ವಿದ್ಯುತ್ ಬಿಲ್ ಬಾಕಿ ಪಾವತಿಗೆ ಮೀನುಗಾರಿಕಾ ಹಕ್ಕು ಮಾರಾಟ! ಇಂಧನ ಇಲಾಖೆಯ ಸಾಲ ತೀರಿಸಲು ಡಿಕೆ ಶಿವಕುಮಾರ್ ಹೊಸ ಐಡಿಯಾ
ಹೌದು, ಈ ವಿಚಾರವಾಗಿ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಯೋಜನೆ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಅವರೊಂದಿಗೆ ಚರ್ಚಿಸಲಾಗುವುದು ಎಂದೂ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ಇಂಧನ ಇಲಾಖೆಗೆ ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಸುಮಾರು 4,000 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ (Power Bills) ಬಾಕಿ ಇರಿಸಿಕೊಂಡಿವೆ. ಇದನ್ನು ಮರುಪಾವತಿ ಮಾಡಬೇಕಾದ ಒತ್ತಡದಲ್ಲಿರುವ ಈ ಇಲಾಖೆಗಳಿಗಾಗಿ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಅದೇನೆಂದರೆ ಮೀನುಗಾರಿಕೆಯ ಹಕ್ಕು ಮಾರಾಟ ಮಾಡುವುದು! ಹಾಂ, ಅದ್ಹೇಗೆ ಮೀನುಗಾರಿಕೆಯ ಹಕ್ಕು ಮಾರಾಟ ಮಾಡಿ ಇಂಧನ ಇಲಾಖೆಯ ಬಾಕಿ ಪಾವತಿಸುವುದು ಎಂದು ಯೋಚಿಸುತ್ತಿದ್ದೀರಾ? ವಿಷಯ ಇಷ್ಟೇ, ಗ್ರಾಮದ ಕೆರೆಗಳಿಗೆ ನೀರು ಹರಿಸಿ ಅದರಲ್ಲಿ ಮೀನುಗಾರಿಕೆ ನಡೆಸಲು ಹಕ್ಕು ಹರಾಜು ಹಾಕುವುದು. ಆ ಮೂಲಕ ಸಂಗ್ರಹವಾಗುವ ಆದಾಯವನ್ನು ಇಂಧನ ಇಲಾಖೆಯ ವಿದ್ಯುತ್ ಬಿಲ್ ಬಾಕಿಯನ್ನು ಪಾವತಿಸಲು ಬಳಸುವುದು.
ಹೌದು, ಈ ವಿಚಾರವಾಗಿ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಯೋಜನೆ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಅವರೊಂದಿಗೆ ಚರ್ಚಿಸಲಾಗುವುದು ಎಂದೂ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಏಕೆ ನನೆಗುದಿಗೆ ಬಿದ್ದಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಂತರ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಸಂಬಂಧಿಸಿದ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.
ಏತ ನೀರಾವರಿ ಯೋಜನೆ ಕುರಿತ ಚರ್ಚೆಯ ನಂತರ ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಇಂಧನ ಇಲಾಖೆಗೆ ನೀಡಬೇಕಾದ ವಿದ್ಯುತ್ ಬಿಲ್ ವಿಚಾರ ಪ್ರಸ್ತಾಪವಾಯಿತು. ಅದಕ್ಕೆ ಉತ್ತರಿಸಿದ ಶಿವಕುಮಾರ್, ನೀರಾವರಿ ಇಲಾಖೆಗಳ ಮೂಲಕ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಮತ್ತು ಕೆರೆಗಳಲ್ಲಿನ ಮೀನುಗಾರಿಕೆ ಹಕ್ಕುಗಳನ್ನು ಹರಾಜು ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿ ಇಂಧನ ಬಿಲ್ ಪಾವತಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.
ಬಾಕಿ ಮತ್ತು ಸಾಲದ ಹೊರೆ
ವಿವಿಧ ಇಲಾಖೆಗಳ ಬಾಕಿ ಮತ್ತು ಸಾಲಗಳ ಹೊರೆಯಲ್ಲಿ ಸಿಲುಕಿರುವ ಇಂಧನ ಸಚಿವಾಲಯವು ಕರ್ನಾಟಕ ಸರ್ಕಾರದ ಇಲಾಖೆಗಳ ಪೈಕಿ ಬಹುಶಃ ಅತ್ಯಂತ ಹೆಚ್ಚಿನ ಸಂಪನ್ಮೂಲ ಒತ್ತಡಕ್ಕೆ ಒಳಗಾಗಿದೆ. ಜುಲೈ 7 ರಂದು ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018 ರ ಮಾರ್ಚ್ 31ರ ಲೆಕ್ಕಾಚಾರದಂತೆ ವಿದ್ಯುತ್ ಕಂಪನಿಗಳ ಒಟ್ಟು ಬಾಕಿ ಸಾಲ 51,087 ಕೋಟಿ ರೂ., ಇದು 2023 ರ ಮಾರ್ಚ್ ಅಂತ್ಯದ ವೇಳೆಗೆ 91,911 ಕೋಟಿ ರೂ. ಆಗಿದೆ. ಡಿಸ್ಕಾಂಗಳ ಒಟ್ಟು ನಷ್ಟವು 2018 ರ ಮಾರ್ಚ್ ಅಂತ್ಯಕ್ಕೆ 4,725 ಕೋಟಿ ರೂ. ಇತ್ತು. ಇದು 2023 ರ ಮಾರ್ಚ್ ಅಂತ್ಯದ ವೇಳೆಗೆ 17,056 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 pm, Wed, 12 July 23