ದಾವಣಗೆರೆ: ಅದು ಶಕ್ತಿಶಾಲಿ ಪುಣ್ಯಕ್ಷೇತ್ರ. ಅಲ್ಲಿಗೆ ಭೇಟಿ ಕೊಟ್ರೆ ಸಾಕು ಕಷ್ಟಗಳೆಲ್ಲಾ ಬಗೆಹರಿಯುತ್ತವೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭೇಟಿಕೊಡ್ತಾರೆ. ಹೀಗೆ ಭೇಟಿ ಕೊಟ್ರೆ ದೆವ್ವ, ಭೂತದ ಕಾಟದಿಂದ ಮುಕ್ತಿ ಪಡೆಯುತ್ತಾರೆ ಅನ್ನೋ ವಾಡಿಕೆ ಕೂಡ ಭಕ್ತರಲ್ಲಿ ಮನೆಮಾಡಿದೆ.
ಒಂದ್ಕಡೆ ನದಿಯಲ್ಲಿ ಪುಣ್ಯಸ್ನಾನ ಮಾಡ್ತಿರೋ ಜನ. ಮತ್ತೊಂದ್ಕಡೆ ದೇವರ ದರ್ಶನ ಪಡೆಯಲು ಸಹಸ್ರಾರು ಭಕ್ತರ ಸಾಲು. ಇದೆಲ್ಲಾ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸುಪ್ರಸಿದ್ಧ ಉಕ್ಕಡಗಾತ್ರಿ ಕ್ಷೇತ್ರದಲ್ಲಿ.
ಉಕ್ಕಡಗಾತ್ರಿ ಕ್ಷೇತ್ರ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಭಕ್ತರನ್ನೂ ಹೊಂದಿದೆ. ಇಲ್ಲಿಗೆ ಪ್ರತಿವರ್ಷ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ಕೊಡ್ತಾರೆ. ಉಕ್ಕಡಗಾತ್ರಿ ಅಜ್ಜಯ್ಯ ಸ್ವಾಮಿಯ ದರ್ಶನ ಪಡೆದ್ರೆ ತಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ವೆ ಅನ್ನೋ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರ್ತಾರೆ. ಭಕ್ತರಿಗಾಗಿ ಶ್ರೀಕ್ಷೇತ್ರದಲ್ಲಿ ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿರುತ್ತದೆ. ತುಂಗಭದ್ರಾ ನದಿಯ ದಡದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ, ಸಾವಿರಾರು ಜನ ನದಿಯಲ್ಲಿ ಮಿಂದೇಳುತ್ತಾರೆ.
ಇನ್ನು ಅಮವಾಸ್ಯೆಯ ದಿನ ಭಕ್ತರು ಭಾರಿ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಮಾನಸಿಕ ಕಾಯಿಲೆಗಳಿಂದ ಬಳಲುವ ಹಾಗೂ ದೆವ್ವ, ಭೂತ ಹಿಡಿದಿದೆ ಅನ್ನೋ ಮನಸ್ಥಿತಿಯ ಜನರಿಗೆ ಇಲ್ಲಿ ಚಿಕಿತ್ಸೆ ದೊರೆಯುತ್ತದೆ. ಜನ ಅಜ್ಜಯ್ಯ ಸ್ವಾಮಿ ದರ್ಶನ ಪಡೆದು ಕಷ್ಟಗಳಿಂದ ಮುಕ್ತರಾಗುತ್ತಾರೆ ಅನ್ನೋ ಪ್ರತೀತಿ ನೂರಾರು ವರ್ಷಗಳಿಂದ ನಡೆದುಕೊಂಡು ಬರ್ತಿದೆ.
ಒಟ್ನಲ್ಲಿ ಉಕ್ಕಡಗಾತ್ರಿ ಜಾತ್ರೆ ಸಾಕಷ್ಟು ವೈಶಿಷ್ಠ್ಯತೆವನ್ನ ಹೊಂದಿದೆ. ಲಕ್ಷಾಂತರ ಜನರ ಆರಾಧ್ಯ ದೈವಾವಾಗಿರುವ ಅಜ್ಜಯ್ಯ ಸ್ವಾಮಿಗೆ ಒಮ್ಮೆ ನಮಸ್ಕರಿಸಿದ್ರೆ, ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನೋ ವಾಡಿಕೆ ಇದೆ. ಹೀಗಾಗಿ ಅಜ್ಜಯ್ಯ ಸ್ವಾಮಿಯ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ.