ನೀರಿನ ಟ್ಯಾಂಕ್​ಗೆ ಕ್ರಿಮಿನಾಶಕ ಹಾಕಿದ್ದ ಪ್ರಕರಣ; ಪ್ರತೀಕಾರಕ್ಕೆ ವಿಷ ಹಾಕಿದ ಆರೋಪಿ ಅರೆಸ್ಟ್

ಆರೋಪಿ ಮಂಜುನಾಥ ಏಪ್ರಿಲ್ 9ರಂದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್‌ ಹೆಡ್ ಟ್ಯಾಂಕ್‌ಗೆ ವಿಷ ಬೆರೆಸಿದ್ದ. ಘಟನೆ ನಡೆಯುವ ಮುನ್ನ ಆರೋಪಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಓಡಾಡುವುದನ್ನು ಸ್ಥಳೀಯರು ನೋಡಿದ್ದರಂತೆ.

  • TV9 Web Team
  • Published On - 8:54 AM, 12 Apr 2021
ನೀರಿನ ಟ್ಯಾಂಕ್​ಗೆ ಕ್ರಿಮಿನಾಶಕ ಹಾಕಿದ್ದ ಪ್ರಕರಣ; ಪ್ರತೀಕಾರಕ್ಕೆ ವಿಷ ಹಾಕಿದ ಆರೋಪಿ ಅರೆಸ್ಟ್
ಮಂಜುನಾಥ

ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಹುಚ್ಚಾಪುರ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ(50) ಬಂಧಿತ ಆರೋಪಿ.

ಆರೋಪಿ ಮಂಜುನಾಥ ಏಪ್ರಿಲ್ 9ರಂದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್‌ ಹೆಡ್ ಟ್ಯಾಂಕ್‌ಗೆ ವಿಷ ಬೆರೆಸಿದ್ದ. ಘಟನೆ ನಡೆಯುವ ಮುನ್ನ ಆರೋಪಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಓಡಾಡುವುದನ್ನು ಸ್ಥಳೀಯರು ನೋಡಿದ್ದರಂತೆ. ಸದ್ಯ ಆರೋಪಿ ಮಂಜುನಾಥ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕಳವು ಆರೋಪಕ್ಕೆ ಪ್ರತೀಕಾರವಾಗಿ ವಿಷ ಹಾಕಿದ್ದಾಗಿ ಹೇಳಿಕೆ ನೀಡಿದ್ದಾನೆ.

ಇನ್ನು ಆರೋಪಿ ಮಂಜುನಾಥ್ ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹಾಗೂ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣವಿತ್ತು. ಅಲ್ಲಿ ಇಲ್ಲಿ ಕಳ್ಳತನ ಮಾಡಿ ಜೈಲಿಗೂ ಹೋಗಿಬಂದಿದ್ದ. ಚಿಗಟೇರಿ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಂಜುನಾಥನಿಗೆ ಅವಮಾನ ಆಗಿತ್ತು. ಇದೇ ಕಾರಣಕ್ಕೆ ನೀರಿನ ಟ್ಯಾಂಕಿಗೆ ವಿಷ ಹಾಕಿರುವುದಾಗಿ ಆರೋಪಿ ಮಂಜುನಾಥ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನಲೆ
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಹಾಕಿದ್ದು, ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಕುಡಿಯುವ ನೀರು ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದ್ದು ಇದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದರು.

ಗ್ರಾಮದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕರ್​ನಲ್ಲಿ ಕಿಡಿಗೇಡಿಗಳು ವಿಷ ಹಾಕಿದ್ದರು. ಟ್ಯಾಂಕರ್​ ಒಳಗೆ ಮೆಕ್ಕೆಜೋಳಕ್ಕೆ ಹೊಡೆಯುವ ಕ್ರೀಮಿನಾಶಕ ಬಾಟಲ್​ ಹಾಗೂ ಟ್ಯಾಂಕರ್​ನ ಹೊರಗೆ ವಿಷದ ಪ್ಯಾಕೆಟ್​ಗಳು ಪತ್ತೆಯಾಗಿದ್ದವು. ಸದ್ಯ ನೀರಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕ ಕರುಣಾಕರ ರೆಡ್ಡಿ ಸೂಚಿಸಿದ್ದರು. ಹಾಗೂ ತಹಶೀಲ್ದಾರ್​​ ನಂದೀಶ್ ಟ್ಯಾಂಕರ್​ನ ನೀರನ್ನು ಪರೀಕ್ಷೆಗೆ ಕಳುಹಿಸಿದ್ದರು.

ಇದನ್ನೂ ಓದಿ: ನೀರಿನ ಟ್ಯಾಂಕರ್​ನಲ್ಲಿ ಕ್ರಿಮಿನಾಶಕ ಹಾಕಿದ ಕಿಡಿಗೇಡಿಗಳು.. ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

(Man Arrest For Mixing Poison to Drinking Water Tank in Davangere)