Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್

|

Updated on: Mar 06, 2021 | 11:39 AM

Delhi Chalo Farmers Protest: ‘ಕರ್ನಾಟಕದಲ್ಲಿ ದೆಹಲಿ ಚಲೋಗಿಂತ ಮುನ್ನವೇ ರೈತ ಹೋರಾಟ ಶುರುವಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಾಗಲೇ ಅದರ ವಿರುದ್ಧ ರೈತರು ‘ಐಕ್ಯ ಹೋರಾಟ’ ನಡೆಸಿದ್ದರು. ದೆಹಲಿ ಚಲೋಕಿಂತ ಮುನ್ನವೇ ಕೃಷಿ ಕ್ಷೇತ್ರದಲ್ಲಿ ಕಾರ್ಪೊರೇಟ್ ಶಕ್ತಿಗಳ ಹಸ್ತಕ್ಷೇಪದ ವಿರುದ್ಧ ಹೋರಾಟ ನಡೆಸಿದ್ದೇವೆ’ ಎನ್ನುತ್ತಾರೆ ಹೋರಾಟಗಾರ್ತಿ ಮಲ್ಲಿಗೆ ಅವರು.

Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್
ದೆಹಲಿ ಚಲೋದಲ್ಲಿ ಕರ್ನಾಟಕದ ತಂಡ
Follow us on

ಬೆಂಗಳೂರು: ನಾಳೆ (ಮಾರ್ಚ್ 6) ಐತಿಹಾಸಿಕ ದೆಹಲಿ ಚಲೋ ಚಳವಳಿಗೆ ಭರ್ತಿ ನೂರು ದಿನ ತುಂಬಲಿದೆ. ಪಂಜಾಬ್​ನ ಚಿಕ್ಕ ಹಳ್ಳಿಯಿಂದ ಆರಂಭವಾದ ರೈತರ ಚಳವಳಿ ದೇಶದ ರಾಜಧಾನಿ ತಲುಪಿದಾಗ ದೇಶದೆಲ್ಲೆಡೆ ಬೆಂಬಲ ವ್ಯಕ್ತವಾಯಿತು. ಆದರೆ ನಂತರ ನಡೆದ ಗಲಾಟೆಗಳಿಂದ ಚಳವಳಿಯ ದಿಕ್ಕೇ ಬದಲಾಯಿತು. ದೆಹಲಿ ಚಲೋದ ಮುಂದುವರೆದ ಭಾಗವಾಗಿ ದೇಶದ ವಿವಿಧ ಸ್ಥಳಗಳಲ್ಲಿ ಕಿಸಾನ್ ಮಹಾ ಪಂಚಾಯತ್  (Kisan Mahapanchayat) ನಡೆಯುತ್ತಿದೆ. ಅದರ ಅಂಗವಾಗಿ ಕರ್ನಾಟಕದ ಮೂರು ಕಡೆ ಕಿಸಾನ್ ಪಂಚಾಯತ್ ನಡೆಸಲು ದೆಹಲಿ ಚಲೋ ವರಿಷ್ಠರು ತೀರ್ಮಾನಿಸಿದ್ದಾರೆ. ಹಾಗಾದರೆ ಕರ್ನಾಟಕದಿಂದ ದೆಹಲಿಗೆ ತೆರಳಿದವರಾರು? ಕನ್ನಡ ನಾಡಿನಲ್ಲಿ ಎಂದು ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ ? ರೈತ ನಾಯಕ ರಾಕೇಶ್ ಟಿಕಾಯತ್ ಕರ್ನಾಟಕಕ್ಕೂ ಆಗಮಿಸುತ್ತಾರಾ? ಈ ಎಲ್ಲ ಪ್ರಶ್ನೆಗಳ ಉತ್ತರವನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ.

ದಕ್ಷಿಣ ಭಾರತ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ದೆಹಲಿ ಚಲೋದಲ್ಲಿ ಪಾಲ್ಗೊಳ್ಳಲು 150 ಜನರ ನಿಯೋಗ ತೆರಳಿತ್ತು. ಅದರ 60 ಸದಸ್ಯರು ಕರ್ನಾಟಕದವರೇ ಆಗಿದ್ದರು. ಅಷ್ಟೇ ಅಲ್ಲದೇ, ದಕ್ಷಿಣ ಭಾರತದ ನಿಯೋಗದ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಸಹ ಕರ್ನಾಟಕದವರೇ ಆದ ಕೆ.ಜೆ.ಎಸ್.ಮಲ್ಲಿಗೆ. ಅವರ ನೇತೃತ್ವದ ನಿಯೋಗ ರೈತ ಹೋರಾಟವನ್ನು ದಕ್ಷಿಣ ಭಾರತದಲ್ಲಿ ಮುಂದುವರೆಸುವ ರೂಪುರೇಷೆಗಳನ್ನು ಹೊತ್ತು ಕರ್ನಾಟಕಕ್ಕೆ ಬಂದಿಳಿದಿದೆ.

ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳ ಸದಸ್ಯರನ್ನು ದಕ್ಷಿಣ ಭಾರತದ 150 ಸದಸ್ಯರ ನಿಯೋಗ ಒಳಗೊಂಡಿತ್ತು. ರೈತ ಸಂಘಟನೆ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಕರ್ನಾಟಕದಿಂದ ದೆಹಲಿ ಚಲೋದಲ್ಲಿ ಭಾಗವಹಿಸಿದ್ದರು. ಈಗ ಕರ್ನಾಟಕದಲ್ಲಿ ಚಳವಳಿಯ ಕೈ ಬಲಪಡಿಸಲು ಇವರೆಲ್ಲರೂ ಸಕ್ರಿಯರಾಗಿದ್ದಾರೆ.

ಶಿವಮೊಗ್ಗದಲ್ಲಿ ಮೊದಲ ರೈತ ಪಂಚಾಯತ್
ನಿಯೋಗದ ಮುಖ್ಯಸ್ಥರಾಗಿರುವ ಕೆ.ಜೆ.ಎಸ್.ಮಲ್ಲಿಗೆ ಅವರು ವಿವರಿಸುವಂತೆ, ‘ಮಾರ್ಚ್ 20ರಂದು ಶಿವಮೊಗ್ಗದಲ್ಲಿ ಕರ್ನಾಟಕದ ಮೊದಲ ರೈತ ಮಹಾ ಪಂಚಾಯತ್ ನಡೆಯಲಿದೆ. ಈ ಪಂಚಾಯತ್​ನಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಮತ್ತು ದರ್ಶನ್ ಪಾಲ್ ಸೇರಿದಂತೆ ದೆಹಲಿ ಚಲೋದ ಮುಂದಾಳುಗಳು ಪಾಲ್ಗೊಳ್ಳಲಿದ್ದಾರೆ. ಮರುದಿನ (ಮಾರ್ಚ್ 21) ಹಾವೇರಿಯಲ್ಲಿ ಎರಡನೇ ರೈತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಕೇವಲ ಸಮ್ಮೇಳನ ಒಂದೇ ಅಲ್ಲ..
ದಕ್ಷಿಣ ಭಾರತದಲ್ಲಿ ರೈತ ಹೋರಾಟವನ್ನು ಪ್ರಬಲವಾಗಿ ರೂಪಿಸುವ ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ಹೊತ್ತಿರುವ ನಿಯೋಗ, ಕಿಸಾನ್ ಮಹಾ ಪಂಚಾಯತ್ ಒಂದೇ ಅಲ್ಲದೇ, ಮಾರ್ಚ್ 22 ರಂದು ವಿಧಾನಸಭಾ ಚಲೊ ನಡೆಸಲಿದೆ. ಸಾವಿರಾರು ರೈತರು ಕರ್ನಾಟಕದ ಶಕ್ತಿಕೇಂದ್ರಕ್ಕೆ ಹೆಜ್ಜೆಹಾಕಿ ಅನ್ನದಾತನ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಉತ್ತರ ಭಾರತದ ರೈತರ ನಾಯಕರಾಗಿ ಹೊರಹೊಮ್ಮಿರುವ ರಾಕೇಶ್ ಟಿಕಾಯತ್ ಈ ಮೂರು ಹೋರಾಟಗಳ ಮೂಲಕ ಕನ್ನಡ ನಾಡಿನ ರೈತರಿಗೂ ಪರಿಚಯವಾಗಲಿದ್ದಾರೆ.

ನಿಯೋಗದಲ್ಲಿದ್ದ ಕರ್ನಾಟಕದ ಇತರ ಪ್ರಮುಖರಾರು?
ಕರ್ನಾಟಕದ 60 ಸದಸ್ಯರ ತಂಡವನ್ನು ಮುನ್ನಡೆಸಿದವರು ಕೆ.ಜೆ.ಎಸ್.ಮಲ್ಲಿಗೆ. ಜತೆಗೆ ಪ್ರಮುಖರಾದ ಕರ್ನಾಟಕ ಜನಶಕ್ತಿ ಸಂಘಟನೆಯ ಕುಮಾರ ಸಮತಳ, ಅಖಿಲ ಭಾರತ ಕಿಸಾನ್ ಯೂನಿಯನ್​ನ ಬಸವಲಿಂಗಪ್ಪ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿ ವರದರಾಜೇಂದ್ರ, ಸೇವಿಯರ್ಸ್ ಆಫ್ ಡೆಮಾಕ್ರಸಿ ಸಂಸ್ಥೆಯ ಹುಸೇನ್ ಮುಂದಾಳುಗಳಾಗಿ ಪಾಲ್ಗೊಂಡಿದ್ದರು.

ದಕ್ಷಿಣ ಭಾರತದ ನಿಯೋಗ ಒಂದು ವಾರ ದೆಹಲಿಯ ಚಳಿಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿತ್ತು. ಸಿಖ್ಖರ ಸಾಂಪ್ರದಾಯಿಕ ಸಮುದಾಯ ಅಡುಗೆ ಮನೆಯಾದ ಲಂಗರ್​ಗಳಲ್ಲಿ ಎಷ್ಟೇ ಜನರು ಬಂದರೂ ಉಚಿತವಾಗಿ ವಸತಿ ಒದಗಿಸಲಾಗುತ್ತದೆ. ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಟೆಂಟ್ ವ್ಯವಸ್ಥೆ ನೀಡಲಾಗಿತ್ತು. ಇಂತಹ ವ್ಯವಸ್ಥೆಗಳೇ ಪಂಜಾಬ್ ರೈತರ ಕುರಿತು ಸಹನಾಭೂತಿ ಮೂಡಿಸುತ್ತವೆ.

‘ಕರ್ನಾಟಕದಲ್ಲಿ ದೆಹಲಿ ಚಲೋಗಿಂತ ಮುನ್ನವೇ ರೈತ ಹೋರಾಟ ಶುರುವಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಾಗಲೇ ಅದರ ವಿರುದ್ಧ ರೈತರು ‘ಐಕ್ಯ ಹೋರಾಟ’ ನಡೆಸಿದ್ದರು. ದೆಹಲಿ ಚಲೋಕಿಂತ ಮುನ್ನವೇ ಕೃಷಿ ಕ್ಷೇತ್ರದಲ್ಲಿ ಕಾರ್ಪೊರೇಟ್ ಶಕ್ತಿಗಳ ಹಸ್ತಕ್ಷೇಪದ ವಿರುದ್ಧ ಹೋರಾಟ ನಡೆಸಿದ್ದೇವೆ’ ಎನ್ನುತ್ತಾರೆ ಹೋರಾಟಗಾರ್ತಿ ಮಲ್ಲಿಗೆ ಅವರು. ಹೀಗಾಗಿ, ಕರ್ನಾಟಕದಲ್ಲೂ ರೈತರ ಪರ, ಕೃಷಿ ಕಾಯ್ದೆಗಳ ವಿರುದ್ಧ ಬಲವಾದ ಹೋರಾಟ ನಡೆಯುವ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

ಇದನ್ನೂ ಓದಿ: Inside Story ದೆಹಲಿ ಚಲೋ ರೈತ ಚಳವಳಿಯ ಪರ-ವಿರೋಧ ಚರ್ಚೆಯ ತಿರುಳೇನು?

ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ

Published On - 7:09 am, Sat, 6 March 21