ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಗುರುಪೀಠದ ಶಾಖಾಮಠದ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಪ್ರಾಣಪ್ರತಿಷ್ಠೆ ಹೋಮ ನಡೆಯುವ ಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಪ್ರಮುಖರು ಯಡಿಯೂರಪ್ಪ ಅವರಿಗೆ ಸಾಥ್ ನೀಡಿದ್ದಾರೆ. ಇದೇ ವೇಳೆ ಕನಕ ಗುರುಪೀಠದ ಶಾಖಾ ಮಠಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದ್ದಾರೆ.
ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಚಿವ ಈಶ್ವರಪ್ಪ ಪತ್ರದ ವಿಚಾರಕ್ಕೆ ಉತ್ತರ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ, ರಾಜ್ಯ ರಾಜಕಾರಣದಲ್ಲಿ ಬಹಳ ಸುದ್ದಿಯಲ್ಲಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಲು ಸಹ ನಿರಾಕರಿಸಿದ್ದಾರೆ. ಆದರೆ ಚುನಾವಣೆಯ ಕುರಿತಾಗಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲ್ಲಲ್ಲಿದ್ದಾರೆ ಎಂದು ವಿಶ್ವಾಸದ ಮಾತನಾಡಿದ್ದಾರೆ.
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಜೊತೆಗೆ ಮೀಸಲಾತಿ ಹೆಚ್ಚಿಸಲು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಯಾವುದೇ ಭೇದಭಾವವಿಲ್ಲದೆ ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವೆ. ಮೀಸಲಾತಿ ನೀಡುವ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ನೇಮಕ ಮಾಡಲಾಗಿದೆ. ಅದರ ವರದಿ ಬರಬೇಕು ಎಂದು ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧಗಂಗಾ ಮಠದ ಸಿದ್ಧಲಿಂಗಶ್ರೀ ಮಾತನಾಡಿ, ರಾಜ್ಯದಲ್ಲಿ ಮಠಗಳ ಮಹತ್ವ ಅರಿತವರು ಸಿಎಂ ಬಿ.ಎಸ್.ಯಡಿಯೂರಪ್ಪ. ಅವರು ಮಠಗಳಿಗೆ ಮಾಡಿದ ಸಹಾಯ ಸ್ಮರಿಸುವಂಥದ್ದು ಎಂದು ಹೇಳಿದರು. ಸಮುದಾಯದ ಹಿತಕ್ಕಾಗಿ ನಿರಂಜನಾನಂದಪುರಿಶ್ರೀ ಕೆಲಸ ಮಾಡಿದ್ದಾರೆ. ನಿರಂಜನಾನಂದಪುರಿ ಶ್ರೀಗಳ ಕಾರ್ಯವೂ ಮೆಚ್ಚುವಂಥದ್ದು ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿಶ್ರೀ ಮಾತನಾಡಿ, ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಭೀತಿ ಶುರುವಾಗಿದೆ. ಇದರಿಂದ ಭಕ್ತರು ಮಠಕ್ಕೆ ಬನ್ನಿ ಎನ್ನುವ ಬದಲಿಗೆ ಬರಬೇಡಿ ಅನ್ನುವ ಸ್ಥಿತಿ ಎದುರಾಗಿದೆ. ಬೆಳ್ಳೂಡಿ ಶಾಖಾ ಮಠದಲ್ಲಿ ವಿದ್ಯಾರ್ಥಿ ನಿಲಯ ಸೇರಿದಂತೆ, ವಿವಿಧ ಕಾಮಗಾರಿಗಳಿಗೆ ಹತ್ತು ಕೋಟಿ ರೂಪಾಯಿ ನೀಡಿದ್ದಾರೆ. ನಾವು ಎಂದೂ ಯಡಿಯೂರಪ್ಪರನ್ನ ಮರೆಯಬಾರದು ಎಂದು ಹೇಳಿದ್ದಾರೆ.
(BS Yediyurappa visit to the program at belludi Kanaka Gurupitha Davangere)