ಕನ್ನಡ ಶಾಲೆ ಉಳಿಸಲು ಗೋಕಾಕ್ ಚಳುವಳಿ ಮಾದರಿಯಲ್ಲಿ ಹೋರಾಟ; ಎಸ್​ಎಲ್ ಭೈರಪ್ಪ ಅಧ್ಯಕ್ಷತೆಯಲ್ಲಿ ಸಭೆ: ಮಹೇಶ್ ಜೋಶಿ

TV9 Digital Desk

| Edited By: ganapathi bhat

Updated on:Mar 26, 2022 | 4:48 PM

ಗ್ರಾಮೀಣ ‌ಪ್ರದೇಶದ ಜನತೆ ಇಂಗ್ಲಿಷ್ ಶಿಕ್ಷಣದ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ‌ ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋಕಾಕ ಚಳುವಳಿ ಮಾದರಿಯಲ್ಲಿ ಇನ್ನೊಂದು ಚಳುವಳಿ ಕನ್ನಡ ಶಾಲೆಗಳಿಗೆ ಆಗಬೇಕಾಗಿದೆ ಎಂದು ಮಹೇಶ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಶಾಲೆ ಉಳಿಸಲು ಗೋಕಾಕ್ ಚಳುವಳಿ ಮಾದರಿಯಲ್ಲಿ ಹೋರಾಟ; ಎಸ್​ಎಲ್ ಭೈರಪ್ಪ ಅಧ್ಯಕ್ಷತೆಯಲ್ಲಿ ಸಭೆ: ಮಹೇಶ್ ಜೋಶಿ
ಮಹೇಶ್ ಜೋಶಿ, ಎಸ್​ಎಲ್ ಭೈರಪ್ಪ

ದಾವಣಗೆರೆ: ಕರ್ನಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನ ಉಳಿಸಲು ಗೋಕಾಕ್ ಚಳುವಳಿ ಮಾದರಿಯಲ್ಲಿ ಇನ್ನೊಂದು ಚಳುವಳಿ ನಡೆಯಬೇಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿಕೆ ನೀಡಿದ್ದಾರೆ. ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದ ದಾವಣಗೆರೆ ಜಿಲ್ಲಾ 11 ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಈ ಬಗ್ಗೆ ಮಹೇಶ್ ಜೋಶಿ ತಿಳಿಸಿದ್ದಾರೆ. ಇದೇ ವಿಚಾರವಾಗಿ ಇಷ್ಟರಲ್ಲಿಯೇ ದುಂಡು ಮೇಜಿನ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ದುಂಡು ಮೇಜಿನ ಸಭೆಯ ಅಧ್ಯಕ್ಷತೆ ಕಾದಂಬರಿಗಾರ ಎಸ್.ಎಲ್ ಭೈರಪ್ಪ ವಹಿಸಲಿದ್ದಾರೆ‌. ಕೊರೊನಾ ಕಾಲದಲ್ಲಿ ಶೇಕಡಾ 20 ರಷ್ಟು ಮಕ್ಕಳು ಕನ್ನಡ ಶಾಲೆಗಳಲ್ಲಿ ಮಾಯವಾಗಿದ್ದಾರೆ. ಗ್ರಾಮೀಣ ‌ಪ್ರದೇಶದ ಜನತೆ ಇಂಗ್ಲಿಷ್ ಶಿಕ್ಷಣದ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ‌ ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋಕಾಕ ಚಳುವಳಿ ಮಾದರಿಯಲ್ಲಿ ಇನ್ನೊಂದು ಚಳುವಳಿ ಕನ್ನಡ ಶಾಲೆಗಳಿಗೆ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ಆದ್ರೆ ಒಳ್ಳೆಯದು. ದಾವಣಗೆರೆ ಅಂದರೆ ಕರ್ನಾಟಕ ರಾಜ್ಯದ ಹೃದಯ ಭಾಗ. ಇಂಥ ಸ್ಥಳದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವುದು ಸೂಕ್ತ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ನಿರ್ಧಾರಕೈಗೊಳ್ಳಲಿ ಎಂದು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿಕೆ ನೀಡಿದ್ದಾರೆ.

ಇತ್ತ ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ‌‌ ಸಮ್ಮೇಳನ ಕಾರ್ಯಕ್ರಮದ ಆಯೋಜಕರು-ಕಲಾವಿದರ ಮಧ್ಯೆ ವಾಗ್ವಾದ ಏರ್ಪಟ್ಟಿದೆ. ಕಲಾವಿದರಿಗೆ ಗೌರವಧನ ನೀಡುವ ವಿಚಾರವಾಗಿ ಗಲಾಟೆ ಸಂಭವಿಸಿದೆ. ಬಹುತೇಕ ಕಲಾವಿದರಿಗೆ ಗೌರವ ಧನ ನೀಡಿಲ್ಲ. ಆ ಕುರಿತು ಪ್ರಶ್ನೆ ಮಾಡಿದರೆ ಆಯೋಜಕರು ಅವಮಾನಿಸಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರ ವಿರುದ್ಧ ಕಲಾವಿದರ ಆರೋಪ ಕೇಳಿಬಂದಿದೆ. ಕಾಖಂಡಕಿ ಗ್ರಾಮದ ಕಲಾತಂಡ ಸದಸ್ಯರಿಂದ ಆರೋಪ ಕೇಳಿಬಂದಿದೆ. ಪೊಲೀಸರ ಜತೆಯೂ ಕಲಾವಿದರ‌ ಮಾತಿನ‌ ಚಕಮಕಿ ಏರ್ಪಟ್ಟಿದೆ.

ಮೇ ತಿಂಗಳಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನ: ಲಾಂಛನ ಧ್ಯೇಯವಾಕ್ಯ ಆಹ್ವಾನ

ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇ ತಿಂಗಳಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (Sahitya Parishat) ನಿರ್ಧರಿಸಿದೆ. ಸಮ್ಮೇಳನಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಪರಿಷತ್ತು ಅಧ್ಯಕ್ಷ ಡಾಮಹೇಶ ಜೋಶಿ (Dr Mahesh Joshi) ಹೇಳಿದ್ದರು. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಸಾರ್ವಜನಿಕರು ಹಾಗೂ ಕಲಾವಿದರಿಂದ ಆಹ್ವಾನಿಸಲಾಗಿತ್ತು. ಲಾಂಛನ ಹಾಗೂ ಧ್ಯೇಯವಾಕ್ಯವು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಜನಪದ, ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಬಿಂಬಿಸುವಂತೆ ಇರಬೇಕು. ಇದರ ಜೊತೆಗೆ ರಾಜ್ಯದ ಜನಸಮುದಾಯದ ಭಾವನೆಗಳು ಹಾಗೂ ಹಾವೇರಿ ಜಿಲ್ಲೆಯ ಪ್ರಾಮುಖ್ಯತೆ ಸಾರುವ ಅಂಶಗಳನ್ನು ಒಳಗೊಂಡಿರಬೇಕು. ಆಯ್ಕೆಯಾದ ಲಾಂಛನ ಹಾಗೂ ಧ್ಯೇಯವಾಕ್ಯ ರಚಿಸಿದವರಿಗೆ ಸೂಕ್ತ ಗೌರವ ನೀಡಲಾಗುತ್ತದೆ ಎಂದು ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದರು.

ಸಮ್ಮೇಳನದ ಲಾಂಛನ ಹಾಗೂ ಧ್ಯೇಯವಾಕ್ಯ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನ. ಲಾಂಛನ ಹಾಗೂ ಧ್ಯೇಯವಾಕ್ಯಗಳನ್ನು ಕಳಿಸಬೇಕಾದ ವಿಳಾಸ: ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018, ಇ-ಮೇಲ್‌ kannadaparishattu@gmail.com ವಿಳಾಸಕ್ಕೆ ಸಲ್ಲಿಸಬೇಕು ಎಂದು ಅವರು ಹೇಳಿದ್ದರು.

2021ರ ಫೆಬ್ರವರಿ ತಿಂಗಳಿನಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನವವನ್ನು ಕೊವಿಡ್-19ರ ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಮುಂದೂಡಲಾಗಿತ್ತು. ಹಾವೇರಿಯಲ್ಲಿ ಈ ಬಾರಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡರಂಗೇಗೌಡರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕನ್ನಡ, ಮರಾಠಿ ತಿಳಿದಿರುವ ಹಿರಿಯರ ಸಮಿತಿ ರಚನೆಗೆ ಚಿಂತನೆ; ಕಸಾಪ ಅಧ್ಯಕ್ಷ ಮಹೇಶ್ ಜೋಶಿ

ಇದನ್ನೂ ಓದಿ: Karnataka Budget 2021: ಮಠಗಳಿಗೆ ಅನುದಾನ; ಭೈರಪ್ಪ ಪರ್ವ ನಾಟಕ ಪ್ರದರ್ಶನಕ್ಕೆ 1 ಕೋಟಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada