ್ಲಿ ಪರ್ಯಾಸನಗೊಂಡಿತ್ತು. ಬಾಟಲಿಯಿಂದ ತಲೆಗೆ ಏಟು ಬಿದ್ದಿದ್ದ ಮಸೂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಸಾವಿಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಅಂಗಡಿ ಮುಚ್ಚುವಾಗ ಕೊಲೆ
ಬೆಳ್ಳಾರೆಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಮೇಲೆ ತಲ್ವಾರ್‌ನಿಂದ ದಾಳಿ ಮಾಡಲಾಗಿತ್ತು. 36 ವರ್ಷ ವಯಸ್ಸಿನ ಪ್ರವೀಣ್ ಕೇವಲ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಹಲವು ಹಿಂದುತ್ವಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ.
Published On - 9:32 am, Wed, 27 July 22