Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’

Siddaramaiah: ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ. ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ. ಇಂಥ ವ್ಯವಸ್ಥೆ ಸರಿ ಮಾಡಲು ಸೇವಾಲಾಲ್ ಪ್ರಯತ್ನಿಸಿದ್ದರು. ಸೇವಾಲಾಲ್ ಜಯಂತಿ ಮಾಡಲು ನಾನೇ ಆದೇಶ ಮಾಡಿದ್ದು. ಜಯಂತಿ ಮಾಡಿದ್ರೆ ಸಾಲದು ಅವ್ರು ಹೇಳಿದಂತೆ ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು

  • TV9 Web Team
  • Published On - 20:24 PM, 14 Feb 2021
Siddaramaiah ‘ಜಾತಿ ವ್ಯವಸ್ಥೆ ಬಾವಿಯಲ್ಲಿನ ಕಸವಿದ್ದಂತೆ; ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ’
ಸಿದ್ದರಾಮಯ್ಯ

ದಾವಣಗೆರೆ: ತಾಂಡಾಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಾನು. ಈ ಬಗ್ಗೆ ಯಾರೋ ಸುಳ್ಳು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ನಡೆದ ಸಂತ ಸೇವಾಲಾಲ್​ ಜಾತ್ರೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದರು.

ಕಂದಾಯ ಸಚಿವರಾಗಿದ್ದಾಗ ಕಾಗೋಡು ತಿಮ್ಮಪ್ಪ ವಾಸಿಸುವವನೇ ನೆಲದ ಒಡೆಯ ಎಂದು ಜಾರಿ ಮಾಡಿದ್ದರು. ದೇವರಾಜ ಅರಸು ಮಾದರಿಯಲ್ಲಿ ಯೋಜನೆ ಜಾರಿಗೊಳಿಸಿದ್ರು. ಆದ್ರೆ, ಈಗ ಕಂದಾಯ ಗ್ರಾಮ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

‘ಲಂಬಾಣಿ ಜನಾಂಗದವರು ಬಡವರು, ಆದ್ರೆ ಸ್ವಾಭಿಮಾನಿಗಳು’
ಸೇವಾಲಾಲ್ ಪುಣ್ಯಕ್ಷೇತ್ರಕ್ಕೆ ನಾನು 50 ಕೋಟಿ ರೂ. ನೀಡಿದ್ದೆ. ನಾನು ಸಿಎಂ ಆಗಿದ್ದಾಗ ಹಣ ಮಂಜೂರು ಮಾಡಿದ್ದೆ.
ಲಂಬಾಣಿ ಜನಾಂಗದವರು ಅಲೆಮಾರಿಗಳು, ಬಡವರು, ಆದ್ರೆ ಸ್ವಾಭಿಮಾನಿಗಳು. ಮತ್ತೊಬ್ಬರ ಹಂಗಿನಲ್ಲಿ ‌ಬದುಕಲ್ಲ ಎಂದು ಹೇಳಿದರು. ನಾನು ಕುರುಬರ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಹಾಗಿದ್ದರೆ ಬೇಕಾದ ಜಾತಿಯಲ್ಲಿ ಹುಟ್ಟುತ್ತಿದ್ದೆ. ಶಾಸಕ ರೇಣುಕಾಚಾರ್ಯ ಜಂಗಮ ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಯಾರೂ ಅವರ ಕಾಲಿಗೆ ನಮಸ್ಕಾರ ಮಾಡಿ ಎಂದು ಯಾರಾದ್ರು ಹೇಳಿದ್ರಾ? ಬಸವಣ್ಣನವರು ಇವನಾರವ್ವ ಎನ್ನಲಿಲ್ಲ. ನಮ್ಮವ ಎಂದು ಹೇಳಿದರು. ಆದರೆ, ಇದು ಜಾರಿಗೆ ಬಂದಿದ್ಯಾ ರೇಣುಕಾಚಾರ್ಯ, ಹೇಳಪ್ಪಾ ಎಂದು ವೇದಿಕೆ ಮೇಲೆ ಕೂತಿದ್ದ ಶಾಸಕರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

‘ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ’
ಜಾತಿ ವ್ಯವಸ್ಥೆ ಒಂದು ರೀತಿಯಲ್ಲಿ ಬಾವಿಯಲ್ಲಿನ ಕಸವಿದ್ದಂತೆ. ನೀರು ತುಂಬುವಾಗ ಮಾತ್ರ ಸರಿಯುತ್ತೆ, ಮತ್ತೆ ಮುಚ್ಚಿಕೊಳ್ಳುತ್ತೆ. ಇಂಥ ವ್ಯವಸ್ಥೆ ಸರಿ ಮಾಡಲು ಸೇವಾಲಾಲ್ ಪ್ರಯತ್ನಿಸಿದ್ದರು. ಸೇವಾಲಾಲ್ ಜಯಂತಿ ಮಾಡಲು ನಾನೇ ಆದೇಶ ಮಾಡಿದ್ದು. ಜಯಂತಿ ಮಾಡಿದ್ರೆ ಸಾಲದು ಅವ್ರು ಹೇಳಿದಂತೆ ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ತಾಂಡಾ ಅಭಿವೃದ್ಧಿ ನಿಗಮಕ್ಕೆ ಕೇವಲ 20 ಕೋಟಿ ಹಣ ಇತ್ತು. ಆದ್ರೆ ನಾನು ಸಿಎಂ ಆದಾಗ 160 ಕೋಟಿ ರೂಪಾಯಿ ನೀಡಿದ್ದೆ. ಲಂಬಾಣಿ ಸಮುದಾಯಕ್ಕೆ ಮೆಡಿಕಲ್ ಕಾಲೇಜು ನೀಡಲಿ. ಇದು ಆಗದಿದ್ದರೆ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇವೆ ಎಂದು ಸಂತ ಸೇವಾಲಾಲ್​ ಜಾತ್ರೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದರು.

‘7 ಕೆಜಿ ಅಕ್ಕಿಯನ್ನು ನಾನು ನಮ್ಮಪ್ಪನ ಮನೆಯಿಂದ ಕೊಟ್ಟಿಲ್ಲ’
7 ಕೆಜಿ ಅಕ್ಕಿಯನ್ನು ನಾನು ನಮ್ಮಪ್ಪನ ಮನೆಯಿಂದ ಕೊಟ್ಟಿಲ್ಲ. ಈಗಿರುವವರು ಕೊಟ್ಟರೂ ಅವರಪ್ಪನ ಮನೆಯಿಂದ ಕೊಡಲ್ಲ. ಬೇಕಾದಕ್ಕೆ 500 ಕೋಟಿ ನೀಡಿ ಕಾರ್ಯಕ್ರಮ ಮಾಡುತ್ತೀರಿ. ಬಡವರಿಗೆ ಅಕ್ಕಿ ಕೊಡಲು ಮುಂದೆ ಬನ್ನಿ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದರು.

‘ಇಂದಿರಾ ಕ್ಯಾಂಟೀನ್​ ಮುಚ್ಚೋಕೆ ಪ್ಲಾನ್​ ಮಾಡ್ತಿದ್ದೀರಾ, ಯಾಕಪ್ಪಾ ರೇಣುಕಾಚಾರ್ಯ?’
ಈ ನಡುವೆ, ಇಂದಿರಾ ಕ್ಯಾಂಟೀನ್​ ಮುಚ್ಚೋಕೆ ಪ್ಲಾನ್​ ಮಾಡ್ತಿದ್ದೀರಾ, Why? ಯಾಕಪ್ಪಾ ರೇಣುಕಾಚಾರ್ಯ? Why? ಎಂದು ವೇದಿಕೆಯಲ್ಲಿದ್ದ ಶಾಸಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಇದರಿಂದ ಇಡೀ ಸಭೆ ನಗೆಗಡಲಲ್ಲಿ ತೇಲಿಹೋಯಿತು. ಬಳಿಕ ತಮ್ಮ ಭಾಷಣ ಮುಂದುವರಿಸಿದ ಸಿದ್ದರಾಮಯ್ಯ ಸಂವಿಧಾನದ ಅನುಷ್ಠಾನ ಯೋಗ್ಯರ ಕೈಯಲ್ಲಿ ಇರಬೇಕು. ಸಂವಿಧಾನದಿಂದ ಮತದಾನದ ಹಕ್ಕು ಬಂದಿದೆ‌. ಆದ್ರೆ ಅದರಿಂದ ಉದ್ಧಾರ ಆಗಲ್ಲ. ಆರ್ಥಿಕ ಶಕ್ತಿ, ಶಿಕ್ಷಣದ ಅಗತ್ಯವಿದೆ. ಜೊತೆಗೆ, ಕೆಟ್ಟ ಚಟಗಳಿಂದ ಮುಕ್ತರಾಗಿ, ಸೇವಾಲಾಲ್ ಮಾರ್ಗದಲ್ಲಿ ನಡೆಯಿರಿ. ಸೇವಾಲಾಲ್ ಅವರನ್ನ ನೆನಪಿಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: Siddaramaiah ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ -ಶಾಸಕ ರಾಘವೇಂದ್ರ ಹಿಟ್ನಾಳ್ ಖಡಕ್​ ಬಾತ್​