ಈ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈಗ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಸಾಂಗೋಪಾಂಗವಾಗಿ ನಡೆಯುತ್ತಿವೆ. ಮುಖ್ಯವಾಗಿ ಮೊನ್ನೆ ಮಾರ್ಚ್ 7ರಂದು ಭೌತಶಾಸ್ತ್ರ (ಫಿಸಿಕ್ಸ್) ನಡೆದಿದೆ. ಆದರೆ ಭೌತಶಾಸ್ತ್ರ ವಿಷಯದ ಪರೀಕ್ಷೆಯು ಕಷ್ಟ ಕಷ್ಟವಾಗಿತ್ತು. ಅದರಲ್ಲೂ ಮಲ್ಟಿಪಲ್ ಛಾಯ್ಟ್ ಕ್ವಶ್ಚನ್ಸ್ ಕಷ್ಟವಾಗಿತ್ತು ಎಂದು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಬರುತ್ತಲೇ ಅಲವತ್ತುಕೊಂಡಿದ್ದಾರೆ. ಆದರೆ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುತ್ತಿರುವ ಪರೀಕ್ಷೆಗಳನ್ನು ಅವಲೋಕಿಸುವ ಶಿಕ್ಷಣ ತಜ್ಞರ ಪ್ರಕಾರ ಮೊನ್ನೆ ನಡೆದ ಭೌತಶಾಸ್ತ್ರ ಪರೀಕ್ಷೆಯ 15 ಅಂಕಗಳ MCQ ವಿಭಾಗ ಸ್ವಲ್ಪ ಕಷ್ಟವೇ ಇತ್ತಾದರೂ ತೀರಾ ಕಷ್ಟಕರವಾಗಿರಲಿಲ್ಲ. ಔಟ್ ಆಫ್ ಸಿಲಬಸ್ ಅಂತೇನೂ ಇಲ್ಲ. ಸ್ವಲ್ಪಮಟ್ಟಿಗೆ ತಿಣುಕಾಡಿ ಉತ್ತರಿಸುವಂತಹುದ್ದೇ ಆಗಿದ್ದವು ಎಂದಿದ್ದಾರೆ. ಅದರಲ್ಲೂ 15 ಪ್ರಶ್ನೆಗಳ ಪೈಕಿ 7 ಪ್ರಶ್ನೆಗಳು ಕಷ್ಟಕರವಾಗಿದ್ದವು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದರೆ ಮೂರು ಪ್ರಶ್ನೆಗಳಷ್ಟೇ ಕಷ್ಟವಾಗಿದ್ದವು ಎಂಬುದು ತಜ್ಞರ ಅನಿಸಿಕೆಯಾಗಿದೆ. ಏನೇ ಆಗಲೀ ಆ 3 ಅಂಕಗಳು ಮುಖ್ಯವಾಗಿಬಿಡುತ್ತದೆ ಎಂಬುದು ಇಲ್ಲಿ ದಾಖಲಾರ್ಹ ಸಂಗತಿ.
ಹಾಗೆ ನೋಡಿದರೆ ಕಳೆದ ಸಾಲಿನಲ್ಲಿ ಕೆಮಿಸ್ಟ್ರಿ ಪೇಪರ್ ಸಹ ಹೀಗೆಯೇ ಕಷ್ಟಕರವಾಗಿತ್ತಂತೆ. ಆ ವರ್ಷವೂ MCQ ಪ್ರಶ್ನೆಗಳು ಕಷ್ಟಕರವಾಗಿದ್ದವು ಎನ್ನುತ್ತಾರೆ ವಿಷಯ ತಜ್ಞರು. ವಾಸ್ತವವಾಗಿ ಈ ಬಾರಿ ಫಿಸಿಕ್ಸ್ ಪೇಪರ್ ನಲ್ಲಿ ಕೇಳಿರುವ 7 ಪ್ರಶ್ನೆಗಳು ಒಮ್ಮೆಗೆ ತುಂಬಾ ಕಷ್ಟಕರವಾಗಿದ್ದವು. ಪ್ರಿಪರೇಟರಿ ಮತ್ತು ಮಿಡ್ಟರ್ಮ್ ಪರೀಕ್ಷೆಗಳು ಇಷ್ಟೊಂದು ಕಷ್ಟಕರವಾಗಿರಲಿಲ್ಲ. ಮುಂದೆ ಪಿಯುಸಿ ನಂತರ ಮೆಡಿಕಲ್ ಮತ್ತು ಎಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರುವ ವಿದ್ಯಾರ್ಥಿಗಳು ಈ ಕಷ್ಟಕರ 7 ಪ್ರಶ್ನೆಗಳನ್ನು ಹೇಗೋ ಉತ್ತರಿಸಿಯಾರು, ಆದರೆ ಇತರೆ ಕೋರ್ಸ್ ವ್ಯಾಸಂಗಕ್ಕೆ ಸೇರಿಕೊಳ್ಳುವ, ಫಿಸಿಕ್ಸ್ ವಿಷಯಕ್ಕೆ ಅಷ್ಟೇನೂ ಪ್ರಾಮುಖ್ಯತೆ ನೀಡದ ವಿದ್ಯಾರ್ಥಿಗಳ ಪಾಡೇನು? ಒಂದೊಂದು ಅಂಕವೂ ಮುಖ್ಯವಾಗಿರುವಾಗ ಒಟ್ಟಿಗೆ ಒಂದೇ ಪೇಪರ್ನಲ್ಲಿ ಏಳು ಅಂಕಗಳು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ ಹೇಗೆ? ಇದರಿಂದ ವಿದ್ಯಾರ್ಥಿಗಳು ಏಳಿಗೆ ಕಾಣುವುದಾದರೂ ಹೇಗೆ? ಎಲ್ಲರಿಗೂ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಇರಬೇಕು ಅಲ್ಲವಾ ಎಂಬುದು ಬಹುತೇಕ ವಿದ್ಯಾರ್ಥಿಗಳ ಆತಂಕದ ಮಾತಾಗಿದೆ.
ಹಾಗಂತ ಫಿಸಿಕ್ಸ್ ಪೇಪರ್ ನಲ್ಲಿ ಕೇಳಲಾಗಿದ್ದ 7 ಪ್ರಶ್ನೆಗಳು ತೀರಾ ಕಷ್ಟಕರ ಅಂತೇನೂ ಅಲ್ಲ. ಆದರೆ ಅಲ್ಲಿ ನೀಡಿದ್ದ ತಲಾ 4 ಉತ್ತರಗಳು ಅಸ್ಪಷ್ಟತೆಯಿಂದ (ambiguity) ಕೂಡಿದ್ದವು. Straight Forward ಉತ್ತರಗಳು ಇರಲಿಲ್ಲ. ಆ ಕ್ಷಣಕ್ಕೆ, ಅದರಲ್ಲೂ ಪರೀಕ್ಷಾ ಭೀತಿಯಲ್ಲಿ ಬರೆಯುವಾಗ ವಿದ್ಯಾರ್ಥಿಗಳಿಗೆ ತಕ್ಷಣಕ್ಕೆ ಸ್ಪಷ್ಟ ಉತ್ತರ ಕೊಡಲಾಗುವುದಿಲ್ಲ. ಅಷ್ಟೇ ಅಲ್ಲ ಇದು ಪತ್ರಿಕೆಯನ್ನು ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡುವ ಎಕ್ಸಾಮಿನರ್ಗಳಿಗೂ ತಲೆನೋವಿನ ಸಂಗತಿಯಾದೀತು. ಆದರೆ ಅವರಿಗೆ ಕೀ ಆನ್ಸರ್ ನಿಗದಿಪಡಿಸಿರುವುದರಿಂದ ಅದರ ಪ್ರಕಾರವೇ ಅಂಕಗಳನ್ನು ನೀಡುತ್ತಾ ಹೋಗುತ್ತಾರೆ ಎನ್ನುತ್ತಾರೆ ಪರೀಕ್ಷಾ ತಜ್ಞರು.
ಇದರಿಂದ ಸದ್ಯಕ್ಕೆ ಪೋಷಕರು ಚಿಂತಾಕ್ರಾಂತರಾಗಿದ್ದು, ತಕ್ಷಣವೇ ಪೆಟಿಷನ್ ಸಲ್ಲಿಕೆಗೆ ಮುಂದಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆನ್ಲೈನ್ ಪೆಟಿಶನ್ ಸಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದಾಗಲೇ ಒಂದು ಲಕ್ಷ ಮಂದಿ ಪೋಷಕರು ಪೆಟಿಶನ್ ಗೆ ಸಮ್ಮತಿ ಸೂಚಿಸಿದ್ದು, ಇವರ ಸಂಖ್ಯೆ ಒಂದೇ ಸಮನೆ ಏರುತ್ತಲೇ ಇದೆ.
ಪೋಷಕರು ಸರ್ಕಾರಕ್ಕೆ ಸಲ್ಲಿಸಲಿರುವ ಪೆಟಿಷನ್ ನಲ್ಲಿ ಏನಿದೆ?
7/03/2024 ರಂದು ನಡೆದ ಭೌತಶಾಸ್ತ್ರ ಪರೀಕ್ಷೆಯಲ್ಲಿ, MCQ ಗಳು ತುಂಬಾ ಕಷ್ಟಕರ ಮತ್ತು ಟ್ರಿಕಿ ಆಗಿದ್ದವು. ತಿಂಗಳಾನುಗಟ್ಟಲೆ ಕಷ್ಟಪಟ್ಟು ಓದಿರುವ ನಾವು ಇಂತಹ ಕಷ್ಟದ ಪರಿಸ್ಥಿತಿ ಎದುರಿಸಲು ಬಯಸುವುದಿಲ್ಲ. ಪ್ರತಿಯೊಂದು ಅಂಕವೂ ನಮ್ಮ ಭವಿಷ್ಯವನ್ನು ನಿರ್ಧರಿಸುವಂತಹದ್ದಾಗಿರುವುದರಿಂದ ನಾವು ಒಂದೇ ಒಂದು ಅಂಕವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಈ ಅಸ್ಪಷ್ಟತೆಗೆ ಪರಿಹಾರಾರ್ಥವಾಗಿ 7 MCQ ಗಳಿಗೆ ಗ್ರೇಸ್ ಅಂಕಗಳನ್ನು ನೀಡಬೇಕೆಂದು ನಾವು ಪಿಯು ಮಂಡಳಿಯನ್ನು ಒತ್ತಾಯಿಸುತ್ತೇವೆ.
ವಾರ್ಷಿಕ ಬೋರ್ಡ್ ಪರೀಕ್ಷೆಗಳು 3 ಬಾರಿ ಇರುತ್ತವೆ ಎಂದು ಹೇಳಿ ಪಿಯುಸಿ ಮಂಡಳಿ ಗಾಳಿಯಲ್ಲಿ ಅರಮನೆ ನಿರ್ಮಿಸಲು ಪ್ರಯತ್ನಿಸುವುದು ಬೇಡ. ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳನ್ನು ಹಾಗೆ ಯಾಮಾರಿಸಲೂ ಬೇಡಿ. ಮುಂದಿನ ಹಂತಗಳಲ್ಲಿ 2 ಅಥವಾ 3ನೆಯ ಪರೀಕ್ಷೆಗೆ ಹಾಜರಾಗಬಹುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳು ಸಮಾನಾಂತರವಾಗಿ ಅದೇ ಸಮಯದಲ್ಲಿ ನಡೆಯುತ್ತಿರುವಾಗ ವಿದ್ಯಾರ್ಥಿಗಳು ಇನ್ನೊಂದು ಪರೀಕ್ಷೆ ಬರೆಯುವುದು ತ್ರಾಸದಾಯಕವಾಗುವುದಿಲ್ಲವೇ?
ಇನ್ನು ಯಾವುದೇ ಪ್ರಶ್ನೆಪತ್ರಿಕೆಗಳಲ್ಲಿ ಪ್ರಶ್ನೆಗಳು ಅಸಂಬದ್ಧವಾಗಿ ಮತ್ತು ಅಸ್ಪಷ್ಟವಾಗಿ ಇರಬಾರದು ಎಂದು ಸ್ವತಃ ಪಿಯುಸಿ ಮಂಡಳಿ ಬದ್ಧತೆ ತೋರುತ್ತದೆ. ಆದರೆ ವಿಷಯ ತಜ್ಞರು ಹೇಳುವಂತೆ ಈಗಿನ ಭೌತಶಾಸ್ತ್ರ ಪರೀಕ್ಷೆಯಲ್ಲಿ MCQ ವಿಭಾಗದಲ್ಲಿ ಏಳೆಂಟು ಪ್ರಶ್ನೆಗಳ ಉತ್ತರಗಳು ಅಸ್ಪಷ್ಟವಾಗಿರುವಂತಿದೆ. ಇದಕ್ಕೆ ಹೊಣೆಯಾರು? ಅಥವಾ ಮಂಡಳಿಯು ತನ್ನದೇ ಆದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದೆಯೇ? ಹೌದಾದಲ್ಲಿ ಇದು ತುಂಬಾ ದುಃಖಕರವಷ್ಟೇ ಅಲ್ಲ; ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗುವುದಿಲ್ಲವೇ?
ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಎಂಸಿಕ್ಯೂ ವಿಭಾಗವನ್ನು ಅಳವಡಿಸಲಾಗಿದೆ. ಆದರೆ ಪ್ರಸಕ್ತ ವರ್ಷದಲ್ಲಿ ಇದು ಕಷ್ಟಕರ ಮತ್ತು ವಿದ್ಯಾರ್ಥಿ ವಿರೋಧಿ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. MCQ ಗಳಲ್ಲಿ ನ್ಯೂಮರಿಕಲ್ಸ್ ಪ್ರಶ್ನೆಗಳು ಸುಲಭವಾಗಿಯೇ ಇರುತ್ತದೆ. ಅದು ಬಿಟ್ಟರೆ ಕಾನ್ಸೆಪ್ಟ್ ಪ್ರಶ್ನೆಗಳು ಕಷ್ಟಕರವಾಗಿದ್ದರೂ ಪ್ರಶ್ನೆಗಳು ನೇರ, ಸರಳ ಮತ್ತು NCERT ಪಠ್ಯ ವ್ಯಾಪ್ತಿಯಲ್ಲಿ ಇರುವಂತೆಯೇ ಕೊಡಲಾಗುತ್ತದೆ ಎಂದು ಮಂಡಳಿಯು ಹೇಳಿತ್ತು. ಆದರೆ ಈ ಮಾರ್ಗಸೂಚಿಯನ್ನು ಗಾಳಿಗೆ ತೂರಿ, ವಿದ್ಯಾರ್ಥಿಗಳನ್ನು ಕಷ್ಟಕ್ಕೆ ದೂಡಲಾಗಿದೆ. ಅಸ್ಪಷ್ಟತೆಯ ಪ್ರಶ್ನೋತ್ತರ ನೀಡಲಾಗಿದೆ ಎಂಬುದು ಪೋಷಕರ ಅಳಲಾಗಿದೆ.
ಪ್ರತಿಯೊಂದು ಅಂಕವನ್ನೂ KCET ಶ್ರೇಯಾಂಕಕ್ಕೆ ಪರಿಗಣಿಸಲಾಗುತ್ತದೆ. ಅದು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಂತಹುದ್ದಾಗಿದೆ. ಇಲ್ಲಿ ಬೋರ್ಡ್ ಮಾರ್ಕ್ಸ್ ಬಹುಮುಖ್ಯವಾಗಿಬಿಡುತ್ತದೆ. ಹಾಗಾಗಿ ಈಗಿನ ಫಿಸಿಕ್ಸ್ ಪೇಪರ್ ನಲ್ಲಿ ನಮ್ಮ ಮಕ್ಕಳು ಅಂಕಗಳನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ನಮಗೆ ಗ್ರೇಸ್ ಮಾರ್ಕ್ ನೀಡಿ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಅಲವತ್ತುಕೊಂಡಿದ್ದಾರೆ.
ನೀತಿ ಪಾಠ: ಕೊನೆಯದಾಗಿ, ವಿಷಯ ಏನೇ ಇರಲೀ ಪಾಲಿಗೆ ಬಂದಿದ್ದು ಪಂಚಾಮೃತ ಎಂದೂ, ಜೊತೆಗೆ ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆ ಎಂಬ ಆಶಾಭಾವದೊಂದಿಗೆ ವಿದ್ಯಾರ್ಥಿಗಳು ಉಳಿದ ಪರೀಕ್ಷೆಗಳನ್ನು ಚೆನ್ನಾಗಿ ಬರೆಯುವುದರತ್ತ ಗಮನಹರಿಸುವುದು ಈ ಕ್ಷಣದ ಜರೂರತ್ತು ಆಗಿದೆ. ಆಲ್ ದಿ ಬೆಸ್ ಮಕ್ಕಳೇ… ಮತ್ತಷ್ಟು ಗಂಭೀರವಾಗಿ ಓದಿ, ಉಳಿದ ಪರೀಕ್ಷೆಗಳನ್ನು ಸಲೀಸಾಗಿ ಬರೆಯುವವರಂತಾಗಿ. ಉಳಿದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಹಾಗೆಯೇ ಉಳಿದ ಪೇಪರ್ಗಳು ಈ ರೀತಿ ತಲೆ ತಿನ್ನುವಂತೆ ಆಗದಿರಲಿ ಎಂದು ಆಶಿಸೋಣ.
Published On - 5:25 pm, Sat, 9 March 24